ಮಂಗಳವಾರ, ಏಪ್ರಿಲ್ 13, 2021
28 °C

ಪಂಚಾಯ್ತಿಯಿಂದ ಸಂಸತ್ತಿನವರೆಗೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ):  ಮಂಗಳವಾರ ನಿಧನರಾದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್ ದಗಡೋಜಿ ರಾವ್ ದೇಶ್‌ಮುಖ್  ಒಬ್ಬ ಚಾಣಾಕ್ಷ ರಾಜಕಾರಣಿ.ಪುಟ್ಟ ಹಳ್ಳಿಯೊಂದರ `ಸರಪಂಚ~ರಾಗಿ 38 ವರ್ಷಗಳ ಹಿಂದೆ ರಾಜಕೀಯ ಪಯಣ ಆರಂಭಿಸಿದ ಅವರು, ಎರಡು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಮುಂಬೈ ದಾಳಿಯ ನಂತರ ಮುಖ್ಯಮಂತ್ರಿ ಹುದ್ದೆ ತ್ಯಜಿಸಬೇಕಾಗಿ ಬಂದರೂ ಕೇಂದ್ರ ರಾಜಕಾರಣದಲ್ಲಿ ಮಿಂಚಿದರು.ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಪುಟ್ಟ ಹಳ್ಳಿ ಬಬಲಗಾಂವ್‌ನ ಮರಾಠ ಕುಟುಂಬಕ್ಕೆ ಸೇರಿದ್ದ ವಿಲಾಸ್‌ರಾವ್ ಕಾನೂನು ಪದವೀಧರ. ಪುಣೆಯ ಕಾನೂನು ಕಾಲೇಜಿನಲ್ಲಿ ಐಎಲ್‌ಎಸ್ ಪದವಿ ಪಡೆದ ನಂತರ ಕಾಂಗ್ರೆಸ್‌ನ ತಳಮಟ್ಟದ ಕಾರ್ಯಕರ್ತರಾಗಿ ದುಡಿದರು.ಹಂತ ಹಂತವಾಗಿ ಪಕ್ಷದ ಎಲ್ಲ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ತಾವೊಬ್ಬ `ಸಮರ್ಥ ಹಾಗೂ ಭರವಸೆಯ ನಾಯಕ~ ಎಂಬ ಅಭಿಪ್ರಾಯವನ್ನು ಪಕ್ಷದ ವರಿಷ್ಠರಲ್ಲಿ ಮೂಡಿಸಿದರು. `ನಿಪುಣ ರಾಜಕಾರಣಿ~ಯಾಗಿ ರಾಜಕೀಯ ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡ ವಿಲಾಸ್‌ರಾವ್ ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕರಾಗಿದ್ದರು.ರಾಜಕೀಯ ಪಯಣ: ವಿಲಾಸ್‌ರಾವ್ ದೇಶಮುಖ್ ಅವರ ರಾಜಕೀಯ ಪಯಣ ಆರಂಭವಾಗಿದ್ದು 1974ರಲ್ಲಿ. ತಮ್ಮ  ಹುಟ್ಟೂರು ಬಬಲಗಾಂವ್‌ನ ಸರಪಂಚ ಹುದ್ದೆಗೆ ಏರುವ ಮೂಲಕ ರಾಜಕೀಯದಲ್ಲಿ ಅಂಬೆಗಾಲಿಟ್ಟರು. ನಂತರ ಉಸ್ಮಾನಾಬಾದ್ ಜಿಲ್ಲಾ ಪರಿಷತ್‌ನ ಸದಸ್ಯರಾದರು. ಲಾತೂರ್ ತಾಲ್ಲೂಕು ಪಂಚಾಯಿತಿ ಸವಿತಿಯ ಉಪಾಧ್ಯಕ್ಷರಾದರು. 1975ರಿಂದ 1978ರವರೆಗೆ ಉಸ್ಮಾನಾಬಾದ್ ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ವಿಲಾಸ್‌ರಾವ್ ಪಕ್ಷದಲ್ಲಿ `ಐದು ಅಂಶಗಳ ಕಾರ್ಯಕ್ರಮ~ ಅನುಷ್ಠಾನಕ್ಕೆ ತಂದರು. 