ಭಾನುವಾರ, ಜೂಲೈ 12, 2020
29 °C

ನೀರಿಲ್ಲ .. ಬರೀ ಕಣ್ಣೀರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಿಲ್ಲ .. ಬರೀ ಕಣ್ಣೀರಿ

ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಆರು ದಿನಕ್ಕೊಮ್ಮೆ... ಗದಗ ಪಟ್ಟಣದಲ್ಲಿ ಹದಿನೈದು ದಿನಕ್ಕೊಮ್ಮೆ... ವಿಜಾಪುರದಲ್ಲಿ ನಾಲ್ಕು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ, ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳು ಹರಿಯುತ್ತಿದ್ದರೂ ಬಾಗಲಕೋಟೆಯಲ್ಲಿ ಕುಡಿಯಲು ನೀರಿಲ್ಲ, ಗುಲ್ಬರ್ಗ ಜಿಲ್ಲೆಯ ನದಿತಟದ ಗ್ರಾಮಗಳಲ್ಲಿಯೇ ನೀರಿನ ತತ್ವಾರ, ರಾಯಚೂರು ಜಿಲ್ಲೆಯಲ್ಲಿ ವರ್ಷವಿಡೀ ಕುಡಿಯುವ ನೀರಿನ ಸಮಸ್ಯೆ, ದಾವಣಗೆರೆ ಜಿಲ್ಲೆಯಲ್ಲಿ ಪ್ಲೋರೈಡ್ ಹಾವಳಿ, ಚಿತ್ರದುರ್ಗ ಜಿಲ್ಲೆಯಲ್ಲಿ ಇದ್ದ ನೀರನ್ನೂ ಪೂರೈಸಲು ವಿದ್ಯುತ್ ಇಲ್ಲ -ಇದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿನ ಕುಡಿಯುವ ನೀರಿನ ಬವಣೆ.ವಿಜಾಪುರ ನಗರಕ್ಕೆ ತಿಂಗಳಿಗೆ ಎರಡು ಬಾರಿ ಬರುತ್ತಿದ್ದ ನೀರು ಈಗ ನಾಲ್ಕು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದೆ. ಚಡಚಣ, ಹೊರ್ತಿ, ತಾಂಬಾ, ತಿಕೋಟಾ, ಕಲಕೇರಿ ಮತ್ತಿತರ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಸೈಕಲ್-ಬೈಕ್‌ಗಳಲ್ಲಿ ದೂರದಿಂದ ನೀರು ತರುವುದು, ನೀರು ತರಲಿಕ್ಕಾಗಿಯೇ ನಿತ್ಯ ಅರ್ಧ ದಿನ ವ್ಯಯಿಸುವುದು ಸಾಮಾನ್ಯವಾಗಿದೆ. ಚಡಚಣ ಪ್ರದೇಶದಲ್ಲಿ ಐದು ರೂಪಾಯಿಗೆ ಒಂದು ಕೊಡ ನೀರು ಮಾರಾಟವಾಗುತ್ತಿದೆ. 1050 ಜನವಸತಿಗಳನ್ನು ಹೊಂದಿರುವ ವಿಜಾಪುರ ಜಿಲ್ಲೆಗೆ ಕುಡಿಯುವ ನೀರು ಮತ್ತು ಬರ ಎಂಬುದು ಶಾಶ್ವತ ಸಮಸ್ಯೆ.