ಭಾನುವಾರ, ಜೂನ್ 20, 2021
21 °C

ನುಡಿಸೇತು ಧರೆಣ್ಣವರ್

ಎನ್. ಜಗನ್ನಾಥ ಪ್ರಕಾಶ್ Updated:

ಅಕ್ಷರ ಗಾತ್ರ : | |

ಗೀತರಚನಕಾರರು ಭಾಷೆಗೆ ಕಳಂಕ ಹಚ್ಚುತ್ತಿರುವುದನ್ನು ಪ್ರತಿಭಟಿಸಿ ಪ್ರಾಧ್ಯಾಪಕರೊಬ್ಬರು ತಮಗೆ ನೀಡಿದ್ದ ಪ್ರಶಸ್ತಿಯನ್ನೇ ಹಿಂತಿರುಗಿಸಿದ ಘಟನೆ ಪಂಜಾಬಿನ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ಪ್ರಸಂಗದ ಬಗ್ಗೆ ವಾದ ವಿವಾದಗಳು ನಡೆದಿದ್ದವು. ಕುತೂಹಲದಿಂದ ಪ್ರಸಂಗದ ಜಾಡು ಹಿಡಿದು ಹೋದಾಗ ಒಂದಷ್ಟು ಆಸಕ್ತಿಕರ ವಿಚಾರಗಳು ಗೊತ್ತಾದವು.

ಪಂಜಾಬಿ ಭಾಷೆಗೆ ಗೀತರಚನೆಕಾರರು ಮಸಿ ಹಚ್ಚುತ್ತಿರುವುದಕ್ಕೆ ಪ್ರತಿರೋಧ ವ್ಯಕ್ತಪಡಿಸಿ ಪುರಸ್ಕಾರ ನಿರಾಕರಿಸಿದ ವ್ಯಕ್ತಿ ಅಪ್ಪಟ ಕನ್ನಡಿಗರು. ಇ-ಮೇಲ್ ಮೂಲಕ ಮೊದಲು ಸಂಪರ್ಕಿಸಿ, ನಂತರ ದೂರವಾಣಿಯಲ್ಲಿ ಅವರೊಂದಿಗೆ ಮಾತನಾಡಿದಾಗ ಅನೇಕ ವಿಷಯಗಳು ತಿಳಿದವು.

ಪಂಡಿತ್‌ರಾವ್ ಸಿ. ಧರೆಣ್ಣವರ್ ಈ ಘಟನೆಗಳ ಕೇಂದ್ರ ಬಿಂದು. ಧರೆಣ್ಣನವರ್ ಬಿಜಾಪುರ ಜಿಲ್ಲೆ ಇಂಡಿ ತಾಲ್ಲೂಕಿನ ಶಿರಸಯಾಡ ಸಾಲೋಟಗಿ ಗ್ರಾಮದವರು. ಅವರ ತಂದೆ ಚಂದ್ರಶೇಖರ್ ಪ್ರಾಥಮಿಕ ಶಾಲಾ ಶಿಕ್ಷಕರು. ಸ್ವಗ್ರಾಮದಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಧರೆಣ್ಣನವರ್, ಹುಬ್ಬಳ್ಳಿ-ಧಾರವಾಡಗಳಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾಭ್ಯಾಸ ಮಾಡಿದರು. ಎಂ.ಎ. ಹಾಗೂ ಎಂ.ಫಿಲ್ (ಸಮಾಜಶಾಸ್ತ್ರ) ಗಳಿಸಿದ್ದು ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಿಂದ. ಏಳು ವರ್ಷಗಳ ಹಿಂದೆ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಧರೆಣ್ಣವರ್ ಸಮಾಜಶಾಸ್ತ್ರ ಅಧ್ಯಾಪಕರಾಗಿ ನೇಮಕವಾಗಿದ್ದು ಚಂಡೀಗಡದ ಸರ್ಕಾರಿ ಬಾಲಕಿಯರ ಕಾಲೇಜಿಗೆ.

