ಗುರುವಾರ , ಫೆಬ್ರವರಿ 25, 2021
29 °C

ನ್ಯಾಯದೇವತೆಗೆ ಕಣ್ಣಿಲ್ಲ!

ಬಿ.ಎಂ. ಹನೀಫ್‌ Updated:

ಅಕ್ಷರ ಗಾತ್ರ : | |

ನ್ಯಾಯದೇವತೆಗೆ ಕಣ್ಣಿಲ್ಲ!

ನಮ್ಮ ನ್ಯಾಯವ್ಯವಸ್ಥೆ ಕೆಲವೊಮ್ಮೆ ಆಮೆ ಗತಿಯನ್ನೂ ಮತ್ತೆ ಕೆಲವೊಮ್ಮೆ ಮೊಲದ ಚುರುಕುತನವನ್ನೂ ಪಡೆಯುತ್ತದೆ ಎನ್ನುವುದಕ್ಕೆ ಇತ್ತೀಚಿನ ಸಲ್ಮಾನ್‌ ಖಾನ್‌ ಹಾಗೂ ಸಂಜಯ್‌ ದತ್ ಪ್ರಕರಣಗಳು ಉದಾಹರಣೆಗಳಂತಿವೆ. ದೊಡ್ಡವರ ಈ ‘ವಿಶೇಷ ಪ್ರಕರಣ’ಗಳನ್ನು ಬದಿಗಿಟ್ಟು ನೋಡಿದರೆ, ಲಕ್ಷಾಂತರ ವಿಚಾರಣಾಧೀನ ಕೈದಿಗಳು ಜೈಲಿನಲ್ಲಿ ಬದುಕು ಸವೆಸುತ್ತಿರುವ ದಾರುಣ ಚಿತ್ರಗಳು ಎದುರಾಗುತ್ತವೆ.ಭಾರತದಲ್ಲಿ ಜೈಲಿನಲ್ಲಿರುವ ಒಟ್ಟು ಕೈದಿಗಳಲ್ಲಿ ಶೇಕಡಾ 75ರಷ್ಟು ಜನರು ವಿಚಾರಣಾಧೀನ ಕೈದಿಗಳು. ಇವರಲ್ಲಿ ಬಹುತೇಕರಿಗೆ ಅವರ ತಪ್ಪು ಸಾಬೀತಾದರೆ ಎಷ್ಟು ವರ್ಷಗಳ ಶಿಕ್ಷೆ ಸಿಗಬಹುದೋ, ಅದಕ್ಕಿಂತ ಹೆಚ್ಚು ವರ್ಷಗಳಿಂದ ಅವರು ಜೈಲಿನಲ್ಲೇ ಕೊಳೆಯುತ್ತಿದ್ದಾರೆ.

–ನ್ಯಾಷನಲ್ ಸೋಷಿಯಲ್ ವಾಚ್ ವರದಿ

‘ನ್ಯಾಯದಾನ’ ಎನ್ನುವುದು ಸಾಕಷ್ಟು ಜನಪ್ರಿಯ ಶಬ್ದ. ಬಹುತೇಕ ಮಾಧ್ಯಮಗಳು, ನ್ಯಾಯಾಲಯಗಳು ನೀಡುವ ತೀರ್ಪನ್ನು ಉಲ್ಲೇಖಿಸಲು ಈ ಶಬ್ದವನ್ನು ಬಳಸುತ್ತವೆ. ‘ನ್ಯಾಯದಾನ ವಿಳಂಬವಾಗಬಾರದು’ ಎಂದು ಸಾಕಷ್ಟು ತಜ್ಞರೂ ಕರೆ ನೀಡುತ್ತಾರೆ. ಇಲ್ಲಿ ಬಳಸುವ ‘ದಾನ’ ಎನ್ನುವ ಶಬ್ದ ಸರಿಯೇ? ದಾನ ಎಂದರೆ ಒಬ್ಬಾತ ತನ್ನಲ್ಲಿರುವ ವಸ್ತುವೊಂದನ್ನು ಬೇರೊಬ್ಬರಿಗೆ ಕೊಟ್ಟುಬಿಡುವುದು. ಅರ್ಥಾತ್‌ ಅದರ ಮೇಲಿರುವ ತನ್ನ ಹಕ್ಕನ್ನು ಬಿಟ್ಟುಕೊಡುವುದು. ನ್ಯಾಯಾಧೀಶರು ನೀಡುವ ತೀರ್ಪು ಹೇಗೆ ದಾನವಾಗುತ್ತದೆ? ನ್ಯಾಯಾಧೀಶರದ್ದೂ ಸಂಬಳದ ಕೆಲಸ. ತಮ್ಮ ಕೆಲಸಕ್ಕಾಗಿ ಅವರು ಸಂಬಳ ಪಡೆಯುತ್ತಾರೆ ಎಂದಿರುವಾಗ ಅವರು ನೀಡುವ ತೀರ್ಪು ದಾನ ಹೇಗಾಗುತ್ತದೆ?