ಸಿಂದಗಿ, ಇಂಡಿ, ತಾಳಿಕೋಟಿ, ಬಸವನ ಬಾಗೇವಾಡಿ ಪಟ್ಟಣಗಳಿಗೆ 2-3ದಿನಕ್ಕೊಮ್ಮೆ, ಮುದ್ದೇಬಿಹಾಳ ದಲ್ಲಿ 5ರಿಂದ 6 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ತಾಂಬಾದಲ್ಲಿ ಕಳೆದ ಮೂರು ತಿಂಗಳಿನಿಂದ ಗ್ರಾಮ ಪಂಚಾಯಿತಿಯವರು ನೀರನ್ನೇ ಪೂರೈಸಿಲ್ಲ. ಅಲ್ಲೆಲ್ಲ ಕೊಳವೆಬಾವಿ ಕೈಪಂಪ್‌ಗಳೇ ಆಸರೆ. ಬಹುತೇಕ ಕಡೆಗಳಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗಳಿದ್ದರೂ ಸಮರ್ಪಕ ನಿರ್ವಹಣೆ ಇಲ್ಲ; ವಿದ್ಯುತ್ ಸಮಸ್ಯೆಯಿಂದಾಗಿ ನೀರಿನ ಹಾಹಾಕಾರ ಇನ್ನೂ ಹೆಚ್ಚಿದೆ. ಬಿಸಿಲು ಹೆಚ್ಚುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕೊಳವೆಬಾವಿಗಳು ಬತ್ತಲಾರಂಭಿಸಿವೆ.ಪ್ರತಿ ವರ್ಷ ಜಿಲ್ಲೆಯ ಸುಮಾರು 35 ಹಳ್ಳಿಗಳಿಗೆ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿತ್ತು.  ಆದರೆ ಈ ವರ್ಷ ಅದು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಬೇಡಿಕೆ ಬಾರದಿರುವುದರಿಂದ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.  500ಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆಸಲು ಜಿಲ್ಲಾ ಆಡಳಿತ 4.47 ಕೋಟಿ ರೂಪಾಯಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಕಳಿಸಿದೆ. ಶಾಸಕರ ನೇತೃತ್ವದ ಕಾರ್ಯಪಡೆಗಳು ಸಭೆ ನಡೆಸಿ ಸಮಸ್ಯಾತ್ಮಕ ಪ್ರದೇಶಗಳನ್ನು ಗುರುತಿಸಿದ್ದರೂ ಆ ಪಟ್ಟಿಗೆ ಸರ್ಕಾರ ಅನುಮೋದನೆ ನೀಡಿಲ್ಲ. ಹೀಗಾಗಿ ಈ ವರ್ಷ ಒಂದೇ ಒಂದು ಹೊಸ ಕೊಳವೆಬಾವಿಯನ್ನು ಕೊರೆದಿಲ್ಲ.ಬಾಗಲಕೋಟೆ: ದಕ್ಷಿಣ ಭಾರತದ ಎರಡನೇ ಅತಿ ದೊಡ್ಡ ನದಿಯಾಗಿರುವ ಕೃಷ್ಣೆ, ಮಲಪ್ರಭೆ ಹಾಗೂ ಘಟಪ್ರಭೆ ನದಿಗಳು ಹರಿಯುತ್ತಿರುವ ಹಾಗೂ ಮುಳುಗಡೆ ಖ್ಯಾತಿ ಹೊಂದಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಪ್ರತಿವರ್ಷ ತಪ್ಪದ ತತ್ವಾರ! ಮಳೆಗಾಲದಲ್ಲಿ ಮುಳುಗಡೆ ಭೀತಿ ಎದುರಿಸುವ ನದಿತೀರದ ಬಾದಾಮಿ, ಹುನಗುಂದ, ಜಮಖಂಡಿ ಹಾಗೂ ಮುಧೋಳ ತಾಲ್ಲೂಕಿನ ನೂರಾರು ಗ್ರಾಮಗಳ ಜನರು ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಾರೆ.ಆಲಮಟ್ಟಿ ಹಿನ್ನೀರಿನಿಂದ ಅರ್ಧ ಮುಳುಗಡೆಯಾಗಿರುವ ಬಾಗಲಕೋಟೆ ನಗರದಲ್ಲೂ 8-10 ದಿನಗಳಿಗೊಮ್ಮೆ ಸಿಹಿ(ನದಿ) ನೀರು ಪೂರೈಕೆಯಾಗುತ್ತದೆ. ಇನ್ನುಳಿದ ಸಂದರ್ಭದಲ್ಲಿ ಕೊಳವೆಬಾವಿಯ ಸವಳು ನೀರೇ ಗತಿ. ಊರಿನ ಪಕ್ಕದಲ್ಲೇ ಹರಿಯುವ ನದಿಗಳಿಂದ ಕುಡಿಯುವ ನೀರು ಪೂರೈಸುವಂತಹ ಸಮರ್ಪಕ ಯೋಜನೆಗಳನ್ನು ಸರ್ಕಾರ ಅಥವಾ ಜಿಲ್ಲಾ ಪಂಚಾಯಿತಿ ಇದುವರೆಗೆ ಜಾರಿಗೆ ತರದಿರುವುದರಿಂದ ಪ್ರತಿ ಬೇಸಿಗೆಯಲ್ಲೂ ನೀರಿಗಾಗಿ ಜನರ ಪರದಾಟ ತಪ್ಪುತ್ತಿಲ್ಲ.ಬಳ್ಳಾರಿ: ಉರಿ ಬಿಸಿಲಿಗೆ ಹೆಸರಾಗಿರುವ ಜಿಲ್ಲೆಯ ಕೆಲವು ಗಡಿ ಗ್ರಾಮಗಳಲ್ಲಿ ಬೇಸಿಗೆಯ ಮೊದಲ ದಿನಗಳಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಹಿಂದಿನ ವರ್ಷಗಳಂತೆ ಈ ವರ್ಷ ಕೂಡಾ ಉಲ್ಭಣಗೊಂಡಿದೆ.   ಕುಡಿಯುವ ನೀರು ಪೂರೈಕೆಗೆಂದೇ ಜಿಲ್ಲಾ ಪಂಚಾಯಿತಿ ಹಲವು ಯೋಜನೆಗಳನ್ನು ರೂಪಿಸಿ ಕೋಟ್ಯಂತರ ರೂಪಾಯಿ ತೆಗೆದಿರಿಸಿದರೂ ಅನುಷ್ಠಾನ ಮಾತ್ರ ನಡೆದೇ ಇಲ್ಲ. ಇದರಿಂದಾಗಿ ನದಿ ದಂಡೆಯ ಗ್ರಾಮಗಳಲ್ಲಿಯೂ ಹನಿ ನೀರಿಗೆ ಹಾಹಾಕಾರ ಸಾಮಾನ್ಯವಾಗಿದೆ.ತುಂಗಭದ್ರಾ ಕಾಲುವೆಯಿಂದ ನೀರು ಹರಿಸಿ, ಬಳ್ಳಾರಿ ಹೊರವಲಯದ ಅಲ್ಲಿಪುರದ ಬಳಿಯಿರುವ ಕೆರೆ ತುಂಬಿಸಿ, ನಗರಕ್ಕೆ ಐದು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದ್ದು, ನಗರ ನಿವಾಸಿಗಳಿಗೆ ಸದ್ಯ ನೀರಿನ ಸಮಸ್ಯೆಯಿಲ್ಲ. ಆದರೂ ನಲ್ಲಿ ನೀರಿನ ಸೌಲಭ್ಯ ಇಲ್ಲದ ಕೆಲವು ನೂತನ ಬಡಾವಣೆಗಳಲ್ಲಿ ಬೇಸಿಗೆ ವೇಳೆ ನೀರಿನ ಸಮಸ್ಯೆ ತಲೆದೋರುತ್ತದೆ.ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ಹರಿದಿರುವ ಹಗರಿ ನದಿ ಬೇಸಿಗೆ ವೇಳೆ ಬತ್ತುವುದರಿಂದ ನದಿ ದಂಡೆಯ 30ಕ್ಕೂ ಅಧಿಕ ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ಕಾಲುವೆ ಮೂಲಕ ನದಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಅಲ್ಲಿನ ನಿವಾಸಿಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಫ್ಲೋರೈಡ್‌ಯುಕ್ತ ನೀರಿನ ಸಮಸ್ಯೆ ಜಿಲ್ಲೆಯ 400ಕ್ಕೂ ಅಧಿಕ ಗ್ರಾಮಗಳಲ್ಲಿದ್ದು, ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ ಜಾರಿಗೊಳಿಸಲು ಸರಕಾರ ಕ್ರಮ ಕೈಗೊಂಡಿದ್ದರೂ ಜನರಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುವುದು ಯಾವಾಗ? ಎಂಬುದೇ ಯಕ್ಷಪ್ರಶ್ನೆಯಾಗಿದೆ.ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದ ಎಂಟು ವಾರ್ಡ್‌ಗಳಲ್ಲಿ ದಿನದ 24 ಗಂಟೆಯೂ ನೀರು ಪೂರೈಕೆಯಾದರೆ, ಮಿಕ್ಕ 59 ವಾರ್ಡ್‌ಗಳಲ್ಲಿ ಆರು ದಿನಕ್ಕೊಮ್ಮೆ ನೀರು ಸಿಕ್ಕರೆ ಪುಣ್ಯ. ಈ ಒಂದು ಮಾಹಿತಿಯೇ ಸಾಕು ರಾಜ್ಯದ ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹು-ಧಾ ನಗರದ ನೀರಿನ ಪರಿಸ್ಥಿತಿಗೆ ಕನ್ನಡಿ ಹಿಡಿಯೋಕೆ. ‘ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಪಾಲಿಕೆ ಕಳೆದ 30 ವರ್ಷಗಳಲ್ಲಿ ಕೈಗೊಂಡ ನಿರ್ಣಯಗಳಿಗೆ ಲೆಕ್ಕವಿಲ್ಲ. ಪರಿಸ್ಥಿತಿ ಮಾತ್ರ ಒಂದಿನಿತೂ ಸುಧಾರಿಸಿಲ್ಲ.ಕೆಲವು ಬಡಾವಣೆಗಳಿಗೆ ಹತ್ತು ದಿನಗಳಾದರೂ ನೀರು ಪೂರೈಕೆ ಆಗುತ್ತಿಲ್ಲ. ಮನಸ್ಸಿಗೆ ಬಂದಾಗ ಬರುವ ಟ್ಯಾಂಕರ್‌ಗಳು, ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತೆ ಪ್ರತಿ ಮನೆಗೆ ಒಂದೊಂದು ಕೊಡ ನೀರು ಬಿಟ್ಟರೆ ಹೆಚ್ಚು. ಕಲಘಟಗಿ ತಾಲ್ಲೂಕಿನಲ್ಲಿ ನೀರಿನ ತೊಂದರೆ ಇಲ್ಲ. ಆದರೆ, ಅನಿಯಮಿತ ವಿದ್ಯುತ್ ನಿಲುಗಡೆಯಿಂದ ನೀರನ್ನು ಪಂಪ್ ಮಾಡಲು ಆಗುತ್ತಿಲ್ಲ. ಕಂದಲಿ ಗ್ರಾಮದ ಜನ ತಟ್ಟಿಹಳ್ಳ ಜಲಾಶಯದ ಹಿನ್ನೀರನ್ನೇ ಕುಡಿಯಲು ನೇರವಾಗಿ ಬಳಸುತ್ತಾರೆ. ಆದ್ದರಿಂದಲೇ ಸಾಂಕ್ರಾಮಿಕ ರೋಗದ ಭೀತಿ ಇಲ್ಲಿ ಅಧಿಕವಾಗಿದೆ.