ಸೋಮವಾರ, ಮಾರ್ಚ್ 1, 2021
24 °C

ನೈತಿಕ ಮೌಲ್ಯಗಳ ಕುಸಿತಕ್ಕೆ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೈತಿಕ ಮೌಲ್ಯಗಳ ಕುಸಿತಕ್ಕೆ ಕಳವಳ

ಬೆಂಗಳೂರು: ‘ಸಮಾಜದಲ್ಲಿ ನೈತಿಕ ಮೌಲ್ಯ­ಗಳು ಕುಸಿಯುತ್ತಿದ್ದು, ಪೋಷಕರೇ ಮಕ್ಕಳ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ಸಾಹಿತಿ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ ಆತಂಕ ವ್ಯಕ್ತಪಡಿಸಿದರು.ಅನಕೃ ಕನ್ನಡ ಸಂಘವು ಭಾನುವಾರ ಏರ್ಪಡಿಸಿದ್ದ ಡಾ.ಎಂ.ಚಿದಾನಂದ­ಮೂರ್ತಿ, ಡಾ.ಸಾ.ಶಿ. ಮರುಳಯ್ಯ ಮತ್ತು ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.‘ತಮ್ಮ ಮಕ್ಕಳು ಏನು ಮಾಡಿದರೂ ಅಡ್ಡಿಯಿಲ್ಲ, ಹಣ ಸಂಪಾದಿಸಿದರೆ ಸಾಕು ಎಂದು ಪೋಷಕರೇ ಹರಸುತ್ತಿದ್ದಾರೆ. ಇದರಿಂದಲೇ ನಡೆಯಬಾರದ್ದು ನಡೆ­ಯುತ್ತಿವೆ, ಆಗಬಾರದ್ದು ಆಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.‘ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರೇ ಪರೀಕ್ಷಾ ಅಕ್ರಮಕ್ಕೆ ಪ್ರೋತ್ಸಾಹ ನೀಡು­ತ್ತಿರುವುದನ್ನು ನೋಡಿದರೆ ನೈತಿಕ ಮೌಲ್ಯ­ಗಳ ಸ್ಥಿತಿ ಏನೆಂದು ತಿಳಿಯುತ್ತದೆ. ದಾಕ್ಷಿಣ್ಯವೇ  ನೈತಿಕತೆಗೆ ಅಡಚಣೆ ಉಂಟು ಮಾಡುತ್ತದೆ. ಹೀಗಾಗಿ ಅವ್ಯವ­ಹಾರ­ವನ್ನು ಎಡಗಾಲ ಮೆಟ್ಟಿನಿಂದ ಹೊಡೆ­ಯುವ ಸ್ಥೈರ್ಯ ಜನರಲ್ಲಿ ಕಾಣುತ್ತಿಲ್ಲ’ ಎಂದರು.ಡಾ.ಎಂ.ಚಿದಾನಂದಮೂರ್ತಿ, ಡಾ. ಸಾ.ಶಿ.ಮರುಳಯ್ಯ ಮತ್ತು ಪ್ರೊ. ಜಿ.ಎಸ್.­ಸಿದ್ಧಲಿಂಗಯ್ಯ ಅವರಿಗೆ 84 ವರ್ಷ ತುಂಬಿದ ಸಂಭ್ರಮಕ್ಕಾಗಿ   ಕಾರ್ಯಕ್ರಮ­-ದಲ್ಲಿ ಅವರನ್ನು ಅಭಿನಂದಿಸಲಾಯಿತು.ಡಾ.ಎಂ. ಚಿದಾನಂದಮೂರ್ತಿ ಅವರನ್ನು ಕುರಿತು ಮಾತನಾಡಿದ ಚಿಂತಕ ರಾ.ನಂ.ಚಂದ್ರಶೇಖರ್, ‘ಅನಕೃ ಮತ್ತು ಚಿದಾನಂದಮೂರ್ತಿ ಅವರ ನಡುವೆ ಒಂದು ಸಾಮ್ಯತೆಯಿದೆ. ಇಬ್ಬರೂ ಕನ್ನಡಕ್ಕಾಗಿ ಚಳವಳಿಯ ಮಾರ್ಗ ಹಿಡಿದು ಹಲವು ಚಳವಳಿಗಳನ್ನು ಮುನ್ನಡೆಸಿದ ಹೋರಾಟಗಾರರು’ ಎಂದರು.ಸಹಕಾರ ಇಲಾಖೆ ಕಾರ್ಯದರ್ಶಿ ಡಾ.ಸಿ.ಸೋಮಶೇಖರ್ ಮಾತನಾಡಿ, ‘ಕನ್ನಡಿಗರಲ್ಲಿ ಕನ್ನಡಕ್ಕಾಗಿ ಹೋರಾಡುವ  ಮನೋಭಾವ ಕಾಣೆಯಾಗುತ್ತಿದೆ. ಹಿಂದಿನವರ ಹೋರಾಟದಿಂದಲೇ ಕನ್ನಡ ಇಂದಿಗೂ ಉಳಿದಿದೆ’ ಎಂದರು.ಕನ್ನಡದ ಹೋರಾಟಕ್ಕಾಗಿ ನಾಲ್ಕು ದಶಕಗಳಿಂದ ಶ್ರಮಿಸುತ್ತಿರುವ ರಾ. ವಿಜಯ ಸಮರ್ಥ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.