ಸೋಮವಾರ, ಮೇ 17, 2021
25 °C

ನೀರು ಸಮುದ್ರ ಸೇರುವುದನ್ನು ತಪ್ಪಿಸಬೇಕು

ಎನ್.ವಿಜಯರಾಘವನ್,ನಿವೃತ್ತ ಮುಖ್ಯ ಎಂಜಿನಿಯರ್ (ನಿರೂಪಣೆ: ರವೀಂದ್ರ ಭಟ್ಟ) Updated:

ಅಕ್ಷರ ಗಾತ್ರ : | |

ಕಳೆದ ಹಲವಾರು ವರ್ಷಗಳ ರಾಜ್ಯದ ಹವಾಮಾನವನ್ನು ಗಮನಿಸಿದರೆ ಪ್ರತಿ ಹತ್ತು ವರ್ಷಕ್ಕೊಮ್ಮೆ ಬರಗಾಲ ಬರುತ್ತಿದೆ. 2002-03ರಲ್ಲಿ ರಾಜ್ಯದಲ್ಲಿ ತೀವ್ರ ಬರಗಾಲವಿತ್ತು. 2012-13ರಲ್ಲಿ ಕೂಡ ಬರಗಾಲ ಬಂತು. ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಬಹುದೊಡ್ಡ ಸಮಸ್ಯೆಯೇ ಆಗಿರುವ ಕಾವೇರಿ ನೀರು ಹಂಚಿಕೆ ವಿಷಯ ಸಾಮಾನ್ಯವಾಗಿ ಹೆಚ್ಚು ಚರ್ಚೆಗೆ ಒಳಗಾಗುವುದು ಇಂತಹ ಬರಗಾಲದ ಸಂದರ್ಭದಲ್ಲಿ ಮಾತ್ರ.ಕಾವೇರಿ ನೀರನ್ನು ಎಷ್ಟು ಹಂಚಿಕೆ ಮಾಡಿಕೊಳ್ಳಬೇಕು, ಯಾವ ಯಾವ ರಾಜ್ಯದ ಪಾಲು ಎಷ್ಟು ಎನ್ನುವುದನ್ನು ಈಗಾಗಲೇ ಕಾವೇರಿ ನ್ಯಾಯ ಮಂಡಳಿ ಹೇಳಿದೆ. ಅಲ್ಲದೆ ಬರಗಾಲದ ಸಂದರ್ಭದಲ್ಲಿ ಕೂಡ ಎಷ್ಟು ನೀರು ಹಂಚಿಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಕೂಡ ತೀರ್ಪಿನಲ್ಲಿ ಸ್ಪಷ್ಟ ಸೂಚನೆಗಳಿವೆ. ಅಲ್ಲದೆ ಈ ಹಂತದಲ್ಲಿ ಯಾವುದೇ ಹೊಸ ಯೋಜನೆಯನ್ನು ನಾವು ಕೈಗೊಳ್ಳುವಂತಿಲ್ಲ. ನಮ್ಮ ಪಾಲಿಗೆ ಬಂದಿರುವ ನೀರನ್ನು ಎಷ್ಟು ಸಮರ್ಥವಾಗಿ ನಾವು ಬಳಸುತ್ತೇವೆ ಎನ್ನುವುದೇ ಈಗ ಮುಖ್ಯ.ಕಾವೇರಿ ನದಿ ವಿಚಾರಕ್ಕೆ ಬಂದರೆ ನಾವು ಮೇಲಿನ ಭಾಗದಲ್ಲಿದ್ದೇವೆ. ಕೃಷ್ಣಾ ನದಿಯ ವಿಚಾರದಲ್ಲಿ ನಾವು ಕೆಳಭಾಗದಲ್ಲಿದ್ದೇವೆ. ಮೇಲಿನ ಭಾಗದಲ್ಲಿದ್ದವರಿಗೆ ಸಮಸ್ಯೆ ಹೆಚ್ಚು. ಕೆಳಭಾಗದವರಿಗೆ ನೀರನ್ನು ಕೊಡಲೇ ಬೇಕಾಗುತ್ತದೆ. ಈಗಂತೂ ಕಾವೇರಿ ನ್ಯಾಯ ಮಂಡಳಿ ತೀರ್ಪು ಜಾರಿಗೆ ಬಂದಿರುವುದರಿಂದ ಮತ್ತೆ ಇಲ್ಲಿ ಕಾಮಗಾರಿಗಳನ್ನು ನಡೆಸುವುದು ಅಸಾಧ್ಯ. ಕೃಷ್ಣರಾಜ ಸಾಗರ, ಹಾರಂಗಿ, ಕಬಿನಿ, ಹೇಮಾವತಿ ಸೇರಿದಂತೆ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಬಹುತೇಕ ಎಲ್ಲ ಯೋಜನೆಗಳೂ ಪೂರ್ಣಗೊಂಡಿವೆ. ಕಾವೇರಿ ಐತೀರ್ಪಿನಲ್ಲಿ ನಮ್ಮ ಪಾಲಿಗೆ 18 ಲಕ್ಷ ಹೆಕ್ಟೇರ್ ನೀರಾವರಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ನಾವು ಇನ್ನೂ ಅಷ್ಟು ಪ್ರಮಾಣದ ನೀರಾವರಿ ಪ್ರದೇಶವನ್ನು ಹೊಂದಿಲ್ಲ. ಹೊಸದಾಗಿ ಅಧಿಕಾರಕ್ಕೆ ಬಂದಿರುವ ಸರ್ಕಾರ ನೀರಾವರಿ ಪ್ರದೇಶವನ್ನು ಹೆಚ್ಚಿಸುವ ಕೆಲಸವನ್ನು ಮಾಡಬೇಕು.ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿಗಾಗಿ ಸಾಕಷ್ಟು ಜಲಾಶಯಗಳು ಇವೆ. ಆದರೆ ಕುಡಿಯುವ ನೀರು ಸಂಗ್ರಹಕ್ಕೆ ಸೂಕ್ತವಾದ ಜಲ ಸಂಗ್ರಹಾಗಾರವಿಲ್ಲ. ಮೇಕೆದಾಟುವಿನಲ್ಲಿ ಇಂತಹ ಜಲ ಸಂಗ್ರಹಾಗಾರ ಮಾಡುವ ಯೋಜನೆಯೊಂದನ್ನು ಬಹಳ ವರ್ಷಗಳ ಹಿಂದೆಯೇ ರೂಪಿಸಲಾಗಿತ್ತು. ಆದರೆ ಅದಕ್ಕೆ ತಮಿಳುನಾಡು ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿತು. ಇಲ್ಲಿ ವಿದ್ಯುತ್ ಯೋಜನೆಗೂ ಅವಕಾಶ ಕಲ್ಪಿಸಲಾಗಿತ್ತು.ಈ ಎರಡೂ ಯೋಜನೆಗಳನ್ನು ಕೈಗೊಳ್ಳಬೇಕಾದ ಅನಿವಾರ್ಯ ಇದೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ತಮಿಳುನಾಡು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಮೇಕೆದಾಟು ಯೋಜನೆಯನ್ನು ಕೈಗೊಂಡರೆ ಬೆಂಗಳೂರೂ ಸೇರಿದಂತೆ ಹಲವಾರು ನಗರ, ಪಟ್ಟಣಗಳೂ ಮತ್ತು ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಿದಂತಾಗುತ್ತದೆ. ಅದೇ ರೀತಿ ಹೊಗೇನಕಲ್‌ನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಗಡಿಯನ್ನು ಸರಿಯಾಗಿ ಗುರುತಿಸಿ ಅಲ್ಲಿಯೂ ವಿದ್ಯುತ್ ಯೋಜನೆ ಮತ್ತು ಕುಡಿಯುವ ನೀರಿನ ಯೋಜನೆಯನ್ನು ಕೈಗೊಳ್ಳಬಹುದು.ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೃಷ್ಣರಾಜಸಾಗರ ಕೇವಲ 96 ಅಡಿವರೆಗೆ ಮಾತ್ರ ಭರ್ತಿಯಾಗಿತ್ತು. ಆಗ ಈ ಭಾಗದ ಜನರು ಸಾಕಷ್ಟು ತೊಂದರೆ ಅನುಭವಿಸಿದರು. ರೈತರಿಗೆ ಸೂಕ್ತ ಪ್ರಮಾಣದಲ್ಲಿ ನೀರು ಕೊಡಲು ಸಾಧ್ಯವಾಗಲಿಲ್ಲ. ಬರಗಾಲ ಬರುವ ಮುನ್ಸೂಚನೆ ಇದ್ದಾಗ ರೈತರು ಪರ‌್ಯಾಯ ಬೆಳೆಯನ್ನು ಬೆಳೆಯಬೇಕು. ಎಲ್ಲ ರೈತರೂ ಕಬ್ಬು ಮತ್ತು ಭತ್ತವನ್ನೇ ಬೆಳೆಯಬಾರದು. ರಾಜ್ಯ ಸರ್ಕಾರ ಕೂಡ ರೈತರು ಯಾವ ಬೆಳೆಯನ್ನು ಬೆಳೆಯಬೇಕು ಎನ್ನುವುದನ್ನು ಕಡ್ಡಾಯ ಮಾಡಬೇಕು. ಕಡಿಮೆ ನೀರನ್ನು ಬಳಸಿ ಬೆಳೆಯಬಹುದಾದ ಬೆಳೆಗಳಿಗೆ ಆದ್ಯತೆ ನೀಡಬೇಕು. ಈ ಬಗ್ಗೆ ರೈತರಿಗೆ ತಿಳಿವಳಿಕೆ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು.ಕಾವೇರಿ ನ್ಯಾಯ ಮಂಡಳಿ ಕರ್ನಾಟಕಕ್ಕೆ 270 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲು ಅನುಮತಿ ನೀಡಿದೆ. ಹತ್ತು ವರ್ಷಗಳಲ್ಲಿ ಒಂದು ಅಥವಾ ಎರಡು ವರ್ಷವನ್ನು ಬಿಟ್ಟರೆ ಉಳಿದೆಲ್ಲಾ ವರ್ಷ ಮಳೆ ಚೆನ್ನಾಗಿಯೇ ಆಗುತ್ತದೆ. ಹೀಗೆ ಉತ್ತಮ ಮಳೆಯಾದಾಗ ನೀರು ವ್ಯರ್ಥವಾಗಿ ಸಮುದ್ರವನ್ನು ಸೇರುತ್ತದೆ. ಹೀಗೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆಯಲು ನಮ್ಮಲ್ಲಿ ಯಾವುದೇ ವ್ಯವಸ್ಥೆ ಇಲ್ಲ.ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು. ಅಂತರ್ಜಲ ಹೆಚ್ಚಳಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಳೆ ಬಂದಾಗ ಎಲ್ಲ ಕೆರೆಗಳು ಭರ್ತಿಯಾಗುತ್ತವೆ ಎಂಬ ಮನೋಭಾವ ಸಲ್ಲ. ಮೊದಲು ಎಲ್ಲ ಕೆರೆಗಳು ಒಂದಕ್ಕೊಂದು ಸಂಪರ್ಕ ಹೊಂದಿದ್ದವು. ಒಂದು ಕೆರೆ ಭರ್ತಿಯಾಗಿ ಕೋಡಿ ಬಿದ್ದರೆ ಆ ನೀರು ಇನ್ನೊಂದು ಕೆರೆಗೆ ಹೋಗಿ ಭರ್ತಿಯಾಗುತ್ತಿತ್ತು. ಆದರೆ ಈಗ ಕೆರೆಗಳಿಗೆ ನೀರು ಹೋಗುವ ಮಾರ್ಗಗಳು ಬಂದ್ ಆಗಿವೆ. ಅವುಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಅಥವಾ ಇನ್ಯಾವುದೋ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ.