ಶನಿವಾರ, ಫೆಬ್ರವರಿ 27, 2021
30 °C
ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಜನತೆ ಹಿಡಿಶಾಪ

ನೀರಿನ ಬವಣೆ: ಟ್ಯಾಂಕರ್‌ಗೆ ಮೊರೆ!

ಹರ್ಷವರ್ಧನ ಪಿ.ಆರ್ Updated:

ಅಕ್ಷರ ಗಾತ್ರ : | |

ನೀರಿನ ಬವಣೆ: ಟ್ಯಾಂಕರ್‌ಗೆ ಮೊರೆ!

ಹಾವೇರಿ: ‘ಹಸಿದವರ ಮುಂದೆ ಉಪದೇಶ ಮಾಡುವವನೇ ಮಹಾ ಅಪರಾಧಿ ಎಂದು ವಿವೇಕಾನಂದರು ಹೇಳಿದ್ದಾರೆ. ಹಾಗಿದ್ದರೆ, ಆಶ್ವಾಸನೆ ನೀಡಿ ಕನಿಷ್ಠ ನೀರೂ ನೀಡಲಾಗದವರನ್ನು ಏನು ಎನ್ನಬೇಕು? ಎಲ್ಲಿಗೆ ಕಳುಹಿಸಬೇಕು?’–ನಗರದ ನಿವಾಸಿ ಶಿವಯೋಗಿ ನೀರಿನ ಅವ್ಯವಸ್ಥೆ ವಿರುದ್ಧ ಆಕ್ರೋಶ ಹಾಗೂ ಜನಪ್ರತಿನಿಧಿಗಳ ವಿರುದ್ಧ ಅಸಹನೆ ವ್ಯಕತಪಡಿಸಿದ್ದು ಹೀಗೆ. ಸುಮಾರು 20 ದಿನಗಳಿಂದ ಜಿಲ್ಲಾ ಕೇಂದಕ್ಕೆ ನೀರು ಪೂರೈಸಲಾರದ ನಗರಸಭಾ ಸದಸ್ಯರು, ಶಾಸಕರು, ಅಧಿಕಾರಿಗಳು ಸೇರಿದಂತೆ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.‘ಭಾರಿ ಭರವಸೆ ನೀಡಿ ಚುನಾವಣೆ ಯಲ್ಲಿ ಜನಪ್ರತಿನಿಧಿಗಳು ಗೆದ್ದರೆ, ಪ್ರಮಾಣ ಮಾಡಿ ಅಧಿಕಾರಿಗಳು ಕರ್ತವ್ಯ ವಹಿಸಿಕೊಳ್ಳುತ್ತಾರೆ. ಬಡವರ ತೆರಿಗೆ ಹಣದ ಕಾರಿನಲ್ಲಿ ಓಡಾಡುವ ಇವರಿಗೆ, ಕಾಲಕಾಲಕ್ಕೆ ಕನಿಷ್ಠ ನೀರು ಕೊಡಬೇಕು ಎಂಬ ಮಾನವೀಯತೆ ಯೂ ಇಲ್ಲ’ ಎಂದು ಜರೆದರು.‘ನಗರದಲ್ಲಿ ಎರಡು ಶಾಸಕರು, ಸಂಸದರು, ಮಾಜಿ ಶಾಸಕರುಗಳು ಸೇರಿದಂತೆ ಗಣ್ಯರು ವಾಸಿಸುತ್ತಾರೆ. ಅಧಿಕಾರಿಗಳು, ನೌಕರರು, ಸಿಬ್ಬಂದಿಯ ದಂಡೇ ಇದೆ. ಆದರೂ, ಸ್ಪಂದಿಸುತ್ತಿಲ್ಲ. ನಗರಸಭೆ ಸಾಮಾನ್ಯ ಸಭೆ ಕರೆದಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆ ಕರೆದು ಚರ್ಚಿಸಿಲ್ಲ’ ಎಂದು ಸೂಲಮಟ್ಟಿ, ಸುಭಾಷ್‌ನಗರ, ವಿದ್ಯಾನಗರ, ಬಸವೇಶ್ವರ ನಗರದ ಜನ ತಮ್ಮ ಸಿಟ್ಟು ಹೊರಹಾಕಿದರು.‘ಅಧಿಕಾರ, ಅಂಗಡಿ, ವ್ಯಾಪಾರ, ರಿಯಲ್‌ ಎಸ್ಟೇಟ್‌, ಸಾಯಲು ಸಿದ್ಧ, ಪ್ರತಿಭಟನೆ, ಪಕ್ಷದ ಕಾರ್ಯಕ್ರಮ ಎಂದು ಸುತ್ತಾಡುತ್ತಾರೆ. ಆದರೆ, ಜನ ನೀರಿಲ್ಲದೇ ಸತ್ತರೂ ಈ ‘ಸ್ವಯಂ ಘೋಷಿತ ನಾಯಕ’ರಿಗೆ ಕಾಣುವುದಿಲ್ಲ’ ಎಂದು ದೂರಿದರು.