ಸೋಮವಾರ, ಮೇ 23, 2022
28 °C

ನೃತ್ಯ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಜುಳ ನಾಟ್ಯ ನಿವೇದನಂ

ಶನಿವಾರ ಮಂಜುಳಾ ಅಮರೇಶ್ ಅವರಿಂದ ಏಕವ್ಯಕ್ತಿ ಭರತನಾಟ್ಯ. ನಟುವಾಂಗ: ಶಾಂತಾ ಧನಂಜಯ (ಚೆನ್ನೈ). ಸಂಗೀತ: ಅರುಣ್ ಗೋಪಿನಾಥ್ (ಚೆನ್ನೈ). ಮೃದಂಗ: ರಮೇಶ್ ಬಾಬು (ಚೆನ್ನೈ). ಪಿಟೀಲು: ಈಶ್ವರ್ ರಾಮಕೃಷ್ಣನ್ (ಚೆನ್ನೈ). ಕೊಳಲು: ನರಸಿಂಹಮೂರ್ತಿ. ಮಂಜುಳಾ ಬಾಲ ಪ್ರತಿಭೆಯಾಗಿದ್ದು ಬೆಳಕಿಗೆ ಬಂದವರು. ಎಚ್.ಎಚ್. ಜಯಲಕ್ಷ್ಮಿ ಮತ್ತು ಎಸ್. ಕುಮಾರ್ ಅವರ ಪುತ್ರಿ. ಎಳೆಯ ವಯಸ್ಸಿನಲ್ಲೇ ಭರತನಾಟ್ಯ ಕಲಿಯಲು ಆರಂಭಿಸಿದವರು. ಬೆಂಗಳೂರಿನ ಪ್ರಸಿದ್ಧ ಗುರುಗಳಾದ ಶ್ಯಾಮಲ ಮುರಳಿಕೃಷ್ಣ, ರೇವತಿ ನರಸಿಂಹನ್ ಮತ್ತು ಭಾನುಮತಿಯವರ ಮಾರ್ಗದರ್ಶನದಲ್ಲಿ ಕಲಿತು ಪ್ರೌಢಿಮೆ ಪಡೆದಿದ್ದಾರೆ. ರಾಜ್ಯ ಸರ್ಕಾರ ನಡೆಸುವ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ. ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.ಪ್ರಸ್ತುತ ಚೆನ್ನೈನ ಭಾರತ ಕಲಾಂಜಲಿಯ ಪದ್ಮಭೂಷಣ ವಿ.ಪಿ. ಧನಂಜಯನ್ ಮತ್ತು ಶಾಂತಾ ಧನಂಜಯನ್ ಬಳಿ ನೃತ್ಯದಲ್ಲಿ ಉನ್ನತ ತರಬೇತಿ ಪಡೆಯುತ್ತಿದ್ದಾರೆ. ಕಲಾನಿಧಿ ನಾರಾಯಣನ್ ಅವರಿಂದ ಅಭಿನಯ (ಮುಖ ಭಾವ)ದಲ್ಲಿ ವಿಸ್ತ್ರತ ತರಬೇತಿ ಪಡೆಯುತ್ತಿದ್ದಾರೆ. ಭಾಗವತುಲು ಸೀತಾರಾಮ ಶರ್ಮರಿಂದ ನಟುವಾಂಗ ಸಹ ಕಲಿಯುತ್ತಿದ್ದಾರೆ. ಭಾರತ ಮತ್ತು ಹೊರದೇಶಗಳಲ್ಲಿ 250ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ಜೊತೆಯಲ್ಲಿ ಈ ಅದ್ಭುತ ಕಲೆಯನ್ನು ಕಲಿಸುವುದರಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯುಎಇ, ಹಾಂಗ್‌ಕಾಂಗ್‌ಗಳಲ್ಲಿ ತರಬೇತಿ ನೀಡಿದ್ದಾರೆ. ನಾಟ್ಯಶಾಸ್ತ್ರದ ಜ್ಞಾನವನ್ನು ಚೀನಿಯರಿಗೆ ಮತ್ತು ಒಮನ್ ಕಲಾಪ್ರಿಯರಿಗೆ ಧಾರೆಯೆರೆದಿದ್ದಾರೆ.

