ಸೋಮವಾರ, ಮಾರ್ಚ್ 8, 2021
22 °C
ಡಣಾಯಕನಕೆರೆ ಏತ ನೀರಾವರಿ ಯೋಜನೆ

ನೀರು ಹಾಯಿಸಲು ನೂರೆಂಟು ವಿಘ್ನ

ಎಚ್.ಎಸ್.ಶ್ರೀಹರಪ್ರಸಾದ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರು ಹಾಯಿಸಲು ನೂರೆಂಟು ವಿಘ್ನ

ಮರಿಯಮ್ಮನಹಳ್ಳಿ: ಈ ಭಾಗದ ರೈತರ ಬಹುದಿನಗಳ ಕನಸಾದ ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಏತ ನೀರಾವರಿ ಯೋಜನೆ ಮೂಲಕ ಡಣಾಯಕನಕೆರೆಗೆ ನೀರು ಹಾಯಿಸುವ ಕಾರ್ಯಕ್ಕೆ ಹಲವು ವಿಘ್ನ ಎದುರಾಗಿದೆ.ಜಿಲ್ಲೆಯ ಎರಡನೇ ಅತಿ ದೊಡ್ಡ ಕೆರೆಯಾದ ಡಣಾಯಕನಕೆರೆಗೆ ಕಳೆದ ನವೆಂಬರ್ ತಿಂಗಳಲ್ಲಿ ಮಾಜಿ ಶಾಸಕ ಕೆ.ನೇಮಿರಾಜ್ ನಾಯ್ಕ ಚಾಲನೆ ನೀಡಿದ್ದರು. ಜಲಾಶಯದ ಹಿನ್ನೀರು ಸರಿಯುತ್ತಿದ್ದರಿಂದ ಕೆಲವೇ ದಿನಗಳು ಮಾತ್ರ ಏತ ನೀರಾವರಿಯಿಂದ ಕೆರೆಗೆ ನೀರು ಹಾಯಿಸಲಾತಾದರೂ ಕೆರೆಯ ಅಂಗಳ ತುಂಬಲಿಲ್ಲ.ಉತ್ತಮ ಮಳೆಯಾಗದಿದ್ದರೂ, ಮಲೆನಾಡಿನಲ್ಲಿ ಭಾರಿ ಮಳೆಯಿಂದಾಗಿ ಜುಲೈ ಆರಂಭಕ್ಕೆ ಜಲಾಶಯ ಭರ್ತಿಯಾಗುವ ಹಂತ ತಲುಪಿದ್ದರಿಂದ ಡಣಾಪುರ ಗ್ರಾಮದ ಬಳಿ ಏತ ನೀರಾವರಿ ಯೋಜನೆಗೆ ನಿರ್ಮಿಸಿದ ಪಂಪ್‌ಹೌಸ್ ಬಾವಿಗೆ ನೀರು ಹರಿದುಬಂದಿದ್ದು ಕೆರೆಗೆ ನೀರು ಹರಿದು ಬರಲಿದೆ ಎಂದು ರೈತರಲ್ಲಿ ಉತ್ಸಾಹ ಇಮ್ಮಡಿಸಿತ್ತು.ಹದಿನೈದು ದಿನಗಳ ಕೆಳಗೆ ಗಡಿಬಿಡಿಯಲ್ಲಿಯೇ ಶಾಸಕ ಭೀಮಾ ನಾಯ್ಕ ನೀರು ಹಾಯಿಸುವ ಕಾರ್ಯಕ್ಕೆ ಚಾಲನೆ ನೀಡಿ ಒಂದೆರಡು ದಿನ ನೀರು ಕೆರೆಗೆ ಹರಿದರೂ ಪೈಪ್ ಲೈನ್‌ಗಳು ಅಲ್ಲಲ್ಲಿ ಕಿತ್ತು ಹೋಗಿದ್ದರಿಂದ ಭಾರಿ ನೀರು ಸೋರುವಿಕೆಯಿಂದಾಗಿ ಸದ್ಯ ತಾತ್ಕಾಲಿಕ ನಿಲುಗಡೆಯಾಗಿದೆ.ತುಂಗಭದ್ರಾ ಜಲಾಶಯ ನಿರ್ಮಾಣ ಕಾಲಕ್ಕೆ ರೈತರ ಅನುಕೂಲಕ್ಕಾಗಿ ಜಲಾಶಯದಿಂದ ಡಣಾಯಕನಕೆರೆ ನೀರು ತುಂಬಿಸುವ ಯೋಜನೆ ಇತ್ತು. ವಿಜಯನಗರ ಅರಸರ ಕಾಲದಲ್ಲಿ ಮುದ್ದಣ್ಣ ಎಂಬ ಪಾಳೇಗಾರ ಈ ಕೆರೆಯನ್ನು ನಿರ್ಮಿಸಿದನೆಂದು ಹೇಳಲಾಗುತ್ತಿದೆ.