ಸೋಮವಾರ, ಮೇ 23, 2022
24 °C

ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರ: ಸಿಬ್ಬಂದಿ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಂಜ(ಬೆಳ್ಳಾರೆ): ಕಳೆದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಉದ್ಘಾಟನೆಗೊಂಡ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇದೀಗ ವೈದ್ಯರು ಸೇರಿದಂತೆ ಅಗ್ಯತ್ಯ ಸಿಬ್ಬಂದಿ ಕೊರತೆ ಎದುರಾಗಿದೆ.ಸುಮಾರು ರೂ. 1.17 ಕೋಟಿ ವೆಚ್ಚದಲ್ಲಿ  ಪಂಜ ಪ್ರಾಥಮಿಕ ಆರೋಗ್ಯ ಸಮುಚ್ಚಯ ನಿರ್ಮಾಣಗೊಂಡಿದೆ. ಬಹಳ ಅದ್ದೂರಿಯಿಂದ ಕಳೆದ ಅಕ್ಟೋಬರ್ ತಿಂಗಳಲ್ಲಿ  ಪ್ರಾಥಮಿಕ ಆರ್ಯೊಗ್ಯ ಕೇಂದ್ರ ಉದ್ಘಾಟನೆಗೊಂಡಿತ್ತು. ಜನಪ್ರತಿನಿಧಿಗಳು ಸುತ್ತ ಮುತ್ತಲ ಗ್ರಾಮದ ಜನರಲ್ಲಿ ಅಗತ್ಯವಿರುವ ಎಲ್ಲಾ ಸೌಲಭ್ಯ ಮತ್ತು ಸಿಬ್ಬಂದಿ ಒದಗಿಸಿ ಕೊಡುವ ಭರವಸೆ ತುಂಬಿದ್ದರು. ಆದರೆ ಭರವಸೆ ಕೇವಲ ಭರವಸೆಯಾಗಿ ಉಳಿದಿದ್ದು ಜನಪ್ರತಿನಿಧಿಗಳ ಮಾತಿಗೆ ಬೆಲೆ ಇಲ್ಲದಂತಾಗಿದೆ. ಇಲ್ಲಿದ್ದ ವೈದ್ಯರು ತಾಲ್ಲೂಕು ವೈದ್ಯಾಧಿಕಾರಿಯಾಗಿ ಭಡ್ತಿ ಹೊಂದಿ ಬೇರೆಡೆಗೆ ತೆರಳಿದ್ದಾರೆ. ಬಳಿಕ ವೈದ್ಯರು ಬಂದಿಲ್ಲ. ಅತ್ಯಗತ್ಯವಾಗಿ ಬೇಕಾಗಿರುವ ಶುಶ್ರೂಷಕಿಯರನ್ನು ನೇಮಕ ಮಾಡಿಲ್ಲ. ಇದೀಗ ಪ್ರಾಥಮಿಕ ಆರೋಗ್ಯ ಕೇಂದ್ರ ಜವಾಬ್ದಾರಿಯನ್ನು ತಾಲ್ಲೂಕು ವೈದ್ಯಧಿಕಾರಿ ಡಾ.ಸುಬ್ರಹ್ಮಣ್ಯ ವಹಿಸಿಕೊಂಡಿದ್ದು ಇವರು ಸೋಮವಾರ ಮತ್ತು ಗುರುವಾರ ಭೇಟಿ ನೀಡುತ್ತಿದ್ದಾರೆ. ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಯದುರಾಜ್ ಮಂಗಳವಾರ ಮತ್ತು ಶುಕ್ರವಾರ ಪಂಜ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ. ವಾರದ ಏಳುದಿನಗಳಲ್ಲೂ 24 ಗಂಟೆಗಳ ಆರೋಗ್ಯ ಸೇವೆ, ಹೆರಿಗೆ ಸೌಲಭ್ಯ(ಎನ್.ಎಚ್.ಆರ್.) ಯೋಜನೆಗೆ ಸಂಬಂಧಿಸಿದಂತೆ ಮೇಲ್ದರ್ಜೆಗೇರಿದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಗ  ಈ ಸೇವೆ ರದ್ದುಗೊಂಡಿದೆ. ಈ ಯೋಜನೆಗೆ ಎಂದು ಬಂದಿದ್ದ ಮೂವರು ಸಿಬ್ಬಂದಿ ಬೇರೆಡೆಗೆ ವರ್ಗವಣೆಗೊಂಡಿದ್ದಾರೆ. ಆರು ಹಾಸಿಗೆಗಳಿರುವ ಇಲ್ಲಿ ಖಾಯಂ ವೈದ್ಯರಿಲ್ಲದ ಕಾರಣ  ಹೆಚ್ಚಿನವರು ಹೆರಿಗೆಗೆ ತೆರಳುವುದಿಲ್ಲ. ಇಲ್ಲಿಗೆ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ವೈದ್ಯರು ಸೇರಿದಂತೆ ಆರೋಗ್ಯ ಸಹಾಯಕಿಯರ ತುರ್ತು ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

     

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.