‘ತೀರ್ಪು ನೀಡುವುದು ಅತ್ಯಂತ ಪವಿತ್ರ ಕೆಲಸ’ ಎನ್ನುವ ಪರಿಕಲ್ಪನೆಯಲ್ಲಿ ಈ ದಾನ ಎಂಬ ಶಬ್ದ ನ್ಯಾಯದ ಜತೆಗೆ ಸೇರಿಕೊಂಡಿದ್ದರೆ, ಅದು ಎಷ್ಟರ ಮಟ್ಟಿಗೆ ಸರಿ? ಅದೇನೇ ಇದ್ದರೂ, ಭಾರತದಲ್ಲಿ ಇರುವ ಪ್ರಜಾಪ್ರಭುತ್ವದ ಮೂರು ಅಂಗಗಳಲ್ಲಿ ಇವತ್ತಿಗೂ ಅತ್ಯಂತ ಹೆಚ್ಚು ವಿಶ್ವಾಸಾರ್ಹತೆ ಉಳಿಸಿಕೊಂಡಿರುವುದು ನ್ಯಾಯಾಂಗವೇ. ಶಾಸಕಾಂಗ ಮತ್ತು ಕಾರ್ಯಾಂಗಗಳ ವಿಶ್ವಾಸಾರ್ಹತೆಯೊಂದಿಗೆ ತುಲನೆ ಮಾಡಿದಾಗ ಈ ಮಾತನ್ನು ಖಚಿತವಾಗಿ ಹೇಳಬಹುದು. ನ್ಯಾಯಾಂಗದಲ್ಲೂ ಐಬುಗಳು ಇಲ್ಲವೆಂದಲ್ಲ. ಆದರೆ ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಕಾಣಿಸುವಷ್ಟು ಢಾಳಾಗಿ ಅವು ಕಾಣಿಸುವುದಿಲ್ಲ.ಕೆಲವೊಮ್ಮೆ ಮಾತ್ರ ವಿಐಪಿ ಮತ್ತು ವಿವಿಐಪಿ ಮೊಕದ್ದಮೆಗಳಲ್ಲಿ ನ್ಯಾಯಾಂಗದ ವಿಭಿನ್ನ ಮುಖಗಳು ಢಾಳಾಗಿ ಗೋಚರಿಸುವುದಿದೆ. ‘ಅಯ್ಯೋ, ನ್ಯಾಯಾಲಯದ ಪ್ರಕ್ರಿಯೆಗಳು ಎಷ್ಟೊಂದು ವಿಳಂಬವಾಗುತ್ತಿವೆ’ ಎಂದು ಗೊಣಗಾಡುವ ಜನಸಾಮಾನ್ಯ ಕೂಡಾ ಬೆಚ್ಚಿಬೀಳಿಸುವಷ್ಟು ವೇಗವಾಗಿ ಕೆಲವು ಮೊಕದ್ದಮೆಗಳಲ್ಲಿ ನ್ಯಾಯಾಲಯದ ಪ್ರಕ್ರಿಯೆಗಳು ನಡೆಯುತ್ತವೆ. ಇನ್ನು ಕೆಲವೊಮ್ಮೆ ವಿಐಪಿಗಳ ಆರೋಪ ಸಾಬೀತಾಗಿ, ಜೈಲು ಶಿಕ್ಷೆಯಾದರೂ ಅವರು ಬಹುತೇಕ ‘ಆರಾಮ’ವಾಗಿ ಸೆರೆವಾಸವನ್ನು ಕಳೆಯುವಂತಹ ಪ್ರಕ್ರಿಯೆಗಳೂ ನ್ಯಾಯಾಂಗದಲ್ಲಿ ಸಂಭವಿಸುತ್ತವೆ. ಇದರ ಮಧ್ಯೆ, ಲಕ್ಷಾಂತರ ಆರೋಪಿಗಳು ವಿಚಾರಣೆಯೇ ನಡೆಯದೆ, ನ್ಯಾಯ‘ದಾನ’ದ ನಿರೀಕ್ಷೆಯಲ್ಲಿ ಅವರ ಜೀವನ ಜೈಲುಗಳಲ್ಲಿ ಕೊಳೆಯುತ್ತಿರುವುದಂತೂ ನ್ಯಾಯ ಎನ್ನುವ ಪರಿಕಲ್ಪನೆಯನ್ನೇ ಅಪಹಾಸ್ಯ ಮಾಡುವಂತಿದೆ.