ಭಾನುವಾರ, ಜೂನ್ 20, 2021
23 °C

ನೀರು, ಮೂಲಸೌಕರ್ಯಕ್ಕೆ ಆದ್ಯತೆ: ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರು, ರಸ್ತೆ ಮತ್ತಿತರ ಮೂಲಸೌಕರ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡುವುದಾಗಿ ಶಾಸಕ ಎಂ. ಚಂದ್ರಪ್ಪ ಹೇಳಿದರು.ತಾಲ್ಲೂಕಿನ ಹಳೇಹಳ್ಳಿ ಗೊಲ್ಲರಹಟ್ಟಿಯಲ್ಲಿ ಸೋಮವಾರ ರೂ. 5 ಲಕ್ಷ ವೆಚ್ಚದ ಮಹಿಳಾ ಭವನ ಮತ್ತು ರೂ. 10 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಯಾದವ ಮಹಿಳೆಯರಿಗೆ ತಾಲ್ಲೂಕಿನ 20 ಗೊಲ್ಲರಹಟ್ಟಿಗಳಲ್ಲಿ ತಲಾ ರೂ. 5 ಲಕ್ಷ ವೆಚ್ಚದಲ್ಲಿ ಮಹಿಳಾ ಭವನಗಳನ್ನು ನಿರ್ಮಿಸಲಾಗುತ್ತಿದೆ. ಗೊಲ್ಲರಹಟ್ಟಿಗಳು ಯಾವುದೇ ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿದ್ದು, ಜನ ಕನಿಷ್ಠ ಸೌಲಭ್ಯಗಳಿಲ್ಲದೆ ಪರಿತಪಿಸುತ್ತಿದ್ದಾರೆ.

 

ಸ್ವಾತಂತ್ರ್ಯ ಬಂದು 65 ವರ್ಷಗಳಾದರೂ ಈ ಹಟ್ಟಿಗಳಲ್ಲಿ ಸುಸಜ್ಜಿತ ರಸ್ತೆ, ಚರಂಡಿ, ಉತ್ತಮ ವಾಸಯೋಗ್ಯ ಮನೆಗಳಿಲ್ಲ. ಇದನ್ನು ಮನಗಂಡು ಎಲ್ಲಾ ಗೊಲ್ಲರಹಟ್ಟಿಗಳಿಗೂ ಕಾಂಕ್ರೀಟ್ ರಸ್ತೆಗಳನ್ನು ಮಂಜೂರು ಮಾಡಿಸಿದ್ದೇನೆ. ಹಂತ ಹಂತವಾಗಿ ಮೂಲ ಸೌಲಭ್ಯ ಒದಗಿಸಲು ತೀರ್ಮಾನಿಸಿದ್ದು, ಹಿಂದುಳಿದ ಜನಾಂಗದವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ ಎಂದರು.ಈ ಭಾಗದಲ್ಲಿ ರೈತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಅನೇಕ ಗ್ರಾಮೀಣ ಸಂಪರ್ಕ ರಸ್ತೆಗಳನ್ನು ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ-13 ರಿಂದ ತಾಳ್ಯವರೆಗೆ ರೂ. 2 ಕೋಟಿ ವೆಚ್ಚದ ರಸ್ತೆ ಮತ್ತು ರೂ. 50 ಲಕ್ಷದ ಸೇತುವೆ ನಿರ್ಮಿಸಲಾಗಿದೆ. ಚಿತ್ರಹಳ್ಳಿಯಿಂದ ಅಮೃತಾಪುರ, ಚಿಕ್ಕಜಾಜೂರು ರಸ್ತೆಗೆ ರೂ. 3 ಕೋಟಿ ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು.  ರೂ. 1 ಕೋಟಿ ವೆಚ್ಚದಲ್ಲಿ ಶಿವಗಂಗಾ- ಕೊಂಡಾಪುರ ರಸ್ತೆ ನಿರ್ಮಿಸುತ್ತಿದ್ದು, ಈ ಮಾರ್ಗದ ಏಳು ಹಳ್ಳಿಗಳ ಜನ ನೇರವಾಗಿ ತಾಲ್ಲೂಕು ಕೇಂದ್ರ ತಲುಪಬಹುದಾಗಿದೆ ಎಂದು ಚಂದ್ರಪ್ಪ ಹೇಳಿದರು.ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಸಿ. ರಮೇಶ್ ಮಾತನಾಡಿ, ಶಾಸಕರ ಸಮಾರಂಭಗಳಿಗೆ ಜನ ತಂಡೋಪ ತಂಡವಾಗಿ ಸೇರುತ್ತಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. ಅವರು ತಮ್ಮ ಅಭಿವೃದ್ಧಿ ಕಾರ್ಯಗಳಿಂದಲೇ ಜನರನ್ನು ಆಕರ್ಷಿಸುತ್ತಿದ್ದಾರೆ. ಮಾತಿಗಿಂತ ಕೃತಿ ಮುಖ್ಯ ಎಂಬ ತತ್ವ ಅಳವಡಿಸಿಕೊಂಡಿದ್ದಾರೆ ಎಂದು ಹೇಳಿದರು.ದಾಸಯ್ಯನ ಹಟ್ಟಿ, ಅಮೃತಾಪುರದಲ್ಲಿ ಶಾಸಕರು ಮಹಿಳಾ ಭವನಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಎಪಿಎಂಸಿ ಸದಸ್ಯ ಮರುಳಸಿದ್ದಪ್ಪ, ರುಕ್ಷ್ಮಿಣಿ, ರಂಗಪ್ಪ, ಸೋಮಶೇಖರಪ್ಪ, ಗೋವಿಂದಪ್ಪ, ಮಹೇಶ್ವರಪ್ಪ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.