ಭಾನುವಾರ, ಮಾರ್ಚ್ 7, 2021
18 °C

ನ್ಯಾಯಾಲಯದಲ್ಲಿ ಆರೋಪಿಸ್ಥಾನದಲ್ಲಿ ನಿಂತವರಿಗೆ ಸ್ಥಾನವಿಲ್ಲ

ಪ್ರವೀಣ ಕುಲಕರ್ಣಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾಯಾಲಯದಲ್ಲಿ ಆರೋಪಿಸ್ಥಾನದಲ್ಲಿ ನಿಂತವರಿಗೆ ಸ್ಥಾನವಿಲ್ಲ

ಹುಬ್ಬಳ್ಳಿ: `ಭ್ರಷ್ಟಾಚಾರ ವಿರುದ್ಧದ ಹೋರಾಟ ಬಿಜೆಪಿಯ ದೃಢ ಸಂಕಲ್ಪ. ಆದ್ದರಿಂದಲೇ ನ್ಯಾಯಾಲಯದಲ್ಲಿ ಆರೋಪಿ ಸ್ಥಾನದಲ್ಲಿ ನಿಂತ ವ್ಯಕ್ತಿಗಳಿಗೆ ಯಾವುದೇ ಸ್ಥಾನಮಾನ ನೀಡದಿರಲು ಪಕ್ಷ ತೀರ್ಮಾನಿಸಿದೆ. 12 ವರ್ಷಗಳಿಂದ ನೇಪಥ್ಯದಲ್ಲೇ ಉಳಿದಿರುವ ಬಂಗಾರು ಲಕ್ಷ್ಮಣ್ ಅವರ ಘಟನೆ ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ~-ಹೀಗೆಂದು ಖಡಕ್ ಅಭಿಪ್ರಾಯ ವ್ಯಕ್ತಪಡಿಸಿದವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಚ್.ಎನ್. ಅನಂತಕುಮಾರ್. ಖಾಸಗಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾನುವಾರ ನಗರಕ್ಕೆ ಆಗಮಿಸಿದ್ದ ಅವರು, `ಪ್ರಜಾವಾಣಿ~ಗೆ ವಿಶೇಷ ಸಂದರ್ಶನ ನೀಡಿದರು.`ವಿರೋಧ ಪಕ್ಷಗಳಿಂದ ಬರುವ ಆರೋಪಗಳು ಬೇರೆ. ನ್ಯಾಯಾಲಯದಲ್ಲಿ ಇರುವ ಆಪಾದನೆಗಳೇ ಬೇರೆ. ಮೊದಲಿನದಕ್ಕೆ ಮಹತ್ವ ಇಲ್ಲ. ಎರಡನೆಯದನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ನ್ಯಾಯಾಲಯದ ಕಟಕಟೆ ಏರಿ, ಕಳಂಕ ಹೊತ್ತವರು ಅಲ್ಲಿಂದಲೇ ಆರೋಪ ಮುಕ್ತರಾಗಿ ಹೊರಬರಬೇಕು. ಅಲ್ಲಿಯವರೆಗೆ ಅಂತಹ ವ್ಯಕ್ತಿಗಳಿಗೆ ಯಾವುದೇ ಸ್ಥಾನಮಾನ ಇಲ್ಲ. ಇದು ಪಕ್ಷದ ಸ್ಪಷ್ಟವಾದ ನಿಲುವು~ ಎಂದು ಹೇಳಿದರು.`ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಈ ಮಾತು ಅನ್ವಯಿಸುವುದೇ~ ಎಂಬ ಪ್ರಶ್ನೆಗೆ, `ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಅವರಿಗೆ ಇದೇ ನಿಯಮವನ್ನು ಅನುಸರಿಸಿ, ಎಲ್ಲ ರೀತಿಯ ಅಧಿಕಾರದಿಂದ ದೂರ ಇಡಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಪಕ್ಷದ ನಿಲುವು ಇದೇ ಆಗಿದೆ~ ಎಂದು ಅವರು ಉತ್ತರಿಸಿದರು.`ಚುನಾವಣೆಗೂ ಮುನ್ನ ಮುಖ್ಯಮಂತ್ರಿಗಳು ಬದಲಾಗುವ ಸಾಧ್ಯತೆ ಇದೆಯೇ~ ಎಂದು ಕೇಳಿದಾಗ, ಸ್ಪಷ್ಟ ಉತ್ತರ ನೀಡದ ಅವರು, `ಡಿ.ವಿ. ಸದಾನಂದಗೌಡರ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡುತ್ತದೆ. ಈಗ ನಾಯಕತ್ವ ಬದಲಾವಣೆ ಪ್ರಶ್ನೆ ಉದ್ಭವಿಸಿಲ್ಲ. ಸಂದರ್ಭ ಬಂದಾಗ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ~ ಎಂದು ಹೇಳಿದರು.`ಯಡಿಯೂರಪ್ಪ ಇಲ್ಲವೆ ಅನಂತಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆಯೇ~ ಎಂದು ಪಟ್ಟು ಬಿಡದೆ ಪ್ರಶ್ನಿಸಿದಾಗ, `ಈಗ ಗೌಡರು ಮುಖ್ಯಮಂತ್ರಿ ಆಗಿದ್ದಾರಲ್ಲ~ ಎಂಬ ಒಗಟಿನ ಉತ್ತರ ನೀಡಿದರು.`ರಾಜ್ಯದ ಬೆಳವಣಿಗೆಗಳನ್ನು ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತ್ದ್ದಿದಾರೆ. ಪಕ್ಷದ ಎಲ್ಲ ನಾಯಕರು ಒಗ್ಗಟ್ಟಿನಿಂದ ಹೋಗಬೇಕು ಎನ್ನುವ ಸಂದೇಶ ಎಲ್ಲರಿಗೂ ಸಿಕ್ಕಿದೆ ಎಂಬುದನ್ನು ಮಾತ್ರ ನಾನು ದೃಢಪಡಿಸಬಲ್ಲೆ.ಅಲ್ಲದೆ,  ಚುನಾವಣೆ ಬೇರೆ ಹತ್ತಿರವಾಗುತ್ತಿದೆ~ ಎಂದು ಮಾರ್ಮಿಕವಾಗಿ ಹೇಳಿದರು.`ಪಕ್ಷದ ಮುಖಂಡರಲ್ಲಿ ಭಿನ್ನಾಭಿಪ್ರಾಯ ಇರಬಹುದು. ಆದರೆ, ಸಂಬಂಧಗಳು ಹಳಸಿಲ್ಲ. ನಾವೆಲ್ಲ ಒಟ್ಟಾಗಿದ್ದೇವೆ. ಏನೇ ಬಿಕ್ಕಟ್ಟಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬಗೆಹರಿಸಿಕೊಳ್ಳುತ್ತೇವೆ~ ಎಂದು ತಿಳಿಸಿದರು.

`ಯಡಿಯೂರಪ್ಪ ಇದ್ದಕ್ಕಿದ್ದಂತೆ ಮೌನ ವಹಿಸಿದ್ದು ಏಕೆ; ಹೈಕಮಾಂಡ್ ಅವರಿಗೆ ನೀಡಿರುವ ಸಂದೇಶ ಏನು~ ಎಂದು ಕೆದಕಿದಾಗ, `ಚುಕ್ಕಿ ಗುರುತಿನ ಪ್ರಶ್ನೆಗೆ ಉತ್ತರಿಸುವುದಿಲ್ಲ~ ಎಂದು ಅರ್ಥಗರ್ಭಿತ ನಗು ನಕ್ಕರು ಅನಂತಕುಮಾರ್. ರಾಜ್ಯ ರಾಜಕಾರಣದ ವಿಷಯವಾಗಿ ಇನ್ನಷ್ಟು ಪ್ರಶ್ನೆಗಳು ತೂರಿಬಂದಾಗ `ನೋ ಕಮೆಂಟ್ಸ್~ ಎಂಬ ಚುಟುಕು ಉತ್ತರ ನೀಡಿದರು.ಮಾತು ರಾಷ್ಟ್ರ ರಾಜಕಾರಣದ ಕಡೆ ತಿರುಗಿತು. `ರಾಹುಲ್ ಗಾಂಧಿ ಜಾದೂ ಶುರುವಿನ ಬಿಂದುವಿನಲ್ಲೇ ಮುಕ್ತಾಯ ಕಂಡಿದೆ. ಯಾವ ಚುನಾವಣೆಯಲ್ಲೂ ಕಾಂಗ್ರೆಸ್ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಒಬ್ಬ ಜನಪ್ರಿಯ ನಾಯಕನ ನೇತೃತ್ವವೂ ಇಲ್ಲದೆ ಆ ಪಕ್ಷ ಅನಾಥ ಪ್ರಜ್ಞೆ ಅನುಭವಿಸುತ್ತಿದೆ. ಚುನಾವಣೆ ಎದುರಿಸುವಂತಹ ಅಂತಃಸತ್ವವನ್ನೇ ಕಳೆದುಕೊಂಡಿದೆ~ ಎಂದು ಅವರು ಲೇವಡಿ ಮಾಡಿದರು.`ಆಡಳಿತದಲ್ಲಿ ಅರಾಜಕತೆ, ವ್ಯಾಪಕ ಭ್ರಷ್ಟಾಚಾರ ಹಾಗೂ ಆರ್ಥಿಕ ದಿವಾಳಿತನದಿಂದ ಯುಪಿಎ ಸರ್ಕಾರ ಸಂಪೂರ್ಣವಾಗಿ ಮುಗ್ಗರಿಸಿದ್ದು, ಸರ್ಕಾರದ ಪತನಕ್ಕೆ ಕ್ಷಣಗಣನೆ ಶುರುವಾಗಿದೆ~ ಎಂದು ಹೇಳಿದರು.`ರಾಷ್ಟ್ರಪತಿ ಚುನಾವಣೆಯಲ್ಲಿ ಏಕಮತದ ಅಭ್ಯರ್ಥಿಯನ್ನು ನಿಲ್ಲಿಸಿ, ಗೆಲ್ಲಿಸುವುದೇ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸವಾಲಾಗಿದೆ. ಟಿಎಂಸಿ, ಡಿಎಂಕೆ, ಟಿಆರ್‌ಎಸ್, ಎಸ್‌ಪಿ, ಬಿಎಸ್‌ಪಿ, ಎನ್‌ಸಿಪಿ ಮೊದಲಾದ ಪಕ್ಷಗಳ ನಿಲುವು ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ~ ಎಂದು ತಿಳಿಸಿದರು.`ಡೀಸೆಲ್ ಬೆಲೆಯನ್ನು ನಿಯಂತ್ರಣ ವ್ಯಾಪ್ತಿಯಿಂದ ಹೊರಗಿಟ್ಟಿದ್ದು ಯುಪಿಎ ಸರ್ಕಾರದ ದೊಡ್ಡ ಪ್ರಮಾದ. ಅದರ ಜನವಿರೋಧಿ ನೀತಿಗೆ ಇದು ತಾಜಾ ಉದಾಹರಣೆ.ಹಿಂದಿನ ವಾಜಪೇಯಿ ಸರ್ಕಾರವನ್ನೂ ಇಂದಿನ ಯುಪಿಎ ಸರ್ಕಾರವನ್ನೂ ಅಳೆದು ನೋಡುತ್ತಿರುವ ಜನ, ತಮ್ಮ ಸರದಿಗಾಗಿ ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ~ ಎಂದು ಅವರು ವಿಶ್ಲೇಷಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.