1980ರಲ್ಲಿ ಮೊಟ್ಟಮೊದಲ ಬಾರಿಗೆ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದರು. ಅಲ್ಲಿಂದ ವಿಲಾಸ್‌ರಾವ್ ಅವರ ಗೆಲುವಿನ ಪರ್ವ ಆರಂಭವಾಯಿತು. ಆ ಗೆಲುವು 1985 ಮತ್ತು 1990ರ ವಿಧಾನಸಭಾ ಚುನಾವಣೆಯಲ್ಲೂ ಮುಂದುವರಿಯಿತು.ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಂಗಳದಲ್ಲಿ `ಪ್ರಭಾವಿ ನಾಯಕ~ನೆಂದೇ ಬಿಂಬಿತರಾಗಿದ್ದ ವಿಲಾಸ್‌ರಾವ್ ದೇಶ್‌ಮುಖ್ ಅವರು ಪ್ರತಿ ಬಾರಿ ಶಾಸಕರಾಗಿ ಆಯ್ಕೆಯಾದಾಗಲೂ ಉತ್ತಮ ಖಾತೆಗಳನ್ನು ನಿರ್ವಹಿಸಿದ್ದಾರೆ. ಕಂದಾಯ ಮತ್ತು ಸಹಕಾರ, ಕೃಷಿ, ಗೃಹ, ಕೈಗಾರಿಕೆ ಮತ್ತು ಶಿಕ್ಷಣ... ಹೀಗೆ 1982 ರಿಂದ 1985ರವೆಗೆ ಅವರು ಪ್ರಮುಖ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.ಗೆಲುವಿಗೆ ಬ್ರೇಕ್ ಬಿತ್ತು
: ಅವರ ಗೆಲುವಿಗೆ ಬ್ರೇಕ್ ಬಿದ್ದಿದ್ದು 1995ರ ವಿಧಾನಸಭಾ ಚುನಾವಣೆಯಲ್ಲಿ. ಶಿವಾಜಿರಾವ್ ಪಾಟೀಲ್ ಕವ್ಹೇಕರ್ ಅವರ ಎದುರು ಸೋತುಬಿಟ್ಟರು. ಆದರೆ ಆ ಸೋಲಿನ ಕಹಿ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರ ಮನದಲ್ಲಿ ಬಹಳ ಕಾಲ ಉಳಿಯಲು ಬಿಡದ ವಿಲಾಸ್‌ರಾವ್, 1999ರ ಚುನಾವಣೆಯಲ್ಲಿ 90,000 ಮತಗಳ ಅಂತರದಲ್ಲಿ ಅದೇ ಶಿವಾಜಿರಾವ್ ಪಾಟೀಲ್ ಅವರನ್ನು ಮಣಿಸಿದರು.ಆ ಭರ್ಜರಿ ಜಯ, ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಗಾದಿಯವರೆಗೂ ಕರೆದೊಯ್ದಿತು. ಅಕ್ಟೋಬರ್ 18, 1999ರಂದು ವಿಲಾಸ್‌ರಾವ್ ದೇಶಮುಖ್ ಮೊದಲ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಜನವರಿ 17,2003ರವರೆಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು.ರಾಜ್ಯ ಕಾಂಗ್ರೆಸ್‌ನಲ್ಲಿ ಉದ್ಭವಿಸಿದ `ಬಣ ರಾಜಕೀಯ~ದಿಂದಾಗಿ ಸುಶೀಲ್ ಕುಮಾರ್ ಶಿಂಧೆ ಅವರಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಬೇಕಾಗಿ ಬಂತು. ಇದರಲ್ಲಿ ಮತ್ತೊಬ್ಬ ಮರಾಠ ನಾಯಕ ಶರದ್ ಪವಾರ್ ಕೈವಾಡವೂ ಇತ್ತು ಎನ್ನಲಾಗಿದೆ. ಇಂಥ ಸೋಲಿನ ನಡುವೆಯೂ ಧೃತಿಗೆಡದ ಅವರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತೆ 2004ರಲ್ಲಿ ಲಾತೂರ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 2004ರಂದು ಎರಡನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.