ತಣ್ಣಗೆ, ಇಬ್ಬರು ವಿವಿಐಪಿಗಳ ನ್ಯಾಯದಾನ ಪ್ರಕರಣಗಳನ್ನು ಗಮನಿಸೋಣ. ಮೊದಲನೆಯದ್ದು ಬಾಲಿವುಡ್‌ನಲ್ಲಿ ಖ್ಯಾತಿ ಮತ್ತು ಜನಪ್ರಿಯತೆಯ ತುತ್ತತುದಿಗೇರಿದ್ದ ಚಿತ್ರನಟ ಸಂಜಯ ದತ್‌ ಪ್ರಕರಣ. ಇನ್ನೇನು ಫೆಬ್ರುವರಿ 27ರಂದು ಸಂಜಯ್‌ದತ್‌ ಜೈಲಿನಿಂದ ಬಿಡುಗಡೆಯಾಗುವುದು ಖಚಿತವಾಗಿದೆ. ಬಿಡುಗಡೆಯ ಆದೇಶಕ್ಕೆ ಗೃಹ ಸಚಿವಾಲಯದ  ಸಹಿಯೂ ಬಿದ್ದಾಗಿದೆ. ಸಂಜಯ್‌ದತ್‌ ಪ್ರಕರಣದಲ್ಲಿ ನ್ಯಾಯಾಂಗ ಅತ್ಯಂತ ನಿಷ್ಠುರವಾಗಿ ನಡೆದುಕೊಂಡಿತು ಎನ್ನುವುದು ಮೇಲ್ನೋಟಕ್ಕೇ ಕಾಣಿಸುವ ಅಂಶ. ಅಷ್ಟಾಗಿಯೂ ಈ ಪ್ರಕರಣದಲ್ಲಿ ನ್ಯಾಯ ಪ್ರಕ್ರಿಯೆಯ ಎಲ್ಲ ಒಳದಾರಿಗಳನ್ನೂ ಕಾನೂನುಬದ್ಧವಾಗಿಯೇ ಸಾಕಷ್ಟು ಸಮರ್ಥವಾಗಿ ಬಳಸಿಕೊಂಡದ್ದು ಸಂಜಯ್‌ದತ್‌ ವಕೀಲರ ಹೆಗ್ಗಳಿಕೆ.1993ರ ಮಾರ್ಚಿ 12ರಂದು ಮುಂಬೈಯಲ್ಲಿ ನಡೆದ ಸರಣಿಸ್ಫೋಟಗಳಲ್ಲಿ 257 ಜನರು ಮೃತಪಟ್ಟು, 713 ಜನರು ಗಾಯಗೊಂಡದ್ದು ದೇಶ ಎಂದೂ ಮರೆಯಲಾಗದ ಭಯೋತ್ಪಾದಕ ಕೃತ್ಯ. ಆ ಘಟನೆಯ ಬೆನ್ನಲ್ಲೇ ತನಿಖೆಯ ಜಾಡು ಪೊಲೀಸರನ್ನು  ಸಂಜಯ್‌ದತ್‌ ಮನೆಬಾಗಿಲಿಗೆ ತಂದು ನಿಲ್ಲಿಸಿತು. ಸಂಜಯದತ್‌ ಮನೆಯಲ್ಲಿ ಪೊಲೀಸರು ಶೋಧಿಸಿದಾಗ ಸಿಕ್ಕಿದ್ದು ವಿದೇಶಿ ನಿರ್ಮಿತ ಏಕೆ 56 ರೈಫಲ್‌ ಮತ್ತು 9 ಎಂಎಂ ಪಿಸ್ತೂಲ್. ಮುಂಬೈ ಸ್ಫೋಟಕ್ಕೆ ಮುನ್ನ ಭಾರತಕ್ಕೆ ಕಳ್ಳಸಾಗಣೆಯಾಗಿ ಬಂದಿದ್ದ ‘ಕನ್‌ಸೈನ್‌ಮೆಂಟ್‌’ಗಳಲ್ಲಿ ಈ ರೈಫಲ್‌ ಮತ್ತು ಪಿಸ್ತೂಲ್‌ ಇದ್ದವು ಎನ್ನುವುದಕ್ಕೆ ಪೊಲೀಸರಿಗೆ ಆಧಾರಗಳು ಸಿಕ್ಕಿದ್ದವು.ಸಂಜಯ್‌ದತ್‌ನನ್ನು ಬಂಧಿಸಿ ‘ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ’ ಮತ್ತು ‘ಭಯೋತ್ಪಾದನಾ ತಡೆ ಕಾಯ್ದೆ’ (ಟಾಡಾ) ಎರಡರ ಅನ್ವಯವೂ ಪೊಲೀಸರು ಮೊಕದ್ದಮೆ ದಾಖಲಿಸಿದರು. ಮೊದಲು ತಪ್ಪು ಒಪ್ಪಿಕೊಂಡ ದತ್‌ ಬಳಿಕ ತನ್ನ ಹೇಳಿಕೆಯನ್ನೇ ನಿರಾಕರಿಸಿದ. ಆತನ ವಕೀಲರು ಕಾನೂನು ಹೋರಾಟ ನಡೆಸಿದರು. 1993ರ ಮೇ ತಿಂಗಳಲ್ಲಿ ದತ್‌ ಜಾಮೀನು ಪಡೆದು ಜೈಲಿನಿಂದ ಹೊರಬಂದ. ಮತ್ತೆ ಕಾನೂನು ಕದನ ಮುಂದುವರಿಯಿತು. 