ಬುಧವಾರ, ಮಾರ್ಚ್ 29, 2023
30 °C
ಪ್ರತಿ ಐದು ಮೀಟರ್‌ ಅಂತರದಲ್ಲಿ ಬಿದ್ದಿದ್ದ ಮೃತದೇಹಗಳು

ನೆತ್ತರು ಹರಿಸಿದ ಬಿಳಿ ಟ್ರಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆತ್ತರು ಹರಿಸಿದ ಬಿಳಿ ಟ್ರಕ್‌

ನೀಸ್‌, ಫ್ರಾನ್ಸ್‌ (ರಾಯಿಟರ್ಸ್‌/ಎಎಫ್‌ಪಿ): ರಸ್ತೆಯಲ್ಲಿ ಪ್ರತಿ ಐದು ಮೀಟರ್‌ ಅಂತರದಲ್ಲಿ ಬಿದ್ದಿದ್ದ ಮೃತದೇಹಗಳು. ಚದುರಿಬಿದ್ದ ಅಂಗಾಗಗಳು, ಹರಿದ ರಕ್ತದೋಕುಳಿ, ಗಾಯಗೊಂಡವರ ನರಳಾಟ...ಫ್ರಾನ್ಸ್‌ನ ನೀಸ್‌ನಲ್ಲಿ ಗುರುವಾರ  ರಾತ್ರಿ ನಡೆದ ಟ್ರಕ್‌ ದಾಳಿಯ ಭಯಾನಕತೆಯನ್ನು ಸ್ಥಳೀಯ ಪತ್ರಕರ್ತ ಡೇಮಿಯನ್‌ ಆಲ್ಮಂಡ್‌ ವಿವರಿಸಿದ್ದು ಹೀಗೆ. ‘ರಾಷ್ಟ್ರೀಯ ದಿನಾಚರಣೆಯ ಸಂಭ್ರಮದಲ್ಲಿ ಮುಳುಗಿದ್ದ ಜನರು ತಮ್ಮತ್ತ ಯಮನಂತೆ ಬರುತ್ತಿದ್ದ ಬಿಳಿ ಬಣ್ಣದ ಟ್ರಕ್‌ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೂ ಭಾರಿ ಗಾತ್ರದ ಟ್ರಕ್‌ ಅಡಿ ಸಿಲುಕಿ ಹಲವರು ಪ್ರಾಣ ಕಳೆದುಕೊಂಡರು’ ಎಂದು ಹೇಳಿದ್ದಾರೆ.‘ಫ್ರಾನ್ಸ್‌ನ ರಾಷ್ಟ್ರೀಯ ರಜಾದಿನದಂದು ಬೀಚ್‌ ರೆಸಾರ್ಟ್‌ನಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಿಂದ ಭಾರಿ ಸಂಗೀತ ಕೇಳಿಬರುತ್ತಿತ್ತು.ಸುಡುಮದ್ದು ಪ್ರದರ್ಶನ ಕೊನೆಗೊಂಡು  ಜನರು ಅಲ್ಲಿಂದ ಚದುರುತ್ತಿದ್ದ ಸಂದರ್ಭದಲ್ಲಿ ಟ್ರಕ್‌ ಎರಗಿ ಬಂದಿದೆ’ ಎಂದಿದ್ದಾರೆ. ಟ್ರಕ್‌ ಅಡ್ಡಗಟ್ಟಲೆತ್ನಿಸಿದ ದ್ವಿಚಕ್ರ ವಾಹನ ಸವಾರ: ದ್ವಿಚಕ್ರ ವಾಹನ ಸವಾರನೊಬ್ಬ ಟ್ರಕ್‌ ಅಡ್ಡಗಟ್ಟಲು ಪ್ರಯತ್ನಿಸಿ ವಿಫಲನಾಗಿದ್ದ ಎಂದು ಘಟನೆಯ ಪ್ರತ್ಯಕ್ಷದರ್ಶಿ ಜರ್ಮನಿಯ ಪತ್ರಕರ್ತ ರಿಚರ್ಡ್‌ ಗಟ್ಜರ್‌ ಹೇಳಿದ್ದಾರೆ. ‘ನಾನು ಹೋಟೆಲ್‌ನ ಬಾಲ್ಕನಿಯಲ್ಲಿ ನಿಂತಿದ್ದೆ. ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದ ಜನರ ಮೇಲೆ ಟ್ರಕ್‌ ಸಾಗಿದ್ದನ್ನು ಕಣ್ಣಾರೆ ಕಂಡಿದ್ದೇನೆ’ ಎಂದಿದ್ದಾರೆ.‘ಆರಂಭದಲ್ಲಿ ಆತ ಟ್ರಕ್‌ಅನ್ನು ನಿಧಾನವಾಗಿ ಚಲಾಯಿಸಿದ್ದಾನೆ. ಒಬ್ಬ ದ್ವಿಚಕ್ರ ವಾಹನ ಸವಾರ ಟ್ರಕ್‌ಅನ್ನು ಬೆನ್ನಟ್ಟಿದ್ದನ್ನು ನೋಡಿದೆ. ಟ್ರಕ್‌ ಹಿಂದಿಕ್ಕಲು ಪ್ರಯತ್ನಿಸಿದನಲ್ಲದೆ, ಚಾಲಕನ ಬದಿಯ ಬಾಗಿಲು ತೆರೆಯಲು ಮುಂದಾಗಿದ್ದಾನೆ. ಆದರೆ ಆಯತಪ್ಪಿ ಕೆಳಕ್ಕೆ ಬಿದ್ದು ಟ್ರಕ್‌ ಅಡಿ ಸಿಲುಕಿದ’ ಎಂದು ಗಟ್ಜರ್‌ ವಿವರಿಸಿದ್ದಾರೆ.‘ಇಬ್ಬರು ಪೊಲೀಸ್‌ ಅಧಿಕಾರಿಗಳು ಟ್ರಕ್‌ನತ್ತ ಗುಂಡು ಹಾರಿಸುವುದನ್ನು ನೋಡಿದೆ. ಈ ವೇಳೆ ಚಾಲಕ ಟ್ರಕ್‌ನ ವೇಗ ಹೆಚ್ಚಿಸಿದನಲ್ಲದೆ, ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸಿದ್ದಾನೆ. ಮುಂದಿನ 15 ರಿಂದ 20 ಸೆಕೆಂಡ್‌ಗಳ ಕಾಲ ಹಲವು ಸುತ್ತುಗಳ ಗುಂಡು ಹಾರಾಟ ನಡೆದಿದೆ. ಯಾರು ಯಾರ ಮೇಲೆ ಗುಂಡು ಹಾರಿಸಿದ್ದಾರೆ ಎಂಬುದು ತಿಳಿಯಲಿಲ್ಲ.‘ಜನರು ದಿಗಿಲಿನಿಂದ ಓಡಿದ್ದಾರೆ. ಟ್ರಕ್‌ನಿಂದ ತಪ್ಪಿಸಿಕೊಳ್ಳಲು ರಸ್ತೆ ಬದಿಯಲ್ಲಿದ್ದ ಹೋಟೆಲ್‌ ಹಾಗೂ ಇತರ ಕಟ್ಟಡಗಳ ಒಳಗೆ ನುಗ್ಗಿದ್ದಾರೆ’ ಎಂದು ನಡೆದ ಘಟನೆಯನ್ನು ವಿವರಿಸಿದ್ದಾರೆ. ದಿಕ್ಕುತೋಚದೆ ಓಡಿದರು: ‘ಅಲ್ಲಿ ಏನು ನಡೆಯುತ್ತಿದೆ ಎಂಬುದು  ಯಾರಿಗೂ ತಿಳಿಯಲಿಲ್ಲ. ಜನರು ದಿಕ್ಕಾಪಾಲಾಗಿ ಓಡುತ್ತಿದ್ದರು. ಅದನ್ನು ನೋಡಿದ ಇತರರೂ ಓಡಲು ಶುರು ಮಾಡಿದರು. ಕೆಲವೇ ನಿಮಿಷಗಳಲ್ಲಿ ಅಲ್ಲಿನ ಚಿತ್ರಣವೇ ಬದಲಾಯಿತು’ ಎಂದು  ಪೌಲ್‌ ಡೆಲಾನೆ ಎಂಬಾತ ಹೇಳಿದ್ದಾನೆ.‘ಒಬ್ಬಾತ ತನ್ನ ಜತೆಗಿದ್ದ ಮಕ್ಕಳನ್ನು ಎತ್ತಿ ತಡೆಗೋಡೆಯ ಹೊರಗೆ ಎಸೆದನಲ್ಲದೆ ಬಳಿಕ ತಾನೂ ತಡೆಗೋಡೆ ಜಿಗಿದು ಪ್ರಾಣ ಉಳಿಸಿಕೊಂಡ’ ಎಂದು ಪ್ರತ್ಯಕ್ಷದರ್ಶಿ ಇಸ್ಮಾಯಿಲ್‌ ಖಾಲಿದಿ ತನಗೆ ಕಂಡ ದೃಶ್ಯ ವಿವರಿಸಿದ್ದಾರೆ.‘ಭಯೋತ್ಪಾದಕ ಕೃತ್ಯ! ಭಯೋತ್ಪಾದಕ ಕೃತ್ಯ! ಎಂದು ಜನರು ಬೊಬ್ಬಿಡುತ್ತಿದ್ದರು. ಚಾಲಕ ಲಾರಿಯನ್ನು ಉದ್ದೇಶಪೂರ್ವಕವಾಗಿ ಜನರ ಮೇಲೆ ಓಡಿಸುತ್ತಿದ್ದಾನೆ ಎಂಬುದು ಕೆಲವರಿಗೆ ಆ ಕ್ಷಣದಲ್ಲೇ ಗೊತ್ತಾಗಿತ್ತು’ ಎಂದು ರಜೆ ಕಳೆಯಲು ನೀಸ್‌ಗೆ ಬಂದಿದ್ದ ಇರಾನ್‌ನ ಪತ್ರಕರ್ತೆ ಮರಿಯಮ್‌ ವಯೊಲೆಟ್‌ ಹೇಳಿದ್ದಾರೆ.‘ಬೀಚ್‌ ಹಾಗೂ ಸಮೀಪದಲ್ಲಿ ಉತ್ಸವದ ವಾತಾವರಣವಿತ್ತು. ಬಿಳಿ ಬಣ್ಣದ ಟ್ರಕ್‌ ಜನರ ಮೇಲೆ ಎರಗಿದ ಬಳಿಕ ಎಲ್ಲವೂ ಬದಲಾಯಿತು’ ಎಂದಿದ್ದಾರೆ. ‘ರಜಾ ದಿನ ಕಳೆಯಲು ಕುಟುಂಬ ಸಮೇತ ಬಂದಿದ್ದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಟ್ರಕ್‌ ಬರುತ್ತಿರುವುದನ್ನು ಕಂಡು ರೆಸ್ಟೋರೆಂಟ್‌ ಒಳಗೆ ಓಡಿ ಜೀವ ಉಳಿಸಿಕೊಂಡೆ.  ಭಯಭೀತ ಜನರು ತಮಗೆ ಕಂಡ ಹೋಟೆಲ್‌ಗಳ ಒಳಗೆ ಓಡಲು ಪ್ರಯತ್ನಿಸುತ್ತಿದ್ದರು’ ಎಂದು ಆಸ್ಟ್ರೇಲಿಯದ ಟಿ. ವಿ ಚಾನೆಲ್‌ನ ಡೇವಿಡ್‌ ಕೊವಾಡಿ ಹೇಳಿದ್ದಾರೆ.90  ಕಿ.ಮೀ ದಾಳಿ ವೇಳೆ ಟ್ರಕ್‌ನ ಗರಿಷ್ಠ ವೇಗ

