ಸೋಮವಾರ, ಮೇ 23, 2022
30 °C

ಪಠ್ಯಪುಸ್ತಕ ಸಕಾಲದಲ್ಲಿ ಸಿಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಲೆಗಳು ಆರಂಭವಾಗಿ ಒಂದು ವಾರ ಕಳೆದರೂ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರ ಪೂರೈಕೆ ಆಗಿಲ್ಲ ಎನ್ನುವುದು ಬೇಜವಾಬ್ದಾರಿಯ ಪರಮಾವಧಿ. ಶಾಲೆಗಳ ಆರಂಭದೊಂದಿಗೆ ಪಠ್ಯಪುಸ್ತಕಗಳು ಸಿಗುವಂತೆ ಮಾಡುವುದು ಶಿಕ್ಷಣ ಇಲಾಖೆಯ ಹೊಣೆ.ಆದರೆ ಪ್ರತೀವರ್ಷವೂ ಇದೇ ಸಮಸ್ಯೆ ಕಾಡುತ್ತಿರುವುದಕ್ಕೆ ಇಲಾಖೆಯೊಳಗಿನ ಗೊಂದಲವೇ ಕಾರಣ. ಈ ವರ್ಷ ಒಟ್ಟು 5.30 ಕೋಟಿ ಪುಸ್ತಕಗಳಿಗೆ ಬೇಡಿಕೆ ಇತ್ತು. ಈ ಪೈಕಿ 1.30 ಕೋಟಿ ಪುಸ್ತಕಗಳು ಮೊದಲೇ ಲಭ್ಯವಿದ್ದವು. ಹೊಸದಾಗಿ ನಾಲ್ಕು ಕೋಟಿ ಪುಸ್ತಕಗಳನ್ನು ಮುದ್ರಿಸಲು ಟೆಂಡರ್ ಕರೆಯಲಾಗಿತ್ತು. ಇದುವರೆಗೆ 3.60 ಕೋಟಿ ಪುಸ್ತಕಗಳು ಸರಬರಾಜಾಗಿವೆ.ಇನ್ನೂ 40 ಲಕ್ಷ ಪುಸ್ತಕಗಳ ಪೂರೈಕೆ ಬಾಕಿ ಇದೆ ಎಂದು ಇಲಾಖೆಯೂ ಒಪ್ಪಿಕೊಂಡಿದೆ. ಹೊಸ ಪಠ್ಯಕ್ರಮದ ಪುಸ್ತಕಗಳ ಪೂರೈಕೆಯೇ ವಿಳಂಬವಾಗಿದೆ. ಈಗ ದೊರೆತಿರುವ ವರದಿಗಳ ಪ್ರಕಾರ ಒಂದೊಂದು ತರಗತಿಯಲ್ಲಿ ಕನಿಷ್ಠ ಎರಡು ಶೀರ್ಷಿಕೆಗಳ ಪುಸ್ತಕಗಳ ಕೊರತೆ ಇದೆ.  ಸಮಾಜವಿಜ್ಞಾನ, ವಿಜ್ಞಾನ, ಕನ್ನಡ ಭಾಷೆ, ಇಂಗ್ಲಿಷ್, ಗಣಿತ, ಪರಿಸರ ಅಧ್ಯಯನ ಪುಸ್ತಕಗಳ ಪೂರೈಕೆ ಆಗಿಲ್ಲ.ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಿಸುವ ಯೋಜನೆ ಜಾರಿಗೊಂಡ ವರ್ಷದಿಂದಲೂ ಪಠ್ಯಪುಸ್ತಕ ಪೂರೈಕೆ ವಿಳಂಬವಾಗುತ್ತಿದೆ. ಇದಕ್ಕೆ ಸರ್ಕಾರದ ಇಲಾಖೆಯ ಅಧಿಕಾರಿಗಳು, ಖಾಸಗಿ ಮುದ್ರಕರು  ಹಾಗೂ ಪುಸ್ತಕ ವ್ಯಾಪಾರಿಗಳ ಜೊತೆ ಹೊಂದಿರುವ ಮೈತ್ರಿಯೇ ಕಾರಣ ಎನ್ನಬಹುದು. ಹತ್ತುದಿನಗಳಲ್ಲಿ ಪುಸ್ತಕಗಳನ್ನು ಪೂರೈಸಲಾಗುವುದು