1994ರ ಜುಲೈನಲ್ಲಿ ಜಾಮೀನು ರದ್ದಾಗಿ ಮತ್ತೆ ಸಂಜಯ್‌ದತ್‌ ಜೈಲುಪಾಲಾದ. 18 ತಿಂಗಳು ಜೈಲಿನಲ್ಲಿದ್ದ ದತ್‌ಗೆ 2006ರ ಅಕ್ಟೋಬರ್‌ನಲ್ಲಿ ಮತ್ತೆ ಜಾಮೀನು ಸಿಕ್ಕಿತು. ವಿಚಾರಣೆ ಮುಂದುವರಿಯಿತು. ನವೆಂಬರ್‌ನಲ್ಲಿ ಸುಪ್ರೀಂಕೋರ್ಟ್‌, ಸಂಜಯ್‌ದತ್‌ ವಿರುದ್ಧ ಇದ್ದ ಟಾಡಾ ಕಾಯ್ದೆ ಅನ್ವಯದ ಎಲ್ಲ ಮೊಕದ್ದಮೆಗಳನ್ನೂ ರದ್ದುಗೊಳಿಸಿತು.ಆದರೆ ಶಸ್ತ್ರಾಸ್ತ್ರ ಕಾಯ್ದೆಯನ್ವಯ ಮಾತ್ರ ದತ್‌ ತಪ್ಪಿತಸ್ಥ ಎಂದು ತೀರ್ಪು ನೀಡಿ, ಆರು ವರ್ಷಗಳ ಜೈಲುಶಿಕ್ಷೆ ವಿಧಿಸಿತು. ಅಂದರೆ ಮುಂಬೈ ಸ್ಫೋಟದ ಸಂಚಿನಲ್ಲಿ ಆತನ ಪಾಲಿಲ್ಲ; ಆದರೆ ಆ ಆರೋಪಿಗಳಿಂದಲೇ ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಪಡೆದದ್ದು ತಪ್ಪು ಎಂದರ್ಥ. ಈ ತೀರ್ಪಿನ ವಿರುದ್ಧ ಸಿಬಿಐ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಿಲ್ಲ ಎನ್ನುವುದು ಈ ವಿವಿಐಪಿ ಮೊಕದ್ದಮೆಯ ಬಹುಮಹತ್ವದ ಅಂಶ. 2007ರ ಆಗಸ್ಟ್‌ 2ರಂದು ಬಂಧನಕ್ಕೆ ಒಳಗಾಗಿ ಯೆರವಾಡ ಜೈಲಿಗೆ ಹೋದ ಸಂಜಯ್‌ ದತ್‌, ಅದೇ ಆಗಸ್ಟ್‌ 20ರಂದು ಮತ್ತೆ ಸುಪ್ರೀಂಕೋರ್ಟಿನಿಂದ ಜಾಮೀನು ಪಡೆದು ಹೊರಬಂದ. ಜಾಮೀನು ರದ್ದಿಗೆ ಸಿಬಿಐ ಯತ್ನಿಸಿತು. ಆದರೆ ಆರು ವರ್ಷಗಳ ಕಾಲ ದತ್‌ ಹೊರಗೇ ಇದ್ದ. 2013ರ ಮಾರ್ಚಿ 21ರಂದು ಅಂತಿಮ ತೀರ್ಪು ನೀಡಿದ ಸುಪ್ರೀಂಕೋರ್ಟ್‌, ಸಂಜಯ್‌ದತ್‌ ಶಿಕ್ಷೆಯನ್ನು ಐದು ವರ್ಷಗಳಿಗೆ ಇಳಿಸಿತು. 4 ವಾರಗಳ ಒಳಗೆ ನ್ಯಾಯಾಲಯಕ್ಕೆ ಶರಣಾಗಲು ತಿಳಿಸಿತು. ಅದರಂತೆ ಸಂಜಯ್‌ ದತ್‌ ಮತ್ತೆ ಜೈಲು ಸೇರಿದ.