ಭಾನುವಾರ, ಫೆಬ್ರವರಿ 28, 2021
31 °C
ನೇಕಾರರಿಗೆ ತರಬೇತಿ, ಉದ್ಯೋಗಾವಕಾಶ ಕಲ್ಪಿಸುವ ಯೋಜನೆ

ನೇಕಾರಿಕೆ ಉತ್ತೇಜಿಸುವ ವಿದ್ಯುತ್‌ ಮಗ್ಗ ಸಂಕೀರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೇಕಾರಿಕೆ ಉತ್ತೇಜಿಸುವ ವಿದ್ಯುತ್‌ ಮಗ್ಗ ಸಂಕೀರ್ಣ

ಯಾದಗಿರಿ: ಹತ್ತಿ ಬೆಳೆಯ ಕ್ಷೇತ್ರ ಹೆಚ್ಚುತ್ತಿದ್ದಂತೆಯೇ ಜಿಲ್ಲೆಯಲ್ಲಿ ಹತ್ತಿಗೆ ಸಂಬಂಧಿಸಿದ ಉದ್ಯಮಗಳು ತಲೆ ಎತ್ತುತ್ತಿವೆ. ತಾಲ್ಲೂಕಿನ ಕಡೇಚೂರು–ಬಾಡಿಯಾಳ ಗ್ರಾಮದಲ್ಲಿ ಅಂತರ ರಾಷ್ಟ್ರೀಯ ಜವಳಿ ಪಾರ್ಕ್‌ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು, ಇದಕ್ಕೆ ಪೂರಕವಾಗಿ ಈಗಾಗಲೇ ತಾಲ್ಲೂಕಿನ ಬಂದಳ್ಳಿಯಲ್ಲಿ ಹೈಟೆಕ್‌ ಜವಳಿ ತರಬೇತಿ ಕೇಂದ್ರದ ಸ್ಥಾಪನೆ ಮಾಡಲಾಗಿದೆ.ಇದೀಗ ತಾಲ್ಲೂಕಿನ ಗುರುಮಠ ಕಲ್‌ನಲ್ಲಿ ಅತ್ಯಾಧುನಿಕ ವಿದ್ಯುತ್‌ ಮಗ್ಗ ಸಂಕೀರ್ಣ ಹಾಗೂ ನೇಕಾರರ ಕಾಲೋನಿ ಸ್ಥಾಪಿಸಲು ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಯೋಜನೆ ರೂಪಿಸ ಲಾಗಿದ್ದು, ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ.ವಿದ್ಯುತ್ ಮಗ್ಗ ನೇಕಾರರು ಹಾಗೂ ಕೈಮಗ್ಗ ನೇಕಾರರ ಉತ್ಪಾದನಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಅತ್ಯಾಧುನಿಕ 64 ವಿದ್ಯುತ್ ಮಗ್ಗಗಳ ಸಂಕೀರ್ಣ ಇದಾಗಿದ್ದು, ₹ 5.30 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.ಗುರುಮಠಕಲ್‌ ಪಟ್ಟಣದಲ್ಲಿ 2 ಎಕರೆ ಜಮೀನನ್ನು ಖರೀದಿಸಿ, ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿದೆ.

ವಿದ್ಯುತ್‌ ಮಗ್ಗ ಸಂಕೀರ್ಣದ ಕಟ್ಟಡ, ತರಬೇತಿ ಕೇಂದ್ರ ಮತ್ತು ಸಾಮಾನ್ಯ ಸೌಲಭ್ಯ ಕಟ್ಟಡವನ್ನು ₹ 1.80 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಅಲ್ಲದೇ 64 ವಿದ್ಯುತ್‌ ಮಗ್ಗ ಮತ್ತು ಮಗ್ಗ ಪೂರ್ವ ಯಂತ್ರೋಪಕರಣಗಳ ಖರೀದಿಗಾಗಿ ₹3 ಕೋಟಿ ಮೀಸಲಿಡಲಾಗಿದೆ.100 ಜನರಿಗೆ ತರಬೇತಿ: ವಿದ್ಯುತ್‌ ಮಗ್ಗ ಸಂಕೀರ್ಣದಲ್ಲಿ 100 ಜನರಿಗೆ ವಿದ್ಯುತ್‌ ಮಗ್ಗೆ ನೇಯ್ಗೆ ತರಬೇತಿ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ತರಬೇತಿ ಪಡೆದ ನೇಕಾರರಿಗೆ ಅಲ್ಲಿಯೇ ಉದ್ಯೋಗ ಅವಕಾಶವನ್ನು ಒದಗಿಸಲಾ ಗುತ್ತಿದೆ.

64 ವಿದ್ಯುತ್ ಮಗ್ಗ ಮತ್ತು ಮಗ್ಗ  ಪೂರ್ವ ಯಂತ್ರೋಪಕರಣಗಳನ್ನು 4 ಶೆಡ್‌ಗಳಲ್ಲಿ ಅಳವಡಿಸಲಾಗುತ್ತಿದೆ. ನೇಕಾರರ ಉತ್ಪಾದನಾ ಚಟುವಟಿಕೆಗ ಳಿಗೆ ಹಾಗೂ ವಿಶೇಷವಾಗಿ ಸಿದ್ಧಉಡುಪು ತಯಾರಿಕೆ ಸೇರಿದಂತೆ ಅವಶ್ಯಕ ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ನಿರ್ಧರಿಸಲಾಗಿದೆ.ಉತ್ಪಾದನಾ ಚಟುವಟಿಕೆಗಳಿಗಾಗಿ ನೇಕಾರರು ಮುಂದೆ ಬಂದಲ್ಲಿ, ಈ ವಿದ್ಯುತ್‌ ಮಗ್ಗಗಳನ್ನು ಬಾಡಿಗೆ ಆಧಾರ ದಲ್ಲಿ ನೀಡಲಾಗುತ್ತದೆ. ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಬಟ್ಟೆ ಉತ್ಪಾದನೆ ಹಾಗೂ ಮಾರಾಟ ವ್ಯವಸ್ಥೆಯನ್ನು ನೇಕಾರರೇ ಮಾಡಿಕೊಳ್ಳಬೇಕಾಗುತ್ತದೆ.