ಎಂದು ಇಲಾಖೆ ಎಂದಿನಂತೆ ಸ್ಪಷ್ಟೀಕರಣ ನೀಡಿದೆ. ಆದರೆ ಹಿಂದಿನ ವರ್ಷಗಳ್ಲ್ಲಲಿ ಆರು ತಿಂಗಳು ತಡವಾಗಿ ಪುಸ್ತಕಗಳು ದೊರಕಿದ ಉದಾಹರಣೆಗಳಿವೆ. ಉಚಿತ ಪಠ್ಯ ಪುಸ್ತಕಗಳನ್ನು ಸರ್ಕಾರಿ  ಮುದ್ರಣಾಲಯದಲ್ಲಿಯೇ ಮುದ್ರಿಸುವುದು ಸರ್ಕಾರದ ನಿರ್ಧಾರವಾಗಿದ್ದರೂ ವಾಸ್ತವದಲ್ಲಿ ಖಾಸಗಿ ಮುದ್ರಕರನ್ನೇ ಅವಲಂಭಿಸುವ ಪರಿಸ್ಥಿತಿ  ಪ್ರತೀ ವರ್ಷ ಎದುರಾಗುತ್ತದೆ. ಈ ಬಾರಿ ವಿಳಂಬಕ್ಕೆ 5ಮತ್ತು 8 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯವನ್ನು ಕೇಸರೀಕರಣಗೊಳಿಸಲಾಗಿದೆ ಎನ್ನುವ ಆಕ್ಷೇಪಗಳ ಹಿನ್ನೆಲೆಯಲ್ಲಿ  ಕೊನೆಗಳಿಗೆಯಲ್ಲಿ ಪಠ್ಯಕ್ರಮವನ್ನು ಪರಿಷ್ಕರಿಸಿ ಮುದ್ರಣಕ್ಕೆ ಕೊಡಲಾಯಿತು ಎನ್ನುವುದೂ ಸೇರಿದೆ.ಪಠ್ಯ ಪುಸ್ತಕ ಪೂರೈಕೆ ವಿಳಂಬಕ್ಕೆ ಇಲಾಖೆ ನೀಡುವ ಯಾವುದೇ ತಾಂತ್ರಿಕ ಕಾರಣಗಳು ಸಾರ್ವಜನಿಕರಿಗೆ ಪ್ರಸ್ತುತವಲ್ಲ. ಮುದ್ರಣದ ಸಮಸ್ಯೆಯನ್ನು ಮುಂದೊಡ್ಡುವುದೂ ಕೂಡ ಖಾಸಗಿ ಮುದ್ರಕ ಪ್ರಕಾಶಕರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೇನೋ ಎನ್ನುವ ಅನುಮಾನಕ್ಕೆ ಕಾರಣವಾಗುತ್ತದೆ. ಅಲ್ಲದೆ ಪುಸ್ತಕಗಳ ಮುದ್ರಣ ಗುಣಮಟ್ಟವನ್ನು ಪರಿಶೀಲಿಸಲು ಇಲಾಖೆ ಯಾವ ಮಾನದಂಡವನ್ನು ಅನುಸರಿಸುತ್ತಿದೆ ಎನ್ನುವುದು ಪಾರದರ್ಶಕವಾಗಿಲ್ಲ.ಪೂರೈಕೆಯಾಗುವ ಪುಸ್ತಕಗಳಲ್ಲಿ ಮುದ್ರಣ ಗುಣಮಟ್ಟ ಕಳಪೆಯಾಗಿರುತ್ತದೆ. ಅದನ್ನು ಸುಧಾರಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ? ಮುದ್ರಿತ ಪುಸ್ತಕಗಳ ಗುಣಮಟ್ಟ ಮತ್ತು ಅವು ಸಕಾಲದಲ್ಲಿ ವಿದ್ಯಾರ್ಥಿಗಳನ್ನು ತಲುಪುವುದನ್ನು ಖಚಿತ ಪಡಿಸಿಕೊಳ್ಳಬೇಕಾದ್ದು ಸರ್ಕಾರದ ಹೊಣೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.