ಕುಂದಗೋಳ ತಾಲ್ಲೂಕು ನೀರಿಗಾಗಿ ಕೊಳವೆ ಬಾವಿಗಳನ್ನೇ ನೆಚ್ಚಿಕೊಂಡಿದೆ. ನೀರಿನಲ್ಲಿ ಅಪಾಯಕಾರಿ ರಾಸಾಯನಿಕ ಪದಾರ್ಥಗಳು ಇರುವುದು ದೃಢಪಟ್ಟಿದ್ದರೂ ಜನರಿಗೆ ಬೇರೆ ದಾರಿಯಿಲ್ಲ. ಕುಂದಗೋಳ ಪಟ್ಟಣಕ್ಕೆ 5-6 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕೆರೆಗಳನ್ನೇ ಹೆಚ್ಚಾಗಿ ಅವಲಂಬಿಸಿರುವ ನವಲಗುಂದ ತಾಲ್ಲೂಕಿನಲ್ಲಿ ಹೇಳಿ ಕೊಳ್ಳುವಂತಹ ಸಮಸ್ಯೆಗಳಿಲ್ಲ. ಚೆನ್ನಮ್ಮನ ಜಲಾಶಯದಲ್ಲಿ ಅಪಾರ ಪ್ರಮಾಣದ ನೀರಿದ್ದು ನವಲಗುಂದದ ಜನರ ಬಾಯಾರಿಕೆ ತಣಿಸುವ ಸಾಮರ್ಥ್ಯ ಹೊಂದಿದೆ. ಹಳ್ಳಿಗಳ ಸ್ಥಿತಿ ಹೆಚ್ಚೇನು ಕೆಟ್ಟಿಲ್ಲ. ಆದರೆ, ಶಾಶ್ವತ ನೀರು ಪೂರೈಕೆ ವ್ಯವಸ್ಥೆ ಎಲ್ಲಿಯೂ ಆಗಿಲ್ಲ.

ಈ ಮಧ್ಯೆ ಜಿಲ್ಲಾಡಳಿತ ತಾಲ್ಲೂಕು ಕೇಂದ್ರಗಳಾದ ನವಲಗುಂದ, ಕಲಘಟಗಿ, ಕುಂದಗೋಳ ಪಟ್ಟಣಗಳಿಗೂ ನಿರಂತರ ನೀರು ಪೂರೈಕೆ ಯೋಜನೆ ಸಿದ್ಧಪಡಿಸಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ ಬಂದರೆ ಇಡೀ ರಾಜ್ಯದಲ್ಲಿಯೇ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ನಿರಂತರ ನೀರು ಪೂರೈಕೆ ಮಾಡುತ್ತಿರುವ ಏಕೈಕ ಜಿಲ್ಲೆ ಎಂಬ ಹಿರಿಮೆಗೆ ಧಾರವಾಡ ಒಳಗಾಗಲಿದೆ. ಆದರೆ, ಜಿಲ್ಲೆಯ ನೀರಿನ ಸಮಸ್ಯೆ ನೀಗಿಸಲು ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಬಂದರೆ ಸಾಕು ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ.ಕಾರವಾರ: ಭೌಗೋಳಿಕವಾಗಿ ವಿಭಿನ್ನ ಪ್ರದೇಶಗಳನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಹಾಗೂ ಘಟ್ಟದ ಮೇಲಿನ ಪ್ರದೇಶಗಳಲ್ಲಿ ಕುಡಿಯುವ ನೀರಿನ  ತೊಂದರೆಗಳು ವಿಶೇಷವಾಗಿ ಕಂಡುಬಂದಿಲ್ಲ. ಆದರೆ ಅರೆ ಬಯಲುಸೀಮೆ ಪ್ರದೇಶಗಳಲ್ಲಿ ಬಿಸಿಲನ ಝಳ ಹೆಚ್ಚಾದಂತೆ ಕುಡಿಯುವ ನೀರಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು, ಮೂರು ದಿನಕ್ಕೊಮ್ಮೆ ನಾಗರಿಕರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಜಿಲ್ಲೆಯ 207 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಗರಿಕರಿಗೆ ನೀರು ಪೂರೈಸುವುದಕ್ಕೆ ಸಮಯ, ಸಂದರ್ಭ ಎನ್ನುವುದೇ ಇಲ್ಲ. ಬಂದರೆ ಬಂತು ಇಲ್ಲದಿದ್ದರೆ ಇಲ್ಲ ಎನ್ನುವಂಥಹ ಪರಿಸ್ಥಿತಿ ಇದೆ.