ಭಾನುವಾರ, ಜನವರಿ 19, 2020
28 °C

ನೆಲದೊಡಲು ಸೇರಿದ ನೇಗಿಲಯೋಗಿ

ಪ್ರಕಾಶ ಕುಗ್ವೆ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅವರದ್ದು ಸದಾ ಪ್ರಯೋಗ­ಶೀಲ ಮನಸ್ಸು. ತಮ್ಮ ಪ್ರಯೋಗಶೀಲತೆ­ಯಿಂದಾಗಿಯೇ ಕೃಷಿ ಕ್ಷೇತ್ರದಲ್ಲಿ ಹಲವು ದಾಖಲೆಗಳನ್ನು ಬರೆದರು. ಕೃಷಿಭೂಮಿ­ಯನ್ನೇ ತಮ್ಮ ಪ್ರಯೋಗದ ಕರ್ಮ­ಭೂಮಿ­ಯನ್ನಾಗಿಸಿಕೊಂಡು ಜಗತ್ತು ಬೆರಗಾಗುವ ಸಾಧನೆಗಳನ್ನು ಮಾಡಿ­ದರು.‘ಕೃಷಿ ಋಷಿ’ ಎಂದೇ ಪ್ರಸಿದ್ಧರಾಗಿದ್ದ ಡಿ.ಆರ್‌.ಪ್ರಫುಲ್ಲಚಂದ್ರ (80) ಕೆಲ ದಿನಗಳಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದು, ಬುಧವಾರ ಹೃದಯಾ­ಘಾತವಾಯಿತು.ಪ್ರಫುಲ್ಲಚಂದ್ರ ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಮಕ್ಕಳಾದ ಸವ್ಯಸಾಚಿ, ಇಕ್ಷುಧಾವ ಉನ್ನತ ಶಿಕ್ಷಣ ಪಡೆದುಕೊಂಡಿದ್ದರೂ ಕೃಷಿಯಲ್ಲೇ ಬದುಕು ಕಂಡುಕೊಂಡಿದ್ದು ಅಪ್ಪನ ಹಾದಿಯಲ್ಲೇ  ಮುಂದುವರಿದಿದ್ದಾರೆ.ಕುವೆಂಪು ‘ರಸ ಋಷಿ’ಯಾದರೆ, ದೇವಂಗಿ ಪ್ರಫುಲ್ಲಚಂದ್ರ ‘ಕೃಷಿ ಋಷಿ’. ಕುವೆಂಪು– ಪುಫುಲ್ಲಚಂದ್ರ ಅವರ ಸಂಬಂಧಿಕರು. ಪುಫುಲ್ಲಚಂದ್ರ ಅವರ ಅಕ್ಕ ಹೇಮಾವತಿ ಅವರನ್ನು ಕುವೆಂಪು ಮದುವೆಯಾಗಿದ್ದರು. ಪ್ರಫುಲ್ಲಚಂದ್ರ ಮತ್ತು ಪೂರ್ಣಚಂದ್ರ ತೇಜಸ್ವಿ (ಸೋದರ­ಮಾವ–ಅಳಿಯ) ಜತೆಗೂಡಿ ಮಾಡಿದ ಸಾಹಸಗಳು–ಪೈಪೋಟಿ­ಯಲ್ಲಿ ಮಾಡಿದ ಪ್ರಯೋಗಗಳು ಒಂದಲ್ಲ; ಎರಡಲ್ಲ.