ಆದರೆ ಈ ಮೊಕದ್ದಮೆಯ ವಿವಿಧ ಹಂತಗಳಲ್ಲಿ ಅದಾಗಲೇ ಸಂಜಯ್‌ದತ್‌ 18 ತಿಂಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದರಿಂದ ಉಳಿದ ಮೂರೂವರೆ ವರ್ಷಗಳ ಜೈಲುಶಿಕ್ಷೆಯನ್ನು ಅನುಭವಿಸಬೇಕೆಂದು ನಿರ್ಧಾರವಾಯಿತು. ಅಂದರೆ ಒಟ್ಟು 42 ತಿಂಗಳ ಶಿಕ್ಷೆ. ಸಂಜಯ್‌ದತ್‌ ವಕೀಲರು ಬಹಳ ಹುಷಾರಾಗಿ ದಾಳ ಉರುಳಿಸಿದರು. ಜೈಲಿನಲ್ಲಿ ಸಂಜಯ್‌ದತ್‌ ಸನ್ನಡತೆ ಪ್ರದರ್ಶಿಸಿದ. ಜತೆಗೆ ರೇಡಿಯೊ ಸ್ಟೇಶನ್‌ ಒಂದನ್ನೂ ನಡೆಸಿದ. ಇದಕ್ಕೆ ಪ್ರತಿಯಾಗಿ ತಿಂಗಳಿಗೆ 7 ದಿನಗಳಂತೆ ಒಟ್ಟು 14 ತಿಂಗಳ ಶಿಕ್ಷೆಯನ್ನು ಮಾಫಿ ಮಾಡಲಾಯಿತು. ಜತೆಗೆ ಪ್ರತಿವರ್ಷ 28 ದಿನಗಳಂತೆ ಪರೋಲ್‌ ಬಿಡುಗಡೆ ನೀಡಿದ್ದು, ಅದೂ 84 ದಿನಗಳ ಶಿಕ್ಷೆಯನ್ನು ಕಡಿಮೆ ಮಾಡಿತು. ಒಟ್ಟಾರೆ ಸಂಜಯ್‌ದತ್‌ ಜೈಲಿನಲ್ಲಿ  ಅನುಭವಿಸಬೇಕಾಗಿ ಬಂದದ್ದು 25 ತಿಂಗಳು 15 ದಿನಗಳ ಶಿಕ್ಷೆಯಷ್ಟೆ. ಈ ಇಡೀ ಪ್ರಕರಣದಲ್ಲಿ ಅಂತಿಮ ಶಿಕ್ಷೆ ಪ್ರಕಟಗೊಳ್ಳಲು 20 ವರ್ಷಗಳೇ ಉರುಳಿದ್ದವು.

ಇದು ಸಂಜಯ್‌ದತ್‌ ಪ್ರಕರಣವಾದರೆ, ಬಾಲಿವುಡ್‌ನ ಇನ್ನೊಬ್ಬ ‘ಸೂಪರ್‌ಹೀರೊ’ ಸಲ್ಮಾನ್‌ ಖಾನ್‌ ಗುದ್ದೋಡು ಪ್ರಕರಣ, ನ್ಯಾಯ‘ದಾನ’ದ ವಿಳಂಬ ಮುಖವನ್ನೂ, ಅತ್ಯಧಿಕ ವೇಗದ ಮುಖವನ್ನೂ ಏಕಕಾಲದಲ್ಲಿ ಪ್ರದರ್ಶಿಸಿತು. ಮುಂಬೈಯ ಬಾಂದ್ರಾದಲ್ಲಿ ನಡುರಾತ್ರಿ, ಕಂಠಪೂರ್ತಿ ಕುಡಿದಿದ್ದ ಸಲ್ಮಾನ್‌ ಖಾನ್‌ ಚಲಾಯಿಸುತ್ತಿದ್ದ ವಾಹನ  ಫುಟ್‌ಪಾತ್‌ಗೆ ನುಗ್ಗಿ– ಅಲ್ಲಿ ಮಲಗಿದ್ದ ಒಬ್ಬನ ಪ್ರಾಣಹರಣ ಮಾಡಿದರೆ, ಮೂವರು ಕೈಕಾಲು ಮುರಿದುಕೊಂಡರು. ವಕೀಲರ ಚಾಣಾಕ್ಷತೆಯಿಂದಾಗಿ ಈ ತನಿಖೆ ಬರೋಬ್ಬರಿ 13 ವರ್ಷಗಳ ಕಾಲ ನಡೆಯಿತು. 2015ರ ಆರಂಭದಲ್ಲಿ ಸಲ್ಮಾನ್‌ ಖಾನ್‌ ತಪ್ಪಿತಸ್ಥ ಎಂದು ಕೆಳನ್ಯಾಯಾಲಯ ತೀರ್ಪು ನೀಡಿ, ಐದು ವರ್ಷಗಳ ಶಿಕ್ಷೆ ಪ್ರಕಟಿಸಿತು.