ಭಾನುವಾರ, ಮೇ 16, 2021
29 °C
ತಜ್ಞರ ಸಮಾಲೋಚನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ

ಪಂಚಾಯಿತಿ ಚುನಾವಣೆಯಲ್ಲಿ ಹಣದ ಪ್ರಭಾವ ತಗ್ಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಂಚಾಯಿತಿ ಚುನಾವಣೆಯಲ್ಲಿ ಹಣದ ಪ್ರಭಾವ ತಗ್ಗಲಿ

ಬೆಂಗಳೂರು: ಪಂಚಾಯಿತಿ ಚುನಾವಣೆಗಳಲ್ಲಿ ಹಣದ ಪ್ರಭಾವವನ್ನು ತಗ್ಗಿಸದೇ ಇದ್ದರೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಕನಸು ನನಸಾಗಲು ಸಾಧ್ಯವಿಲ್ಲ. ಅಧಿಕಾರ ವಿಕೇಂದ್ರೀಕರಣವೂ ಅರ್ಥ ಕಳೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚಾಯತ್ ರಾಜ್ ವ್ಯವಸ್ಥೆ ಸುಧಾರಣೆಗಾಗಿ ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ `ಜನರ ಕೈಗೆ ಅಧಿಕಾರ-ನಮ್ಮ ನಿರ್ಧಾರ' ಎಂಬ ರಾಜ್ಯಮಟ್ಟದ ತಜ್ಞರ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.`ಚುನಾವಣೆಯಲ್ಲಿ ಹಣ ಮತ್ತು ಜಾತಿಯ ಪ್ರಭಾವ ಹೆಚ್ಚುತ್ತಲೇ ಹೋಗುತ್ತಿದೆ. ಪಂಚಾಯಿತಿ ಚುನಾವಣೆಗೂ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಪರಿಪಾಠ ಬೆಳೆಯುತ್ತಿದೆ. ಶೋಷಿತ ಸಮುದಾಯದ ಜನರು, ಮಹಿಳೆಯರು ಚುನಾವಣೆ ಎದುರಿಸುವುದು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮೀಸಲಾತಿ ಇಲ್ಲದೇ ಇದ್ದರೆ ದುರ್ಬಲ ವರ್ಗಗಳ ಜನರು ಮತ್ತು ಮಹಿಳೆಯರಿಗೆ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವೇ ದೊರೆಯುತ್ತಿರಲಿಲ್ಲ' ಎಂದರು.ಅಧಿಕಾರದಲ್ಲಿ ಜನರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಕಾರಣಕ್ಕಾಗಿಯೇ ಅಧಿಕಾರ ವಿಕೇಂದ್ರೀಕರಣ ನೀತಿಯನ್ನು ಜಾರಿಗೆ ತರಲಾಯಿತು. ಆದರೂ, ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಹೆಚ್ಚಿಲ್ಲ. ಪಂಚಾಯಿತಿಯ ಹಣ ತಮ್ಮದು, ಅಲ್ಲಿನ ಯೋಜನೆಗಳಲ್ಲಿ ಪಾಲು ಪಡೆಯುವ ಅಧಿಕಾರ ತಮಗೆ ಇದೆ ಎಂಬ ಭಾವನೆ ಇನ್ನೂ ಜನರಲ್ಲಿ ಮೂಡಿಲ್ಲ. ಈ ಕಾರಣದಿಂದಾಗಿಯೇ `ಜನರ ಕೈಗೆ ಅಧಿಕಾರ' ಎಂಬುದು ಇನ್ನೂ ಪರಿಕಲ್ಪನೆಯಾಗಿಯೇ ಉಳಿದಿದೆ ಎಂದರು.