ತೀರ್ಥಹಳ್ಳಿಯ ದೇವಂಗಿಯಲ್ಲಿ 1934ರ ಅಕ್ಟೋಬರ್‌ 14ರಂದು ಜನಿಸಿದ ಪ್ರಫುಲ್ಲಚಂದ್ರ ಓದಿದ್ದು ಪಿಯು­ಸಿ­ವರೆಗೆ. ಆದರೆ, ಅವರ ಸಾಧನೆಗಳು ಯಾವ ವಿಶ್ವವಿದ್ಯಾಲಯದ ಕೆಲಸಗಳಿಗೆ ಕಡಿಮೆ ಇರಲಿಲ್ಲ. ಸುಭಾಷ್‌ ಪಾಳೇಕರ್‌ ಅವರ ನೈಸರ್ಗಿಕ ಕೃಷಿ, ಶೂನ್ಯ ಬಂಡವಾಳದ ಕೃಷಿ ಮತ್ತಿತರ ಮಾತುಗಳು ಈಗ ಚಾಲ್ತಿಯಲ್ಲಿವೆ. ಆದರೆ, ಇವುಗಳೆಲ್ಲವನ್ನೂ 70ರ ದಶಕದಲ್ಲೇ ಮೌನವಾಗಿ ಮಲೆನಾಡಿ­ನಲ್ಲಿ ಪ್ರಯೋಗ ಮಾಡುತ್ತಾ, ಯಶಸ್ಸು ಕಂಡವರು ಪ್ರಫುಲ್ಲಚಂದ್ರ.ಶಿವಮೊಗ್ಗ–ತೀರ್ಥಹಳ್ಳಿ ರಸ್ತೆಯಲ್ಲಿ ಶಿವಮೊಗ್ಗ ನಗರದಿಂದ 6 ಕಿ.ಮೀ.­ದೂರದಲ್ಲಿರುವ ‘ಕೃಷಿ ಸಂಪದ’, ಪ್ರಫುಲ್ಲ­ಚಂದ್ರರ ಎಲ್ಲಾ ಪ್ರಯೋಗಗಳ ಕೃಷಿ ಶಾಲೆ. ಸುಮಾರು 45 ಎಕರೆಯಲ್ಲಿ ಭತ್ತ, ತೆಂಗು, ಕಬ್ಬು, ಅಡಿಕೆ, ಕೊಕೊ, ಬಾಳೆ, ನೀಲಗಿರಿ, ಸಾಗುವಾನಿ, ವಿವಿಧ ರೀತಿಯ ಬಿದಿರು... ಏನಿಲ್ಲಾ ಇಲ್ಲಿ? ಇಲ್ಲಿಗೆ ಭೇಟಿ ಕೊಡದ ರೈತರಿಲ್ಲ; ವಿಜ್ಞಾನಿಗಳಿಲ್ಲ; ದೇಶ–ವಿದೇಶಗಳ ಗಣ್ಯ–ಮಾನ್ಯರ ಲೆಕ್ಕವಿಲ್ಲ. ಇದು ಈಗ ರೈತರ ಕೃಷಿ ಯಾತ್ರಾಸ್ಥಳವಾಗಿ ಮಾರ್ಪಟ್ಟಿದೆ.ಕೂಳೆ ಕಬ್ಬು ತಜ್ಞ: ಭತ್ತ, ಕಬ್ಬು, ಕೂಳೆ ಕಬ್ಬು ಬೆಳೆದು ಜಿಲ್ಲೆ, ರಾಜ್ಯ, ದೇಶ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲೂ ಹತ್ತಾರು ಬಾರಿ ಪ್ರಶಸ್ತಿ–ಪುರಸ್ಕಾ­ರ­ಗಳಿಗೆ ಪ್ರಫುಲ್ಲಚಂದ್ರ ಭಾಜನರಾ­ಗಿ­ದ್ದಾರೆ. ಸತತ 35 ಕೂಳೆ ಕಬ್ಬು ಬೆಳೆದು ಅಂತರರಾಷ್ಟ್ರೀಯ ಮಟ್ಟ­ದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯಿಂದ ಪುರಸ್ಕಾರ ಪಡೆದಿದ್ದು ದೊಡ್ಡ ಸಾಧನೆಯಾಗಿದೆ.ಇವರ ಕೃಷಿ ಸಾಧನೆ ಕಂಡ ಧಾರವಾಡ ಕೃಷಿ ವಿಶ್ವವಿದ್ಯಾಲಯ 1995ರಲ್ಲಿ ಗೌರವ ಡಾಕ್ಟರೇಟ್‌ ನೀಡಿತು. ಕೃಷಿಕರೊಬ್ಬರಿಗೆ ಗೌರವ ಡಾಕ್ಟರೇಟ್‌ ನೀಡಿದ್ದು ಅದೇ ಮೊದ­ಲೆಂದು ರಾಜ್ಯದಲ್ಲಿ ದಾಖಲಾಯಿತು. ತದನಂತರ 2012ರಲ್ಲಿ ಕುವೆಂಪು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿತು.  