ಮುಳುವಾದ ಮುಂಬೈ ದಾಳಿ: ನವೆಂಬರ್ 26, 2008ರಲ್ಲಿ ಉಗ್ರರು ಮುಂಬೈನಲ್ಲಿ ನಡೆಸಿದ ದಾಳಿ ಘಟನೆಯ ನಂತರ ಮುಖ್ಯಮಂತ್ರಿಯಾಗಿದ್ದ ವಿಲಾಸ್‌ರಾವ್ ದೇಶಮುಖ್ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದರು. ರಾಜ್ಯಸಭೆ ಪ್ರವೇಶಿಸಿದ ವಿಲಾಸ್‌ರಾವ್ ಅವರಿಗೆ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಖಾತೆಯ ಜವಾಬ್ದಾರಿ ನೀಡಲಾಯಿತು. ನಂತರ ಗ್ರಾಮೀಣಾಭಿವೃದ್ಧಿ ಸಚಿವರಾದರು.  ಜುಲೈ 11,2011ರಂದು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವರಾಗಿ  ನೇಮಕಗೊಂಡರು.

ಸ್ವಗ್ರಾಮದಲ್ಲಿ ಇಂದು ಅಂತ್ಯಸಂಸ್ಕಾರ

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಸ್ವಗ್ರಾಮ ಬಬಲಗಾಂವ್‌ನಲ್ಲಿ ಬುಧವಾರ ವಿಲಾಸ್‌ರಾವ್ ಅಂತ್ಯಸಂಸ್ಕಾರ ನಡೆಯಲಿದೆ.ಬಬಲಗಾಂವ್ ನಿವಾಸದಲ್ಲಿ ವಿಲಾಸ್‌ರಾವ್ ಪಾರ್ಥಿವ ಶರೀರವನ್ನು ಬೆಳಿಗ್ಗೆ 9ರಿಂದ ಮಧ್ಯಾಹ್ನ 3ಗಂಟೆಯತನಕ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಸಂಜೆ 4 ಗಂಟೆಗೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಅವರ ಸಹೋದರ ದಿಲೀಪ್ ದೇಶಮುಖ್ ತಿಳಿಸಿದರು.ಶೋಕ: ವಿಲಾಸರಾವ್ ದೇಶಮುಖ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು ಸೇರಿದಂತೆ ಹಲವು ಗಣ್ಯರು ಅತೀವ ಸಂತಾಪವ್ಯಕ್ತಪಡಿಸಿದ್ದಾರೆ. ವಿಲಾಸರಾವ್ ಗೌರವಾರ್ಥ ಮಹಾರಾಷ್ಟ್ರ ಸರ್ಕಾರ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ. ಅಂತ್ಯಸಂಸ್ಕಾರದಲ್ಲಿ ಪ್ರಧಾನಿ ಡಾ. ಮನಮೋಹನ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಕಾಡಿದ ವಿವಾದಗಳು

