ಬುಧವಾರ, ಜನವರಿ 22, 2020
28 °C

ಪಂಚ ಯೋಜನೆ ಮಾಹಿತಿ ನೀಡಲು ಕಡಾಡಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಪಂಚ ಸೌಲಭ್ಯ ಯೋಜನೆಯಡಿ ಶಾಲೆಗಳಿಗೆ ಈವರೆಗೆ ಕಲ್ಪಿಸಲಾದ ಕುಡಿಯುವ ನೀರಿನ ಸೌಲಭ್ಯ, ಕೊಠಡಿ, ಪೀಠೋಪಕರಣ, ಕಂಪೌಂಡ್ ಹಾಗೂ ಶೌಚಾಲಯ ನಿರ್ಮಾಣದ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಈರಣ್ಣ ಕಡಾಡಿ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.



ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ 2011ರ ಡಿಸೆಂಬರ್ ಅಂತ್ಯದವರೆಗಿನ ಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.



`ಅಧಿಕಾರಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಆಯಾ ಶಾಲೆಗಳಲ್ಲಿ ಕಲ್ಪಿಸಿದ ಸೌಲಭ್ಯಗಳನ್ನು  ಪರಿಶೀಲಿಸಲಾಗುವುದು. ಅಧಿಕಾರಿಗಳು ಈ ಸಂಬಂಧ ಯಾವುದೇ ರೀತಿಯ ತಪ್ಪು ಮಾಹಿತಿ ಒದಗಿಸಿದಲ್ಲಿ ಆಯಾ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು~ ಎಂದು ಅವರು ಎಚ್ಚರಿಸಿದರು.



`ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿರುವ ಶಾಲೆಗಳ ಆವರಣದಲ್ಲಿ ಸಸಿಗಳನ್ನು ನೆಡಲು ನೀಡಲಾಗಿದ್ದು, ತೋಟಗಾರಿಕೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಆಯಾ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಈವರೆಗೆ ಎಷ್ಟು ಶಾಲೆಗಳಲ್ಲಿ ಈ ಸಸಿಗಳು ನಾಟಿಯಾಗಿವೆ ಎಂಬ ಮಾಹಿತಿ ಒದಗಿಸಬೇಕು~ ಎಂದು ಸೂಚಿಸಿದರು.



`ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಮುದಾಯ ಶೌಚಾಲಯ ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣ ಆಗುತ್ತಿಲ್ಲ. ಕೂಡಲೇ ಬಗೆಗೆ ಕ್ರಮಕೈಗೊಳ್ಳಬೇಕು. ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೊಷಿಸಲಾಗಿದೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಡೆದಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಮಾಡಬೇಕು. ಕುಡಿಯುವ ನೀರಿನ ಹಾಗೂ ರಸ್ತೆ ಸೌಲಭ್ಯಗಳಿಗಾಗಿ ಇರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು~ ಎಂದು ಅವರು ಆದೇಶಿಸಿದರು.



ಜಿಲ್ಲಾ ಪಂಚಾ ಉಪ ಕಾರ್ಯದರ್ಶಿ ಟಿ.ಎಂ. ಶಶಿಧರ ಮಾತನಾಡಿ, `ಸರ್ಕಾರದ ನಿರ್ದೇಶನದ ಅನ್ವಯ ಸುವರ್ಣ ಗ್ರಾಮ ಯೋಜನೆಯಡಿಯ ಅನುದಾನ ಬಳಸಿಕೊಳ್ಳಬೇಕು. ನೆನೆಗುದಿಗೆ ಬಿದ್ದಿರುವ ಅಂಗನವಾಡಿಗಳ ನಿರ್ಮಾಣ ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು~ ಎಂದು ಸಲಹೆ ಮಾಡಿದರು.



`ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಈ ವರ್ಷ 202 ಕೋಟಿ ರೂ.ಗಳ ಗುರಿ ಹೊಂದಲಾಗಿದೆ. ಈಗಾಗಲೇ 140 ಕೋಟಿ ರೂ ಖರ್ಚು ಮಾಡಲಾಗಿದೆ. ಗ್ರಾಮ ಸಭೆಗಳ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಕುಡಿಯುವ ನೀರು ಪೂರೈಕೆ ಹೆಚ್ಚಿನ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೋರಲಾಗಿದೆ~ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)