ಅವತ್ತು ಕೆಳನ್ಯಾಯಾಲಯದ ಪ್ರಕ್ರಿಯೆ ಎಷ್ಟು ಚುರುಕಾಗಿತ್ತೆಂದರೆ ಸಂಜೆ ಏಳು ಗಂಟೆಯವರೆಗೂ ಕೋರ್ಟ್‌ ನಡೆಯಿತು. ತೀರ್ಪು ಬಂದ ಎರಡೇ ಗಂಟೆಗಳಲ್ಲಿ ತೀರ್ಪಿಗೆ ಮಧ್ಯಂತರ ತಡೆಯಾಜ್ಞೆ ಸಿಕ್ಕಿತು. ಮತ್ತೆ ಎರಡೇ ದಿನಗಳಲ್ಲಿ ಜಾಮೀನು ಕೂಡಾ ಲಭಿಸಿತು. ಅಂದರೆ ಜೈಲುಶಿಕ್ಷೆ ಪ್ರಕಟವಾದರೂ ಅಪರಾಧಿ ಜೈಲು ಕೋಣೆ ಪ್ರವೇಶಿಸಲಿಲ್ಲ. ಅಲ್ಲಿಂದ ಮೊಕದ್ದಮೆ ಹೈಕೋರ್ಟ್‌ ತಲುಪಿತು. ಎಂಟು ತಿಂಗಳ ವಿಚಾರಣೆಯ ಬಳಿಕ (ಕಳೆದ ಡಿಸೆಂಬರ್‌ನಲ್ಲಿ) ತೀರ್ಪು ನೀಡಿದ ಹೈಕೋರ್ಟ್‌ ಹೇಳಿದ್ದು– ‘ಪೊಲೀಸರ ತನಿಖೆಯ ವಿಧಾನವೇ ತಪ್ಪಾಗಿದೆ. ಸರಣಿ ಸಾಕ್ಷ್ಯಗಳಿಗೆ ಪೂರಕವೆಂಬಂತೆ ಜೈವಿಕ ಸಾಕ್ಷ್ಯ ಸಂಗ್ರಹಿಸಿಲ್ಲ. ಆರೋಪಪಟ್ಟಿಯಲ್ಲಿ ಪೊಲೀಸರು ಬೇಕೆಂದೇ ಹಲವು ಲೋಪಗಳನ್ನು ಮಾಡಿದ್ದಾರೆ. ಅವು ಆರೋಪಿಗೆ ಅನುಕೂಲವಾಗಲಿ ಎಂಬಂತೆಯೇ ಇದೆ! ಆದ್ದರಿಂದ ಸಲ್ಮಾನ್‌ಗೆ ಕೆಳನ್ಯಾಯಾಲಯ ವಿಧಿಸಿದ್ದ ಐದು ವರ್ಷಗಳ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ!’.

ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಈಗಾಗಲೆ ಪ್ರಕಟಿಸಿದೆ. ಈಗಾಗಲೆ 13 ವರ್ಷಗಳನ್ನು ದಾಟಿರುವ ಈ ಮೊಕದ್ದಮೆಯ ಅಂತಿಮ ತೀರ್ಪು ಬರಲು ಇನ್ನೂ ಎಷ್ಟು ವರ್ಷಗಳು ಬೇಕಾಗುತ್ತದೋ ಗೊತ್ತಿಲ್ಲ. ಇನ್ನೂ 13 ವರ್ಷಗಳು ಉರುಳಿದರೂ ಆಶ್ಚರ್ಯವಿಲ್ಲ. ಏಕೆಂದರೆ ಈ ಪ್ರಕರಣದಲ್ಲಿ ಎರಡೂ ಕಡೆಯವರಿಗೆ ನ್ಯಾಯ‘ದಾನ’ದ ಬಗ್ಗೆ ಅಷ್ಟೇನೂ ಅವಸರ ಕಾಣಿಸುತ್ತಿಲ್ಲ. ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ವಿಚಾರಾಣಾಧೀನ ಕೈದಿಗಳು ಅನುಭವಿಸುತ್ತಿರುವ ‘ಶಿಕ್ಷೆ’ಯ ವಿಪರ್ಯಾಸವನ್ನು ಗಮನಿಸಲು ಇಷ್ಟೆಲ್ಲ ವಿವರವಾಗಿ ಮೇಲಿನ ಎರಡು ಪ್ರಕರಣಗಳನ್ನು ಅವಲೋಕಿಸಬೇಕಾಯಿತು. 2013ರಲ್ಲಿ ಬಿಡುಗಡೆಯಾದ ‘ರಾಷ್ಟ್ರೀಯ ಅಪರಾಧ ಬ್ಯೂರೋ’ದ ಅಂಕಿ ಅಂಶಗಳ ಪ್ರಕಾರ, ಒಟ್ಟು 3.8 ಲಕ್ಷ ಜನರು ದೇಶದ ವಿವಿಧ ಜೈಲುಗಳಲ್ಲಿ ಇದ್ದಾರೆ.