ಕೃಷಿ ಸಂಬಂಧಿಸಿದಂತೆ ಹಲವು ವಿಶ್ವವಿದ್ಯಾ­ಲಯಗಳಿಗೆ, ಸಂಸ್ಥೆಗಳಿಗೆ ಸಲಹೆಗಾರ­ರಾಗಿ, ಸದಸ್ಯರಾಗಿ ತಮ್ಮ ಸಲಹೆ–ಸೂಚನೆಗಳನ್ನು ನೀಡುತ್ತಾ ಬಂದಿದ್ದಾರೆ. ಇಷ್ಟಲ್ಲದೇ, ದೇಶ–ವಿದೇಶಗಳನ್ನು ಸುತ್ತಿ ತಮ್ಮ ಕೃಷಿ ಅನುಭವಗಳನ್ನು ಹಂಚಿ ಬಂದಿದ್ದಾರೆ.ಆವಿಷ್ಕಾರಗಳ ಸರಮಾಲೆ: ಪ್ರಫುಲ್ಲ­ಚಂದ್ರ ಅವರು, ಕೃಷಿಯಲ್ಲಿ ಶ್ರಮ ಕಡಿತಗೊಳಿಸುವ, ಭೂಮಿಯ ಸಹ­ಜತೆಗೆ ಪೂರಕವಾದ, ಒಟ್ಟಾರೆ ಸುಸ್ಥಿರ ಕೃಷಿ ಬದುಕಿಗೆ ಬೇಕಾದ ಕಂಡು ಹಿಡಿದ ಸಾಧನ–ಸಲಕರಣೆಗಳಿಗೆ ಲೆಕ್ಕವೇ ಇಲ್ಲ. ಅಡಿಕೆ ಬಾಯ್ಲರ್‌, ಅಡಿಕೆ ಡ್ರೈಯರ್, ಅಡಿಕೆ ಉದುರು ಮಾಡುವ ಯಂತ್ರ, ಮೂಟೆ ಸಾಗಿಸುವ ಜಾರು ಯಂತ್ರ, ಕಾಯಿ ಕೀಳುವ ಸುಲಭ ಸಾಧನ, ಫೋಸ್ಟ್‌ ಆಫೀಸ್‌ ಕಿಂಡಿ, ಎತ್ತಿನ ಬಂಡಿಯ ಸ್ವರೂಪ ಬದಲಾವಣೆ, ಟ್ರ್ಯಾಕ್ಟರ್‌ ಹಲವು ಮರುಜೋಡಣೆ ಹೀಗೆ ಒಂದೇ ಎರಡೇ. ಜತೆಗೆ ತ್ಯಾಜ್ಯವಸ್ತುಗಳ ಪುನರ್‌ ಬಳಕೆ, ಕಸವನ್ನು ಉತ್ಪಾದನಾ ರೂಪವನ್ನಾಗಿ ಪರಿವರ್ತಿಸುವ ವಿಧಾನ, ಸರ್ವರಿಗೂ ಮಾದರಿ.ಶಿಕಾರಿ ಅಭಿರುಚಿ: ಶಿಕಾರಿ ಮಾಡುವುದು ಅವರಿಗೆ ಅಚ್ಚುಮೆಚ್ಚಿನ ಹವ್ಯಾಸ­ವಾಗಿತ್ತು. ಕಾಡುಪ್ರಾಣಿಗಳನ್ನು ಅವರು ಮೋಜಿಗೆ ಬೇಟೆಯಾಡುತ್ತಿರಲಿಲ್ಲ. ಕಾಡು ಹಂದಿ ಬಿಟ್ಟು ಅವರು ಬೇರೆ ಯಾವ ಪ್ರಾಣಿ­ಯನ್ನೂ ಬೇಟೆಯಾಡುತ್ತಿರಲಿಲ್ಲ. ಹಂದಿಗಳು ನಮ್ಮ ಹೊಲ ನಾಶ ಮಾಡುತ್ತವೆ ಎಂದು ರಾಜ್ಯದ ಯಾವುದೋ ಮೂಲೆಯ ರೈತರು ಬಂದು ಇವರಲ್ಲಿ ಅಲವತ್ತುಕೊಂಡರೆ ತಮ್ಮ ನೆಚ್ಚಿನ ಜೀಪನ್ನು ಏರಿ, ಕೋವಿ ಹೆಗಲಿಗೆ ಹಾಕಿಕೊಂಡು ಹೊರಟು ಬಿಡುತ್ತಿದ್ದರು ಪುಫುಲ್ಲಚಂದ್ರ.