ಮಂಗಳವಾರ, ಜೂನ್ 22, 2021
29 °C

ನೀಲಿಯ ಹೋಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀಲಿಯ ಹೋಳಿ

ಜಾಕ್ಸನ್ ಪೊಲಾಕ್ (1912-1956) ತಮ್ಮ ಜೀವಿತಾವಧಿಯಲ್ಲೇ ಪ್ರಸಿದ್ಧರಾದ ಅಮೆರಿಕಾದ ಪ್ರಪ್ರಥಮ ಕಲಾವಿದರು. ನ್ಯೂಯಾರ್ಕಿನ Art sudents league ಸಾಂಪ್ರದಾಯಿಕ ಶೈಲಿಯಲ್ಲಿ ಚಿತ್ರಕಲೆ ಕಲಿತ ಜಾಕ್ಸನ್, ನಂತರ ಅನೇಕ ಅಮೂರ್ತ ರೂಪ ಪ್ರಯೋಗಗಳಲ್ಲಿ ತೊಡಗಿಕೊಂಡರು.ತಮ್ಮ ಕಾಲದ ಎರಡನೇ ಮಹಾಯುದ್ಧ, ಅಣುಬಾಂಬ್ ಭೀತಿ, chaos theory ಗಳ ಪ್ರೇರಣೆಯನ್ನು ಇವರ ಚಿತ್ರಗಳಲ್ಲಿ ಕಾಣಬಹುದು.ಇತರ ಕಲಾವಿದರಂತೆ ಈಸಲ್, ಆರ್ಟಿಸ್ಟ್ ಕಲರ್ಸ್‌, ಬ್ರಶ್‌ಗಳು, ಪ್ಯಾಲೆಟ್‌ಗಳನ್ನು ಅವಲಂಬಿಸದೆ ಕೈಗೆ ಸಿಕ್ಕ ಕಡ್ಡಿ, ಕೋಲು, ಟವಲ್, ಸಿರಿಂಜ್ ಹಾಗೂ ಸಾಮಾನ್ಯ ಯಾವುದೇ ಬಣ್ಣ ಬಳಸಿ ಜಾಕ್ಸನ್ ಚಿತ್ರ ಬಿಡಿಸುತ್ತಿದ್ದರು.

 