ಇವರಲ್ಲಿ ಸುಮಾರು 2.54 ಲಕ್ಷ ಜನರು ವಿಚಾರಣಾಧೀನ ಕೈದಿಗಳು! ಅಂದರೆ ಇವರ ಕೇಸುಗಳು ನ್ಯಾಯಾಲಯಗಳಲ್ಲಿ ಮುಂದಕ್ಕೇ ಹೋಗುತ್ತಿಲ್ಲ. ಅಂತಿಮ ತೀರ್ಪು ಬರುವವರೆಗೂ ಈ ಎರಡೂವರೆ ಲಕ್ಷ ಜನ  ಜೈಲಿನಲ್ಲೇ ಇರಬೇಕು. ಈ ಪ್ರಕರಣಗಳಲ್ಲಿ ಶೇಕಡಾ 66ರಷ್ಟು ಮೊಕದ್ದಮೆಗಳು ವರ್ಷದಲ್ಲಿ ಒಂದು ಬಾರಿಯೂ ವಿಚಾರಣೆಗೆ ಬಂದಿಲ್ಲವಂತೆ! ಇಲ್ಲಿ ಇನ್ನೂ ಒಂದು ವಿಪರ್ಯಾಸವಿದೆ. ಸಾವಿರಾರು ಪ್ರಕರಣಗಳಲ್ಲಿ ಈ ವಿಚಾರಾಣಾಧೀನ ಕೈದಿಗಳಿಗೆ ಕೋರ್ಟುಗಳು ಜಾಮೀನು ನೀಡಿವೆ. ಏಕೆಂದರೆ ಅವರ ಮೇಲಿರುವುದು ಅಂತಹ ಘನಘೋರ ಆರೋಪಗಳಲ್ಲ. ಹಾಗೆಯೇ ಅವರು ಸಾಕ್ಷ್ಯನಾಶ ಮಾಡುವ ಸಂಭವವೂ ಇಲ್ಲ. ಆದರೆ ಈ ಕೈದಿಗಳ ಪರವಾಗಿ ಜಾಮೀನು ನೀಡುವವರು ಯಾರೂ ಇಲ್ಲದ್ದರಿಂದ ಅವರು ಜೈಲುಗಳಲ್ಲೇ ಕೊಳೆಯುತ್ತಿದ್ದಾರೆ.

ಅಂದರೆ ನಮ್ಮ ನ್ಯಾಯವ್ಯವಸ್ಥೆಯಲ್ಲಿ ಹಣ ಇದ್ದವರಿಗೆ ಅತ್ಯಂತ ವೇಗವಾಗಿ ಜಾಮೀನು ಸಿಗುತ್ತದೆ. ಹಣ ಇಲ್ಲದವರಿಗೆ ಜಾಮೀನು ಸಿಕ್ಕರೂ ಬಿಡುಗಡೆಯ ಭಾಗ್ಯ ಇಲ್ಲವಾಗಿದೆ. ಹಣ ಇದ್ದವರ ಮೊಕದ್ದಮೆಗಳು ಬೇಕಿದ್ದರೆ ಅತ್ಯಂತ ವೇಗವಾಗಿ ಅಥವಾ ಅತ್ಯಂತ ನಿಧಾನವಾಗಿ ನಡೆಯುತ್ತವೆ. ಹಣ ಇಲ್ಲದಿದ್ದರೆ ವರ್ಷಾನುಗಟ್ಟಲೆ ವಿಚಾರಣೆಯೇ ನಡೆಯದೆ, ಜೈಲೇ ಅವರ ಮನೆಯಾಗುತ್ತಿದೆ. (ಅದರಲ್ಲೂ ಕೆಲವು ವೈರುಧ್ಯಗಳನ್ನು ಗಮನಿಸಿ: ಕೋರ್ಟುಗಳಲ್ಲಿ ವಿಚಾರಣೆ ನಡೆದ ಬಹುತೇಕ ಪ್ರಕರಣಗಳಲ್ಲಿ ಬಡ ಕೈದಿಗಳಿಗೆ ನ್ಯಾಯಾಧೀಶರು 50 ಸಾವಿರ ರೂಪಾಯಿಗಳನ್ನು ನೀಡಿ ಜಾಮೀನು ಪಡೆಯಲು ಸೂಚಿಸಿದ್ದಾರೆ. ಆದರೆ ಅಷ್ಟು ದುಡ್ಡು ಹೊಂದಿಸಲಾಗದೆ ಕೈದಿಗಳು ಜೈಲುಗಳಲ್ಲೇ ದಿನ ದೂಡುತ್ತಿದ್ದಾರೆ. ಆದರೆ ಸಲ್ಮಾನ್‌ ಖಾನ್ ಪ್ರಕರಣದಲ್ಲಿ ಕೆಳನ್ಯಾಯಾಲಯ ಜಾಮೀನು ನೀಡಿದ್ದು ಕೇವಲ 30 ಸಾವಿರ ರೂಪಾಯಿ ಗ್ಯಾರಂಟಿಗೆ!).ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು. ಕೋರ್ಟುಗಳ ಮತ್ತು ನ್ಯಾಯಾಧೀಶರ ಸಂಖ್ಯೆ ಹೆಚ್ಚಳವಾಗಬೇಕು ಎಂದು ಪ್ರತಿಯೊಂದು ಸರ್ಕಾರಗಳೂ ಹಲವಾರು ವರ್ಷಗಳಿಂದ ಹೊಸ ಪ್ರಯತ್ನಗಳನ್ನು ಕೈಗೊಳ್ಳುತ್ತಿವೆ. ವಿಶೇಷ ಲೋಕ ಅದಾಲತ್‌ಗಳನ್ನು ನಡೆಸಲಾಗುತ್ತಿದೆ. ಅಷ್ಟಾಗಿಯೂ ವಿಚಾರಣಾಧೀನ ಕೈದಿಗಳ ಗೋಳು, ದೊಡ್ಡ ಸಾಮಾಜಿಕ ಪಿಡುಗಾಗಿಯೇ ಉಳಿದಿದೆ. 