ಮಂಗಳವಾರ, ಮೇ 24, 2022
27 °C

ನೆಮ್ಮದಿ ಕೊಡದ ನೆಮ್ಮದಿ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪುರ: ಇಲ್ಲಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ `ನೆಮ್ಮದಿ~ ಕೇಂದ್ರವು ಅವ್ಯವಸ್ಥೆಯ ಆಗರವಾಗಿರುವುದರಿಂದ ಪಡಿತರ ಚೀಟಿ, ಆದಾಯ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ನಾಗರಿಕರು ಹಾಗೂ ವಿದ್ಯಾರ್ಥಿಗಳು ಪರಿಪಾಟಲು ಪಡುವಂತಾಗಿದೆ.`ನೆಮ್ಮದಿ~ ಕೇಂದ್ರದ ಎಡ ಬದಿಯಲ್ಲಿ ಪಡಿತರ ಚೀಟಿ, ಆದಾಯ ಪತ್ರ ಪಡೆಯಲು ನಾಗರಿಕರು ಉದ್ದನೆಯ ಸಾಲಿನಲ್ಲಿ ನಿಂತರೆ, ಬಲ ಬದಿಯಲ್ಲಿ ವಿದ್ಯಾರ್ಥಿಗಳು ಆದಾಯ ಮತ್ತು ಜಾತಿ ದೃಢೀಕರಣ ಪ್ರಮಾಣ ಪತ್ರ ಪಡೆಯಲು ಸರದಿಯಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ.ಒಂದೇ ಕಂಪ್ಯೂಟರ್ ಹಾಗೂ ಒಂದೇ ಕೌಂಟರ್ ತೆರೆದಿರುವುದು ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ.

`ಎರಡು ದಿನಗಳೊಳಗೆ ಕಾಲೇಜಿಗೆ ಆದಾಯ ದೃಢೀಕರಣ ಪತ್ರ ನೀಡದಿದ್ದರೆ ಪ್ರವೇಶಕ್ಕೆ ತೊಂದರೆಯಾಗುತ್ತದೆ. ತಹಶೀಲ್ದಾರ್ ಕೆಲಸದ ಮೇಲೆ ಹೊರ ಹೋಗಿದ್ದಾರಂತೆ. ನಾವು ಮುಂದೇನು ಮಾಡಬೇಕು ಗೊತ್ತಿಲ್ಲ~ ಎಂದು ವಿದ್ಯಾರ್ಥಿನಿ ಮಂಜುಳಾ ವಿಷಾದ ವ್ಯಕ್ತಪಡಿಸಿದರು.`ನಾನು ಆದಾಯ ದೃಢೀಕರಣ ಪತ್ರ ಪಡೆಯಲು ಬಂದಿದ್ದೆ. ಎಲ್ಲ ವಿವರ ಒಳಗೊಂಡ ಪತ್ರಗಳನ್ನು ಪ್ರಮಾಣೀಕರಿಸಿ ಅರ್ಜಿ ಸಲ್ಲಿಸಲು ನಿಂತಿದ್ದೆ. ಆದರೆ ನೂಕು ನುಗ್ಗಲಿನಿಂದ ಹಿಂದಕ್ಕೆ ಹೋಗುತ್ತಿದ್ದೇನೆ~ ಎಂದು ವಯೋವೃದ್ಧ ಮುನಿಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದರು. `ಯಾವುದೇ ನೆಮ್ಮದಿ ಕೇಂದ್ರಗಳಲ್ಲಿ ಅವಶ್ಯವಾದ ಪ್ರಮಾಣ ಪತ್ರಗಳನ್ನು ಪಡೆದು ಹಿಂದಿರುಗಲು ಸಾಧ್ಯವಿಲ್ಲ. ಅತ್ತಿಂದಿತ್ತ ಅಲೆದಾಟ, ಅವ್ಯವಸ್ಥೆ ಎದುರಾಗಿ ಯಾವ ಕೆಲಸಗಳೂ ಆಗುತ್ತಿಲ್ಲ~ ಎಂದು ಸಿದ್ದಪ್ಪ ಹೇಳಿದರು.

ಕೊನೆಗೆ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ನೆಮ್ಮದಿ ಕೇಂದ್ರದಲ್ಲಾದರೂ ಬೇಗ ಕೆಲಸವಾಗಿ ನೆಮ್ಮದಿಯಿಂದ ಮನೆಗೆ ಹೋಗಬಹುದೆಂದು ಭಾವಿಸಿ ನಿತ್ಯದ ಕೆಲಸಗಳನ್ನು ಬದಿಗೊತ್ತಿ ಬಂದರೆ ಇಲ್ಲೂ ಅದೇ ಗೋಳು~ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.