ಗುರುವಾರ , ಮೇ 26, 2022
22 °C

ನೀರಾ ಗೋಲಿಬಾರ್ ಘಟನೆಗೆ 10 ವರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಅಂದು 2001ರ ಅಕ್ಟೋಬರ್ 9. ಚನ್ನಪಟ್ಟಣ ತಾಲ್ಲೂಕಿನ ವಿಠಲೇನಹಳ್ಳಿಯಲ್ಲಿ ಅಕ್ಷರಶಃ ಪೊಲೀಸರ ದರ್ಬಾರ್ ನಡೆದಿತ್ತು. ಲಾಠಿ ಚಾರ್ಜ್, ಅಶ್ರುವಾಯು ಜತೆ ಜತೆಗೆ ಅಲ್ಲಿ ಪೊಲೀಸರ ಬಂಧೂಕಿನಿಂದ ಗುಂಡುಗಳು ಸಹ ಹಾರಿದ್ದವು. ಅಂದು ನಡೆದ ಗೋಲಿಬಾರ್‌ನಲ್ಲಿ ಇಬ್ಬರು ರೈತರು ಅಮಾನುಷವಾಗಿ ಬಲಿಯಾಗಿದ್ದರು.ಹೌದು ವಿಠಲೇನಹಳ್ಳಿಯ ಗೋಲಿಬಾರ್‌ನಲ್ಲಿ ರೈತರಾದ ಪುಟ್ಟನಂಜಯ್ಯ ಮತ್ತು ತಮ್ಮಯ್ಯ ಪೊಲೀಸರ ಗುಂಡುಗಳಿಂದ ಆಹುತಿಯಾಗಿದ್ದರು. ಈ ಘಟನೆ ನಡೆದು ಇಂದಿಗೆ ಬರೋಬರಿ 10 ವರ್ಷ ಕಳೆದಿದೆ.ಅಂದಹಾಗೆ ಈ ಘಟನೆ ನಡೆದದ್ದು ನೀರಾ ಚಳವಳಿ ಸಂದರ್ಭದಲ್ಲಿ. ಇದನ್ನು ಖಂಡಿಸಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಮುಖಂಡರು ಬೀದಿಗಿಳಿದು ಹೋರಾಟ ಮಾಡಿ ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಂಡರು. ಆದರೆ ಗೋಲಿಬಾರ್‌ನಿಂದ ಕೊನೆಯುಸಿರು ಎಳೆದ ಈ ಇಬ್ಬರು ರೈತರು ಸೇರಿದಂತೆ ಲಕ್ಷಾಂತರ ರೈತರ ಕನಸು ಮಾತ್ರ 10 ವರ್ಷಗಳಾದರೂ ನನಸಾಗಿಲ್ಲ !ಇಲ್ಲಿಯವರೆಗೂ ಸರ್ಕಾರ ನೀರಾ ನೀತಿ ಜಾರಿಗೊಳಿಸಲಿಲ್ಲ. ಇದರಿಂದ ನೀರಾ ಇಳಿಸಲು, ಮಾರಲು ಮತ್ತು ಉಪ ಉತ್ಪನ್ನಗಳನ್ನು ಸಿದ್ಧಪಡಿಸಲು ರೈತರಿಗೆ ಅನುಮತಿಯನ್ನೂ ಸರ್ಕಾರ ನೀಡಿಲ್ಲ. ಇದರಿಂದ ತೆಂಗು ಬೆಳೆಯುವ ಲಕ್ಷಾಂತರ ರೈತರ ಆರ್ಥಿಕ ಸ್ಥಿತಿ ಚಿಂತಾಜನಕವಾಗುತ್ತಿದೆ. ತೆಂಗು ಬೆಳೆಯನ್ನೇ ನಂಬಿದ್ದವರು, ಕಲ್ಪವೃಕ್ಷ ಎಂದೇ ಕರೆಯುವ ತೆಂಗಿನ ಮರಕ್ಕೆ ಕೊಡಲಿ ಹಾಕುವ ಸ್ಥಿತಿ ಬಂದೆರಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