2004ರಲ್ಲಿ ದೇಶಾದ್ಯಂತ 2.81 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದವು. 2011ರಲ್ಲಿ ಈ ಸಂಖ್ಯೆ 3.17 ಕೋಟಿಗೆ ಏರಿತು. 2013ರಲ್ಲಿ ವಿಚಾರಣೆ ಕಾದು ಜೈಲಿನಲ್ಲಿ ಕೊಳೆಯುತ್ತಿರುವ ಆರೋಪಿಗಳ ಸಂಖ್ಯೆ 3.80 ಕೋಟಿ ಎಂದು ಸುದ್ದಿ ಪ್ರಕಟವಾಗಿದೆ. ಬಿಹಾರದ ಜೈಲುಗಳಲ್ಲಿ ವಿಚಾರಾಣಾಧೀನ ಕೈದಿಗಳ ದುಸ್ಥಿತಿಯ ಬಗ್ಗೆ 1981ರಲ್ಲಿ  ಸುಪ್ರೀಂಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಚಾಟಿ ಬೀಸಿದಾಗ, 16 ವರ್ಷಗಳಿಂದ ವಿಚಾರಣೆಯೇ ಇಲ್ಲದೆ ಜೈಲುಗಳಲ್ಲಿ ಕೊಳೆಯುತ್ತಿದ್ದ ಸುಮಾರು 18 ಸಾವಿರಕ್ಕೂ ಹೆಚ್ಚು ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು.2014ರಲ್ಲೂ ಸುಪ್ರೀಂಕೋರ್ಟ್‌ ಇನ್ನೊಮ್ಮೆ ಈ ವಿಷಯದ ಬಗ್ಗೆ ಗಮನ ಹರಿಸಿತ್ತು. ‘ಆರೋಪ ಸಾಬೀತಾದರೆ ಪಡೆಯಬಹುದಾದ ಶಿಕ್ಷೆಯ ಅರ್ಧಕ್ಕೂ ಹೆಚ್ಚು ಅವಧಿಯನ್ನು ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳಾಗಿ ಕಳೆದಿರುವ ಎಲ್ಲರನ್ನೂ ತಕ್ಷಣ ಬಿಡುಗಡೆ ಮಾಡಿ’ ಎಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ ಅದರ ಪ್ರಕಾರ ಈ ಎರಡು ವರ್ಷಗಳಲ್ಲಿ ಎಷ್ಟು ಮಂದಿ ಬಿಡುಗಡೆಯಾಗಿದ್ದಾರೆ ಎನ್ನುವ ವಿವರಗಳು ಎಲ್ಲೂ ಪ್ರಕಟವಾಗಿಲ್ಲ. ಸುಪ್ರೀಂಕೋರ್ಟ್‌ನಿಂದ ಹೀಗೊಂದು ನಿರ್ದೇಶನ ಬಂದಿದೆ ಎನ್ನುವುದನ್ನು ಜೈಲುಗಳಲ್ಲಿ ಕೊಳೆಯುತ್ತಿರುವ ಬಡ ಕೈದಿಗಳಿಗೆ ತಿಳಿಸುವವರೂ ಯಾರೂ ಇಲ್ಲ. ಹಾಗೆ ತಿಳಿಸಿದ ಬಳಿಕ, ಈ ಕೈದಿಗಳು ತಾವೇ ಸ್ವತಃ ಅರ್ಜಿ ಸಲ್ಲಿಸಿ ಬಿಡುಗಡೆಯ ಪ್ರಕ್ರಿಯೆಗೆ ಒತ್ತಡ ಹಾಕಬೇಕೆಂದರೆ, ಅದೂ ಆಗುತ್ತಿಲ್ಲ. ‘ನ್ಯಾಯದೇವತೆಗೆ ಕಣ್ಣಿಲ್ಲ’ ಎನ್ನುವುದು ನಮ್ಮ ಹೆಮ್ಮೆಯನ್ನು ತೋರುತ್ತದೆಯೆ ಅಥವಾ ಸಂಕಟವನ್ನು ಪ್ರತಿಬಿಂಬಿಸುತ್ತದೆಯೆ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.