ಪಂಜಾಬಿ ಯುವತಿಯರೇ ತುಂಬಿದ್ದ ತರಗತಿಗಳಲ್ಲಿ ಅವರು ಉತ್ಸಾಹದಿಂದ ಪಾಠ ಮಾಡಿದರೂ ವಿದ್ಯಾರ್ಥಿಯರ ಪ್ರತಿಕ್ರಿಯೆ ಸಪ್ಪೆಯಾಗಿತ್ತು. ಗ್ರಾಮೀಣ ಪ್ರದೇಶಗಳಿಂದಲೇ ಸರ್ಕಾರಿ ಕಾಲೇಜಿಗೆ ಪ್ರವೇಶ ಪಡೆದುಕೊಂಡಿದ್ದ ವಿದ್ಯಾರ್ಥಿನಿಯರಿಗೆ ಇಂಗಿಷ್ ಕಬ್ಬಿಣದ ಕಡಲೆ ಎಂಬುದನ್ನು ತಿಳಿಯಲು ಅವರಿಗೆ ಬಹಳ ಸಮಯ ಬೇಕಾಗಲಿಲ್ಲ. ಹಿಂದಿ ಭಾಷೆಯ ಪರಿಚಯವಿದ್ದ ಅವರು ಪಂಜಾಬಿ ಕಲಿಯಲು ಶುರು ಹಚ್ಚಿಕೊಂಡರು. ಸಹೋದ್ಯೋಗಿಗಳ ನೆರವಿನಿಂದ ಬಹುಬೇಗ ಪಂಜಾಬಿ ಓದಲು, ಬರೆಯಲು ಕಲಿತರು. ಆಮೇಲೆ, ವಿದ್ಯಾರ್ಥಿನಿಯರೊಂದಿಗೆ ಸಂವಹನಕ್ಕೆ ಪಂಜಾಬಿಯನ್ನೇ ಬಳಸತೊಡಗಿದರು. ತಮ್ಮದೇ ಪಂಜಾಬಿಯಲ್ಲಿ ಮೇಷ್ಟ್ರು ಮಾಡುತ್ತಿದ್ದ ಸಮಾಜಶಾಸ್ತ್ರದ ಪಾಠ ವಿದ್ಯಾರ್ಥಿನಿಯರಿಗೆ ಅರ್ಥವಾಗಲಾರಂಭಿಸಿತು.

ಪಂಜಾಬಿ ಕಲಿತ ಧರೆಣ್ಣವರ್ ಪಂಜಾಬಿ ಸಾಹಿತ್ಯದ ಅಭ್ಯಾಸದಲ್ಲಿ ತೊಡಗಿದರು. ತಮ್ಮ ತಾಯ್ನುಡಿಯಲ್ಲಿ ಪಂಜಾಬಿ ಭಾಷೆಯ ವಿಶೇಷಗಳನ್ನು ಅನುವಾದಿಸಿದರೆ, ಕನ್ನಡದ ವಿಚಾರಗಳನ್ನು ಪಂಜಾಬಿ ಭಾಷೆಗೆ ತಂದರೆ ಹೇಗೆ ಎಂದು ಯೋಚಿಸಿದರು. ಅದರ ಪರಿಣಾಮ ಕ್ಷಿಪ್ರ ಅವಧಿಯಲ್ಲಿ ಅನೇಕ ಕನ್ನಡ ಕೃತಿಗಳನ್ನು ಪಂಜಾಬಿಗೆ ಅನುವಾದಿಸಿದರು. ಸಾಮಾಜಿಕ ಪರಿವರ್ತನೆಯ ಹರಿಕಾರ ಬಸವಣ್ಣನವರ ತತ್ವಾದರ್ಶಗಳನ್ನು ಪರಿಚಯಿಸುವ ಕೃತಿ ಪಂಜಾಬಿಗೆ ಬಂದಿತು.

ಧರೆಣ್ಣವರ್ ಮೂಲಕ ಅಲ್ಲಮಪ್ರಭು, ಕನಕದಾಸ, ಸರ್ವಜ್ಞ, ಅಕ್ಕಮಹಾದೇವಿ, ಪುರಂದರದಾಸರು ಪಂಜಾಬಿಗೆ ಪರಿಚಯಗೊಂಡರು.

ಪಂಜಾಬಿಯನ್ನು ನಿರರ್ಗಳವಾಗಿ ಮಾತನಾಡುವ ಧರೆಣ್ಣವರ್ ವಚನ ಸಾಹಿತ್ಯ-ದಾಸಸಾಹಿತ್ಯ ಕುರಿತ ಸಂವಾದ-ಭಾಷಣ ಕಾರ್ಯಕ್ರಮಗಳನ್ನು ಪಂಜಾಬಿನ ಗ್ರಾಮೀಣ ಪ್ರದೇಶಗಳಲ್ಲಿ ನಿಯತವಾಗಿ ಏರ್ಪಡಿಸುತ್ತಿದ್ದಾರೆ. ಪಂಜಾಬಿ ಸಾಹಿತಿಗಳ ಕೃತಿಗಳನ್ನು ಪಂಜಾಬಿಗಳಿಗೆ ತಿಳಿಹೇಳುವ `ಸೈಕಲ್ ಯಾತ್ರೆ~ ಧರೆಣ್ಣವರ್ ಪಂಜಾಬಿನಲ್ಲಿ ನಡೆಸುತ್ತಿರುವ ಇನ್ನೊಂದು ಜನಪ್ರಿಯ ಕಾರ್ಯಕ್ರಮ.