1968-69ರವರೆಗೆ ಖಾದಿ ಗ್ರಾಮೋದ್ಯೋಗ ಮಂಡಳಿಯಲ್ಲಿ ನೀರಾ, ಪನೆಬೆಲ್ಲ ಉದ್ದಿಮೆ ಒಂದು ಉದ್ದಿಮೆಯಾಗಿ ಮೈತಾಳಿ ನಿಂತಿತ್ತು. ಆಗಿನ ಸರ್ಕಾರದ ಅಬಕಾರಿ ಹಾಗೂ ಆರ್ಥಿಕ ಸಚಿವರು ವಿವಿಧ ಲಾಬಿಗೆ ಮಣಿದು ಈ ಉದ್ದಿಮೆಯನ್ನೇ ಮುಚ್ಚಿ ಹಾಕಿದರು. ಆದರೆ ಈಗಲೂ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳಗಳಲ್ಲಿ ನೀರಾ ಮತ್ತು ಪನೆಬೆಲ್ಲ ಉದ್ದಿಮೆ ವಿಶಿಷ್ಟ ಸ್ಥಾನ ಪಡೆದಿದೆ. ನಮ್ಮ ಸರ್ಕಾರ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ ರೈತ ವಿರೋಧಿ ನಿಲುವು ತಾಳಿದೆ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ದೂರುತ್ತಾರೆ.10 ವರ್ಷಗಳ ಹಿಂದೆ: ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ತೆಂಗು ಬೆಳೆಯುವ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿರುವ ರಾಜ್ಯ ಕರ್ನಾಟಕ. ಇಲ್ಲಿ 1999-2000ದಲ್ಲಿ ತೆಂಗಿನ ಮರಗಳಲ್ಲಿ ಕಾಣಿಸಿಕೊಂಡ ನುಸಿಪೀಡೆ 2001ರ ವೇಳೆಗೆ ರಾಜ್ಯದ 16 ಜಿಲ್ಲೆಗಳ ಕೋಟ್ಯಂತರ ತೆಂಗಿನ ಮರಗಳಿಗೆ ವ್ಯಾಪಿಸಿತ್ತು. ಇದು ತೆಂಗಿನ ಬೆಳೆಗಾರರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿತ್ತು. ಇದರ ಜತೆಗೆ ಕಪ್ಪುತಲೆ ಹುಳುಗಳು ಮರದ ಗರಿಗಳ ರಸ ಹೀರಿ ಮರದ ಅಸ್ಥಿತ್ವವನ್ನೇ ಅಲುಗಾಡಿಸಲಾರಂಭಿಸಿದವು.ನುಸಿಪೀಡೆ ಮತ್ತು ಕಪ್ಪುತಲೆ ಹುಳುಗಳ ಕಾಟ ನಿಯಂತ್ರಿಸುವಲ್ಲಿ ತೋಟಗಾರಿಕಾ ಇಲಾಖೆ, ಸಂಶೋಧನಾ ಸಂಸ್ಥೆಗಳು ಮತ್ತು ಸರ್ಕಾರ ವಿಫಲವಾಯಿತು. ಈ ಸಂದರ್ಭದಲ್ಲಿ ರೈತರಿಗೆ ಶೇ 65ರಷ್ಟು ನಷ್ಟ ಎದುರಾಗಿತ್ತು. ಆಗ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ಮಾರ್ಗದರ್ಶನದಲ್ಲಿ ರಾಜ್ಯ ರೈತ ಸಂಘ ನೀರಾ ಇಳಿಸುವ ಕಾರ್ಯಕ್ಕೆ ಚಾಲನೆ ನೀಡಿತ್ತು.ನೀರಾ ಕುಡಿಯುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗತೊಡಗಿತು. ಮಧ್ಯ ಪ್ರಿಯರು ಸಹ ನೀರಾ ಕುಡಿಯುವತ್ತಾ ದಾಪುಗಾಲು ಹಾಕಿದರು. ನಗರ- ಪಟ್ಟಣಗಳತ್ತ ಸಹ ನೀರಾ ಹರಿಯಿತು. ಆದರೂ ಶೇ 3ರಿಂದ 4ರಷ್ಟು ರೈತರು ಮಾತ್ರ ನೀರಾ ಇಳಿಸುತ್ತಿದ್ದರು. ಸೂರ್ಯ ಕಿರಣಗಳ ಸಂಪರ್ಕದಿಂದ ನೀರಾ ಮಜ್ಜಿಗೆ ರೂಪತಾಳಿತು. ಅದು ತಂತಾನೆ ಹುಳಿಯಾಯಿತು. ಹುಳಿ ನೀರಾ ಕೂಡ ಹೆಚ್ಚೆಚ್ಚು ಬಳಕೆಗೆ ಬಂತು ಎಂದು ಪುಟ್ಟಸ್ವಾಮಿ ಅವರು ಆ ದಿನಗಳನ್ನು ಸ್ಮರಿಸುತ್ತಾ ವಿವರಿಸಿದರು.