ಬೆರಳು ಮತ್ತು ಕೈಗಳು ಮಾತ್ರವಲ್ಲದೇ ಇಡೀ ದೇಹವನ್ನು ಬಳಸಿ, ನೆಲದ ಮೇಲೆ ಬೃಹತ್ ಕ್ಯಾನ್‌ವಾಸ್ ಹಾಕಿ, ನಾಲ್ಕೂ ಕಡೆಗಳಿಂದ, ಒಮ್ಮಮ್ಮೆ ಅದರ ಮೇಲೆ ನಿಂತು, ಕುಳಿತು, ಬಾಗಿ, ಕೈಚಾಚಿ ರಭಸದಿಂದ ಚಿತ್ರಿಸುತ್ತಿದ್ದರೆ ಕ್ಯಾನ್‌ವಾಸ್ ಸುತ್ತ ನೃತ್ಯ ಮಾಡಿದಂತೆ ಭಾಸವಾಗುತ್ತಿತ್ತು.ಬಣ್ಣಗಳನ್ನು ಎರಚಿ, ಸುರಿದು, ತಟ್ಟಿ, ಗೀಚಿ, ಚಿತ್ರಿಸುವ ಇವರ ವೈಯಕ್ತಿಕ ಶೈಲಿಯು ‘Action painting’ ಎಂದು ಪ್ರಸಿದ್ಧವಾಗಿದೆ.ಪುನರುಜ್ಜೀವನ ನಂತರ ಎಲ್ಲಾ ಕ್ಷೇತ್ರಗಳಂತೆ ಚಿತ್ರಕಲಾ ಕ್ಷೇತ್ರದಲ್ಲಿ ಯುರೋಪಿನ ಕಲಾವಿದರಿಂದ ಮಹತ್ತರ ಬೆಳವಣಿಗೆಗಳಾದ ಇಂಪ್ರೆಷನಿಸಂ, ಎಕ್ಸ್‌ಪ್ರೆಷನಿಸಂ, ಫಾವಿಸಂ, ದಾದಾಯಿಸಂ, ಸರ‌್ರಿಯಲಿಸಂ, ಕ್ಯೂಬಿಸಂ ಹೀಗೆ ಅನೇಕ ರೀತಿಯ ಪ್ರಯೋಗಗಳಾದವು. ಜಾಕ್ಸನ್ ಪೊಲಾಕ್‌ರ ಕೃತಿಗಳಲ್ಲಿ ಸರ‌್ರಿಯಲಿಸಂ ಮತ್ತು ಕ್ಯೂಬಿಸಂ ಶೈಲಿಯ ಪ್ರಭಾವವನ್ನು ಕಾಣುತ್ತೇವೆ. ““Painting has a life of its own, i try to let it come through”ಎಂದು ಜಾಕ್ಸನ್ ಹೇಳುತ್ತಿದ್ದರು.ಪ್ರಸ್ತುತ ವರ್ಣಚಿತ್ರ `ಮೂನ್ ವುಮನ್ ಕಟ್ಸ್ ದ ಸರ್ಕಲ್~ 1943ರಲ್ಲಿ ರಚಿತವಾದ ಅಪೂರ್ವ ಕಲಾಕೃತಿ. 1940ರಲ್ಲಿ ಪ್ರಾರಂಭಿಸಿದ ಹೊಸ ಪ್ರಯೋಗಗಳ ದಾರಿಯಲ್ಲಿ ಸಾಗಿ, ವ್ಯಾಸಿಲಿ ಕ್ಯಾನ್‌ಡಿನ್‌ಸ್ಕಿಯ ಪ್ರಭಾವವನ್ನು ಈ ಕೃತಿಯಲ್ಲಿ ಕಾಣಬಹುದು.ಈ ಚಿತ್ರವು ಕೆಂಪು, ಹಳದಿ, ನೀಲಿ ಪ್ರಾಥಮಿಕ ವರ್ಣಗಳು, ಕಪ್ಪು ಮತ್ತು ಬಿಳಿಯೊಂದಿಗೆ ಮೇಳೈಸಿ ವರ್ಣ ಶ್ರಿಮಂತಿಕೆ ಮೆರೆದಿದೆ.ಹಿನ್ನೆಲೆಯಲ್ಲಿ ಮೋಡದಂತಹ ಗಾಢನೀಲಿ ಬಣ್ಣ ಮತ್ತು ಆಕೃತಿಗಳ ನಡುವೆ ಯಾವುದೇ ಗೊಂದಲವಿಲ್ಲದೆ, Hybrid, Amoebic, Crablke ಆಕೃತಿಗಳು, ರೇಖೆಗಳು ಒಮ್ಮೆ ದಪ್ಪ, ಮೊನಚು, ಸುರುಳಿ ಕತ್ತರಿಸಿದಂತೆ, ಒಮ್ಮಮ್ಮೆ ಎರಡು ಮೂರು ಬಣ್ಣಗಳೊಂದಿಗೆ, ಕೆಲವೊಮ್ಮೆ ಆಕಾರವನ್ನು ಬಣ್ಣದಿಂದಲೂ ನಿಭಾಯಿಸಿದಂತೆ ಕಾಣುತ್ತದೆ.

 