ಎಲ್ಲ ರಾಜಕಾರಣಿಗಳಂತೆ, ವಿಲಾಸ್‌ರಾವ್ ಅವರನ್ನೂ ವಿವಾದಗಳು, ಹಗರಣಗಳು ಸುತ್ತುವರಿದಿದ್ದವು. ಮುಂಬೈ ದಾಳಿ ನಡೆದು, ತಾಜ್ ಹೋಟೆಲ್‌ನಲ್ಲಿ ಇನ್ನೂ ಬೆಂಕಿ ಆರಿರಲಿಲ್ಲ. ಆ ಹೊತ್ತಿನಲ್ಲೇ ಪುತ್ರ, ಬಾಲಿವುಡ್ ನಟ ರಿತೇಶ್ ಹಾಗೂ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರೊಂದಿಗೆ ಹೋಟೆಲ್‌ಗೆ ಭೇಟಿ ನೀಡಿದ್ದರು. ಅಲ್ಲಿನ ಘಟನೆಗಳನ್ನಾಧರಿಸಿ ಚಿತ್ರ ನಿರ್ಮಿಸುವ ಉದ್ದೇಶದಿಂದ ರಾಮ್ ಗೋಪಾಲ್ ವರ್ಮಾ  ಅಲ್ಲಿಗೆ ಭೇಟಿ ನೀಡಿದ್ದರೂ ಎಂಬ ವದಂತಿ ಅವರ ರಾಜಕೀಯ ಜೀವನಕ್ಕೆ ದೊಡ್ಡ ಪೆಟ್ಟು ನೀಡಿತು. ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಸುಭಾಷ್ ಘಾಯ್‌ಗೆ ಫಿಲ್ಮಂ ಇನ್ಸ್ಟಿಟ್ಯೂಟ್ ನಿರ್ಮಾಣಕ್ಕಾಗಿ ಭೂಮಿ ನೀಡಿದ್ದು, ಆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಫೆಬ್ರುವರಿ 9, 2012ರಂದು ಮುಂಬೈ ನ್ಯಾಯಾಲಯ ಆ ಭೂಮಿಯನ್ನು ಸರ್ಕಾರಕ್ಕೆ ವಾಪಸ್ ನೀಡುವಂತೆ ಆದೇಶಿಸಿದ್ದು.. ಇವೆಲ್ಲ ವಿಲಾಸ್‌ರಾವ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಸಾಬೀತು ಪಡಿಸಿದವು.ಸಾಲ ಮರುಪಾವತಿಗಾಗಿ ಕಾಂಗ್ರೆಸ್ ಶಾಸಕರೊಬ್ಬರು ರೈತರಿಗೆ ಕಿರುಕುಳ ನೀಡುತ್ತಿದ್ದು, ಅವರನ್ನು ರಕ್ಷಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಮರೀನ್ ಡ್ರೈವ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್  ಮಾರ್ಚ್ 28, 2012ರಂದು ಪೊಲೀಸರಿಗೆ ತನಿಖೆ ನಡೆಸುವಂತೆ ಆದೇಶಿಸಿತು.ವಿಲಾಸ್‌ರಾವ್ ದೇಶಮುಖ್ ಅವರು 2005ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮುಂಬೈನಲ್ಲಿ 23,840 ಚ.ಮೀ  ಭೂಮಿಯನ್ನು ತನ್ನ ಕುಟುಂಬ ನಡೆಸುವ ಮಂಜಾರಾ ಚಾರಿಟಬಲ್ ಟ್ರಸ್ಟ್‌ಗೆ  ಕಡಿಮೆ ಬೆಲೆಗೆ (ಮಾರುಕಟ್ಟೆ ಬೆಲೆ ರೂ 30 ಕೋಟಿ. ಮಾರಾಟ ಮಾಡಿದ್ದು ರೂ. 6.56 ಕೋಟಿ) ಮಾರಾಟ ಮಾಡಿದ್ದನ್ನು ಕೇಂದ್ರ ಲೆಕ್ಕಪತ್ರ ಮಹಾಪರಿಶೋಧಕರು ನೀಡಿದ 2012ರ ವರದಿಯಲ್ಲಿ ಪ್ರಶ್ನಿಸಲಾಗಿತ್ತು. ಮುಂಬೈನ ಆದರ್ಶ ಹೌಸಿಂಗ್ ಸೊಸೈಟಿ ಹಗರಣದಲ್ಲಿ ವಿಲಾಸ್‌ರಾವ್ ಅವರ ಹೆಸರು ಕೇಳಿಬಂದಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.