ದಿನೇ ದಿನೇ  ಸಾರಾಯಿ, ಮದ್ಯ ಮಾರಾಟ- ವಹಿವಾಟು ಕಡಿಮೆಯಾಯ್ತು. ಇದರಿಂದ ಮದ್ಯದ ಲಾಬಿ ಕೂಡ ಆರಂಭವಾಯಿತು. ಈ ನಡುವೆ ಅಬಕಾರಿ ಇಲಾಖೆ ಕಾರ್ಯೋನ್ಮುಖವಾಗಿ ರೈತರ ಮೇಲೆ ಪೊಲೀಸರನ್ನು `ಛೂ~ ಬಿಟ್ಟಿತು. ಪೊಲೀಸರು ವಿವಿಧ ರೀತಿಯಲ್ಲಿ ಕಿರುಕುಳ ನೀಡಿ ನೂರಾರು ಮೊಕದ್ದಮೆಗಳನ್ನು ಹೂಡಿದರು ಎಂದು ಅವರು ಹೇಳಿದರು.`ನೀರಾ ಇಳಿಸಿ ಮಾರಾಟ ಮಾಡುವುದು ನಮ್ಮ ಹಕ್ಕು~ ಎಂದು ರೈತ ಸಂಘ ಕರೆ ನೀಡಿತು. ವ್ಯಾಪಕ ಪ್ರತಿಭಟನೆ ನಡೆಯಿತು. ರೈತರು ಸ್ವ ಪ್ರೇರಣೆಯಿಂದ ದಸ್ತಗೀರಾಗಲು ಮುಂದೆ ಬಂದರು. ಆದರೂ ಸಹ ಆಗಿನ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀರಾ ಉತ್ಪಾದನೆಗೆ ದೈರ್ಯ ಮಾಡಲಿಲ್ಲ. ಬದಲಿಗೆ ಅಕ್ಟೋಬರ್ 8, 2001ರಂದು ಲಾಠಿ ಚಾರ್ಜ್, ಅಶ್ರುವಾಯು, ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ನಂತರ ಅಕ್ಟೋಬರ್ 9, 2001ರಂದು ಮುಂಜಾನೆ ವಿಠಲೇನಹಳ್ಳಿಯಲ್ಲಿ ಗೋಲಿಬಾರ್ ನಡೆಯಿತು. ಅದಕ್ಕೆ ಇಬ್ಬರು ರೈತರು ಬಲಿಯಾದರು ಎಂದು ಅವರು ಘಟನೆಯನ್ನು ವಿವರಿಸಿದರು.ದೇವೇಗೌಡರ ಪಾದಯಾತ್ರೆ: ವಿಠಲೇನಹಳ್ಳಿ ಗೋಲಿಬಾರ್ ಘಟನೆ ಖಂಡಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ವಿಠಲೇನಹಳ್ಳಿಯಿಂದ ವಿಧಾನಸೌಧದತ್ತ ಪಾದಯಾತ್ರೆ ಮಾಡಿದರು. ಈ ಪಾದಯಾತ್ರೆ ಗೌಡರ ರಾಜಕೀಯ ಮರು ಹುಟ್ಟು ನೀಡಿತು. ನಂತರ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ರಾಜ್ಯದಲ್ಲಿ ನೀರಾ ಇಳಿಸಲು ಮತ್ತು ಮಾರಲು ರೈತರಿಗೆ ಅನುಮತಿ ನೀಡುವುದಾಗಿ ಘೋಷಿಸಿದರು.ಆದರೆ ಆಗಿನಿಂದ ಈಗಿನವರೆಗೆ ಸೂಕ್ತವಾದ ನೀರಾ ನೀತಿ ಜಾರಿಗೆ ಬರಲಿಲ್ಲ. ನೀರಾ ಇಳಿಸುವ ರೈತರನ್ನು ಅಬಕಾರಿ ಇಲಾಖೆಯವರು ಮತ್ತು ಪೊಲೀಸರು ವಿವಿಧ ರೀತಿಯಲ್ಲಿ ಕಿರುಕುಳ ನೀಡಿ, ಹಲವು ಬಗೆಯ ಮೊಕದ್ದಮೆಗಳನ್ನು ಹಾಕುವ ಪರಿಪಾಟ ಮುಂದುವರೆಯುತ್ತಾ ಇದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಆಗ ವಿರೋಧ ಪಕ್ಷದ ನಾಯಕರಾಗಿದ್ದ ಬಿಜೆಪಿ ಬಿ.ಎಸ್. ಯಡಿಯೂರಪ್ಪ ಅವರು ನೀರಾ ನೀತಿ ಜಾರಿಗೆ ತರಲು ಒತ್ತಾಯಿಸಿದ್ದರು. ಆದರೆ ಅವರು ಮುಖ್ಯಮಂತ್ರಿ ಆದ ನಂತರವೂ ಅದು ಜಾರಿಯಾಗಲಿಲ್ಲ. ಬಜೆಟ್‌ಗಳಲ್ಲಿ ನೀರಾ ಇಳಿಸಲು ಅವಕಾಶ ಕಲ್ಪಿಸುವ ಯೋಜನೆಗಳನ್ನು ರೂಪಿಸುವುದಾಗಿ ಬರವಸೆ ನೀಡಿದ್ದ ಅವರು ಅದ್ಯಾವುದನ್ನೂ ಅನುಷ್ಠಾನಗೊಳಿಸಲಿಲ್ಲ ಎಂದು ದೂರಿದರು.

