ಗುರುವಾರ , ಮೇ 19, 2022
24 °C

ನೂಕು ನುಗ್ಗಲು, ಅವ್ಯವಸ್ಥೆ; ಪರದಾಟ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನವನ್ನು ಪ್ರವೇಶಿಸುವ ದ್ವಾರ ಚಿಕ್ಕದಾದ ಕಾರಣ ದೂರದ ಊರುಗಳಿಂದ ಸಾಹಿತ್ಯ ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಮಂದಿ ಪಡಿಪಾಟಲು ಅನುಭವಿಸುವಂತಾಯಿತು.ಸಮ್ಮೇಳನ ನಡೆಯುತ್ತಿರುವ ಮೈದಾನದೊಳಕ್ಕೆ ಹೋಗುವ ಮತ್ತು ಅಲ್ಲಿಂದ ಬೇರೆಡೆ ತೆರಳುವ ಸಾಹಿತ್ಯಾಸಕ್ತರೆಲ್ಲರೂ ಒಂದೇ ದ್ವಾರವನ್ನು ಬಳಸುತ್ತಿದ್ದ ಕಾರಣ, ಅಲ್ಲಿ ತೀವ್ರ ನೂಕುನುಗ್ಗಲು ಸಂಭವಿಸುತ್ತಿತ್ತು. ಶುಕ್ರವಾರದಂದು ಇಡೀ ದಿನ ಈ ಪರಿಸ್ಥಿತಿ ಇತ್ತು.ಕನ್ನಡದ ಪ್ರಸಿದ್ಧ ಗಾಯಕಿಯೊಬ್ಬರು ಈ ನೂಕುನುಗ್ಗಲಿನಲ್ಲಿ ಸಿಕ್ಕು ಪಡಿಪಾಟಲು ಅನುಭವಿಸುವಂತಾಗಿತ್ತು.ಕಸಾಪ ಎದುರು ಪ್ರತಿಭಟನೆ:

ಸಾಹಿತ್ಯ ಸಮ್ಮೇಳನದ ಆರಂಭದ ದಿನವಾದ ಶುಕ್ರವಾರದಂದು ಕಸಾಪದ ಎದುರು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ಬೆಳಿಗ್ಗೆ 11ಗಂಟೆಯ ವೇಳೆಗೆ ಪ್ರತಿನಿಧಿಗಳ ನೋಂದಣಿ ಕಾರ್ಯವನ್ನು ನಿಲ್ಲಿಸಿದ ಕಾರಣ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಂದ ಆಗಮಿಸಿದ್ದ ಸಾಹಿತ್ಯ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದರು.‘ನಮ್ಮ ಬಳಿ ನೋಂದಣಿ ಮಾಡಿಸಿದ ರಶೀದಿ ಇದೆ, ಆದರೂ ನಮಗೆ ಸಾಹಿತ್ಯ ಸಮ್ಮೇಳನದ ಕಿಟ್ ಕೊಟ್ಟಿಲ್ಲ’ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕೆಲವರು ‘ನಾವು ಹಣ ನೀಡಲು ಸಿದ್ಧರಿದ್ದೇವೆ, ಆದರೆ ನಮ್ಮ ಹೆಸರನ್ನು ನೋಂದಾಯಿಸಿಕೊಳ್ಳುತ್ತಿಲ್ಲ’ ಎಂದು ನೋವು ತೋಡಿಕೊಳ್ಳುತ್ತಿದ್ದರು.ಎಲ್‌ಸಿಡಿ ಪರದೆ ಬೇಕಿತ್ತು

ನಾಡಪ್ರಭು ಕೆಂಪೇಗೌಡ ಮಹಾಮಂಟಪ ಸಾಕಷ್ಟು ದೊಡ್ಡದಾಗಿಯೇ ಇತ್ತು. ಸಹಸ್ರಾರು ಮಂದಿ ಸಾಹಿತ್ಯಾಸಕ್ತರಿಗೆ ಆಸನ ವ್ಯವಸ್ಥೆಯೂ ಇತ್ತು.ಆದರೆ ಸಭಾಂಗಣದ ಹಿಂಭಾಗದಲ್ಲಿ ಕುಳಿತವರಿಗೆ ವೇದಿಕೆಯ ಮೇಲೆ ಏನು ನಡೆಯುತ್ತಿದೆ ಎಂಬುದೇ ಕಾಣದಂತಹ ಪರಿಸ್ಥಿತಿ ಇತ್ತು. ಸಭಾಂಗಣದ ಮುಂಭಾಗದಲ್ಲಿ ಒಂದಿಷ್ಟು ಸಾಲುಗಳನ್ನು ಹೊರತುಪಡಿಸಿದರೆ, ಹಿಂಭಾಗದಲ್ಲಿ ಕುಳಿತಿದ್ದ ಸಾಹಿತ್ಯಾಸಕ್ತರೆಲ್ಲ ವೇದಿಕೆಯ ಮೇಲೆ ಏನು ನಡೆಯುತ್ತಿದೆ ಎಂದು ನೋಡಲು ತಿಣುಕಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

‘ವೇದಿಕೆಯ ಮೇಲೆ ಎಲ್‌ಇಡಿ ಪರದೆಯನ್ನು ಅಳವಡಿಸಿರುವುದರ ಜೊತೆಗೆ, ಸಭಾಂಗಣದ ಎರಡೂ ಕಡೆಗಳಲ್ಲಿ ಎಲ್‌ಸಿಡಿ ಪರದೆಗಳನ್ನು ಇಟ್ಟಿದ್ದರೆ ಎಲ್ಲರಿಗೂ ಕಾರ್ಯಕ್ರಮ ನೋಡಲು ಅನುಕೂಲವಾಗುತ್ತಿತ್ತು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.ವಸತಿ ವ್ಯವಸ್ಥೆ ಸರಿ ಇಲ್ಲ

ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿರುವವರಿಗೆ ವಸತಿ ವ್ಯವಸ್ಥೆ ಸರಿಯಾಗಿ ಆಗಿಲ್ಲ ಎಂದು ಆರೋಪಿಸಿ ಹಾವೇರಿ, ದಾವಣಗೆರೆ ಕಡೆಯಿಂದ ಬಂದಿದ್ದ ಪ್ರತಿನಿಧಿಗಳು ಶುಕ್ರವಾರ ಬೆಳಿಗ್ಗೆ ‘ಕೆಂಪೇಗೌಡ ಮಹಾಮಂಟಪ’ದ ಎದುರು ಪ್ರತಿಭಟನೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.