ಭಾನುವಾರ, ಏಪ್ರಿಲ್ 11, 2021
21 °C

ನ್ಯಾಯಾಲಯದ ಅಂಗಳದಲ್ಲಿ ಇನಾಂ ಭೂಮಿಯ ಚೆಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ಹೋಬಳಿಯ ಕೃಷಿಕ ಸಮುದಾಯದಲ್ಲಿ ಅನಿಶ್ಚಿತತೆ ಮತ್ತು ಭೀತಿ ತಂದಿರುವ ಇನಾಂ ವಿವಾದದ ಬಗ್ಗೆ ಹೋಬಳಿಯ ವಿವಿಧ ವರ್ಗಗಳ ಜನರನ್ನು `ಪ್ರಜಾವಾಣಿ~ ಮಾತಿಗೆ ಎಳೆದಾಗ ವ್ಯಕ್ತವಾದ ಅಭಿಪ್ರಾಯಗಳ ಸಾರ ಹೀಗಿದೆ.ಕಳಸದಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ಇನಾಂ ವಿವಾದವನ್ನು ಬಗೆಹರಿಸುವುದಾಗಿ ಘೋಷಣೆ ಮಾಡಿ ಚಪ್ಪಾಳೆ ಗಿಟ್ಟಿಸಿದ್ದ ಕಾನೂನು ಸಚಿವರು ಮತ್ತು ರಾಜ್ಯ ಸರ್ಕಾರ ಆನಂತರ ವಿವಾದವನ್ನು ಬಗೆಹರಿಸಲು ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂಬ ಅಸಮಾಧಾನ ಹೆಚ್ಚಿನ ಬಾಧಿತರಲ್ಲಿ ಕೇಳಿಬರುತ್ತಿದೆ.ಇನಾಂ ಭೂಮಿ ಸಂತ್ರಸ್ತರ ಹೋರಾಟ ಸಮಿತಿಯು ಅನೇಕ ಬಾರಿ ನಿಯೋಗದಲ್ಲಿ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಇಲ್ಲಿನ ಜನರ ಪರವಾಗಿ ಹೈಕೋರ್ಟ್‌ಗೆ ಸರ್ಕಾರ ಈವರೆಗೆ ಸೂಕ್ತ ಪ್ರಮಾಣ ಪತ್ರ ಸಲ್ಲಿಸಿಲ್ಲ. ಅದರ ಪರಿಣಾಮವಾಗಿಯೇ ಈವರೆಗೂ ತಡೆಯಾಜ್ಞೆ ಸಿಕ್ಕಿಲ್ಲ ಎಂಬ ಅಸಮಾಧಾನ ಕೂಡ ಬಲವಾಗಿದೆ.ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ವಿಶೇಷ ತಹಸೀಲ್ದಾರರು ಮಂಜೂರು ಮಾಡಿರುವ ಭೂಮಿಯನ್ನೇ ಅರಣ್ಯದ ನೆಪದಲ್ಲಿ ಖುಲ್ಲಾ ಮಾಡಿಸುವ ಸ್ಥಿತಿ ಬಂದಿದೆ. 1928ರ ಅಧಿಸೂಚನೆ ಬಗ್ಗೆ ಮಾಹಿತಿ ಇಲ್ಲದ ಆಡಳಿತಗಾರರ ತಪ್ಪಿಗೆ ಅಮಾಯಕ ಕೃಷಿಕರು ತಮ್ಮ ಬದುಕನ್ನೇ ಕಳೆದುಕೊಳ್ಳಬೇಕಾಗಿದೆ ಎಂದು ಹಿರಿಯ ದಸ್ತಾವೇಜು ಬರಹಗಾರ ಪಟೇಲ್ ರಾಮಯ್ಯ ಅಭಿಪ್ರಾಯಪಡುತ್ತಾರೆ.ವಿವಾದಿತ ಭೂಮಿಯನ್ನು ಕೃಷಿಕರ ಪಾಲಿಗೆ ಉಳಿಸಿಕೊಳ್ಳುವುದು ಕಾನೂನು ಸಮರದಲ್ಲಿ ಕಷ್ಟಸಾಧ್ಯ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕಾಗುತ್ತದೆ.ಕೇಂದ್ರದ ಮೇಲೆ ಪ್ರಭಾವ ಬೀರಿ ಈ ಕೆಲಸ ಮಾಡಿಸಿಕೊಳ್ಳಬಲ್ಲ ಸರ್ಕಾರ ರಾಜ್ಯದಲ್ಲಿ ಬಂದಾಗ ಮಾತ್ರ ಈ ಕೆಲಸ ಸುಗಮ ಆಗುತ್ತದೆ. ಅಲ್ಲಿವರೆಗೂ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯುವುದೊಂದೇ ಸದ್ಯದ ಪರಿಹಾರ ಮಾರ್ಗ ಎಂದು ಜೆಡಿಎಸ್ ಮುಖಂಡ ಜಿ.ಕೆ.ಮಂಜಪ್ಪಯ್ಯ ಹೇಳುತ್ತಾರೆ.ಇನಾಂ ವಿವಾದದಿಂದ ಗಿರಿಜನರಿಗೆ ತೊಂದರೆ ಇಲ್ಲ. ಆದರೂ ಕೂಡ ಸಣ್ಣ ಕೃಷಿಕರ ಪರವಾಗಿ ಗಿರಿಜನರು ಹೋರಾಟ ರೂಪಿಸುತ್ತಾರೆ ಮತ್ತು ಪುನರ್ವಸತಿ-ಪರಿಹಾರದ ಪ್ಯಾಕೇಜನ್ನು ವಿರೋಧಿಸುತ್ತಾರೆ ಎಂದು ಗಿರಿಜನರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರಿನಿವಾಸಗೌಡ ಹೇಳುತ್ತಾರೆ.ಇನಾಂ ಭೂಮಿ ಅರಣ್ಯ ಅಲ್ಲವೇ ಅಲ್ಲ ಎಂದು ನಿರೂಪಿಸಲು ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದೇವೆ. ಅಲ್ಲಿ ನಮಗೆ ಖಂಡಿತ ನ್ಯಾಯ ಸಿಗುತ್ತದೆ.ರಾಜ್ಯ ಸರ್ಕಾರ ಕೂಡ ಇನಾಂ ಭೂಮಿವಾಸಿಗಳ ಪರವಾಗಿ ಎಲ್ಲ ಸಹಕಾರ ನೀಡುವ ಭರವಸೆ ನೀಡಿದೆ ಎಂದು ಇನಾಂ ಭೂಮಿ ಸಂತ್ರಸ್ತರ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ವಿ.ವೆಂಕಟಸುಬ್ಬಯ್ಯ ವಿಶ್ವಾಸ ವ್ಯಕ್ತಪಡಿಸುತ್ತಾರೆ.ಇನಾಂ ಭೂಮಿಯೂ ಸೇರಿದಂತೆ ಎಲ್ಲ ಬಗೆಯ ಒತ್ತುವರಿ ಮಾಡಿರುವ ಬಡಕೃಷಿಕರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಅವರು ಕೃಷಿ ಮಾಡಿರುವ ಭೂಮಿಗೆ ಹಕ್ಕು ಪತ್ರ ನೀಡಿ ಅವರನ್ನು ಅಲ್ಲೇ ಉಳಿಸಬೇಕು ಎಂಬುದು ಮಲೆನಾಡು ಹಿತರಕ್ಷಣಾ ಸಮಿತಿ ಸಂಚಾಲಕ  ಕೆ.ಎಲ್.ವಾಸು ಅವರ ಅಭಿಪ್ರಾಯ.         