ಅಸಹಜ ವಿಚಿತ್ರ ಚಿಹ್ನೆಗಳು, ನೋಡುಗರನ್ನು ಹುಡುಕಾಟಕ್ಕೆ ಹಚ್ಚುವಂತಿವೆ. ಅನೇಕ ಕಲ್ಪನೆಗೆ ಎಡೆಮಾಡಿಕೊಡುವ ಚಿಂತನಾಶೀಲ ಶೈಲಿಯಲ್ಲಿ ಕಥೆಯನ್ನು ಹುಡುಕುವುದಕ್ಕಿಂತ ತಂತ್ರಗಳ ನೈಪುಣ್ಯತೆ, ನಿರಂತರ ಪ್ರಯೋಗಗಳನ್ನು ಹೇಗೆ ನಿಭಾಯಿಸಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ.`...ಸರ್ಕಲ್~ ಕಲಾಕೃತಿಯಲ್ಲಿ ನೀಳ ಕುತ್ತಿಗೆಯ ಪಕ್ಷಿ ಗರಿಗಳ ಕಿರೀಟಧಾರಿಯಂತಿರುವ ವ್ಯಕ್ತಿಯೊಬ್ಬ ಬಲಭಾಗಕ್ಕೆ ಬಾಗಿ ಮೇಲೆ ನೋಡುತ್ತಿದ್ದು, ಕಣ್ಣುಗಳು ಒಂದರ ಕೆಳಗೊಂದು ಇವೆ. ತ್ರಿಕೋನ ಮೂಗು, ತೆರೆದ ಬಾಯಿ ಪಿಕಾಸೋನ ಚಿತ್ರಗಳ ನೆನಪನ್ನು ತರುತ್ತವೆ. ಭುಜದ ಮಾಂಸಖಂಡಗಳು ವ್ಯಕ್ತಿಯ ಬಲಿಷ್ಠತೆಯನ್ನು ಸೂಚಿಸುವಂತಿವೆ.ನೀಳ ಕುತ್ತಿಗೆ ಮೇಲ್ಭಾಗದ ಕಿವಿಯ ಬಳಿ, ಉದ್ದ ಕಾಲಿನ ನೀಳ ಕುತ್ತಿಗೆಯ ಬಾತುಕೋಳಿಯಂತಹ ಪಕ್ಷಿ, ವ್ಯಕ್ತಿಯ ಹಿಂಭಾಗದ ಭುಜದ ಬಳಿ ಅಸ್ಪಷ್ಟ ಆಕಾರದ ಪ್ರಾಣಿ, ಪಕ್ಷಿ- ಇವೆಲ್ಲವೂ ಮನುಷ್ಯರ ವಿವಿಧ ಭೀತ ಭಾವನೆಗಳನ್ನು ವ್ಯಕ್ತಪಡಿಸುವಂತೆಯೂ ಸಂತೈಸುವಂತೆಯೂ ಭಾಸವಾಗುತ್ತವೆ.ಇದು ಪ್ರಕೃತಿಯ ಆಟವನ್ನು ಮನೋಜ್ಞವಾಗಿ ಹಿಡಿದಿಟ್ಟಿದೆ. ಸಮುದ್ರದ ಸಂಕೇತವಾಗಿ ನೀಲಿ ಬಳಕೆಯಾಗಿದೆ. ಚಂದ್ರ ಹತ್ತಿರವಾದಾಗ ಸಮುದ್ರ ಉಬ್ಬುತ್ತದೆ. ಅದೇ ರೀತಿ ಚುಂಬಕ ಶಕ್ತಿಯ ಧ್ಯೋತಕವಾಗಿ ಕಲಾವಿದ ಹೆಣ್ಣನ್ನು ತಂದಿರಬಹುದು. ಹಿಂಸೆ ಮತ್ತು ಶಾಂತಿ, ಅನಿಶ್ಚಿತತೆ ಮತ್ತು ಪೌರಾಣಿಕ ಕಲ್ಪನೆಗಳು ಸಂಕೇತಗಳಾಗಿ ಇಲ್ಲಿ ಬಳಕೆಯಾಗಿವೆ.ಅಲಂಕಾರಕ್ಕಾಗಿ ಉಪಯೋಗಿಸಿರುವ ಕಪ್ಪುಗೆರೆಯ ವಜ್ರಾಕೃತಿಗಳು, ಎಡಭಾಗದಲ್ಲಿ ಸಂಖ್ಯೆ ಅಕ್ಷರ ಮತ್ತು ಸಿಂಬಲ್‌ಗಳಿಂದ ಸಹಿ ಮಾಡಿದಂತೆ ಭಾಸವಾಗುವ ಪ್ರತ್ಯೇಕ ಭಾಗ, ಇವೆಲ್ಲ ಜಾಕ್ಸನ್‌ನ ಅನನ್ಯ ಶೈಲಿಗೆ ಉದಾಹರಣೆ ಆಗಿರುವ ಜೊತೆಗೆ ಚಿತ್ರದ ಯಶಸ್ಸಿಗೂ ಕಾರಣವಾಗಿವೆ. ಕಲಾಕೃತಿ ಜಾಕ್ಸನ್ ಪೊಲಾಕ್‌ರ ವಿಕ್ಷಿಪ್ತ ವ್ಯಕ್ತಿತ್ವ ಹಾಗೂ ಅಸಾಧಾರಣ ಪ್ರತಿಭೆಯ ದ್ಯೋತಕವಾಗಿದೆ.ಲೇಖಕಿ ಕಲಾವಿದೆ ಹಾಗೂ ಚಿತ್ರಕಲಾ ಬೋಧಕಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.