ಕರ್ನಾಟಕ-ಪಂಜಾಬ್, ಕನ್ನಡ-ಪಂಜಾಬಿಯನ್ನು ಬೆಸೆಯುವ ಅರ್ಥಪೂರ್ಣ ಕಾರ‌್ಯದಲ್ಲಿ ತೊಡಗಿಕೊಂಡಿರುವ ಅವರು ಮತ್ತೊಂದು ಮಹತ್ವದ ಕೆಲಸಕ್ಕೆ ಕೈಹಾಕಿದ್ದಾರೆ. ಅದು ಸಿಖ್ಖರ ಪವಿತ್ರ ಧರ್ಮಗ್ರಂಥ `ಗ್ರಂಥ್ ಸಾಹೆಬ್~ ಅನ್ನು ಕನ್ನಡಕ್ಕೆ ತರುವುದು. ವಿದ್ಯಾರ್ಥಿನಿಯರಿಗೆ ಪಾಠ ಅರ್ಥ ಮಾಡಿಸಲು ಪಂಜಾಬಿ ಕಲಿತ ಅವರು ಸುಲಲಿತವಾಗಿ ಭಾಷಾ ಪ್ರೌಢಿಮೆ ಪಡೆದು ಗುರ್ಮುಖಿಯಲ್ಲಿ ಪರಿಣಿತಿ ಗಳಿಸಿದ್ದಾರೆ.

ಹಳ್ಳಿಯಿಂದಲೇ ಬಂದ ಧರೆಣ್ಣವರ್ ಪಂಜಾಬಿನ ಗ್ರಾಮೀಣ ಜನರೊಂದಿಗೆ ಸುಲಭವಾಗಿ ಬೆರೆಯುವ ಪರಿಪಾಠ ಬೆಳೆಸಿಕೊಂಡು ಅವರ ಬದುಕನ್ನು ಅರಿತಿದ್ದಾರೆ. ಅವರ ಭಾಷೆಯ ಸೊಗಡನ್ನು ಕಂಡುಕೊಂಡಿದ್ದಾರೆ.

ಪಂಜಾಬಿ ಭಾಷೆಯ ಮಹತ್ವವನ್ನು ಅಪಮೌಲ್ಯಗೊಳಿಸುವ ಕುರಿತಾದ ತಮ್ಮ ಸಿಟ್ಟಿನ ಬಗ್ಗೆ ಧರೆಣ್ಣವರ್ ಹೇಳುವುದು ಹೀಗೆ- `ಮಾನಿನಿ ಹಾಗೂ ಮದಿರೆಯನ್ನು ಕುರಿತು ಪಂಜಾಬಿ ಗೀತರಚನಕಾರರು ಬಹಳ ಲಘುವಾಗಿ ಬರೆಯುತ್ತಾರೆ. ದೇವರನ್ನು ಸ್ತುತಿಸುವ ಗುರ್ಮುಖಿಯನ್ನು ಇಂತಹದಕ್ಕೆ ಉಪಯೋಗಿಸುವುದು ಸರಿಯಲ್ಲ. ಗೀತರಚನಕಾರರು, ಗಾಯಕರು ಕೇಳುಗರನ್ನ ಉನ್ಮತ್ತಗೊಳಿಸಲು ಭಾಷೆಯ ಮೌಲ್ಯಕ್ಕೆ ಕುಂದುಂಟು ಮಾಡುವುದು ಅಕ್ಷಮ್ಯ~.

