ಶಿರಾ: ಕಳೆದ ಎರಡು ದಿನಗಳ ಮಳೆಗೆ ನೀಲಂ ಚಂಡಮಾರುತ ಕಾರಣ ಎಂಬ ವಾದವನ್ನು ತಾಲ್ಲೂಕಿನ ರೈತರು ಒಪ್ಪುತ್ತಿಲ್ಲ. ಅವರ ಪ್ರಕಾರ ಕಳೆದ ಎರಡು ಮೂರು ದಿನದಿಂದ ಸುರಿಯುತ್ತಿರುವುದು ಸ್ವಾತಿ ಮಳೆ. ಇದು ಅಕಾಲಿಕವಲ್ಲ- ಬಹು ನಿರೀಕ್ಷಿತ, ಸಕಾಲಿಕ ಮಳೆ.

ಸ್ವಾತಿ ಮಳೆಯ ಸ್ವಭಾವವೇ ಜಿಟಿಜಿಟಿ ಸೋನೆ. ಇದು ಬಿರ್ರಬಿರ್ರನೇ ಸುರಿದು ಸುಮ್ಮನಾಗುವ ಮಳೆಯಲ್ಲ. ಚಳಿಗಾಳಿಯೊಂದಿಗೆ ಇಬ್ಬನಿಗಿಂತ ತುಸು ಬಿರುಸಾಗಿ ಸುರಿಯುವ ಮಳೆ. ನೆಲಕ್ಕೆ ಹದ. ಫಸಲಿಗೆ ಸೂಕ್ತ. ಅಕಾಲಿಕ ಮಳೆಯಂತೂ ಅಲ್ಲವೇ ಅಲ್ಲ. ಅಕ್ಕಡಿ ಕಾಳು ಚೆನ್ನಾಗಿ ಆಗಬೇಕಿದ್ದರೆ ಸ್ವಾತಿ ಮಳೆ ಬರಲೇ ಬೇಕು ಎನ್ನುತ್ತಾರೆ ರೈತ ಕಲ್ಲಪ್ಪ.

`ಸ್ವಾತಿ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ದಿನವಿಡೀ ಕೆನ್ನೆ ಕೆಂಪಾಗುವಂತೆ ಅಳುತ್ತಲೇ ಇರುತ್ತಾರಲ್ಲ ಹಾಗೇ ಸ್ವಾತಿ ಸೋನೆ ಸುರಿಯುತ್ತಲೇ ಇರುತ್ತದೆ. ಅಲ್ಲದೆ ಸಿನಿಮಾದಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೇ ಮೆಲ್ಲಮೆಲ್ಲನೇ ಧರೆಗಿಳಿಯೇ...~ ಎಂದು ಸುಮ್ಮನೆ ಹಾಡಿದ್ದಾರೆಯೇ ಎಂದು ತಮ್ಮದೇ ಧಾಟಿಯಲ್ಲಿ ಪ್ರಶ್ನಿಸಿದರು ರೈತ ಮಹಿಳೆ ರಂಗಮ್ಮ.

ಆದರೆ ತಾಲ್ಲೂಕು ಮಟ್ಟದ ಕೃಷಿ ಅಧಿಕಾರಿಯೊಬ್ಬರು ಈ ಮಳೆಯಿಂದ ರೈತರಿಗೆ ಶೇ 80ರಷ್ಟು ನಷ್ಟ; ಶೇ 20ರಷ್ಟು ಮಾತ್ರ ಲಾಭ ಎಂಬ ವಾದ ಮುಂದಿಡುತ್ತಾರೆ.

ಏಕೆಂದರೆ ಈಗಾಗಲೇ ನೆಲಗಡಲೆ ಕಾಯಿಯಾಗಿ ಕೀಳುವ ಹಂತದಲ್ಲಿವೆ. ಅದೇ ರೀತಿ ಕೆಲವೆಡೆ ರಾಗಿ ಕೊಯ್ಲಿಗೆ ಬಂದಿದೆ. ಹೀಗಾಗಿ ಈ ಮಳೆ ಬಂದು ನೆಲದಲ್ಲೇ ಶೇಂಗಾ- ತೆನೆಯಲ್ಲೇ ರಾಗಿ ಮೊಳಕೆಯೊಡೆದು ರೈತರಿಗೆ ನಷ್ಟವಾಗುತ್ತದೆ ಎನ್ನುತ್ತಾರೆ.

