ಭಾನುವಾರ, ಏಪ್ರಿಲ್ 11, 2021
32 °C

ನೀರು ಪೂರೈಕೆ: ಶೀಘ್ರ ಯಥಾಸ್ಥಿತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಜಲಮಂಡಳಿ ನೀಡಿದ ಆಶ್ವಾಸನೆ ಹೊರತಾಗಿಯೂ ನಗರದ ವಿವಿಧೆಡೆ ಶನಿವಾರ ರಾತ್ರಿ ಕಳೆದರೂ ನೀರು ಸರಬರಾಜಾಗದೇ ಜನರು ತೀವ್ರ ತೊಂದರೆ ಅನುಭವಿಸಿದರು. ಸೋಮವಾರದ ಬಳಿಕ ನೀರು ಸರಬರಾಜು ವ್ಯವಸ್ಥೆ ಯಥಾಸ್ಥಿತಿಗೆ ಮರಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶನಿವಾರ ಬೆಳಿಗ್ಗೆ ನೀರು ಸರಬರಾಜು ವ್ಯವಸ್ಥೆ ಯಥಾಸ್ಥಿತಿಗೆ ಮರಳಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿತ್ತು. ಆದರೆ ಶನಿವಾರ ರಾತ್ರಿ ಕಳೆದರೂ ನಗರದ ಆರ್.ಟಿ.ನಗರ, ಸಂಜಯನಗರ, ಕಲ್ಯಾಣನಗರ, ಒಎಂಬಿಆರ್ ಲೇಔಟ್, ಶಿವಾಜಿನಗರದ ಕೆಲಭಾಗ, ಮಲ್ಲೇಶ್ವರಂ, ಯಶವಂತಪುರ, ಚಿಕ್ಕಪೇಟೆ, ಬನ್ನಪ್ಪ ಪಾರ್ಕ್, ಕುಮಾರಪಾರ್ಕ್,  ಗಾಂಧಿನಗರ, ಸುಭಾಷ್‌ನಗರಗಳಲ್ಲಿ ನೀರು ಸರಬರಾಜಾಗದೇ ಜನ ತೊಂದರೆ ಅನುಭವಿಸಿದರು. ಜಲಮಂಡಳಿ ಕಚೇರಿಗೆ ನೂರಾರು ಜನ ದೂರು ಸಲ್ಲಿಸಿದರು.ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಜಲಮಂಡಳಿ ಪ್ರಧಾನ ಎಂಜಿನಿಯರ್ ವೆಂಕಟರಾಜು ‘ತೊರೆಕಾಡನಹಳ್ಳಿಯಲ್ಲಿ 48 ದಶಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯದ ಜಲಾಗಾರ ನಿರ್ಮಿಸಲಾಗುತ್ತಿದ್ದು ಇದೇ ಸ್ಥಳದಲ್ಲಿ ಹಾದು ಹೋಗಿದ್ದ ಕೊಳವೆಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿ ಶುಕ್ರವಾರ ರಾತ್ರಿ 2 ಗಂಟೆ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಶನಿವಾರ ಬೆಳಿಗ್ಗೆ 10 ಗಂಟೆವರೆಗೆ ಕಾಮಗಾರಿ ಮುಂದುವರಿಯಿತು. ಅತ್ಯಂತ ಸಂಕೀರ್ಣ ಕಾಮಗಾರಿಯಾದ್ದರಿಂದ ನೀರು ಪೂರೈಕೆ ವಿಳಂಬವಾಯಿತು’ ಎಂದು ತಿಳಿಸಿದರು.‘ಶನಿವಾರ ರಾತ್ರಿ ವೇಳೆಗೆ ನಗರದ ಕೇಂದ್ರ ವಿಭಾಗದ ಪ್ರದೇಶಗಳಿಗೆ ನೀರು ಸರಬರಾಜಾಗಲಿದೆ. ಭಾನುವಾರ ಉತ್ತರ ಹಾಗೂ ಪೂರ್ವ ಭಾಗಗಳಿಗೆ ನೀರು ಪೂರೈಕೆಯಾಗಲಿದೆ. ಸೋಮವಾರದ ಬಳಿಕ ನೀರು ಪೂರೈಕೆ ಸಹಜ ಸ್ಥಿತಿಗೆ ಮರಳಲಿದೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.