ಸೋಮವಾರ, ಮೇ 10, 2021
25 °C

ನ್ಯಾಯಾಲಯಕ್ಕೆ ತಲೆಬಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಎರಡನೇ ಉಪಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಚಂದ್ರಶೇಖರಯ್ಯನವರನ್ನು ತಕ್ಷಣ ಪದಚ್ಯುತಿಗೊಳಿಸಿ~ ಎಂದು ಹೇಳುವ ಮೂಲಕ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರದ ಮುಖಕ್ಕೆ ಹೊಡೆದ ತಪರಾಕಿ ನಿರೀಕ್ಷಿತವಾದುದು.

 

ವಾರದ ಹಿಂದೆಯಷ್ಟೇ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಶಂಕರ ಬಿದರಿ ಅವರನ್ನು ನಿಯಮಬಾಹಿರವಾಗಿ ನೇಮಕಮಾಡಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿತ್ತು.ಎರಡನೇ ಉಪಲೋಕಾಯುಕ್ತರಾಗಿ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರ ನೇಮಕದ ಬಗ್ಗೆ ತಮಗೆ ಸಹಮತ ಇರಲಿಲ್ಲ ಎನ್ನುವುದನ್ನು ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಪತ್ರ ಬರೆದು ತಿಳಿಸಿದ ನಂತರವಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ತನ್ನ ತಪ್ಪನ್ನು ತಿದ್ದಿಕೊಳ್ಳಬೇಕಾಗಿತ್ತು.

 

ಹಾಗೆ ಮಾಡದೆ `ಸಮಾಲೋಚನೆ ನಡೆಸಿದ ನಂತರ ಬಹುಮತದ ಅಭಿಪ್ರಾಯದಂತೆ ನೇಮಕ ಮಾಡಲಾಗಿದೆ~ ಎಂದು ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಸಮರ್ಥಿಸಿಕೊಂಡಿದ್ದರು. ಇದು ಸರಿಯಲ್ಲ.ಉಪಲೋಕಾಯುಕ್ತ ಹುದ್ದೆಗೆ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಸೂಚಿಸಿದ ಹೆಸರನ್ನು ಬಚ್ಚಿಟ್ಟು ಬೇರೆ ಹೆಸರನ್ನು ಶಿಫಾರಸುದಾರರ ಮುಂದಿಟ್ಟು ಅಂಗೀಕಾರ ಪಡೆದಿರುವ ಸರ್ಕಾರದ ಕ್ರಮ ದುರುದ್ದೇಶಪೂರಿತವಾದುದು ಎನ್ನುವುದು ಮೇಲ್ನೋಟದಲ್ಲಿಯೇ ಸ್ಪಷ್ಟವಾಗುತ್ತದೆ.ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಹುದ್ದೆಗಳಿಗೆ ನೇಮಕ ಮಾಡುವ ಮೊದಲು ವಿಧಾನಮಂಡಲದ ಎರಡೂ ಸದನಗಳ ಅಧ್ಯಕ್ಷರು ಮತ್ತು ಪ್ರತಿಪಕ್ಷ ನಾಯಕರ ಅಭಿಪ್ರಾಯ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

 