ಕೃಷಿ ಅಧಿಕಾರಿಗಳು ನೀಡುವ ಇಂತಹ ಅವಾಸ್ತವಿಕ ಅಂಕಿಸಂಖ್ಯೆಗಳಿಂದಲೇ ಸರ್ಕಾರ ರೂಪಿಸುವ ಯೋಜನೆಗಳು ರೈತರಿಗೆ ಉಪಯೋಗವಾಗುತ್ತಿಲ್ಲ ಎಂದು ದೂರುವ ರೈತ ನಿಂಗಪ್ಪ, ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆಯಾಗಿದ್ದೇ ಕಡಿಮೆ. ಶೇಂಗಾ ಮತ್ತಿತರ ಬೆಳೆ ಬಿತ್ತನೆಯಾಗಿದ್ದು ವಿರಳ. ಇನ್ನು ಹಿಂಗಾರು ಹಂಗಾಮಿನಲ್ಲಿ ಬಿಳಿಜೋಳ, ರಾಗಿ, ಮೆಕ್ಕೆಜೋಳ, ಸೂರ್ಯಕಾಂತಿ ಮತ್ತಿತರರ ಬೆಳೆ ಬಿತ್ತನೆಯಾಗಿ ಮಳೆಯಿಲ್ಲದೆ ಬಾಡುತ್ತಿದ್ದವು.

ಈಗ ಸ್ವಾತಿ ಸೋನೆ ಹಿಡಿದಿದ್ದರಿಂದ ನೆಲ ತಂಪಾಗಿ ಹದವಾಗಿವೆ. ಮುತ್ತಿನಂಥ ಬಿಳಿಜೋಳ ಸೇರಿದಂತೆ ಎಲ್ಲ ಫಸಲಿಗೂ ಅನುಕೂಲವಾಗಿದೆ. ಹೀಗಾಗಿ ಈ ಮಳೆಯಿಂದ ಶೇ 20ರಷ್ಟು ನಷ್ಟವಾಗಿದ್ದರೂ ಶೇ 80ರಷ್ಟು ಲಾಭ ಇದ್ದೇ ಇದೆ ಎನ್ನುತ್ತಾರೆ.

ಸ್ವಾತಿಯಷ್ಟೇ ಏಕೆ ವಿಶಾತಿ, ಅನೂರಾಧ ಮಳೆಗಳು ಇನ್ನು ಬರಬೇಕಿದೆ. ಈ ಮಳೆಗಳೂ ಯಾವತ್ತೂ ಅಕಾಲಿಕ ಅಲ್ಲ. ಮಳೆಯನ್ನು ಕೇವಲ ಅಂಕಿ ಸಂಖ್ಯೆಯಲ್ಲಿ ಅಳೆಯುವವರು ಅಕಾಲಿಕ ಎನ್ನುತ್ತಾರಷ್ಟೇ.
ಮಳೆಯನ್ನೇ ನಂಬಿ ಬದುಕುವ ರೈತರಿಗೆ ಹಿಂದಿನಿಂದಲೂ ಮಳೆಯ ಪಾತ್ರ ಸ್ವಭಾವ ಏನು ಎಂಬುದರ ಬಗ್ಗೆ ಗೊತ್ತಿರುತ್ತದೆ.

ಸುಮಾರು ಒಂದು ದಶಕದ ಹಿಂದೆ ಸ್ವಾತಿ, ಅನೂರಾಧ ಮಳೆಗಳು ಸಮೃದ್ಧವಾಗಿ ಸುರಿದು ಕೆರೆಕಟ್ಟೆಗಳೆಲ್ಲಾ ತುಂಬಿ ಗದ್ದೆ ಬೆಳೆದು ಉಂಡಿದ್ದು ಇನ್ನು ಹಸಿರಾಗಿದೆ ಎಂದು ಬೀರಜ್ಜ ನೆನಪಿಗೆ ಸರಿದರು.
ಸ್ವಾತಿ ಸೋನೆ ಸುರಿಯುತ್ತಲೇ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.