ಸ್ಥಳ: ಎಡಿಎ ರಂಗಮಂದಿರ, ಜೆ ಸಿ ರಸ್ತೆ. ಸಂಜೆ 6.45. ಮಾಹಿತಿಗೆ 2671 4857.ಕೆ.ಆರ್. ಅಂಜಲಿ

ಭಾನುವಾರ ಉದಯೋನ್ಮುಖ ಭರತನಾಟ್ಯ ಕಲಾವಿದೆ ಕೆ.ಆರ್. ಅಂಜಲಿ ಅವರಿಂದ ಭರತನಾಟ್ಯ ರಂಗಪ್ರವೇಶ. ಶಾರದಾ ಮತ್ತು ರಾಮಚಂದ್ರ ದಂಪತಿಯ ಪುತ್ರಿ ಅಂಜಲಿ, ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 2ನೇ ವರ್ಷದ ಎಂಜಿನಿಯರಿಂಗ್ (ಬಯೊ ಟೆಕ್ನಾಲಜಿ) ವಿದ್ಯಾರ್ಥಿನಿ. ಶುಭಾ ಧನಂಜಯ ಮತ್ತು ಲತಾ ಲಕ್ಷ್ಮೀಶ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡಿದ್ದು, ಬಿ.ಆರ್. ಗೀತಾ ಅವರಲ್ಲಿ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದಾರೆ.ಈಗಾಗಲೇ ಹಲವು ರಾಷ್ಟ್ರೀಯ ಮಟ್ಟದ ನೃತ್ಯ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಒಡಿಶಾದಲ್ಲಿ ನಡೆದ ನೃತ್ಯೋತ್ಸವ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಧ್ವನಿ ಬೆಳಕಿನ ಕಾರ್ಯಕ್ರಮ, ದೆಹಲಿಯಲ್ಲಿ ನಡೆದ ವಚನ ಸಾಹಿತ್ಯ ಸಮ್ಮೇಳನ, ಮೈಸೂರು ದಸರಾ, ಹಂಪಿ ಉತ್ಸವ, ಕಿತ್ತೂರು ಉತ್ಸವ ಇವುಗಳಲ್ಲಿ ಮುಖ್ಯವಾದವು. ಅತಿಥಿಗಳು: ಮಹಿಳಾ ವಿವಿ ಕುಲಪತಿ ಡಾ. ಗೀತಾ ಬಾಲಿ, ಸಾಹಿತಿ ಕಬ್ಬಿನಾಲೆ ವಸನ್ತ ಭಾರದ್ವಾಜ್, ಪದ್ಮಿನಿ ರವಿ, ವಿ.ಆರ್. ಮಂಜುನಾಥ್.

ಸ್ಥಳ: ಡಾ. ರಾಜ್‌ಕುಮಾರ್ ಸಭಾಂಗಣ, ಆರ್‌ಟಿಒ ಕಚೇರಿ ಆವರಣ, ರಾಜಾಜಿನಗರ, ಸಂಜೆ 5.30.ಪ್ರತಿಭಾ ನೃತ್ಯ

ಕಲಾ ಸಿಂಧು ಡ್ಯಾನ್ಸ್ ಅಕಾಡೆಮಿ ಮತ್ತು ಕಲೆ ಶಿಕ್ಷಣ ಸಂಸ್ಥೆ: ಭಾನುವಾರ ನಿರಂತರ ನರ್ಮದ ನೃತ್ಯ ಮಹೋತ್ಸವ. ಪ್ರತಿಭಾ ಪ್ರಹ್ಲಾದ ಅವರಿಂದ ನೃತ್ಯ. ಅತಿಥಿ: ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಚಾಲಯ್ಯ. ಶಕುಂತಲಾ ಮತ್ತು ರಾಮರಾವ್ ದಂಪತಿಯ ಪುತ್ರಿ ನರ್ಮದಾ (ಜ. 22 ಸೆ. 1942) ಶ್ರೇಷ್ಠ ನೃತ್ಯ ಸಾಧಕಿಯಾಗಿದ್ದವರು. 1978ರಲ್ಲಿ ಶಕುಂತಲಾ ನೃತ್ಯಶಾಲೆ ಸ್ಥಾಪಿಸಿ ಅನೇಕ ನೃತ್ಯ ಪ್ರತಿಭೆಗಳನ್ನು ತರಬೇತು ಮಾಡಿದವರು. ಅಗ್ರಗಣ್ಯ ನೃತ್ಯ ಗುರುಗಳ ಸಾಲಿಗೆ ಬೆಳೆದವರು.ಅವರ ಶಿಷ್ಯಂದಿರು ಪೂರ್ಣಿಮಾ ಗುರುರಾಜ್ ನೇತೃತ್ವದಲ್ಲಿ ದಿವಂಗತ ಗುರುವಿನ ನೆನಪಿನಲ್ಲಿ ‘ನಿರಂತರ ನರ್ಮದ’ ನೃತ್ಯ ಕಾರ್ಯಕ್ರಮ ನಡೆಸುತ್ತ ಬಂದಿದ್ದಾರೆ. ಇದರಡಿ ಈ ಸಲ ನೃತ್ಯ ಕಾರ್ಯಕ್ರಮ ನೀಡುತ್ತಿರುವ ಪ್ರತಿಭಾ ಪ್ರಹ್ಲಾದ್, ಅಂತರ್ರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದ ನೃತ್ಯ ಕಲಾವಿದೆ. ನೃತ್ಯ ಸಂಯೋಜಕಿಯಾಗಿ, ಗುರುವಾಗಿ, ಸಂಶೋಧಕಿಯಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕಿಯಾಗಿ ಹೆಸರುವಾಸಿ. 

ಸ್ಥಳ: ಶಿವಾರಾತ್ರೀಶ್ವರ ಸಭಾಂಗಣ, 8ನೇ ಬ್ಲಾಕ್, ಜಯನಗರ. ಸಂಜೆ 6.30. ಪ್ರವೇಶ ಉಚಿತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.