ಬುಧವಾರ, ಮೇ 12, 2021
25 °C

ನೆನೆಗುದಿಯಲ್ಲಿ ಖಾಸಗಿ ಕಾರ್ಖಾನೆಗಳಲ್ಲಿ ಕಬ್ಬು ದರ ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಜಿಲ್ಲೆಯ ಖಾಸಗಿ ಸಕ್ಕರೆ ಕಾರ್ಖಾನೆಗಳಲ್ಲಿ ಪ್ರಸಕ್ತ ಹಂಗಾಮಿನಲ್ಲಿ ಪೂರೈಸುವ ಕಬ್ಬಿಗೆ ಬೆಲೆ ನಿಗದಿಸುವ ವಿಷಯ ಇನ್ನೂ ನೆನೆಗುದಿಯಲ್ಲಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯು ಯಾವುದೇ ತೀರ್ಮಾನವಿಲ್ಲದೆ ಅಂತ್ಯಗೊಂಡಿತು.ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಆಧರಿಸಿ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ, ಅವರು ಪ್ರಸಕ್ತ ಸಾಲಿಗೆ ಖಾಸಗಿ ಸಕ್ಕರೆ ಕಾರ್ಖಾನೆಗಳು ಮುಂಗಡ ಹಣವಾಗಿ ರೂ. 2000 ನೀಡಬೇಕು. ಕಳೆದಸಾಲಿನಲಿ ಪೂರೈಕೆ ಆಗಿರುವ ಕಬ್ಬಿಗೆ ಹೆಚ್ಚುವರಿಯಾಗಿ ರೂ. 100 ಕೊಡಬೇಕು ಎಂದು ಹಕ್ಕೊತ್ತಾಯವನ್ನು ಮಂಡಿಸಿದರು.ಮುಖಂಡರಾದ ಅಶೋಕ್, ನಂಜುಂಡೇಗೌಡ, ಕೋಣಸಾಲೆ ನರಸರಾಜು ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ್ದ ರೈತ ಪ್ರತಿನಿಧಿಗಳು ಇದಕ್ಕೆ ದನಿಗೂಡಿಸಿದರು.ಆದರೆ, ಖಾಸಗಿ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳನ್ನು ಪ್ರತಿನಿಧಿಸಿದ್ದ ಅಧಿಕಾರಿಗಳು ಇದಕ್ಕೆ ಸಕಾರಾತ್ಮಕವಾದ ಅಭಿಪ್ರಾಯಗಳನ್ನು ನೀಡಲಿಲ್ಲ.ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರು, ಪುಟ್ಟಣ್ಣಯ್ಯ ಅವರ ಒತ್ತಾಯವನ್ನು ಆಧರಿಸಿ, ಈ ಸಾಲಿಗೆ ಮುಂಗಡ ರೂ. 2000 ಮತ್ತುಕಳೆದ ಸಾಲಿಗೆ ಹೆಚ್ಚುವರಿಯಾಗಿ ರೂ. 100 ಕೊಡಬೇಕು ಎಂಬ ಬೇಡಿಕೆ ಇದೆ. ಹೆಚ್ಚುವರಿ ರೂ. 100 ಕೊಟ್ಟರೆ ಮೂರು ಖಾಸಗಿ ಕಾರ್ಖಾನೆಗಳಿಗೆ ಒಟ್ಟಾರೆ 23 ಕೋಟಿ ಆಗಬಹುದು.ಪ್ರತಿನಿಧಿಗಳು ಈ ಬಗೆಗೆ ಆಡಳಿತ ಮಂಡಳಿಗಳ ಜೊತೆಗೆ ಚರ್ಚಿಸಿ  ತೀರ್ಮಾನ ತಿಳಿಸಬೇಕು ಎಂದು ಹೇಳಿದರು.ಶಾಸಕ ಸುರೇಶ್‌ಗೌಡ ಅವರು, ಜಿಲ್ಲೆಯ ರೈತರು, ಜಿಲ್ಲಾಡಳಿತದ ಸಹಕಾರದಮೇಲೆ ನಡೆಯಬೇಕಾದ ಖಾಸಗಿ ಕಾರ್ಖಾನೆಗಳು ಈಗಿನ ಬೇಡಿಕೆಯಂತೆ ಹೆಚ್ಚುವರಿ ರೂ. 