ಶನಿವಾರ, ಏಪ್ರಿಲ್ 17, 2021
32 °C

ನೆನಪಿನ ಅಂಗಳದಲ್ಲಿ ಈಡನ್ ಗಾರ್ಡನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ/ಐಎಎನ್‌ಎಸ್): ಈಡನ್ ಗಾರ್ಡನ್ಸ್ ಕ್ರೀಡಾಂಗಣ ಎಂದಾಕ್ಷಣ ನೆನಪಾಗುವುದು ಆಸ್ಟ್ರೇಲಿಯಾದವರಿಗೆ ಈಗಲೂ ಕನಸಿನಲ್ಲಿ ಕಾಡುವಂಥ ಬ್ಯಾಟಿಂಗ್‌ನಿಂದ ಮಿಂಚಿದ್ದ ವಿ.ವಿ.ಎಸ್.ಲಕ್ಷ್ಮಣ್. ಸ್ವತಃ `ವಿವಿಎಸ್~ ಕೂಡ ಆ ಅಂಗಳ ನೀಡಿದ ಸಿಹಿ ಅನುಭವವನ್ನು ಮೆಲುಕು ಹಾಕುತ್ತಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಕ್ಷಣದಲ್ಲಿಯೂ ಅವರ ಮಾತುಗಳಲ್ಲಿ `ಈಡನ್~ ನಲಿದಾಡಿತು!ಈಡನ್ ಇತಿಹಾಸದ ಪುಟದಲ್ಲಿ `ವಿವಿಎಸ್~ ಹೆಸರು ಸುವರ್ಣಾಕ್ಷರದಲ್ಲಿ ದಾಖಲಾಗಿದೆ. ವಿಚಿತ್ರವೆಂದರೆ ಆ ಅಂಗಳದಲ್ಲಿ ಆಡಿದಾಗಲೆಲ್ಲ ಹೈದರಾಬಾದ್ ಬ್ಯಾಟ್ಸ್‌ಮನ್ ಅಸಾಮಾನ್ಯ ಶಕ್ತಿ ಪ್ರದರ್ಶಿಸಿದ್ದಾರೆ.ಪಶ್ಚಿಮ ಬಂಗಾಳದ ರಾಜಧಾನಿಯಲ್ಲಿ ಆಡಿದ ಟೆಸ್ಟ್‌ಗಳಲ್ಲಿ `ವೆರಿ ವೆರಿ ಸ್ಪೇಷಲ್~ ಬ್ಯಾಟಿಂಗ್ ಲಕ್ಷ್ಮಣ್ ಅವರದ್ದು. ಎಂಬತ್ತಕ್ಕೂ ಹೆಚ್ಚಿನ ರನ್ ಸರಾಸರಿ ಎಂದರೆ ಅಚ್ಚರಿ ಆಗುವುದು ಸಹಜ. ಈ ಎಲ್ಲ ಲೆಕ್ಕಾಚಾರಕ್ಕಿಂತ ಮಹತ್ವದ್ದಾಗಿ ಎದ್ದು ಕಾಣಿಸುವುದು ಮಾತ್ರ ಕಾಂಗರೂಗಳ ನಾಡಿನ ಕ್ರಿಕೆಟ್ ಪಡೆಯ ಎದುರು ಗಳಿಸಿದ್ದ 281 ರನ್. ಅದೊಂದು ವಿಶಿಷ್ಟವಾದ ಆಟ. ಆಸ್ಟ್ರೇಲಿಯನ್ನರೂ ಬೆರಗಾಗಿ ನೋಡುವಂತೆ ಮಾಡಿದ್ದು ಲಕ್ಷ್ಮಣ್ ಹಿರಿಮೆ. ಅವರಿಗೆ ಆಗ ಜೊತೆಯಾಗಿ ನಿಂತಿದ್ದು ಇನ್ನೊಬ್ಬ ದಕ್ಷಿಣದ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್.ವಿಶ್ವದ ಕ್ರಿಕೆಟ್ ವಿಶ್ಲೇಷಕರೆಲ್ಲ ವಿಶಿಷ್ಟವಾದ ಇನಿಂಗ್ಸ್‌ಗಳನ್ನು ಸ್ಮರಿಸುವಾಗಲೆಲ್ಲ ಈಡನ್ ಗಾರ್ಡನ್ಸ್‌ನಲ್ಲಿ ಲಕ್ಷ್ಮಣ್ ಆಡಿದ್ದ ರೀತಿಯನ್ನು ಖಂಡಿತ ಮರೆಯುವುದಿಲ್ಲ. ಹೌದು; ಆ ಒಂದು ಇನಿಂಗ್ಸ್ ಕ್ರಿಕೆಟ್ ಜಗತ್ತು ಕಂಡ ಅದ್ಭುತಗಳಲ್ಲೊಂದು. ದೇಶದ ಅತಿದೊಡ್ಡ ಕ್ರೀಡಾಂಗಣ ಎನ್ನುವ ಖ್ಯಾತಿ ಪಡೆದಿರುವ ಅಲ್ಲಿ ಅವರಿಗೆ ರನ್ ಗಳಿಸುವುದು ತೀರ ಸುಲಭ ಎನಿಸಿತ್ತು. ದಕ್ಷಿಣ ಅಫ್ರಿಕಾ ಹೊರತುಪಡಿಸಿ ಆ ಅಂಗಳದಲ್ಲಿ ಯಾವುದೇ ಪ್ರವಾಸಿ ತಂಡವನ್ನು ಭಾರತ ಎದುರಿಸಿದಾಗ ವಿವಿಎಸ್ ಯಶಸ್ವಿಯಾಗಿದ್ದಾರೆ ಎನ್ನುವುದನ್ನು ಮರೆಯುವಂತಿಲ್ಲ.ಈಡನ್ ಕ್ರೀಡಾಂಗಣದಲ್ಲಿರುವ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಕಚೇರಿಯ ಗೋಡೆಗಳಲ್ಲಿ ಲಕ್ಷ್ಮಣ್ ಅವರ ಸ್ಮರಣೀಯ ಇನಿಂಗ್ಸ್‌ನ ವಿಶಿಷ್ಟವಾದ ಕ್ಷಣಗಳ ಚಿತ್ರಗಳು ಈಗಲೂ ಅಲ್ಲಿಗೆ ಭೇಟಿ ನೀಡುವವರ ಕಣ್ಮನ ಸೆಳೆಯುತ್ತವೆ. ಕೋಲ್ಕತ್ತದ ಸ್ಥಳೀಯ ಕ್ರಿಕೆಟಿಗ ಸೌರವ್ ಗಂಗೂಲಿಗೆ ಯಾವ ಮಟ್ಟದ ಗೌರವ ಅಲ್ಲಿ ಸಿಕ್ಕಿದೆಯೋ ಅಷ್ಟೇ ಗೌರವವನ್ನು ಹೈದರಾಬಾದ್ ಬ್ಯಾಟ್ಸ್‌ಮನ್‌ಗೆ ನೀಡಲಾಗಿದೆ ಎನ್ನುವುದು ವಿಶೇಷ. ಇನಿಂಗ್ಸ್ ಮುಗಿಸಿಕೊಂಡು ಹಿಂದಿರುಗುವಾಗ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದ ಕ್ಷಣ ಎದ್ದು ಕಾಣಿಸುತ್ತದೆ.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.