ಸೋಮವಾರ, ಮೇ 17, 2021
22 °C

ನೀರಿಲ್ಲದ ಊರಿಗೆ ಕೊನೆಗೂ ಬಂದ ಅಧಿಕಾರಿಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಕಳೆದ ಒಂದು ತಿಂಗಳಿಂದ ನೀರು ವಿದ್ಯುತ್ ಇಲ್ಲದೇ ಪರದಾಡುತ್ತಿದ್ದ ತಾಲ್ಲೂಕಿನ ಹಳಗೇರಾ ಗ್ರಾಮಸ್ಥರು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಲಿಲ್ಲ. ಕೊನೆಯ ಅಸ್ತ್ರವಾಗಿ ಗ್ರಾಮದ ಪಂಚಾಯಿತಿ ಎದುರು ಗುರುವಾರ ಧರಣಿ ನಡೆಸಿದ ನಂತರ ಅಧಿಕಾರಿಗಳೆಲ್ಲ ಗ್ರಾಮಕ್ಕೆ ಆಗಮಿಸಿ, ಬೇಡಿಕೆ ಈಡೇರಿಸುವ ಭರವಸೆಯನ್ನೂ ನೀಡಿದರು.ನೀರಿಲ್ಲದ ಗ್ರಾಮಕ್ಕೆ ಕೊನೆಗೂ ಅಧಿಕಾರಿಗಳು ಬಂದ ನೆಮ್ಮದಿ ಗ್ರಾಮಸ್ಥರದ್ದಾಗಿತ್ತು. ಇನ್ನೊಂದೆಡೆ ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಖಂಡ್ರೆ ಸಹ ಪ್ರತಿಭಟನೆ ನಡೆಸಿದ ಸ್ಥಳಕ್ಕೆ ಆಗಮಿಸಿ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಗ್ರಾಮಸ್ಥರಿಗೆ ಬಲ ತಂದು ಕೊಟ್ಟಿತು.ಬೆಳಿಗ್ಗೆ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಗ್ರಾಮ ಪಂಚಾಯಿತಿ ಎದುರು ಧರಣಿ ಆರಂಭಿಸಿದರು. ಆದರೆ ಮನವಿ ಸ್ವೀಕರಿಸಲು ಅಧಿಕಾರಿಗಳು ಬಾರದೇ ಇರುವುದರಿಂದ ರೋಸಿ ಹೋದ ಜನರು, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಖಂಡ್ರೆ ಅವರಿಗೆ ಮನವಿ ಮಾಡಿದರು. ಕೂಡಲೇ ಗ್ರಾಮಕ್ಕೆ ಭೇಟಿ ನೀಡಿದ ಖಂಡ್ರೆ, ತಾಲ್ಲೂಕು ಪಂಚಾಯಿತಿ, ಜೆಸ್ಕಾಂ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಯಿಸಿದರು.ನಂತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಗ್ರಾಮದಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿದರು. ಕಳೆದ ಅಕ್ಟೋಬರ್‌ನಲ್ಲಿಯೇ ಹೊಸದಾಗಿ ಮಂಜೂರು ಆಗಿರುವ 44 ಕಂಬಗಳು, ಮತ್ತು ಟಿ.ಸಿ.ಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ನಿರ್ಮಾಣ, ಚರಂಡಿ ಸ್ವಚ್ಛಗೊಳಿಸುವುದು, ನ್ಯಾಯಬೆಲೆ ಅಂಗಡಿಗೆ 2 ದಿನ ನಿಗದಿ ಮಾಡಿರುವುದನ್ನು ಕೈಬಿಟ್ಟು ತಿಂಗಳು ಪೂರ್ತಿ ಪಡಿತರ ವಿತರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಗ್ರಾಮಕ್ಕೆ ನೀರು ಪೂರೈಸುವ ಪೈಪ್‌ಲೈನ್ ಕೆರೆಯಲ್ಲಿ ಹಾದು ಹೋಗಿದ್ದು, ಈ ಪೈಪ್‌ಲೈನ್ ಒಡೆದಿದೆ. ಇದರಿಂದ ಕೆರೆಯ ಕಲುಷಿತ ನೀರು ನಳದಲ್ಲಿ ಸೇರುತ್ತಿದೆ. ಹಾಗಾಗಿ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಕೂಡಲೇ ನೀರು ಪೂರೈಕೆ ಆರಂಭಿಸುವಂತೆ ಮನವಿ ಮಾಡಿದರು.ತಾಪಂ ಸದಸ್ಯ ಸಣ್ಣಸಾಬಣ್ಣ, ಗ್ರಾಮಸ್ಥರಾದ ದೇವಿಂದ್ರಪ್ಪ ನಾಯಕ, ನಾಗಣ್ಣಗೌಡ ದಿವಟಿಗೇರ, ಮಲ್ಲಿಕಾರ್ಜುನ ಕೊಟ್ಟಿ, ಸಿದ್ರಾಮಪ್ಪ ಪೀರಪ್ಪನೋರ್, ಶರಬಯ್ಯ ಕಲಾಲ ದೇವಂದ್ರಪ್ಪ ನಾಯಕ, ದೊಡ್ಡೆಪ್ಪ ಕುಂಬಾರ, ಮಲ್ಲಿಕಾರ್ಜುನ ಎಸ್.ಸಿ, ಮಂಜುನಾಥ, ಗುರುಪಾದಪ್ಪ, ಶರಣಪ್ಪ, ಶರಣಪ್ಪ ಕೊಟೆಗಾರ, ದೇವಮ್ಮ, ದೇವಿಂದ್ರಮ್ಮ, ನಾಗಪ್ಪ ಯಂಡಳಿ, ಚಿದಾನಂದ ನಾಯಕ, ಮುಂತಾದವರು ನೇತೃತ್ವ ವಹಿಸಿದ್ದರು. ಗ್ರಾಮದ ಸುಮಾರು 400 ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.