         

ಕೇರಳದ ತಿರುವಾಂಕೂರು ಮಹಾರಾಜರ ಅಧಿಸೂಚನೆಯನ್ನು ಅಲ್ಲಿನ ರಾಜ್ಯ ಸರ್ಕಾರ ವಿರೋಧಿಸಿದ ಬಗೆ ಮತ್ತು ಕೊಡಗಿನ ಜಮ್ಮಾ ಬಾಣೆ ಮಾದರಿಯಲ್ಲಿ ಕಳಸದ ಇನಾಂ ಭೂಮಿಯೂ ವಿಶೇಷ ಪ್ರಕರಣ ಎಂದು ಸರ್ಕಾರ ಜನರ ಪರವಾಗಿ ನಿಲ್ಲಬೇಕು ಎಂದು ಇನಾಂ ಪ್ರದೇಶದ ಕೃಷಿಕ ಕೆ.ಜೆ.ಅಗಸ್ಟೀನ್ ಹೇಳುತ್ತಾರೆ.ಸಾವಿರಕ್ಕೂ ಹೆಚ್ಚು ಕುಟುಂಬಗಳ ಭವಿಷ್ಯದ ಪ್ರಶ್ನೆಯೇ ಆದರೂ ಇನಾಂ ವಿವಾದ ವಿರೋಧಿಸಿ ಪ್ರಬಲವಾದ ಜನಾಂದೋಲನ ರೂಪುಗೊಳ್ಳದೆ ಇರುವುದು ಮಾತ್ರ ಅತ್ಯಂತ ವಿಪರ್ಯಾಸ ಎಂದು ಮಾಗಲಿನ ಇನಾಂ ಭೂಮಿ ಸಾಗುವಳಿದಾರ ಹರೀಶ್ ಹೇಳುವ ಮಾತು ಮಲೆನಾಡಿನ ಜನರ ಸೌಮ್ಯ ಸ್ವಭಾವವನ್ನು ಪ್ರತಿಬಿಂಬಿಸುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.