ಶನಿವಾರ, ಏಪ್ರಿಲ್ 17, 2021
28 °C

ನೂತನ ಉರಗ ಆವರಣಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಸಣ್ಣ ಹಾಗೂ ಮಧ್ಯಮ ಗಾತ್ರದ ಹಾವು ಹಾಗೂ ಇತರ ಉರಗಗಳಿಗಾಗಿ 13 ವಿಭಾಗಗಳಿರುವ ನೂತನ ಆವರಣಕ್ಕೆ ಬುಧವಾರ ಚಾಲನೆ ನೀಡಲಾಯಿತು. ನೂತನ ಉರಗ ಆವರಣದಲ್ಲಿ ಭಾರತೀಯ ಮೂಲದ ವಿಷರಹಿತ ಕಂಚು ಮರದ ಹಾವು, ಬ್ಯಾಂಡೇಡ್ ರೇಸರ್ ಹಾವು, ಕಾಮನ್ ಟ್ರಿಂಕೆಟ್ ಹಾವು, ವೊಲ್ಫ್ ಹಾವು, ಹಸಿರು ಹಾವು, ರೆಡ್ ಸ್ಯಾಂಡ್ ಬೊವಾ, ಕಾಮನ್ ಸ್ಯಾಂಡ್ ಬೊವಾ, ಕ್ಯಾಟ್ ಸ್ನೇಕ್, ನಕ್ಷತ್ರ ಆಮೆ ಹಾಗೂ ವಿದೇಶಿ ಮೂಲದ ಗ್ರೀನ್ ಇಗ್ವಾನಾ, ಬಾಲ್ ಪೈತಾನ್, ಕಾರ್ನ್ ಸ್ನೇಕ್ ಹಾಗೂ ರೆಡ್ ಇಯರ್ಡ್ ಸ್ಲೈಡರ್ ಆಮೆ ಸೇರಿದೆ.ಈ ಆವರಣವನ್ನು ಪ್ರಾಣಿಗಳ ಸ್ವಾಭಾವಿಕ ಅವಶ್ಯಕತೆಗೆ ಅನುಗುಣವಾಗಿ ನಿರ್ಮಿಸಲಾಗಿದೆ. ಪ್ರತಿ ಪ್ರಾಣಿಗೂ ಉಷ್ಣಾಂಶ ನಿರ್ವಹಣೆ, ತೇವಾಂಶ ನಿರ್ವಹಣೆ, ಸಂತಾನೋತ್ಪತ್ತಿ ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ವೀಕ್ಷಕರಿಗೆ ಸ್ಪಷ್ಟವಾಗಿ ಕಾಣುವಂತೆ ನಿರ್ಮಿಸಲಾಗಿದೆ. ಮೊಟ್ಟೆ ಇಟ್ಟ ಹೆಬ್ಬಾವು: ನೂತನ ಆವರಣದಲ್ಲಿ ಮಧ್ಯ ಹಾಗೂ ದಕ್ಷಿಣ ಅಮೆರಿಕ ಮೂಲದ ಎರಡು ಬಗೆಯ ಇಗ್ವಾನಾ ಹಾಗೂ ಮೂರು ಬಗೆಯ ವಿದೇಶಿ ಮೂಲದ ಬಾಲ್ ಪೈತಾನ್ ವಿಶೇಷ ಆಕರ್ಷಣೆಯಾಗಿದ್ದು, ಭಾರತದ ಮೃಗಾಲಯಗಳಲ್ಲೆ ಇವು ಕಾಣಲು ಸಿಗುವುದು ಅಪರೂಪ. ಬಾಲ್ ಪೈತಾನ್ (ಹೆಬ್ಬಾವು) ಆರು ಮೊಟ್ಟೆ ಇಟ್ಟಿದ್ದು, ಅವುಗಳಿಗೆ ಕೃತಕವಾಗಿ ಕಾವು ನೀಡಲಾಗುತ್ತಿದೆ.ಎರಡು ತಿಂಗಳು ಕಾವು ನೀಡುವ ಅವಧಿ ಇದೆ. ಬಳಿಕ ಮೊಟ್ಟೆ ಒಡೆದು ಮರಿ ಬರುವ ನಿರೀಕ್ಷೆ ಇದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದರು. ನಂದಿನಿ ಮಾರಾಟ ಮಳಿಗೆ: ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲ ಆಗುವಂತೆ ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲಿನ ವಿವಿಧ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಬುಧವಾರ ಆರಂಭಿಸಲಾಯಿತು. ಪ್ರವಾಸಿಗರಿಗೆ ಮಳಿಗೆಯಲ್ಲಿ ಹಾಲು, ಮಜ್ಜಿಗೆ, ಪೇಡ, ಮೈಸೂರು ಪಾಕ್ ಇತ್ಯಾದಿಗಳು ಲಭ್ಯವಿದ್ದು, ಈ ಮಾರಾಟದಿಂದ ಬರುವ ಲಾಭಾಂಶವನ್ನು ಮೃಗಾಲಯ ನೌಕರರ ಕಲ್ಯಾಣಕ್ಕಾಗಿ ಉಪಯೋಗಿಸಲಾಗುವುದು.ಇದೇ ಸಂದರ್ಭದಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಅವರು, ಮೃಗಾಲಯ ಆವರಣದೊಳಗೆ ಮಳೆ ನೀರು ಸುಗಮ ಹರಿವಿಗಾಗಿ ರೂ. 16 ಲಕ್ಷ ವೆಚ್ಚದಲ್ಲಿ ಶೀಘ್ರ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಮೃಗಾಲಯ ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ಬಿ.ಮಾರ್ಕಂಡೇಯ, ಮೃಗಾಲಯ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ಎನ್.ಜಯಕುಮಾರ್, ಮೃಗಾಲಯ ಉಪನಿರ್ದೇಶಕ ಎನ್.ಟಿ.ವಿಜಯಕುಮಾರ್, ಮೃಗಾಲಯ ಪಶು ವೈದ್ಯಾಧಿಕಾರಿಗಳಾದ ಡಾ. ಸುರೇಶ್‌ಕುಮಾರ್, ಡಾ. ಪ್ರಯಾಗ್, ವನ್ಯಜೀವಿ ತಜ್ಞರಾದ ನರಸಿಂಹ, ಅನಿಲ್ ಗಾರ್ಗ್ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.