ಬುಧವಾರ, ಏಪ್ರಿಲ್ 14, 2021
32 °C

ನೈತಿಕ ಅಧಃಪತನ: ಚಂಪಾ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಮನುಷ್ಯನ ದಾಹ ಹೆಚ್ಚುತ್ತಿರುವುದರಿಂದ ಸಮಾಜದಲ್ಲಿ ನೈತಿಕ ಅಧಃಪತನವಾಗುತ್ತಿದೆ ಎಂದು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ತೀವ್ರ ಕಳವಳ ವ್ಯಕ್ತಪಡಿಸಿದರು.ನಗರದ ರೈತ ಸಭಾಂಗಣದಲ್ಲಿ ಕರ್ನಾಟಕ ಸಂಘದ ವತಿಯಿಂದ ಸೋಮವಾರ ನಡೆದ ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿಯನ್ನು ಪ್ರಗತಿಪರ ರೈತ ಎ.ಪಿ. ದೊಡ್ಡಲಿಂಗೇಗೌಡ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಸ್ವಾವಲಂಬನೆ ಸಾಧಿಸಬೇಕು. ಸಮಾಧಾನದಿಂದ ಇರಬೇಕು. ಆಗ ಮಾತ್ರ ಬದುಕು ಹಸನಾಗುತ್ತದೆ. ರೈತರು ಆತ್ಮಹತ್ಯೆ ನಿರ್ಧಾರದಿಂದ ದೂರ ಉಳಿಯಬಹುದು ಎಂದರು.ಭೂಮಿಗೆ ಜಾತಿ ಇಲ್ಲ. ರೈತ ಎಲ್ಲರಿಗೂ ಅನ್ನದಾತನಾಗಿದ್ದಾನೆ. ಆತ ನೆಮ್ಮದಿಯಿಂದ ಇದ್ದಾಗ ಮಾತ್ರ ನಾವೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ. ಕೆಲಸ ಯಾವುದೇ ಇರಲಿ, ಅದರಲ್ಲಿ ಕೌಶಲ್ಯವನ್ನು ಸಾಧಿಸಬೇಕು. ಆಗ ಸಾಧನೆ ಸಾಧ್ಯವಾಗುತ್ತದೆ ಎಂದು ಹೇಳಿದರು.ಇಂದಿನ ರಾಜಕಾರಣವು ಜಾತೀಕಾರಣವಾಗಿದೆ. ಇಂದಿನ ಪರಿಸ್ಥಿತಿಗೆ ರಾಜಕಾರಣಿಗಳು ಹಾಗೂ ಧರ್ಮ ಗುರುಗಳು ಕಾರಣರಾಗಿದ್ದಾರೆ. ಇದನ್ನು ಸರಿಪಡಿಸುವ ಕುರಿತು ಚಿಂತನೆ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.ಪ್ರಶಸ್ತಿ ಸ್ವೀಕರಿಸಿದ ಎ.ಪಿ. ದೊಡ್ಡಲಿಂಗೇಗೌಡ ಮಾತನಾಡಿ, ಭೂಮಿಯಲ್ಲಿ ಸಿಗುವ ನೆಮ್ಮದಿಯನ್ನು ಬಿಟ್ಟು, ನೆಮ್ಮದಿಯನ್ನು ಹುಡುಕಿಕೊಂಡು ರೈತರು, ರೈತರ ಮಕ್ಕಳು ಪಟ್ಟಣಕ್ಕೆ ಹೋಗುತ್ತಿದ್ದಾರೆ. ಕಷ್ಟ ಪಟ್ಟರೆ ಕೃಷಿಯಲ್ಲಿಯೂ ಲಾಭವಿದೆ ಎಂದರು.ಅತಿಯಾಸೆಯನ್ನು ಬಿಡಬೇಕು. ಇದ್ದುದರಲ್ಲಿ ನೆಮ್ಮದಿ ಯಿಂದ ಬದುಕುವುದನ್ನು ಕಲಿಯಬೇಕು. ಕುಟುಂಬ ದೊಂದಿಗೆ ಸಂತಸದಿಂದ ಬದುಕುತ್ತಿದ್ದೇನೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಹ.ಕ. ರಾಜೇಗೌಡ ಮಾತನಾಡಿ, ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ರೈತರೇ ಖುದ್ದಾಗಿ ಹೊಲದಲ್ಲಿ ಕೆಲಸ ಮಾಡಿದರೆ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಬಿ. ರಾಮಕೃಷ್ಣ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.