ಅಭಿವೃದ್ಧಿ ಸಾಧ್ಯ: ಪಂಚಾಯಿತಿಗಳಿಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಂದ ದೊಡ್ಡ ಮೊತ್ತದ ಅನುದಾನ ದೊರೆಯುತ್ತಿದೆ. ಆದರೆ, ಈ ಹಣ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಬಳಸಿಕೊಂಡರೆ ಗ್ರಾಮೀಣ ಪ್ರದೇಶಕ್ಕೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲು ಸಾಧ್ಯವಿದೆ. ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗೆ (ಟಿಎಸ್‌ಪಿ) ಸಾವಿರಾರು ಕೋಟಿ ರೂಪಾಯಿ ಮೀಸಲಿಡಲಾಗುತ್ತದೆ. ಹತ್ತು ವರ್ಷಗಳ ಕಾಲ ಈ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದರೆ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಾಧ್ಯವಿದೆ ಎಂದರು.ಪಂಚಾಯತ್ ರಾಜ್ ಸಂಸ್ಥೆಗಳ ಅಧ್ಯಕ್ಷರ ಅವಧಿ ಮೊಟಕುಗೊಳಿಸಿರುವುದರಿಂದ ಅಲ್ಲಿಯೂ ರಾಜಕೀಯ ಅಸ್ಥಿರತೆ ತಾಂಡವವಾಡುತ್ತಿದೆ. ಪಂಚಾಯತ್ ಸಂಸ್ಥೆಗಳ ಅಧ್ಯಕ್ಷರ ನೇರ ಚುನಾವಣೆ ಪದ್ಧತಿ ಜಾರಿಗೊಳಿಸುವ ಕುರಿತು ಚರ್ಚೆ ನಡೆಯುತ್ತಿದೆ. ಸ್ಥಳೀಯ ಅಭಿವೃದ್ಧಿ ಯೋಜನೆಗಳನ್ನು ಪಂಚಾಯಿತಿ ಹಂತದಿಂದಲೇ ರೂಪಿಸುವ ಪ್ರಕ್ರಿಯೆಯೂ ಆರಂಭ ಆಗಬೇಕು. ಆಗ ಮಾತ್ರ ಅಧಿಕಾರ ವಿಕೇಂದ್ರೀಕರಣದ ಕನಸು ಸಾಕಾರವಾಗುತ್ತದೆ ಎಂದರು.`ಮಧ್ಯವರ್ತಿಗಳನ್ನು ತೊಲಗಿಸಿ': ಆಶಯ ಭಾಷಣ ಮಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, `ಶ್ರೀಸಾಮಾನ್ಯನ ಸಬಲೀಕರಣದ ಕೇಂದ್ರಗಳಾಗಬೇಕಿದ್ದ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ. ಜನಸಾಮಾನ್ಯರು ಸರ್ಕಾರಿ ಯೋಜನೆಗಳ ಲಾಭ ಪಡೆಯುವುದಕ್ಕಾಗಿ ಯಾರನ್ನೋ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿಯನ್ನು ಒಂದೇ ಕಡೆ ಒದಗಿಸುವ `ಏಕಗವಾಕ್ಷಿ' ವ್ಯವಸ್ಥೆಯನ್ನು ಪಂಚಾಯತ್ ರಾಜ್ ಸಂಸ್ಥೆಗಳಲ್ಲೂ ರೂಪಿಸಬೇಕು' ಎಂದು ಸಲಹೆ ನೀಡಿದರು.`ನಾವು ಸರ್ಕಾರಿ ಯೋಜನೆಗಳ ಫಲಾನುಭವಿಗಳು ಎಂಬ ಭಾವನೆ ಜನರಲ್ಲಿ ಇರಬಾರದು. ಸರ್ಕಾರ ನಮ್ಮದು, ನಾವು ಅದರ ಪಾಲುದಾರರು ಎಂಬ ಹಕ್ಕುದಾರಿಕೆ ಬರಬೇಕು. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಬದಲಾವಣೆ ತರುವುದಕ್ಕೆ ಜನಸಾಮಾನ್ಯರೂ ಶ್ರಮಿಸಬೇಕು. ಪಂಚಾಯಿತಿಗಳಲ್ಲಿನ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ನಡುವಣ ಸಂಬಂಧ ಸುಧಾರಣೆ ಆಗಬೇಕು' ಎಂದು ಪ್ರತಿಪಾದಿಸಿದರು.ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೂಪಿಸಿದ ಕೆಲ ಅತ್ಯುತ್ತಮ ಯೋಜನೆಗಳು ರಾಜ್ಯದ ಎಲ್ಲ ಭಾಗಗಳಲ್ಲೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಕೆಲ ಪ್ರದೇಶಗಳನ್ನು ಈ ಯೋಜನೆಗಳು ಇನ್ನೂ ತಲುಪಿಲ್ಲ. ಇದರಿಂದಾಗಿಯೇ ನಕ್ಸಲೀಯ ಸಮಸ್ಯೆ ದೊಡ್ಡದಾಗಿ ಬೆಳೆದಿದೆ. `ಜನರ ಕೈಗೆ ಅಧಿಕಾರ' ನೀಡುವ ಕನಸನ್ನು ನನಸು ಮಾಡಲು ಎಲ್ಲ ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸುವ ಅಗತ್ಯವಿದೆ ಎಂದರು.`ಗ್ರಾಮ ಸಭೆಗಳೇ ನಡೆದಿಲ್ಲ': ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕ ರಾಜ್ಯ ಅಧಿಕಾರ ವಿಕೇಂದ್ರೀಕರಣದ ವಿಷಯದಲ್ಲಿ ಮಾದರಿ ರಾಜ್ಯ ಎಂಬ ಕೀರ್ತಿ ಪಡೆದಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಶೇ 80ರಷ್ಟು ಕಡೆಗಳಲ್ಲಿ ಗ್ರಾಮಸಭೆಗಳನ್ನೇ ಸರಿಯಾಗಿ ನಡೆಸಿಲ್ಲ ಎಂಬುದು ಆತಂಕಕಾರಿ ವಿಷಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ಹೇಳಿದರು. ಪಂಚಾಯತ್ ರಾಜ್ ಸಂಸ್ಥೆಗಳು ಜನರ ನಿಜವಾದ ಅಗತ್ಯಗಳನ್ನು ಪೂರೈಸುವ ಕಡೆಗೆ ಗಮನವನ್ನೇ ಹರಿಸಿಲ್ಲ.ಗ್ರಾಮಗಳಲ್ಲಿ ಒಕ್ಕಲು ಕಣ ನಿರ್ಮಾಣ, ಸ್ಮಶಾನ ಮತ್ತು ರುದ್ರಭೂಮಿಗಳ ನಿರ್ಮಾಣ, ಜಾನುವಾರು ದೊಡ್ಡಿಗಳ ಸ್ಥಾಪನೆ ಕುರಿತು ಚರ್ಚೆಯೇ ನಡೆದಿಲ್ಲ. ಶುದ್ಧ ಕುಡಿಯುವ ನೀರು ಒದಗಿಸಬೇಕೆಂಬ ವಿಷಯ ಇನ್ನೂ ಪಂಚಾಯಿತಿಗಳ ಗಮನಕ್ಕೆ ಬಂದಿಲ್ಲ. ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಬದಲಾವಣೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದರು.ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಕಿಮ್ಮನೆ ರತ್ನಾಕರ್, ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್, ಮಾಜಿ ಶಾಸಕ ವಿ.ಆರ್.ಸುದರ್ಶನ್, ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀಕರಣ ಮತ್ತು ಗ್ರಾಮ ಸ್ವರಾಜ್ ಪರಿಕಲ್ಪನೆ ಸಾಕಾರಗೊಳಿಸುವ ವಿಷಯದಲ್ಲಿ ಕೆಲಸ ಮಾಡುತ್ತಿರುವ ತಜ್ಞರು, ವಿವಿಧ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.