ಶುಕ್ರವಾರ, ಜೂನ್ 25, 2021
27 °C

ನೌಕಾನೆಲೆ ಸಮುದ್ರ ಗಡಿ ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಸಮುದ್ರದಲ್ಲಿ ಗಸ್ತು ನಡೆ ಸುತ್ತಿರುವ ಇಲ್ಲಿಯ `ಕದಂಬ~ ನೌಕಾ ನೆಲೆ ಸಿಬ್ಬಂದಿ ಮತ್ತು ಮೀನುಗಾರರ ಮಧ್ಯೆ ಗಡಿವಿಷಯವಾಗಿ ಪದೇಪದೇ ವಿವಾದಗಳು ಉದ್ಭವಿಸುತ್ತಿರುವ ಹಿನ್ನೆಲೆ ಯಲ್ಲಿ ಜಿಲ್ಲಾಡಳಿತ, ನೌಕಾನೆಲೆ, ಕಡಲ್ಗಾವಲು ಪಡೆ ಅಧಿಕಾರಿಗಳು ಮತ್ತು ಮೀನುಗಾರರ ಮುಖಂಡರು ಬುಧವಾರ ನೌಕಾನೆಲೆಯ ಗಡಿಯ ಬಗ್ಗೆ ಸಮೀಕ್ಷೆ ನಡೆಸಿದರು.ಬಂದರು ಇಲಾಖೆಗೆ ಸೇರಿದ ಟಗ್‌ನಲ್ಲಿ ಮೊಗ್ರಾರ್‌ನಿಂದ ಕೊಡಾರ್ ವರೆಗೆ ಸಮೀಕ್ಷೆ ನಡೆಸಿದರು. ಬೈತಖೋಲ ಮೀನುಗಾರಿಕೆ ದೋಣಿಗಳು ಬೇಲೆಕೇರಿ ಅಥವಾ ಬೇಲೆಕೇರಿ ದೋಣಿಗಳು ಬೈತ ಖೋಲ ಬಂದರಿಗೆ  ಬರಬೇಕಾದರೆ ಮೊಗ್ರಾರ್ (ಎರಡು ದ್ವೀಪಗಳ ನಡುವಿನ ಪ್ರದೇಶ) ಮಾರ್ಗದ ಮೂಲಕವೇ ಸಂಚರಿಸಬೇಕು. ಈ ಮಾರ್ಗವನ್ನು ನೌಕಾನೆಲೆಯ ನಿಯಂತ್ರಿತ ಪ್ರದೇಶವೆಂದು ಘೋಷಣೆ ಮಾಡಿರುವ ಬಗ್ಗೆ ಮೀನುಗಾರರ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.`ನೀವು ಇಲ್ಲಿ ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸುವುದಿಲ್ಲ. ಆದರೂ ಇದನ್ನು ನಿಯಂತ್ರಿತ ವಲಯ ಎಂದು ಘೋಷಿಸಲು ಕಾರಣವೇನು?. ಅಲೆತಡೆಗೋಡೆಯ ವರೆಗೆ ನಿಮ್ಮ ವ್ಯಾಪ್ತಿ ಇರುವುದನ್ನು ನಾವು ಒಪ್ಪುತ್ತೇವೆ ಅದರ ಗಡಿಯಾಚೆ ನಾವು ಮೀನುಗಾರಿಕೆ ನಡೆಸಿದರೆ ನಿಮಗೇನು ತೊಂದರೆ. ಯುದ್ಧನೌಕೆಗಳು ಸಂಚರಿಸುವ ದಾರಿ ಯಲ್ಲಿ ನಾವು ಯಾವುದೇ ರೀತಿಯ ಮೀನುಗಾರಿಕೆ ಮಾಡುವುದಿಲ್ಲ~ ಎಂದು ಮೀನುಗಾರರು ಹೇಳಿದರು.`ಭಯೋತ್ಪಾದಕರು ಮೀನುಗಾರ ವೇಷದಲ್ಲಿ ಬಂದು ನೌಕಾನೆಲೆಯೊಳಗೆ ಪ್ರವೇಶ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಆ ಪ್ರದೇಶವನ್ನು ನಿಯಂತ್ರಿತ ಪ್ರದೇಶ ಎಂದು ಘೋಷಣೆ ಮಾಡಿದ್ದೇವೆ~ ಎಂದು ನೌಕಾನೆಲೆ ಅಧಿಕಾರಿಗಳು ತಿಳಿಸಿದರು.`ಗೋವಾ ನೌಕಾನೆಲೆ ಸಮೀಪವೂ ಅಲ್ಲಿ ಮೀನುಗಾರರು ಮೀನುಗಾರಿಕೆ ನಡೆ ಸುತ್ತಾರೆ. ದೋಣಿಯ ಬಗ್ಗೆ ಸಂಶಯ ವಿದ್ದಲ್ಲಿ ನೌಕಾನೆಲೆ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ಮೀನುಗಾರಿಕೆ ಇಲಾಖೆಗೆ ಹಸ್ತಾಂತರಿ ಸುತ್ತಾರೆ. ಮೀನುಗಾರಿಕೆ ಇಲಾಖೆ ಪರಿಶೀಲಿಸಿ ನಂತರ ಕ್ರಮಕೈಗೊಳ್ಳುತ್ತದೆ. ಇದೇ ರೀತಿ ನೀವು (ನೌಕಾನೆಲೆ) ಮಾಡಬಹುದಲ್ಲ ಎಂದು ಗೋವಾದಲ್ಲಿ ಪೈಲಟ್ ಆಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಮಹಾದೇವ ಹರಿಕಂತ್ರ ಹೇಳಿದರು.`ನೌಕಾನೆಲೆಯ ವ್ಯಾಪ್ತಿಯನ್ನು ನೋಡಿದ್ದೇನೆ. ಮೀನುಗಾರರು, ನೌಕಾ ನೆಲೆಯ ಅಧಿಕಾರಿಗಳೊಂದಿಗೆ ಮಾತು ಕತೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು~ ಎಂದು ಜಿಲ್ಲಾಧಿ ಕಾರಿ ಇಂಕಾಂಗ್ಲೋ ಜಮೀರ್ ತಿಳಿಸಿದರು.ನೌಕಾನೆಲೆಯ ಹಿರಿಯ ಅಧಿಕಾರಿ ಗಳಾದ ಕಮಾಂಡರ್ ತುಷಾರ ಸೋಕಿ, ಕಮಾಂಡರ್ ಸೋಮನಾಥ ಘೋಷ್, ಅಪರ ಜಿಲ್ಲಾಧಿಕಾರಿ ಕೆ.ಎಚ್.ನರಸಿಂಹ ಮೂರ್ತಿ, ಮೀನುಗಾರರ ಮುಖಂಡ ರಾದ ಪಿ.ಎಮ್.ತಾಂಡೇಲ, ಮೋಹನ ಬೋಳಶೆಟ್ಟಿಕರ, ವೆಂಕಟೇಶ ತಾಂಡೇಲ ಗಣಪತಿ ಮಾಂಗ್ರೆ, ರಮಾಕಾಂತ ಗಾಂವಕರ, ಬಂದರು ಇಲಾಖೆ ನಿರ್ದೇಶಕ ಮೋಹನ ರಾಜಘಾಟ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.