ಭದ್ರಾ ಅರಣ್ಯ ವ್ಯಾಪ್ತಿಯಲ್ಲಿ ನರಭಕ್ಷಕ ಹುಲಿ ಸೇರಿಕೊಂಡಾಗ, ಪಾವಗಡದಲ್ಲಿ ತೋಳಗಳ ಹಾವಳಿ ಜಾಸ್ತಿಯಾದಾಗ ಪ್ರಫುಲ್ಲಚಂದ್ರ ಅವರಿಗೆ ಕರೆ ಬಂದಿತ್ತು.  ಪ್ರಾಣಿಪ್ರಿಯರೂ ಆಗಿದ್ದ ಇವರ ಮನೆ­ಯಲ್ಲಿ ಕಾಡು ಹಂದಿ ಸಾಕಿ­ದ್ದಾರೆ. ಅದಕ್ಕೆ ರಾಣಿ ಎಂಬ ಹೆಸರಿಟ್ಟು, ಮಾತನ್ನೂ ಕಲಿಸಿ­ದ್ದಾರೆ. ವಿವಿಧ ಜಾತಿಯ ನಾಯಿಗಳನ್ನೂ ಸಾಕಿದ್ದಾರೆ.‘ಸಾವಿಗೆ ಹೆದರಬಾರದು’

‘ಸಾಯುವ ಮೂರ್ನಾಲ್ಕು ದಿವಸದವರೆಗೂ ಪೋಕ್‌ಲೈನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸಾವಿಗೆ ಹೆದರಬಾರದು; ನಾನು ಸತ್ತರೆ ಸುಟ್ಟು ಬಿಡಿ’ ಎಂದು ಹೇಳಿದ್ದರು ಎಂದು ಮೊಮ್ಮಗ ಕೃತಾರ್ಥ ನೆನಪಿಸಿಕೊಳ್ಳುತ್ತಾರೆ.

‘ಅಜ್ಜನೇ ಗುರು. ಅವರ ದಿನಚರಿಯೇ ನಮಗೆಲ್ಲರಿಗೂ ಪಾಠ. ಅವರಿಲ್ಲದ್ದನ್ನು ಕಲ್ಪಿಸಿಕೊಳ್ಳುವುದಕ್ಕೂ ಕಷ್ಟವಾಗುತ್ತಿದೆ’ ಎಂದು ದುಃಖಿತರಾಗುತ್ತಾರೆ ಪಿಯುಸಿ ಓದುತ್ತಿರುವ ಕೃತಾರ್ಥ.‘ಆಳಾಗಿ ಕೆಲಸ’

‘ಅವರು ನಮ್ಮನ್ನು ಆಳಾಗಿ ನೋಡುತ್ತಿರಲಿಲ್ಲ; ಅವರೂ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದರು. ನಮ್ಮ ಕಷ್ಟ–ದುಃಖಗಳಿಗೆ ನೆರವಾಗುತ್ತಿದ್ದರು. ಅವರಿಲ್ಲದೆ ನಾವು ಹೇಗೆ ಕೆಲಸ ಮಾಡುವುದು?’ ಮಮ್ಮಲ ಮರುಗುತ್ತಾರೆ ಕೆಲಸದಾಳುಗಳು.ಇಂದು ಅಂತ್ಯಕ್ರಿಯೆ

ಡಿ.ಆರ್‌.ಪುಫುಲ್ಲಚಂದ್ರ ಅವರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 11ಕ್ಕೆ ‘ಕೃಷಿ ಸಂಪದ’ ತೋಟದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)