ಬುಧವಾರ, ಮಾರ್ಚ್ 3, 2021
26 °C

ಪಂಕ್ತಿಭೇದ, ಮಡೆಸ್ನಾನ ನಿಷೇಧಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಂಕ್ತಿಭೇದ, ಮಡೆಸ್ನಾನ ನಿಷೇಧಕ್ಕೆ ಆಗ್ರಹ

ಬೆಂಗಳೂರು: ಪಂಕ್ತಿಭೇದ, ಮಡೆಸ್ನಾನದಂತಹ ಮೂಢನಂಬಿಕೆಗಳನ್ನು ನಿಷೇಧಿಸಿ ಕಾನೂನು ಜಾರಿ ಮಾಡುವುದು ಅಗತ್ಯ ಎಂದು ಹಿರಿಯ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಆಗ್ರಹಿಸಿದರು. ನಗರದ ಸೆಂಟ್ರಲ್ ಕಾಲೇಜು ಸಭಾಂಗಣದಲ್ಲಿ ಬುಧವಾರ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ವತಿಯಿಂದ ಆಯೋಜಿಸಿದ್ದ `ಪಂಕ್ತಿಭೇದ, ಮಡೆಸ್ನಾನ: ತರ್ಕ-ಕುತರ್ಕ' ಸಂವಾದ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಪಂಕ್ತಿಭೇದ, ಮಡೆಸ್ನಾನ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ-ಇವು ಸಾಮಾಜಿಕ ಅನಿಷ್ಟಗಳು. ಇಂಥ ಮೂಢನಂಬಿಕೆಗಳಿಗೂ ಜಾತಿ ವ್ಯವಸ್ಥೆಗೂ ಹತ್ತಿರದ ಸಂಬಂಧವಿದೆ. ಜಾತಿ ವ್ಯವಸ್ಥೆಯನ್ನು ಬದಲಾಯಿಸಲು ಇಂಥ ಮೂಢನಂಬಿಕೆಗಳನ್ನು ಕಿತ್ತೊಗೆಯಬೇಕು. ಜನರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸಬೇಕೆನ್ನುವುದು ನಮ್ಮ ಸಂವಿಧಾನದ ಮೂಲತತ್ವ. ಹಾಗಾಗಿ, ಪಂಕ್ತಿಭೇದ, ಮಡೆಸ್ನಾನ ನಿಷೇಧಿಸಿ ಕಾನೂನು ಜಾರಿ ಅಗತ್ಯ ಎಂದರು.`ನೊಂದ ನೋವ ನೋಯದವರೆತ್ತ ಬಲ್ಲರು?' ಎಂಬಂತೆ ಕೆಳಜಾತಿಯವರ ನೋವನ್ನು ಮೇಲ್ಜಾತಿಯವರು ಅರಿಯಬೇಕಿದೆ. ಇಂದು ಮನುಷ್ಯ ನಾಗರಿಕನಾಗಿ, ಅಕ್ಷರವಂತನಾಗಿದ್ದಾನೆ ಎಂದ ಮಾತ್ರಕ್ಕೆ ಅವನು ಹೃದಯ ಸಂಪನ್ನನೂ ಆಗಿರುತ್ತಾನೆ ಎಂಬುದು ಸತ್ಯವಲ್ಲ. ತಿಳಿವಳಿಕೆಯುಳ್ಳವರು ಕೂಡಾ ಮಡೆಸ್ನಾನ, ಪಂಕ್ತಿಭೇದದ ಆಚರಣೆಯಲ್ಲಿ ತೊಡಗಿರುವುದು ನಿಜಕ್ಕೂ ಮೂರ್ಖತನ. ಇದು ಅವರ ದಡ್ಡತನ ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.`ಬ್ರಾಹ್ಮಣರ ಎಂಜಲನ್ನು ಮೈಗೆ ಹಚ್ಚಿದರೆ ಕುಷ್ಠರೋಗ ನಿವಾರಣೆ ಆಗುತ್ತದೆ' ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಮಾರಾಟಕ್ಕಿಟ್ಟಿದ್ದ ಪುಸ್ತಕವೊಂದರಲ್ಲಿ ಹೇಳಲಾಗಿದೆ. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯವೊಂದರಲ್ಲಿ ಇಂಥ ಅವೈಜ್ಞಾನಿಕ ಹಾಗೂ ಮನಸ್ಸಿಗೆ ನೋವುಂಟು ಮಾಡುವ ಅಂಶಗಳಿರುವುದು ಸರಿಯಲ್ಲ. ಇಂಥ ಅನ್ಯಾಯ, ಶೋಷಣೆಯ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡುವ ಅಗತ್ಯವಿದೆ ಎಂದರು.ಮಾನವ ಮಂಟಪದ ಮುಖ್ಯಸ್ಥೆ ಇಂದಿರಾ ಕೃಷ್ಣಪ್ಪ ಮಾತನಾಡಿ, ಪುರೋಹಿತಶಾಹಿ ವರ್ಗ `ತಳಿ ಶುದ್ಧತೆ'ಗಾಗಿ ಪಂಕ್ತಿಭೇದ, ಮಡೆಸ್ನಾನದಂತಹ ಆಚರಣೆಗಳನ್ನು ಜೀವಂತವಾಗಿರಿಸಿದೆ. ಪಂಕ್ತಿಭೇದ, ಮಡೆಸ್ನಾನದಂತಹ ಕಾಯಿಲೆಗಳ ವಿರುದ್ಧ ಪ್ರಜ್ಞಾವಂತರು, ವೈದ್ಯರಾಗಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಮಾತನಾಡಿ, ಮಡೆಸ್ನಾನ, ಪಂಕ್ತಿಭೇದ ಆಚರಣೆಗಳನ್ನು ಸಮರ್ಥಿಸಿಕೊಳ್ಳುವ ಸ್ವಾಮೀಜಿಗಳು, ಊಟ ಮಾಡಿದ ಕೈಗೆ ಕನಿಷ್ಠ ಹಸ್ತಲಾಘವನ್ನಾದರೂ ಕೊಡುತ್ತಾರೆಯೇ? ಎಂದು ಪ್ರಶ್ನಿಸಿದರು. ದೊಡ್ಡದೊಡ್ಡ ಮಠಾಧೀಶರು, ಸ್ವಾಮೀಜಿಗಳು ವಿರಕ್ತರಂತೆ ಜೀವನ ನಡೆಸಬೇಕು. ಆದರೆ, ಅವರೆಲ್ಲಾ ಇಂದು ದುಬಾರಿ ಕಾರುಗಳು, ಹೆಲಿಕಾಪ್ಟರ್‌ಗಳಲ್ಲಿ ಓಡಾಡುತ್ತಿದ್ದಾರೆ ಎಂದು ವಿಷಾದಿಸಿದರು.ಅಧ್ಯಕ್ಷತೆ ವಹಿಸಿದ್ದ ವಿಚಾರವಾದಿ ಡಾ.ಜಿ. ರಾಮಕೃಷ್ಣ ಮಾತನಾಡಿ, ಮಲೆಕುಡಿಯರ ಅಜ್ಞಾನವನ್ನು ಕೆಲವರು ಬಂಡವಾಳ ಮಾಡಿಕೊಂಡು, ಇಂಥ ಅನಿಷ್ಟ ಪದ್ಧತಿಗಳನ್ನು ಆಚರಿಸುತ್ತಿದ್ದಾರೆ.ಮಲೆಕುಡಿಯರಲ್ಲಿ ತಿಳಿವಳಿಕೆ ಮೂಡಿಸಬೇಕು. ಪ್ರಜ್ಞಾಪೂರ್ವಕವಾದ ತಿಳುವಳಿಕೆಯಿಂದ ಮಾತ್ರ ಇಂಥ ಮೂಢನಂಬಿಕೆ ಹೊಡೆದೋಡಿಸಬಹುದು ಎಂದು ಸಲಹೆ ನೀಡಿದರು.ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಎನ್.ಎಲ್. ಭರತ್‌ರಾಜ್, ರಾಜ್ಯ ಕಾರ್ಯದರ್ಶಿ ಬಿ. ರಾಜಶೇಖರಮೂರ್ತಿ, ಪತ್ರಕರ್ತ ಲಕ್ಷ್ಮಣ್ ಹೂಗಾರ್ ಮತ್ತು ಪ್ರಗತಿಪರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.