ಗುರುವಾರ , ಮೇ 13, 2021
38 °C
ಐಲ್ಯಾಂಡ್ ನಿರ್ಮಾಣಕ್ಕೆ ಅನುದಾನದ ಕೊರತೆ

ಪಕ್ಷಿ ಸಂಕುಲಕ್ಕೆ ಸಿಗದ ರಕ್ಷಣಾ ಭಾಗ್ಯ

ಮಲ್ಲೇಶ್ ನಾಯಕನಹಟ್ಟಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಕ್ಷಿ ಸಂಕುಲಕ್ಕೆ ಸಿಗದ ರಕ್ಷಣಾ ಭಾಗ್ಯ

ದಾವಣಗೆರೆ:  ಜಿಲ್ಲೆಯ ಕೊಮಾರನ ಹಳ್ಳಿ ಕೆರೆಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದ `ನಡುಗಡ್ಡೆ' (ಐಲ್ಯಾಂಡ್) ನಿರ್ಮಾಣ ಕಾಮಗಾರಿ, ಅನುದಾನದ ಕೊರತೆಯಿಂದಾಗಿ ನೆನೆಗುದಿಗೆ ಬಿದ್ದಿದ್ದು, ಪಕ್ಷಿಸಂಕುಲ ವೃದ್ಧಿ ಮತ್ತು ರಕ್ಷಣೆಗೆ ಮುಂದಾಗಿದ್ದ ರೈತರು ನಿರಾಶೆ ಅನುಭವಿಸುವಂತಾಗಿದೆ.2009-10ನೇ ಸಾಲಿನಲ್ಲಿ ರಾಜ್ಯ ಸರ್ಕಾರ ವಿಶ್ವ ಬ್ಯಾಂಕ್ ನೆರವು ಪಡೆದು ರಾಜ್ಯದಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಜಲ ಸಂವರ್ಧನಾ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದಿತ್ತು.ಈ ಸಂಸ್ಥೆ ಸ್ಥಳೀಯ ಜನರನ್ನು ಆಯ್ಕೆ ಮಾಡುವ ಮೂಲಕ ಕೆರೆ ಬಳಕೆದಾರರ ಸಂಘಗಳನ್ನು ರಚಿಸಿ,  ರೂ 27 ಕೊಟಿ ಅನುದಾನದಲ್ಲಿ ಜಿಲ್ಲೆಯ ವಿವಿಧ ಕೆರೆಗಳ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿತು. ಅಂತಹ ಮಹತ್ವದ ಯೋಜನೆಗಳಲ್ಲಿ ಹರಿಹರ ತಾಲ್ಲೂಕಿನ ಕೊಮಾರನಹಳ್ಳಿ ಕೆರೆ ಅಭಿವೃದ್ಧಿಯೂ ಸೇರಿದೆ. ರೂ 50.70 ಲಕ್ಷ ವೆಚ್ಚದಲ್ಲಿ `ನಡುಗಡ್ಡೆ' (ಐಲ್ಯಾಂಡ್) ನಿರ್ಮಾಣ ಕಾಮಗಾರಿ ಉದ್ದೇಶಿಸಲಾಗಿತ್ತು.ಸ್ವತಃ ಕೊಮಾರನಹಳ್ಳಿ ಕೆರೆ ಬಳಕೆದಾರ ಸಂಘದ ಕಾರ್ಯಕರ್ತರು ರೈತರ  ಮನೆ ಬಾಗಿಲಿಗೆ ಹೋಗಿ ರೂ 2.87 ಲಕ್ಷ ವಂತಿಗೆ ಸಂಗ್ರಹಿಸಿದ್ದರು. ನಂತರ `ನಡುಗಡ್ಡೆ' ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.ಕ್ರಮೇಣ ಕೆರೆಯಲ್ಲಿ ರೂ 1.40 ಲಕ್ಷ ವೆಚ್ಚದಲ್ಲಿ ಪರಿಸರ ನಿರ್ವಹಣೆ ಮತ್ತು ರೂ 3.56ಲಕ್ಷ ವೆಚ್ಚದಲ್ಲಿ ಮೀನುಕೃಷಿ ಹೊಂಡ ನಿರ್ಮಾಣ ಕಾಮಗಾರಿ ಹಮ್ಮಿಕೊಳ್ಳುವ ಮೂಲಕ ಯೋಜನೆ ವಿಸ್ತರಿಸಿಕೊಂಡಿತು. ಆದರೆ, ಇವೆಲ್ಲವೂ ಈಗ  ಅಪೂರ್ಣಗೊಂಡಿರುವುದು ರೈತರು ಕೈಕೈ ಹಿಸುಕಿಕೊಳ್ಳುವಂತಾಗಿದೆ.ಕೊಮಾರನಹಳ್ಳಿಯಲ್ಲಿ `ನಡುಗಡ್ಡೆ' ನಿರ್ಮಾಣ ಕೈಗೆತ್ತಿಕೊಳ್ಳುವುದಕ್ಕೂ ಒಂದು ವಿಶೇಷವಿದೆ. ಕಣಿವೆ ಭಾಗದಲ್ಲಿರುವ ಈ ಕೆರೆ ಶಿವಮೊಗ್ಗದ `ಮಂದಗದ್ದೆ', `ಉಳವಿ' ಪಕ್ಷಿತಾಣಗಳಂತೆ ದೇಸಿ ಹಕ್ಕಿಗಳ ವಾಸಸ್ಥಾನವಾಗಿತ್ತು.ಕಿರು ಮುಂಚುಳ್ಳಿ (ಸ್ಮಾಲ್ ಬ್ಲೀ ಕಿಂಗ್ ಫಿಷರ್), ಗದ್ದೆ ಮಿಂಚುಳ್ಳಿ (ವೈಟ್ ಬ್ರೆಸ್ಟೆಡ್ ಕಿಂಗ್‌ಫಿಷರ್), ನೆಲ ಕುಟುಕ (ಹೊಪೋ), ಮರ ಕುಟುಕ (ಮಹ್ರಟ್ಟಾ ವುಡ್‌ಪೆಕರ್), ಕಾಜಾಣ, ಕರಿ ಹೂಗುಬ್ಬಿ (ಪರ್ಪಲ್ ಸನ್ಬರ್ಡ್), ಹಳದಿ ಹೂ ಕುಟುಕ (ಫೈರ್ ಬ್ರಸ್ಟೆಡ್ ಫ್ಲವರ್ ಪೆಕ್ಕರ್), ಗದ್ದೆ ಟುವ್ವಿ (ಆ್ಯಷೀವರೆನ್ ವ್ಯಾಬ್ಲರ್), ಗೀಜಗ (ಬಾಯಾ ವೀವರ್ ಬರ್ಡ್), ಕಾಡುಕಾಗೆ (ಜಂಗಲ್ ಕ್ರೋ), ಹುಂಡು ಕೋಳಿ (ವಾಟರ್ ಹೆನ್)... ಇತ್ಯಾದಿ ದೇಸಿ ಹಕ್ಕಿ ಸಂಕುಲ ಇಲ್ಲಿ ನೆಲೆಸಿದ್ದವು.ಕೆರೆ ಗ್ರಾಮ ಮತ್ತು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕಾರಣ ವಾಹನಗಳ ಕರ್ಕಶ ಶಬ್ದ, ವಾಹನಗಳ ದಟ್ಟ ಸಂಚಾರದಿಂದಾಗಿ ಏಕಾಂತತೆಗೆ ಭಂಗ ಬಂದು ಕ್ರಮೇಣ ದೇಸಿ ಹಕ್ಕಿಗಳು ಕಣ್ಮರೆಯಾಗಿದ್ದವು.ಹಕ್ಕಿಗಳ ಕಲರವವಿಲ್ಲದೇ ಕೆರೆ ಕಳಾಹೀನವಾಗಿತ್ತು. ನಂತರದ ವರ್ಷಗಳಲ್ಲಿ ಭತ್ತಕ್ಕೆ ಕೀಟ ಹಾವಳಿ ಕಾಡುವ ಜತೆಗೆ ಇಳುವರಿ ಕುಸಿತ ಉಂಟಾದಾಗಲೇ ರೈತರಿಗೆ ಇಂಥ ದೇಸಿ ಹಕ್ಕಿಗಳ ಮಹತ್ವ ಅರಿವಾಗಿದ್ದು.ಅದಕ್ಕಾಗಿ ಕೆರೆಯಲ್ಲಿ `ನಡುಗಡ್ಡೆ' ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದಕ್ಕೆ ಒತ್ತಾಸೆ ನೀಡಿದ್ದ ಜಲ ಸಂವರ್ಧನ ಸಂಸ್ಥೆ ಈಗ ಅನುದಾನದ ಕೊರತೆ ಎದುರಿಸುತ್ತಿದೆ. ಇದಲ್ಲದೇ ಹೊನ್ನಾಳಿ ತಾಲ್ಲೂಕಿನ ಮಾದನಬಾವಿ, ಸೋಗಿ, ಸವಳಂಗ, ಹಿರೇಗೋಣಿಗೆರೆ ಕೆರೆಗಳ ಕಾಮಗಾರಿಗಳೂ ಸಹ ಅಪೂರ್ಣಗೊಂಡಿವೆ.ಎಲ್ಲಾ ಗೋಲ್‌ಮಾಲ್