ಟ್ರಕ್‌ ಆರಂಭದಲ್ಲಿ ಗಂಟೆಗೆ 30 ರಿಂದ 40 ಕಿ. ಮೀ. ವೇಗದಲ್ಲಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸರು ಗುಂಡು ಹಾರಿಸಿದಾಗ ವೇಗವನ್ನು ಹೆಚ್ಚಿಸಿದ್ದಾನೆ.ಒಂದು ಹಂತದಲ್ಲಿ ಟ್ರಕ್‌ ಗಂಟೆಗೆ 90 ಕಿ. ಮೀ. ವೇಗದಲ್ಲಿತ್ತು ಎಂದು ಸ್ಥಳೀಯ ಸರ್ಕಾರದ ಮುಖ್ಯಸ್ಥ ಕ್ರಿಶ್ಚಿಯನ್‌ ಎಸ್ಟ್ರೊಸಿ ಹೇಳಿದ್ದಾರೆ.***

ಭಯೋತ್ಪಾದಕರ ದಾಳಿಗಳು ನಾವು ಸಹಿಷ್ಣು ಆಗಿಲ್ಲದಿರುವುದರ ಲಕ್ಷಣ ಅಲ್ಲ. ಅವು ನಾವು ಅತಿ ಸಹಿಷ್ಣುಗಳಾಗಿರುವುದರ ಸಂಕೇತ

@Grummz***

ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ: ನಿಮ್ಮ ದೇವರಿಗಾಗಿ ಕೊಲೆ ಮಾಡಬೇಕು ಎಂಬ ವಿಚಾರ ನೀವು ಒಪ್ಪಿಬಿಟ್ಟಿದ್ದರೆ, ಆ ಕೆಲಸವನ್ನು ನಿಮ್ಮನ್ನೇ ಕೊಂದುಕೊಳ್ಳುವ ಮೂಲಕ ಆರಂಭಿಸಿ. ಮುಂದೆ ಏನು ಮಾಡಬೇಕು ಎಂಬುದನ್ನು ನಾನು ನಿಮಗೆ ವೈಯಕ್ತಿಕವಾಗಿ ತಿಳಿಸುವೆ

@almightygod***

ಇದು (ಭಯೋತ್ಪಾದಕ ದಾಳಿ) ಪ್ರತಿದಿನದ ವಿದ್ಯಮಾನ ಆಗುತ್ತಿದೆ. ನೀಸ್‌ ನಗರದ ಘಟನೆ ಪ್ರೀತಿಗೆ ಹೆಸರಾದ ದೇಶವೊಂದನ್ನು ಅಣಕಿಸುತ್ತಿರುವಂತಿದೆ. ನಾವು ಮತ್ತೆ ಶಾಂತಿ ಕಾಣುತ್ತೇವೆಯೇ?

@ashwinravi99***

ಸಮಸ್ಯೆ ಇರುವುದು ಆಯುಧದಲ್ಲಿ ಅಲ್ಲ, ಸಿದ್ಧಾಂತದಲ್ಲಿ ಎಂಬ ಅರಿವನ್ನು ಬಂದೂಕಿನ ಬದಲು ಟ್ರಕ್ಕನ್ನು ಆಯುಧದಂತೆ ಬಳಸಿದ ಈ ಘಟನೆ ಮೂಡಿಸಬೇಕು

@rishibagree***

ದಾಳಿ ನಡೆದಾಗ ಆ ಸ್ಥಳದಲ್ಲಿ ನಾನು ನನ್ನ ಮಗನ ಜೊತೆ ಇದ್ದೆ. ನಾವು ಅದೃಷ್ಟವಂತರು, ಓಡಿ ತಪ್ಪಿಸಿಕೊಂಡೆವು. ನಾವೀಗ ಸುರಕ್ಷಿತ. ಆದರೆ ಭೀತಿಯನ್ನು, ಗಾಯಾಳುಗಳನ್ನು ನೆನೆಯದೆ ಇರಲು ಆಗದು

@odettecasamayor

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.