ಸುಮಾರು 0.288 ಟಿಎಂಸಿ ಅಡಿ ಸಾಮರ್ಥ್ಯದ ಕೆರೆ ಪೂರ್ಣ ತುಂಬಿದರೆ ಸುಮಾರು ಮೂರು ಸಾವಿರ ಎಕರೆಗೆ ನೀರು ಒದಗಿಸಲಿದೆ. ಪೂರ್ಣ ತುಂಬಿದಾಗ ವರ್ಷ ಪೂರ್ತಿ ನೀರು ಉಣಿಸುತ್ತಿದ್ದು, ಕಬ್ಬು, ಭತ್ತ, ಶೇಂಗಾ, ಮುಸುಕಿನ ಜೋಳ ಸೇರಿದಂತೆ ವರ್ಷಕ್ಕೆ ಎರಡು ಬೆಳೆಗಳನ್ನು ಬೆಳೆಯಬಹುದು.ಆದರೆ ಜಲಾಶಯಕ್ಕೆ ನೀರು ಬೇಗ ಹರಿದು ಬಂದರೂ, ಕೆರೆಗೆ ಮಾತ್ರ ನೀರು ಹರಿಯುವಲ್ಲಿ ವಿಳಂಬವಾಗುತ್ತಿದೆ. ಪೈಪ್‌ಲೈನ್ ಸಾಗಿರುವ ಕಡೆಗಳಲ್ಲಿ ನಿರ್ಮಿಸಿದ ಸುಮಾರು ಏಳು ಏರ್‌ವಾಲ್ವ್‌ಗಳಲ್ಲಿ ಮೂರರ ಪ್ಲೇಟ್‌ಗಳು, ಮತ್ತೊಂದು ಏರ್‌ವಾಲ್ವ್ ಮೇಲಿನ ಯೂನಿಟ್ ಅನ್ನೇ ಕಳ್ಳರು ಕದ್ದು ಒಯ್ದಿದ್ದಾರೆ. ಈ ಬಗ್ಗೆ ಪಟ್ಟಣದ ಠಾಣೆಯಲ್ಲಿ ಅಧಿಕಾರಿಗಳು ದೂರು ಕೊಟ್ಟರೂ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.ಶಾಸಕ ಭೀಮಾ ನಾಯ್ಕ ಮತ್ತು ರೈತರ ಒತ್ತಡದಿಂದಾಗಿ ಅಧಿಕಾರಿಗಳು ಏರ್‌ವಾಲ್ವ್ ಪ್ಲೇಟ್‌ಗಳನ್ನು ಖರೀದಿ ಸರಿಪಡಿಸಿದ್ದಾರೆ. ನಂತರ ನೀರು ಹಾಯಿಸಲಾಯಿತಾದರೂ ಒಂದೆರಡು ದಿನಗಳಲ್ಲಿ ಸುಮಾರು ಎಂಟು ಕಡೆಗಳಲ್ಲಿ ನೀರಿನ ಪೈಪುಗಳ ಸೋರಿಕೆಯಾಗಿ ಮತ್ತೆ ಬಂದ್ ಆಗಿದೆ.ಬಿಎಂಎಂ ಕಾರ್ಖಾನೆಯ ಮೊದಲ ದ್ವಾರದಿಂದ ಸಾಗಿದ ಪೈಪ್‌ಲೈನ್‌ನಲ್ಲಿ ಅಧಿಕ ಪ್ರಮಾಣದ ಹಾನಿಯಾಗಿದೆ. `ನಾವು ಕೆರೆಗೆ ನೀರು ಬರುತ್ತದೆಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದೇವೆ. ಆದರೆ ನೀರು ಮಾತ್ರ  ಹರಿಯುತ್ತಿಲ್ಲ ಎಂದು ರೈತ ದುರುಗಪ್ಪ ಹಾಗೂ ಇತರರು ಹೇಳಿದರು.ಪೈಪ್‌ಲೈನ್ ದುರಸ್ತಿ ಆರಂಭವಾಗಿದ್ದು ಬಿಎಂಎಂ ಕಾರ್ಖಾನೆಯವರು ಪೈಪ್‌ಲೈನ್ ಸರಿಪಡೆಸಲು ಸಿಮೆಂಟ್ ಹಾಗೂ ಜಲ್ಲಿಕಲ್ಲುಗಳನ್ನು ನೀಡಿದ್ದು, ಗುತ್ತಿಗೆದಾರರ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಮೂರು ದಿನಗಳಲ್ಲಿ

ನೀರು ಹಾಯಿಸುವ ಕೆಲಸ ಆರಂಭಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಕಿರಿಯ ಎಂಜಿನಿಯರ್ ಇಮಾಂಸಾಹೇಬ್ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.