`ಶ್ರಿ ಗುರುಗ್ರಂಥ ಸಾಹೆಬ್~ ಅನ್ನು ಅಭ್ಯಾಸ ಮಾಡಿ ಅದನ್ನು ಕನ್ನಡಕ್ಕೆ ಅನುವಾದಿಸಲು ತೊಡಗಿರುವ ನನಗೆ ಇಡೀ ಪಂಜಾಬಿ ಸಂಸ್ಕೃತಿಯೇ ಪವಿತ್ರವೆನ್ನುವ ಭಾವನೆ ಉಂಟಾಗಿದೆ ಎನ್ನುವ ಧರೆಣ್ಣವರ್, ಪಂಜಾಬಿನ ಕೆಲವು ಗೀತರಚನೆಕಾರರಿಗೆ ಚುರುಕು ಮುಟ್ಟಿಸುವ ಸಮಯವನ್ನು ನಿರೀಕ್ಷಿಸುತ್ತಿದ್ದರು. ಆ ಸಂದರ್ಭ ಒದಗಿದ್ದು ಮಾತೃಭಾಷಾ ದಿನಾಚರಣೆ ಪ್ರಯುಕ್ತ ಪಂಜಾಬಿನ ಭಟಿಂಡದಲ್ಲಿ ನಡೆದ ಸಮಾರಂಭದಲ್ಲಿ. ಪಂಜಾಬಿ ಭಾಷೆಗೆ ಅನುಪಮ ಸೇವೆ ಸಲ್ಲಿಸುವ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಸಮಾರಂಭ ಅದು. ಇದಕ್ಕೆ ಕೆಲವು ದಿನಗಳಿಗೆ ಮೊದಲು ಪಂಜಾಬಿ ಗೀತರಚನಕಾರ ಮಕಾನ್ ಬ್ರಾರ್, `ಮನೆಯಲ್ಲಿ ತಯಾರಿಸಿದ ಮದ್ಯ ದೇವರಿಗೆ ಬಹು ಪವಿತ್ರ~ ಎಂಬರ್ಥ ಬರುವ ಗೀತೆ ಬರೆದಿದ್ದರು. ಅದನ್ನು ಖ್ಯಾತ ಗಾಯಕ ಗುರುದಾಸ್ ಮಾನ್ ಜನಪ್ರಿಯಗೊಳಿಸಿದ್ದರು. ಇದೆಲ್ಲ ಧರೆಣ್ಣವರ್ ಮನಸ್ಸನ್ನು ಕಸಿವಿಸಿಗೊಳಿಸಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಲು ತಮಗೆ ಅವಕಾಶ ಸಿಕ್ಕಾಗ ಧರೆಣ್ಣವರ್, ಪಂಜಾಬಿ ಭಾಷೆಗೆ ಕಳಂಕ ತರುತ್ತಿರುವ ಪ್ರಯತ್ನಗಳನ್ನು ಕಟುಮಾತುಗಳಿಂದ ಪ್ರತಿಭಟಿಸಿದರು. ಪಂಜಾಬಿಗೆ ಮಸಿ ಬಳಿಯುತ್ತಿರುವುದನ್ನು ಪ್ರತಿಭಟಿಸಿ ತಮಗೆ ನೀಡಿದ್ದ ಪ್ರಶಸ್ತಿ ನಿರಾಕರಿಸುವ ನಿರ್ಧಾರವನ್ನು ಪ್ರಕಟಿಸಿ ಕುಳಿತರು.

ಕನ್ನಡಿಗನ ಪಂಜಾಬಿ ಭಾಷಾಭಿಮಾನವನ್ನು ಕಂಡು ಭಾವುಕರಾದ ನಿವೃತ್ತ ಕ್ರೀಡಾಧಿಕಾರಿ, ಜುಡೋ ಸಂಸ್ಥೆಯ ಉಪಾಧ್ಯಕ್ಷ ಹರ್‌ದೇವ್‌ಸಿಂಗ್ ದಾಲೀವಾಲ್ ಪ್ರೇಕ್ಷಕರ ಸಾಲಿನಿಂದ ಎದ್ದು ಬಂದು ವೇದಿಕೆಯಲ್ಲಿದ್ದ ಸಮಾಜಶಾಸ್ತ್ರ ಅಧ್ಯಾಪಕ ಪಂಡಿತ್‌ರಾವ್ ಧರೆಣ್ಣನವರ್ ಅವರ ಬೂಟುಗಳನ್ನು ತಮ್ಮ ಕರವಸ್ತ್ರದಿಂದ ಶುಭ್ರಗೊಳಿಸಿದರು. ಇಡೀ ಸಭಾಂಗಣ ಸ್ತಬ್ಧ. ಇದನ್ನು ತಡೆಯಲೆತ್ನಿಸಿದ ಧರೆಣ್ಣವರ್ ಅವರಿಗೆ ಹರ್‌ದೇವ್‌ಸಿಂಗ್ ಹೇಳಿದ ಮಾತುಗಳು ಹೃದಯಸ್ಪರ್ಶಿಯಾಗಿದ್ದವು:

`ದೂರದ ಕರ್ನಾಟಕದಿಂದ ಬಂದ ಕನ್ನಡ ಮಾತೃಭಾಷೆಯ ನೀವು ನಮ್ಮ ಮಾತೃಭಾಷೆ ಪಂಜಾಬಿ ಬಗ್ಗೆ ಇಷ್ಟೊಂದು ಕಾಳಜಿ ತೋರುತ್ತಿದ್ದೀರಿ, ಪಂಜಾಬಿ ಭಾಷೆಗೆ ಅಂಟಿದ ದೂಳನ್ನು ತೆಗೆಯಲು ಪ್ರಯತ್ನಿಸುತ್ತಿರುವ ಕನ್ನಡಿಗನಿಗೆ ಇದು ನನ್ನ ಗೌರವ~.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.