ಅನುದಾನದ ಕೊರತೆ ಅನ್ನುವುದಕ್ಕಿಂತ ಗೋಲ್‌ಮಾಲ್ ಅನ್ನಬಹುದು. ಕೆರೆ ಬಳಕೆದಾರರ ಸಂಘ ಮತ್ತು ಸಂಸ್ಥೆಗಳಿಗೆ ಯೋಜನೆ ಮತ್ತು ಕಾಮಗಾರಿ ಕುರಿತು ಲೆಕ್ಕಪತ್ರ ಕೇಳಿದರೆ ಯಾವುದನ್ನೂ ನೀಡುತ್ತಿಲ್ಲ.ಅಧಿಕಾರಿ ವರ್ಗಮತ್ತು ಕೆಲವರು ಅನುದಾನ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಅನುಮಾನಗಳಿವೆ. ಈ ಕುರಿತು ಉನ್ನತಾಧಿಕಾರಿಗಳ ಗಮನ ಸೆಳೆದಿದ್ದೇನೆ. ಆದರೆ ಪ್ರಯೋಜನವಾಗಿಲ್ಲ.

- ಪಟೇಲ್ ಮಂಜುನಾಥ, ಹರಿಹರ ಎಪಿಎಂಸಿ ಸದಸ್ಯ, ಕೋ ಮಾರನಹಳ್ಳಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.