ಬುಧವಾರ, ಜೂನ್ 23, 2021
28 °C

ನ್ಯಾಯಸಮ್ಮತ ಚುನಾವಣೆಗೆ ಸಹಕರಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಲೋಕಸಭೆ ಚುನಾವಣೆಯನ್ನು ಪಾರದರ್ಶಕವಾಗಿ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಬೇಕು ಎಂದು -ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರಾದ ಜಿತೇಂದ್ರ ಯಾದವ್ ಮನವಿ ಮಾಡಿದರು.ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚುನಾವಣೆ ಅವಧಿಯಲ್ಲಿ ಎಲ್ಲಿಯಾದರೂ ಅಕ್ರಮ, ಅವ್ಯವಹಾರ ನಡೆಯುತ್ತಿದ್ದರೆ ಚುನಾವಣಾ ಅಧಿಕಾರಿಗಳ ಗಮನಕ್ಕೆ ತನ್ನಿ. ಇದನ್ನು ತಡೆಯಲು ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರಣೆಯನ್ನು ಸಲ್ಲಿಸುತ್ತಿದ್ದು, ಇದನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಅಭ್ಯರ್ಥಿಗಳು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿಯಿದ್ದರೆ ಅದನ್ನು ಆಯೋಗದ ಗಮನಕ್ಕೆ ತಂದರೆ, ವಿಚಾರಣೆ ನಡೆಸಲಾಗುವುದು ಎಂದು ಅವರು ಹೇಳಿದರು.ಇದಕ್ಕೂ ಮೊದಲು ಅವರು, ಕೋಟೆ ವಿಧಾನಸಭಾಂಗಣದಲ್ಲಿ ಪ್ಲೈಯಿಂಗ್ ಸ್ಕ್ವಾಡ್(ಕ್ಷಿಪ್ರ ಪರಿಶೀಲನಾ ತಂಡ), ವೀಡಿಯೋ ಸಮೀಕ್ಷೆ ತಂಡ, ವೀಡಿಯೋ ವಿಚಕ್ಷಣ ದಳ, ಚುನಾವಣಾ ವೆಚ್ಚ ಪರಿಶೀಲನಾ ತಂಡದ ಅಧಿಕಾರಿಗಳ ಜೊತೆ ಸಭೆ ನಡೆಸಿದರು.  ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಬೇಕಿದೆ. ಆ ದಿಸೆಯಲ್ಲಿ ಅಗತ್ಯ ಕ್ರಮಗಳನ್ನು ವಿವಿಧ ತಂಡಗಳ ಅಧಿಕಾರಿಗಳು ಕ್ರಮಗಳನ್ನು ಕೈಗೊಳ್ಳಬೇಕು. ಹಣ, ಮದ್ಯ ಹಂಚುವುದು ಅಥವಾ ಸಾಗಾಣೆ ಮಾಡುವುದು ಕಂಡು ಬಂದಲ್ಲಿ ತಕ್ಷಣವೇ ಕ್ರಮವಹಿಸುವಂತೆ ಜಿತೇಂದ್ರ ಯಾದವ್ ಅವರು ತಿಳಿಸಿದರು.ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ನಡೆಸುವ ಸಭೆ ಸಮಾರಂಭ, ರ್‌್ಯಾಲಿ ಮತ್ತಿತರ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ವಿವಿಧ ತಂಡಗಳು ತಮ್ಮ ಕಾರ್ಯ ಚಟುವಟಿಕಾ ವ್ಯಾಪ್ತಿಯಲ್ಲಿ ಕ್ರೀಯಾಶೀಲತೆಯಿಂದ ಕಾರ್ಯನಿರ್ವಹಿಸುವಂತೆ ಅವರು ತಿಳಿಸಿದರು.ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರು ಮಾತನಾಡಿ, ವಿವಿಧ ವ್ಯಾಪ್ತಿಗಳಿಗೆ ನಿಯೋಜಿಸಿರುವ ಅಧಿಕಾರಿಗಳಿಗೆ ವಾಹನ, ವಾಸ್ತವ್ಯ ಮತ್ತಿತರವನ್ನು ಒದಗಿಸಲಾಗುವುದು. ಪ್ರತಿನಿತ್ಯ ತಮ್ಮ ವ್ಯಾಪ್ತಿಯಲ್ಲಿದ್ದು, ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಿ ಕಾರ್ಯ ನಿರ್ವಹಿಸುವಂತೆ ಅವರು ಸೂಚನೆ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಅನುಚೇತ್ ಅವರು ಈಗಾಗಲೇ ಆರಂಭಿಸಲಾಗಿರುವ ಚೆಕ್ ಪೋಸ್ಟ್‌ಗಳಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸಮಸ್ಯೆಗಳು ಎದುರಾದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ತೆರಳುವಂತೆ ನಿರ್ದೇಶನ ನೀಡಲಾಗುವುದು ಎಂದು ಅವರು ತಿಳಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಹೆಚ್.ಪ್ರಸನ್ನ ಅವರು ಮಾತನಾಡಿ, ಈಗಾಗಲೇ ನಿಯೋಜಿಸಿರುವ ವಿವಿಧ ತಂಡಗಳ ಅಧಿಕಾರಿಗಳು ಚುನಾವಣಾ ಕರ್ತವ್ಯವನ್ನು ಬದ್ಧತೆಯಿಂದ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ತಮ್ಮ ವ್ಯಾಪ್ತಿ ಬಿಟ್ಟು ಹೊರಹೋಗಬಾರದು ಎಂದು ಅವರು ತಿಳಿಸಿದರು. ಉಪ ವಿಭಾಗಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಚುನಾವಣಾ ಮಾರ್ಗದರ್ಶನದ ಬಗ್ಗೆ ಹಲವು ಮಾಹಿತಿ ನೀಡಿದರು.

 

ಜಿಲ್ಲಾ ವೆಚ್ಚ ನೋಡಲ್ ಅಧಿಕಾರಿ ಶ್ರೀನಿವಾಸ ರಾವ್, ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನಯ್ಯ, ಎಂಸಿಸಿ ನೋಡಲ್ ಅಧಿಕಾರಿ ಸಿ.ಜಗನ್ನಾಥ್, ಪ್ಲೈಯಿಂಗ್ ಸ್ಕ್ವಾಡ್, ವೀಡಿಯೊ ಸಮೀಕ್ಷೆ ತಂಡ, ವೀಡಿಯೊ ವಿಚಕ್ಷಣ ದಳ, ಚುನಾವಣಾ ವೆಚ್ಚ ಪರಿಶೀಲನಾ ತಂಡದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.