ಗ್ರಾಮೀಣ ಹಾಗೂ ನಗರದ ಪ್ರದೇಶಗಳಲ್ಲಿ ಕುಡಿಯುವ ನೀರಿಯ ಯೋಜನೆಗೆ ಪ್ರತಿವರ್ಷ ಕೋಟಿಗಟ್ಟಲೆ ಹಣ ಸುರಿಯಲಾಗುತ್ತಿದೆ ಆದರೆ ನೀರಿನ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಗ್ರಾಮೀಣ ಪ್ರದೇಶಗಳಿಗೆ ನೀರು ಪೂರೈಕೆಗೆ ಗ್ರಾಮೀಣ ನೀರು ಸರಬರಾಜು ಯೋಜನೆಯಡಿ 2009-10ನೇ ಸಾಲಿನಲ್ಲಿ ಅಂದಾಜು 15 ಕೋಟಿ ಬಿಡುಗಡೆ ಆಗಿದೆ.2010-11ನೇ ಸಾಲಿನಲ್ಲಿ ಬೋರ್‌ವೆಲ್ ನಿರ್ವಹಣೆಗೆ ರೂ. 40 ಲಕ್ಷ, ಪೈಪ್ ವಾಟರ್ ಹಾಗೂ ಮಿನಿ ವಾಟರ್ ಸಪ್ಲೈ ನಿರ್ವಹಣೆಗೆ ರೂ. 42.2 ಲಕ್ಷ, ಟಾಸ್ಕ್‌ಪೋಸ್ಟ್ ಕಾರ್ಯಕ್ರಮದಡಿ ಶಾಸಕರಿಂದ ಆಯ್ಕೆಯಾದ ಕಾಮಗಾರಿಗಳಿಗೆ ರೂ. 60 ಲಕ್ಷ, ತ್ವರಿತ ಗ್ರಾಮೀಣ ನೀರು ಸರಬರಾಜಿಗೆ ರೂ. 2.61 ಕೋಟಿ, ರಾಜ್ಯ ವಲಯ ನೀರು ಪೂರೈಕೆ ಯೋಜನೆಗೆ ರೂ. 2.61 ಕೋಟಿ, ರಾಷ್ಟ್ರೀಯ ಗ್ರಾಮೀಣ ನೀರು ಸರಬರಾಜು ಯೋಜನೆಗೆ ರೂ. 450.97 ಹಾಗೂ ಅಂತರ್ಜಲ ಅಭಿವೃದ್ಧಿಗೆ ರೂ. 61.22 ಕೋಟಿ ಅನುದಾನ ಮಂಜೂರಾಗಿದೆ.ಈ ಯೋಜನೆಗಳ ಹೊರತಾಗಿಯೂ ಕುಡಿಯುವ ನೀರಿನ ತೊಂದರೆ ಕಂಡುಬಂದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಜಿಲ್ಲಾಡಳಿತ ಸ್ಥಳೀಯಾಡಳಿತಕ್ಕೆ ಸೂಚನೆ ನೀಡಿದೆ.ಗದಗ: ಜಿಲ್ಲಾ ಕೇಂದ್ರವಾದ ಗದಗ-ಬೆಟಗೇರಿ ಅವಳಿ ನಗರದಲ್ಲಿ ನೀರಿನ ಸಮಸ್ಯೆಯೇ ಪ್ರಮುಖವಾಗಿದೆ. ಮಳೆಗಾಲದಲ್ಲಿ ವಾರಕ್ಕೊಮ್ಮೆ ನೀರು ಬರುತ್ತಿತ್ತು. ಬೇಸಿಗೆ ಪ್ರಾರಂಭದಲ್ಲಿ ಇದು ಹದಿನೈದು ದಿನಕ್ಕೆ ತಲುಪಿದೆ. ಮುಂದೆ 20 ದಿನವಾದರೂ ಆಗಬಹುದು.ಅವಳಿ ನಗರಕ್ಕೆ ತುಂಗಭದ್ರಾ ನದಿಯ ನೀರೇ ಆಧಾರ. ಕೊರ್ಲಹಳ್ಳಿ ಸಮೀಪದಿಂದ ನೀರನ್ನು ಪಂಪ್ ಮಾಡಿ ತರಲಾಗುತ್ತದೆ. ಬೇಸಿಗೆ ಕಾಲವಾದ ಕಾರಣ ನದಿಯಲ್ಲೂ ನೀರಿನ ಮಟ್ಟ ತಗ್ಗಿದೆ. ಇದರಿಂದಾಗಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಉಳ್ಳವರು 150 ರೂಪಾಯಿ ಕೊಟ್ಟು ಟ್ಯಾಂಕರ್ ನೀರು ಖರೀದಿಸುತ್ತಾರೆ. ಬಡವರಿಗೆ ಹದಿನೈದು ದಿನಕ್ಕೆ ಬರುವ ತುಂಗೆಯೆ ಗತಿ.