 

ಅಧಿಕಾರಿಗಳು ಹೇಳುವುದೇನು?:

ರಾಜ್ಯದಲ್ಲಿ ಪ್ರಸ್ತುತ ಯಾವುದೇ ನೀರಾ ನೀತಿ ಇಲ್ಲ. 2007ರಲ್ಲಿ ತೋಟಗಾರಿಕಾ ಇಲಾಖೆ ನೀರಾ ನೀತಿಯ ಕರಡು ಸಿದ್ಧಪಡಿಸಿತ್ತು. ಆದರೆ ಅದಕ್ಕೆ ಸರ್ಕಾರದ ಅಂಕಿತ ಬಿದ್ದಿಲ್ಲ. ಹಾಗಾಗಿ ರೈತರಿಗೆ ನೀರಾ ಇಳಿಸಲು ಮತ್ತು ಮಾರಲು ಸರ್ಕಾರ ಅನುಮತಿ ನೀಡಿಲ್ಲ. 2011ರ ಬಜೆಟ್‌ನಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಹಾಗೂ ಮೈಸೂರಿನಲ್ಲಿರುವ ಆಹಾರ ತಾಂತ್ರಿಕ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ನೀರಾ ಸಂಸ್ಕರಣ ಘಟಕವನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ತುಂಬೆ ತೋಟಗಾರಿಕಾ ಫಾರಂನಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಲಾಗಿತ್ತು. ಆ ನಿಟ್ಟಿನಲ್ಲಿ ಟೆಂಡರ್ ಮುಗಿದಿದ್ದು, ಡಿಸೆಂಬರ್‌ನಲ್ಲಿ ಕಾರ್ಯ ಆರಂಭವಾಗಲಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ. ದುಂಡಿ `ಪ್ರಜಾವಾಣಿ~ಗೆ ತಿಳಿಸಿದರು.

`ನೈಸರ್ಗಿಕ ಪಾನೀಯ~

ನೀರಾ ಆರೋಗ್ಯಕ್ಕೆ ಉತ್ತಮವಾಗಿದ್ದು, ಬಾಣಂತಿಯರಿಂದ ಹಿಡಿದು ಮಕ್ಕಳಾದಿಯಾಗಿ ಸೇವಿಸಬಹುದು. ಇದೊಂದು ನೈಸರ್ಗಿಕ ಪಾನೀಯ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ತಿಳಿಸುತ್ತಾರೆ.

ಸಂಶೋಧನ ಸಂಸ್ಥೆಗಳ ಪ್ರಕಾರ ನೀರಾದಲ್ಲಿ ಶೇ 2.73ರಷ್ಟು `ಫ್ರೀ~ ಶುಗರ್, ಶೇ 9.19ರಷ್ಟು ಸಕ್ಕರೆ, ಶೇ 2.87ರಷ್ಟು ಆಲ್ಕೋಹಾಲ್, ಶೇ 89.189 (ಪ್ರತಿ 100 ಎಂ.ಎಲ್‌ಗೆ) ಪ್ರೋಟೀನ್ ಹಾಗೂ ದೊಡ್ಡ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಇರುತ್ತದೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.