100 ಕೊಡಬೇಕು. ಇದು, ಕಾರ್ಖಾನೆಗಳಿಗೂ ಹೊರೆ ಆಗುವುದಿಲ್ಲ. ಈ ಬಗೆಗೆ ಶೀಘ್ರವಾಗಿ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು ಎಂದು ದನಿ ಗೂಡಿಸಿದರು.ಆಕ್ರೋಶ: ಆದರೆ, ಸಭೆಯಲ್ಲಿ ಆಡಳಿತ ಮಂಡಳಿಗಳನ್ನು ಪ್ರತಿನಿಧಿಸಿದ್ದ ಖಾಸಗಿ ಕಾರ್ಖಾನೆಗಳ ಪ್ರತಿನಿಧಿಗಳು ಏನೊಂದು ಮಾತನಾಡದೇ ಮೌನಕ್ಕೆ ಶರಣಾದ ಬಗೆಗೆ ರೈತರು, ಮುಖಂಡರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.ರೈತರ ಪರವಾಗಿ ಜಿಲ್ಲಾಡಳಿತ ಕರೆದಿರುವ ಈ ಸಭೆಗೆ ಕಾರ್ಖಾನೆಗಳ ಜವಾಬ್ದಾರಿಯುತ ಅಧಿಕಾರಿಗಲೇ ಬರಬೇಕು. ಆದರೆ, ಯಾವುದೇ  ತೀರ್ಮಾನ ಕೈಗೊಳ್ಳಲಾಗದ ಅಧಿಕಾರಿಗಳನ್ನು ಕಳುಹಿಸಿ ಅಪಮಾನ ಮಾಡಲಾಗಿದೆ ಎಂದು ನಂಜುಂಡೇಗೌಡ ಟೀಕಿಸಿದರು.ಅಶೋಕ್ ಅವರು, ಜಿಲ್ಲೆಯಲ್ಲಿ ಬೇಸಾದ ಅವಧಿಯೇ ಬೇರೆ. ಬರುವ ದಿನಗಳಲ್ಲಿ ಮಹಾಲಯ ಅಮಾವಾಸ್ಯೆ ಹಬ್ಬ ಎಂದು ರೈತರಿಗೆ ಆರ್ಥಿಕ ವೆಚ್ಚ ಅಗತ್ಯಗಳು ಇವೆ. ಸರ್ಕಾರ ಬೆಲೆ ನಿಗದಿಪಡಿಸುವವರೆಗೆ ಕಾಯದೇ ಒಂದು ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದೆ ಕಾನೂನು ಪರಿಸ್ಥಿತಿ ಹದಗೆಟ್ಟರೆ ಅದಕ್ಕೆ ಜಿಲ್ಲಾಡಳಿತ, ಸಕ್ಕರೆ ಕಾರ್ಖಾನೆಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.ರೈತರೊಬ್ಬರು, ಖಾಸಗಿ ಕಾರ್ಖಾನೆಗಳು ಬೆಲೆ ನಿಗದಿ ವಿಚಾರದಲ್ಲಿ ತ್ವರಿತ ತೀರ್ಮಾನ ಕೈಗೊಳ್ಳದೇ ರೈತರ ತಾಳ್ಮೆ ಪರೀಕ್ಷೆ ಮಾಡುತ್ತಿವೆ. ನಾವು ಇಂದು ತೀರ್ಮಾ ನ ಪ್ರಕಟಿಸುತ್ತಾರೆ; ನಾಳೆ ಪ್ರಕಟಿಸುತ್ತಾರೆ ಎಂದು ಕಾದಿದ್ದೇವೆ. ಇವರು ದಿನ ದೂಡುತ್ತಾ ರೈತರ ಭಾವನೆಗಳ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಹರಿಹಾಯ್ದರು.ಆದರೆ, ಖಾಸಗಿ ಕಾರ್ಖಾನೆಗಳನ್ನು ಪ್ರತಿನಿಧಿಸಿದ್ದ ಅಧಿಕಾರಿಗಳು ಮಾತ್ರ ಮೌನ ಮುರಿಯಲಿಲ್ಲ. ಆಡಳಿತ ಮಂಡಳಿಗಳಿಗೆ ಇಲ್ಲಿನ ಚರ್ಚೆಯನ್ನು ವಿವರಿಸುತ್ತೇವೆ ಎಂಬುದಷ್ಟಕ್ಕೇ ಅವರ ಪ್ರತಿಕ್ರಿಯೆ ಸೀಮಿತವಾಯಿತು.ಜಿಲ್ಲಾಧಿಕಾರಿಗಳು ಅಂತಿಮವಾಗಿ, ರೈತರ ಬೇಡಿಕೆ ಉಲ್ಲೇಖಿಸಿ, ಈ ಬಗೆಗೆ ಆಡಳಿತ ಮಂಡಳಿಗಳ ಜೊತೆಗೆ ಚರ್ಚಿಸಿ ತೀರ್ಮಾನ ಪ್ರಕಟಿಸಬೇಕು ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.