ನಗರದಲ್ಲೂ ಹೇಳಿಕೊಳ್ಳುವಂತಹ ಜಲಮೂಲಗಳು ಇಲ್ಲ, ಕೊಳವೆಬಾವಿಗಳು ಇದ್ದರೂ ಗದಗ ಬೆಳೆದಿರುವ ಪ್ರಮಾಣಕ್ಕೆ ಅವುಗಳು ಸಾಲುವುದಿಲ್ಲ.ಗದಗ ನಗರಕ್ಕೆ ಸಮರ್ಪಕವಾಗಿ ನೀರು ಪೂರೈಕೆಯಾಗಬೇಕಾದರೆ ಪ್ರತಿನಿತ್ಯ 17 ಎಂಎಲ್‌ಡಿ ನೀರು ಬೇಕು. ಈಗ ಬರುತ್ತಿರುವುದು 9 ರಿಂದ 10 ಎಂಎಲ್‌ಡಿ. ಬೇಸಿಗೆ ಮುಂದುವರೆದಂತೆ ಅದೂ ಸ್ವಲ್ಪ ಕಡಿಮೆಯಾಗಬಹುದು. ಏಕೆಂದರೆ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಾ ಹೋಗುತ್ತದೆ. ನದಿಯಲ್ಲಿ ನೀರು ಕಡಿಮೆ ಇರುವ ಕಾರಣ ಭದ್ರ ಜಲಾಶಯದಿಂದ ಒಂದೂವರೆ ಟಿಎಂಸಿ ನೀರನ್ನು ಹಂತ-ಹಂತವಾಗಿ ಬಿಡಲು ಸಂಬಂಧಿಸಿದ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಇದು ಹಾವೇರಿ, ಗದಗ, ಬಳ್ಳಾರಿ ಪಟ್ಟಣಗಳಿಗೆ ಕುಡಿಯುವ ನೀರಿಗಾಗಿ ಮಾತ್ರ ಎಂದು ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ ಹೇಳುತ್ತಾರೆ.ಜಿಲ್ಲೆಯ ಇತರೆ ಪಟ್ಟಣ, ತಾಲ್ಲೂಕು ಕೇಂದ್ರಗಳಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಇನ್ನೂ ಕಾಡಿಲ್ಲ. ಕೆಲವೊಂದು ಹಳ್ಳಿಗಳಲ್ಲಿ ಕೆರೆಗಳು ಬತ್ತಿ ಹೋಗಿರುವುದು, ಪಾಚಿ ಕಟ್ಟಿರುವುದು ಮುಂತಾದ ಕಾರಣಕ್ಕಾಗಿ ನೀರನ್ನು ಉಪಯೋಗಿಸಲು ಆಗುತ್ತಿಲ್ಲ.ಅಂತಹ ಕಡೆ ಸಮಸ್ಯೆ ಕಾಣಿಸಿಕೊಂಡಿದೆ. ಜಿಲ್ಲಾ ಪಂಚಾಯ್ತಿಯ ಎಂಜಿನಿಯರಿಂಗ್ ವಿಭಾಗ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಒಂದು ದಳವನ್ನು ರಚನೆ ಮಾಡಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಕುರಿತು ಯಾವುದೇ ದೂರು ಬಂದರೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಓ ವೀರಣ್ಣ ಜಿ,ತುರಮರಿ ತಿಳಿಸಿದರು.