ಟ್ಯಾಂಕರ್‌ಗೆ ಮೊರೆ: ಸತತ 20 ದಿನಗಳಿಂದ ನಗರಕ್ಕೆ ನೀರು ಪೂರೈಕೆಯಾಗದ ಪರಿಣಾಮ, ಜನತೆ ₹ 300ರಿಂದ ₹ 500 ದರ ನೀಡಿ ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ನಾಗೇಂದ್ರನಮಟ್ಟಿ, ಸೂಲಮಟ್ಟಿ, ತಾಜ್‌ನಗರ ಮತ್ತಿತರೆಡೆ  ಬಡವರೆಲ್ಲ ಸೇರಿಕೊಂಡು ಹಣ ಸಂಗ್ರಹಿಸಿ ಒಂದು ಟ್ಯಾಂಕರ್‌ ನೀರನ್ನು ಹಂಚಿಕೊಳ್ಳುತ್ತಿದ್ದಾರೆ. ನಗರದಲ್ಲಿ ಈಗಲೇ ಬರದ ವಾತಾವರಣ ಸೃಷ್ಟಿಯಾಗಿದೆ. ಕೋಟ್ಯಂತರ ವೆಚ್ಚ! ಕಂಚಾರಗಟ್ಟಿಯಲ್ಲಿ ಪ್ರತಿ ವರ್ಷ ಮರಳು ತಡೆಗೋಡೆ ಲಕ್ಷಾಂತರ ರೂಪಾಯಿ ವೆಚ್ಚ, ಪಂಪ್‌ ಮತ್ತಿತರ ದುರಸ್ತಿಗೆ ಒಂದೂವರೆ ಕೋಟಿ, ನೀರು ನಿರ್ವಹಣೆಗೆ ₹ 60 ಲಕ್ಷಕ್ಕೂ ಅಧಿಕ, ಕ್ಲೋರಿನ್– ಆಲಮ್‌ ಮತ್ತಿತರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ, ವಿದ್ಯುತ್‌ ಶುಲ್ಕಕ್ಕೆ ಲಕ್ಷಾಂತರ ರೂಪಾಯಿಯನ್ನು ನಗರಸಭೆ ಪೋಲು ಮಾಡುತ್ತಿದೆ. ಆದರೆ, ಸಮರ್ಪಕ ನೀರು ಪೂರೈಕೆ ಮಾತ್ರ ಇನ್ನೂ ಸಾಧ್ಯವಾಗಿಲ್ಲ.ಅಷ್ಟು ಮಾತ್ರವಲ್ಲ, ನಗರದಲ್ಲಿ 240ಕ್ಕೂ ಅಧಿಕ ಕೊಳವೆ ಬಾವಿಗಳಿವೆ. ಪ್ರತಿ ಮನೆಯಿಂದ ನೀರಿಗಾಗಿ ಸುಮಾರು ₹ 120ರಂತೆ ಮಾಸಿಕ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಈ ಕೋಟ್ಯಂತರ ಹಣ ಎಲ್ಲಿ ಹೋಗುತ್ತಿದೆ ಎಂಬುದೇ ಜನರ ಯಕ್ಷ ಪ್ರಶ್ನೆಯಾಗಿದೆ.‘ನಗರದಲ್ಲಿ ಒಂದು ತಿಂಗಳಿನಿಂದ ಸತತವಾಗಿ ಹುಕ್ಕೇರಿ ಮಠದ ಜಾತ್ರೆ, ಮೆಹಬೂಬ್‌ ಸುಬಾನಿ ದರ್ಗಾ ಊರೂಸ್‌, ತೋಂಟದಾರ್ಯ ಸ್ವಾಮೀಜಿ ಪ್ರವಚನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಹೀಗಾಗಿ ನೆಂಟರಿಷ್ಟರು, ಬಂಧುಗಳು ಬಂದು ಹೋಗುತ್ತಾರೆ. ಮನೆಗೆ ಬಂದ ಬಂಧುಗಳಿಗೆ, ನೀರಿಲ್ಲ ಹೋಗಿ ಎನ್ನಲು ಸಾಧ್ಯವೇ?’ ಎಂದು ಮಹಿಳೆಯರು ಪ್ರಶ್ನಿಸುತ್ತಾರೆ.ಬ್ಯಾರೇಜ್ ನಿರ್ಮಾಣಕ್ಕೆ ಆದ್ಯತೆ

ನಗರಸಭೆ ಅಸಮರ್ಪಕ ನಿರ್ವಹಣೆಯಿಂದ ಸಮಸ್ಯೆ ಎದುರಾಗಿದೆ. ಕ್ಷಿಪ್ರ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದಾರೆ. ಅಲ್ಲದೆ, ತುಂಗಭದ್ರಾ ಹಾಗೂ ವರದಾ ನದಿಗೆ ಬ್ಯಾರೇಜ್ ನಿರ್ಮಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಶಾಸಕ ಬಸವರಾಜ ಶಿವಣ್ಣನವರ ಜೊತೆಗೂಡಿ ಸರ್ಕಾರದ ಮೇಲೆ ಒತ್ತಡ ತಂದು ಪ್ರಥಮ ಆದ್ಯತೆಯಲ್ಲಿ ಮಾಡುತ್ತೇವೆ ಎಂದು ಶಾಸಕ ರುದ್ರಪ್ಪ ಲಮಾಣಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.