ನೇಕಾರರ ಕಾಲೊನಿ: ಇದೇ ಪ್ರದೇಶದಲ್ಲಿ ಒಂದು ಎಕರೆ ಜಮೀನಿನಲ್ಲಿ ನೇಕಾರರ ಕಾಲೊನಿ ನಿರ್ಮಿಸಲು ಉದ್ದೇಶಿಸಲಾ ಗಿದೆ.ನಿವೇಶನರಹಿತ ವಿದ್ಯುತ್ ಮಗ್ಗ ನೇಕಾರರಿಗೆ ವಸತಿ ಕಾರ್ಯಾಗಾರ ನಿರ್ಮಿಸಿಕೊಳ್ಳಲು 25 ನಿವೇಶನಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. 30 ವರ್ಷಗಳ ಲೀಸ್ ಆಧಾರದ ಮೇಲೆ ಈ ನಿವೇಶನಗಳನ್ನು ನೇಕಾರರಿಗೆ ಹಂಚಿಕೆ ಮಾಡಲಾಗುತ್ತದೆ.ಈ ಕಾಲೊನಿಯಲ್ಲಿ ನೇಕಾರರು 400 ಚದುರ ಅಡಿ ಅಳತೆಯ ವಸತಿ ಕಟ್ಟಡ ನಿರ್ಮಿಸಿಕೊಳ್ಳಲು ಘಟಕದ ವೆಚ್ಚ ₹ 2 ಲಕ್ಷ ಸಾಲ ಹಾಗೂ ಸಹಾಯಧನವನ್ನು ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಒದಗಿಸಲಾಗುತ್ತದೆ.ಎಚ್‌ಕೆಆರ್‌ಡಿಬಿಯಿಂದ ₹ 3 ಕೋಟಿ: ಗುರುಮಠಕಲ್‌ನಲ್ಲಿ ಸ್ಥಾಪಿಸಲಾಗುತ್ತಿ   ರುವ ವಿದ್ಯುತ್ ಮಗ್ಗ ಸಂಕೀರ್ಣ ಮತ್ತು ನೇಕಾರರ ಕಾಲೊನಿಗೆ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯಿಂದ ₹ 3 ಕೋಟಿ ಅನುದಾನ ನೀಡ ಲಾಗಿದೆ.

ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ ರಾಜ್ಯ ಸರ್ಕಾರ ₹2 ಕೋಟಿ ಮಂಜೂರು ಮಾಡಿದ್ದು, ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ದಿಂದ ₹30 ಲಕ್ಷ ವಿನಿಯೋಗಿ ಸಲಾಗುತ್ತಿದೆ.ಒಟ್ಟಾರೆ ₹5.30 ಕೋಟಿ ವೆಚ್ಚದಲ್ಲಿ ಭೂಮಿ ಖರೀದಿ, ಭೂ ಅಭಿವೃದ್ಧಿ ಮತ್ತು ಸಂರಕ್ಷಣೆ, 64 ವಿದ್ಯುತ್ ಮಗ್ಗಗಳು ಹಾಗೂ ಯಂತ್ರೋಪಕರಣ ಖರೀದಿ, ಕಟ್ಟಡ ನಿರ್ಮಾಣ, ಸಾಮಾನ್ಯ ಸೌಲಭ್ಯ ಕೇಂದ್ರ, ಸಂಶೋಧನಾ ಕೇಂದ್ರ, ತರಬೇತಿ ಕೇಂದ್ರ, ಮಗ್ಗ ಪೂರ್ವ ಸೌಲಭ್ಯ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.‘ಜಿಲ್ಲೆಯಲ್ಲಿ ಈಗಾಗಲೇ ಜವಳಿ ಪಾರ್ಕ್‌ ಸ್ಥಾಪನೆ ಪ್ರಕ್ರಿಯೆ ಪ್ರಾರಂಭ ವಾಗಿದೆ. ಇದಕ್ಕೆ ಪೂರಕವಾಗಿ ಜವಳಿ ತರಬೇತಿ ಕೇಂದ್ರದ ಕಾಮಗಾರಿಯನ್ನು ಆರಂಭಿಸಲಾಗಿದೆ. ಇದೀಗ ಇಲಾಖೆ ಯಿಂದ ಗುರುಮಠಕಲ್‌ನಲ್ಲಿ ವಿದ್ಯುತ್‌ ಮಗ್ಗ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ’ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಅಜಿತ ನಾಯಕ ಹೇಳುತ್ತಾರೆ.* ಜಿಲ್ಲೆಯಲ್ಲಿ ಜವಳಿ ಉದ್ಯಮಗಳ ಸ್ಥಾಪನೆಗೆ ಪೂರಕ ವಾತಾವರಣವಿದ್ದು, ಸರ್ಕಾರದ ವಿಶೇಷ ಕಾಳಜಿಯಿಂದ ಅನೇಕ ಸೌಲಭ್ಯ ನೀಡಲಾಗುತ್ತಿದೆ.

-ಬಾಬುರಾವ ಚಿಂಚನಸೂರ

ಜವಳಿ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.