ಅದೇ ರೀತಿ ನ್ಯಾಯಮೂರ್ತಿಗಳಾಗಿ ಅರ್ಹರೆನಿಸಿಕೊಂಡವರನ್ನು ಮಾತ್ರ ಆಯ್ಕೆ ಮಾಡಬೇಕೆಂಬ ಉದ್ದೇಶದಿಂದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಅಭಿಪ್ರಾಯವನ್ನು ಪಡೆಯಬೇಕೆಂಬ ನಿಯಮ ಇದೆ. ರಾಜ್ಯಸರ್ಕಾರ ಇದನ್ನು ನಿರ್ಲಕ್ಷಿಸಿದೆ. ಲೋಕಾಯುಕ್ತ ಮತ್ತು ಉಪಲೋಕಾಯುಕ್ತದಂತಹ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡುವಾಗ ವ್ಯಕ್ತಿಯ ಅರ್ಹತೆ ಮತ್ತು ನಡವಳಿಕೆಯಷ್ಟೇ ಮಾನದಂಡವಾಗಬೇಕು. ರಾಜಕೀಯ ಲಾಭ ಇಲ್ಲವೇ ಜಾತಿಯ ಲೆಕ್ಕಾಚಾರ ಸಲ್ಲದು. ಆದರೆ ಈಗಿನ ಬಿಜೆಪಿ ಸರ್ಕಾರ ಮತ್ತೆ ಮತ್ತೆ ಇಂತಹ ನೇಮಕಗಳ ವಿಚಾರದಲ್ಲಿ ಎಡವುತ್ತಾ ಬಂದಿದೆ.ಲೋಕಾಯುಕ್ತ-ಉಪಲೋಕಾಯುಕ್ತರ ನೇಮಕದ ವಿಷಯದಲ್ಲಿ ರಾಜ್ಯ ಸರ್ಕಾರ ಮುಖಭಂಗಕ್ಕೀಡಾಗಿರುವುದು ಇದು ಮೊದಲ ಸಲ ಅಲ್ಲ. ಲೋಕಾಯುಕ್ತರಾಗಿ ನ್ಯಾ.ಶಿವರಾಜ್ ಪಾಟೀಲ್ ಮತ್ತು ಉಪಲೋಕಾಯುಕ್ತರಾಗಿ ನ್ಯಾ.ಗುರುರಾಜರಾವ್ ಅವರ ನೇಮಕಗಳು ಕೂಡಾ ವಿವಾದಕ್ಕೆ ಗುರಿಯಾಗಿದ್ದವು.ಇದರಿಂದಾಗಿ ಅವರಿಬ್ಬರೂ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕಾಯಿತು. ಹಿಂದಿನ ಲೋಕಾಯುಕ್ತರಾಗಿದ್ದ ನ್ಯಾ.ಸಂತೋಷ್ ಹೆಗ್ಡೆ ಅವರು ಹಿಂದಿನ ಮುಖ್ಯಮಂತ್ರಿ ಮತ್ತು ಅವರ ಕೆಲವು ಸಹೋದ್ಯೋಗಿಗಳನ್ನು ಅಕ್ರಮ ಗಣಿಗಾರಿಕೆಯ ಹಗರಣದಲ್ಲಿ ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಿದ ನಂತರ ಆಡಳಿತಾರೂಢ ಪಕ್ಷ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಯಾವ ಅವಕಾಶವನ್ನೂ ಕೈಬಿಟ್ಟಿಲ್ಲ.

 

ಈಗಲೂ, ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಹೋಗದೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಮಾತುಗಳನ್ನು ಮುಖ್ಯಮಂತ್ರಿಗಳು ಆಡಿದ್ದಾರೆ.ಇಂತಹ ಅವಿವೇಕತನವನ್ನು ಪಕ್ಕಕ್ಕಿಟ್ಟು ತಕ್ಷಣ ಈಗಿನ ಉಪಲೋಕಾಯುಕ್ತರನ್ನು ಗೌರವಪೂರ್ವಕವಾಗಿ ಹುದ್ದೆಯಿಂದ ಬಿಡುಗಡೆಗೊಳಿಸಿ ಹೈಕೋರ್ಟ್ ಆದೇಶದಲ್ಲಿ ಸೂಚಿಸಿರುವ ಮಾನದಂಡಗಳ ಪ್ರಕಾರ ಹೊಸ ಉಪಲೋಕಾಯುಕ್ತರನ್ನು ಮಾಡಿದರೆ ಮಾನ ಉಳಿದೀತು. ಇಲ್ಲದೆ ಹೋದರೆ ಸುಪ್ರೀಂ ಕೋರ್ಟ್‌ನಲ್ಲಿ ಇನ್ನೊಂದು ಬಾರಿ ಮಾನ ಕಳೆದುಕೊಳ್ಳುವ ಸ್ಥಿತಿಯನ್ನು ಎದುರಿಸಬೇಕಾಗಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.