ಶುಕ್ರವಾರ, ಮೇ 7, 2021
25 °C

ನೇರ ತೆರಿಗೆ ಹೆಚ್ಚಳ: ಪ್ರಣವ್ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ದೇಶದಲ್ಲಿ ಪ್ರಸ್ತುತ ಸಂಗ್ರಹವಾಗುವ ತೆರಿಗೆಯಲ್ಲಿ ಶೇ 60ರಷ್ಟು ನೇರ ತೆರಿಗೆ. ಮುಂದಿನ ದಿನಗಳಲ್ಲಿ ನೇರ ತೆರಿಗೆ ಪ್ರಮಾಣ ಇನ್ನಷ್ಟು ಹೆಚ್ಚುವ ವಿಶ್ವಾಸವಿದೆ~ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸಂತಸ ವ್ಯಕ್ತಪಡಿಸಿದರು.ಜಾಲಹಳ್ಳಿ ಎಚ್‌ಎಂಟಿ ಕೈ ಗಡಿಯಾರದ ಕಂಪೆನಿ ಬಳಿ ಭಾನುವಾರ ಸಂಜೆ ನೇರ ತೆರಿಗೆಗಳ ಪ್ರಾದೇಶಿಕ ತರಬೇತಿ ಸಂಸ್ಥೆ ಉದ್ಘಾಟಿಸಿ ಅವರು ಮಾತನಾಡಿ, `ಭವಿಷ್ಯದಲ್ಲಿ ನೇರ ತೆರಿಗೆ ಪ್ರಮಾಣ ಹೆಚ್ಚಲಿದೆ ಎಂದು ಕೆಲವು ವರ್ಷಗಳ ಹಿಂದೆಯೇ ಊಹಿಸಿದ್ದೆ. ಅದೀಗ ನಿಜವಾಗುತ್ತಿದೆ~ ಎಂದು ಅವರು ಸಂತಸ ವ್ಯಕ್ತಪಡಿಸಿದರು.`ಸ್ವಾತಂತ್ರ್ಯ ಸಿಕ್ಕಿದ ವರ್ಷವೇ ಬಜೆಟ್ ಮಂಡನೆ ಮಾಡಿದ ಹೆಗ್ಗಳಿಕೆ ಉಳ್ಳ ರಾಷ್ಟ್ರ ಭಾರತ. ಪ್ರಥಮ ಹಣಕಾಸು ಸಚಿವ ಷಣ್ಮುಗಂ ಶೆಟ್ಟಿ ಬಜೆಟ್ ಮಂಡನೆ ಮಾಡಿದಾಗ ತೆರಿಗೆ ಪ್ರಮಾಣ ರೂ 116 ಕೋಟಿ ಇತ್ತು. ಬಳಿಕ ವರ್ಷಗಳಲ್ಲಿ ತೆರಿಗೆ ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ~ ಎಂದರು.`ಜಾಗತೀಕರಣದಿಂದ ಲಾಭವೂ ಇದೆ, ಸಮಸ್ಯೆಗಳೂ ಇವೆ. ಎಲ್ಲ ದೇಶಗಳು ಈ ಸಮಸ್ಯೆ ಎದುರಿಸುತ್ತಿವೆ. ಹೊಸ ಮಾದರಿಯ ತೆರಿಗೆ ಪದ್ಧತಿ ಅನುಷ್ಠಾನ ವೇಳೆಗೆ ತಂತ್ರಜ್ಞರ ಸಹಕಾರ ಅಗತ್ಯವಾಗಿ ಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಯ ಮೌಲ್ಯಮಾಪನಾ ಅಧಿಕಾರಿಗಳು ಎಂಥ ಸಮಸ್ಯೆಗಳನ್ನೂ ಎದುರಿಸುವಂತಹ ಛಾತಿ ಉಳ್ಳವರು. ತೆರಿಗೆ ಸಂಗ್ರಹದ ನ್ಯೂನತೆಗಳನ್ನು ಸರಿಪಡಿಸಿ ಅಧಿಕ ಪ್ರಮಾಣದ ತೆರಿಗೆ ಸಂಗ್ರಹಕ್ಕೆ ಜನರ ಸಹಕಾರ ಅಗತ್ಯ~ ಎಂದು ಅವರು ಹೇಳಿದರು.