ಬೆಳಗಾವಿ: ಮಲೆನಾಡು, ಅರೆಮಲೆನಾಡು ಹಾಗೂ ಬಯಲು ಸೀಮೆ ಪ್ರದೇಶಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಕಳೆದ ಮಳೆಗಾಲದಲ್ಲಿ ಆಗಿರುವ ಉತ್ತಮ ಮಳೆ ಹಾಗೂ ಜಿಲ್ಲೆಯ ಪ್ರಮುಖ ನದಿಗಳಾದ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಹಾಗೂ ಇತರೇ ನಾಲ್ಕು ನದಿಗಳಿಂದ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಈ ತನಕ ವ್ಯತ್ಯಯವಾಗಿಲ್ಲ.ಮಲೆನಾಡು ಪ್ರದೇಶದಲ್ಲಿ ಬರುವ ಖಾನಾಪುರ ಹಾಗೂ ಬೆಳಗಾವಿ ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿ ನೈಸರ್ಗಿಕ ನೀರಿನ ಲಭ್ಯತೆ ಇದೆ. ಇತರೇ 8 ತಾಲ್ಲೂಕುಗಳು ಅರೆ ಮಲೆನಾಡು, ಬಯಲುಸೀಮೆ ಪ್ರದೇಶದಲ್ಲಿದ್ದು, ನೀರಿನ ಸಮಸ್ಯೆ ಎದುರಿಸುತ್ತಿವೆ. ಈ ತಾಲ್ಲೂಕುಗಳಲ್ಲಿ  ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೆ ತರಲಾಗಿದೆ.ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನಲ್ಲಿ ಒಂದಿಷ್ಟು ಜಾಸ್ತಿ ಸಮಸ್ಯೆ ಇದೆ. ಈ ಪಟ್ಟಣಕ್ಕೆ 8ರಿಂದ 10 ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಬೈಲಹೊಂಗಲಕ್ಕೆ ಮಲಪ್ರಭಾ ನದಿಯಿಂದ ನೀರು ಪೂರೈಸುವ ಯೋಜನೆ ಕಳೆದ ನಾಲ್ಕು ವರ್ಷಗಳಿಂದ ಚಾಲ್ತಿಯಲ್ಲಿದೆ. ತಾಂತ್ರಿಕ ಹಾಗೂ ಹಣಕಾಸು ಸಮಸ್ಯೆಗಳಿಂದ ಯೋಜನೆ ನಿಧಾನಗತಿಯಲ್ಲಿ ಮುಂದುವರಿದಿದೆ. ಹುಕ್ಕೇರಿ, ಸಂಕೇಶ್ವರ, ಸವದತ್ತಿ, ಚೆನ್ನಮ್ಮನ ಕಿತ್ತೂರು ಪಟ್ಟಣಗಳಿಗೆ 2-3 ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳ ಕುಡಿಯುವ ನೀರು ಯೋಜನೆಗಳ ಜಾರಿಯಲ್ಲಿ ನಿರ್ಲಕ್ಷ್ಯ, ಭ್ರಷ್ಟಾಚಾರದಿಂದ ಕೆಲ ಕಡೆಗಳಲ್ಲಿ ಸಮಸ್ಯೆ ಮುಂದುವರಿದಿದೆ.ವರದಿ: ಗಣೇಶ ಚಂದನಶಿವ, ಗುರುನಾಥ ಕಡಬೂರ, ಸಿದ್ದಯ್ಯ ಹಿರೇಮಠ, ಪ್ರವೀಣ್ ಕುಲಕರ್ಣಿ, ನಾಗೇಂದ್ರ ಖಾರ್ವಿ, ಆರ್.ವೀರೇಂದ್ರ ಪ್ರಸಾದ್ ಮತ್ತು ಮಂಜುನಾಥ ಭಟ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.