ಅದರಿಂದಾಗಿ ಈಗ ಯಾವುದೇ ಕೆರೆ ತಾನೇತಾನಾಗಿ ಭರ್ತಿಯಾಗುವುದಿಲ್ಲ. ಅಲ್ಲದೆ ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳುವ ಕ್ರಿಯೆ ಕೂಡ ಜೋರಾಗಿಯೇ ನಡೆದಿದೆ. ರಾಜ್ಯ ಸರ್ಕಾರ ಯಾವ ಮುಲಾಜಿಗೂ ಒಳಗಾಗದೆ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಎಲ್ಲ ಕೆರೆಗಳೂ ಭರ್ತಿಯಾಗುವಂತೆ ಮಾಡಿದರೆ ಅಂತರ್ಜಲದ ಪ್ರಮಾಣ ಹೆಚ್ಚಾಗುತ್ತದೆ. ಆಗ ನಮ್ಮ ಜನರು ಬರಗಾಲವನ್ನೂ ತಡೆದುಕೊಳ್ಳಬಲ್ಲರು. ಕಾವೇರಿ ಪ್ರದೇಶದಲ್ಲಿ ಈಗಾಗಲೇ ಸಾಕಷ್ಟು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಚೆಕ್ ಡ್ಯಾಂ ನಿರ್ಮಾಣಕ್ಕೆ ಇನ್ನೂ ಹೆಚ್ಚಿನ ಆದ್ಯತೆ ನೀಡಿದರೆ ನೀರಿನ ಬಳಕೆಯನ್ನೂ ಹೆಚ್ಚಿಸಿಕೊಳ್ಳಬಹುದು ಹಾಗೂ ಅಂತರ್ಜಲವನ್ನೂ ಹೆಚ್ಚಿಸಬಹುದು.ಕಾವೇರಿ ಜಲಾನಯನ ಪ್ರದೇಶದಲ್ಲಿ ಕಾಲುವೆಗಳನ್ನು ಸುಸ್ಥಿತಿಯಲ್ಲಿ ಇಡುವುದು ಕೂಡ ಮುಖ್ಯ. ಕಾವೇರಿ ನೀರಾವರಿ ನಿಗಮ ಸ್ಥಾಪನೆಯಾದ ನಂತರ ಕಾಲುವೆಗಳ ಮೇಲುಸ್ತುವಾರಿ ಕೆಲಸ ಚೆನ್ನಾಗಿಯೇ ನಡೆಯುತ್ತಿದೆ. ಆದರೂ ಕೆಲವು ಕಡೆ ಕೊನೆ ಭಾಗದ ರೈತರಿಗೆ ನೀರು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾಲುವೆಗಳಲ್ಲಿ ತುಂಬಿದ ಹೂಳುಗಳನ್ನು ತೆಗೆದು ಅವುಗಳನ್ನು ದುರಸ್ತಿ ಮಾಡಿಸಿದರೆ ನೀರು ಸರಾಗವಾಗಿ ಹರಿದು ಹೋಗುತ್ತದೆ. ಇದರಿಂದ ಎಲ್ಲ ಭಾಗದ ರೈತರಿಗೂ ಅನುಕೂಲವಾಗುತ್ತದೆ.ಕಾವೇರಿ ಪ್ರದೇಶಗಳಲ್ಲಿ ಬರುವ ಕೆರೆಗಳಿಗೆ ಹೂಳಿನ ಸಮಸ್ಯೆ ಕಡಿಮೆ. ಇಲ್ಲಿ ಬಹುತೇಕ ಕೆರೆಗಳು ಕಲ್ಲು ಪ್ರದೇಶಗಳಲ್ಲಿ ಇರುವುದರಿಂದ ಹೂಳು ಅಷ್ಟಾಗಿ ಇಲ್ಲ. ಕೃಷ್ಣರಾಜ ಸಾಗರದಲ್ಲಿ ಕೂಡ ಹೂಳಿನ ಪ್ರಮಾಣ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ವಿಶ್ವೇಶ್ವರಯ್ಯ ಅವರು ಕನ್ನಂಬಾಡಿಯನ್ನು ಕಟ್ಟಿಸಿದ ಸಂದರ್ಭದಲ್ಲಿ ನೀರು ಸಂಗ್ರಹ ಸಾಮರ್ಥ್ಯ ಎಷ್ಟು ಇತ್ತೋ ಈಗಲೂ ಕೆಆರ್‌ಎಸ್ ಸಂಗ್ರಹ ಸಾಮರ್ಥ್ಯ ಅಷ್ಟೇ ಇದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.