`ಇಲ್ಲಿನ ಕೇಂದ್ರ ಜಾಗತಿಕ ಗುಣಮಟ್ಟದಿಂದ ಕೂಡಿದೆ. ವಿಸ್ತರಿಸಿ ಜಾಗತಿಕ ತರಬೇತಿ ಕೇಂದ್ರವನ್ನಾಗಿ ಪರಿವರ್ತಿಸಲು ಭೂಸ್ವಾಧೀನ ಸೇರಿದಂತೆ ಅಗತ್ಯ ನೆರವುಗಳನ್ನು ನೀಡಲು ಕೇಂದ್ರ ಸರ್ಕಾರ ಬದ್ಧ~ ಎಂದು ಅವರು ಭರವಸೆ ನೀಡಿದರು.`ತಾಂತ್ರಿಕವಾಗಿ ತರಬೇತಿ ಪಡೆದ ಸದೃಢ ಯುವಜನರು ಶಿಕ್ಷಣ ಪಡೆದು ಕಾಲೇಜುಗಳಿಂದ ಹೊರಬರುತ್ತಿದ್ದಾರೆ. ದೇಶದಲ್ಲಿ ವಿಶ್ವದರ್ಜೆಯ ತರಬೇತಿ ಕೇಂದ್ರಗಳು ಇವೆ. ವಿದೇಶಿಯರು ಇಲ್ಲಿಗೆ ತರಬೇತಿ ಪಡೆಯಲು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ತರಬೇತಿ ಪಡೆಯುವುದು ವಿದೇಶಿಯರಿಗೆ ಹೆಗ್ಗಳಿಕೆಯ ವಿಚಾರವಾಗಲಿದೆ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಬೆಂಗಳೂರಿನ ನೇರ ತೆರಿಗೆಗಳ ಪ್ರಾದೇಶಿಕ ತರಬೇತಿ ಸಂಸ್ಥೆ ಆಯುಕ್ತರಾದ ಜಹಾನ್‌ಜೆಬ್ ಅಕ್ತರ್ ಮಾತನಾಡಿ, `ರೂ 30 ಕೋಟಿ ವೆಚ್ಚದಲ್ಲಿ ಈ ಕ್ಯಾಂಪಸ್ ನಿರ್ಮಾಣವಾಗಿದೆ. ಪ್ರಸ್ತುತ ಕ್ಯಾಂಪಸ್ ಮೂರು ಎಕರೆಯಲ್ಲಿದೆ.ಅಂತರರಾಷ್ಟ್ರೀಯ ಮಟ್ಟದ ತರಬೇತಿ ಕೇಂದ್ರದ ನಿರ್ಮಾಣಕ್ಕೆ 20 ಎಕರೆ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ವಿಶ್ವದರ್ಜೆ ಗುಣಮಟ್ಟದಿಂದ ಕೂಡಿದ್ದು, ಕ್ಯಾಂಪಸ್ ಪರಿಸರ ಸ್ನೇಹಿಯಾಗಿದೆ. ವೃತ್ತಿಪರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ~ ಎಂದರು.ನೇರ ತೆರಿಗೆಯ ಕೇಂದ್ರೀಯ ಮಂಡಳಿ ಮುಖ್ಯಸ್ಥ ಲಕ್ಷ್ಮಣ್ ದಾಸ್, ನಾಗ್ಪುರದ ನೇರ ತೆರಿಗೆಗಳ ರಾಷ್ಟ್ರೀಯ ಅಕಾಡೆಮಿ ಮಹಾ ನಿರ್ದೇಶಕ ಡಿ.ಎಸ್.ಸಕ್ಸೇನಾ, ಬೆಂಗಳೂರಿನ ನೇರ ತೆರಿಗೆ ಮಂಡಳಿ ಮುಖ್ಯ ಆಯುಕ್ತ ಜೆ.ಕೆ. ಹೋತಾ ಮತ್ತಿತರರಿದ್ದರು.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.