ಸೋಮವಾರ, ಜೂನ್ 21, 2021
21 °C

ಪಠ್ಯವಾಗಲಿ ಜೀವನ ಕಲೆ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಮಕ್ಕಳ ಮನಸ್ಸು ಹದವರಿತ ನೆಲವಿದ್ದಂತೆ. ಆದರೆ ಅಲ್ಲಿ ಏನು ಬಿತ್ತಬೇಕೆಂಬುದನ್ನು ನಾವು ಮರೆತಿದ್ದೇವೆ. ಮಕ್ಕಳನ್ನು ಯಂತ್ರಗಳಂತೆ ಕಾಣುತ್ತಿದ್ದೇವೆ. ಅವರು ಬಯಸಿದ್ದನ್ನೆಲ್ಲ ನೀಡುತ್ತೇವೆ. ಜೊತೆಗೆ ನಾವು ಬಯಸಿದಂತೆಯೇ ಅವರಿರಲಿ ಎಂಬ ನಿರೀಕ್ಷೆಯನ್ನೂ ಬೆಳೆಸಿಕೊಳ್ಳುತ್ತೇವೆ. ಆದರೆ ಅವರ ಬದಕು ಅರಳಲು ಏನು ಬೇಕು ಎಂಬುದರತ್ತ ಗಮನ ಹರಿಸುತ್ತಿಲ್ಲ.ಮಕ್ಕಳು ದಿನೇ ದಿನೇ ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ತಮ್ಮ ವಯಸ್ಸಿಗೂ ಮೀರಿದ ಜವಾಬ್ದಾರಿಗಳಿಂದಾಗಿ ಅವರು ಬಸವಳಿದಿದ್ದಾರೆ. ತಮ್ಮ ಭಾವನೆಗಳನ್ನು, ತುಮುಲಗಳನ್ನು ಹಂಚಿಕೊಳ್ಳಲು ಅವರ ಎದುರು ಯಾರೂ ಇಲ್ಲ. ಪಾಲಕರು ಕೆಲಸದಲ್ಲಿ ಹಾಗೂ ಶಿಕ್ಷಕರು ಪಾಠದಲ್ಲಿ ತಲ್ಲೀನ. ಮಕ್ಕಳಿಗೆ ಸೂಕ್ತ ಮನೋಸ್ಥೈರ್ಯ ಹಾಗೂ ಮಾರ್ಗದರ್ಶನದ ಕೊರತೆ ಎದುರಾಗುತ್ತಿದ್ದು, ಇದರಿಂದ ಜೀನವದಲ್ಲಿ ಬರುವ ಸಮಸ್ಯೆ–ಸವಾಲುಗಳಿಗೆ ತೀವ್ರವಾಗಿ ಸ್ಪಂದಿಸುವ ಮತ್ತು ಆತಂಕ ಪಡುವ ಪ್ರವೃತ್ತಿ ಅವರಲ್ಲಿ ಹೆಚ್ಚುತ್ತಿದೆ.ಬದುಕನ್ನು ಹೇಗೆ ಗ್ರಹಿಸಬೇಕು, ಹೇಗೆ ಸ್ವೀಕರಿಸಬೇಕು, ಏಳು–ಬೀಳುಗಳಿಗೆ ಹೇಗೆ ಸ್ಪಂದಿಸಬೇಕು ಎಂಬ ಬಗ್ಗೆ ಮಕ್ಕಳಲ್ಲಿ ಗೊಂದಲಗಳಿವೆ. ಈ ನಿಟ್ಟಿನಲ್ಲಿ ಶಾಲಾ ಪಠ್ಯಕ್ರಮದಲ್ಲಿ ಒತ್ತಡ ನಿರ್ವಹಣೆ ಮತ್ತು ‘ಜೀವನ ಪಾಠ’ ನೆಲೆಗೊಳ್ಳಬೇಕು ಎನ್ನುತ್ತಾರೆ ನಿಮ್ಹಾನ್ಸ್‌ ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಡಾ.ಎನ್. ಜನಾರ್ಧನ್.‘ಜೀವನ ಪಾಠ’ ಏನೆಲ್ಲವನ್ನು ಒಳಗೊಂಡಿರಬೇಕು ಎಂಬ ಬಗ್ಗೆ ನಿಮ್ಹಾನ್ಸ್‌ ಹತ್ತು ಮಾನದಂಡಗಳನ್ನು ರೂಪಿಸಿದೆ:

*ಸಮಸ್ಯೆ ಪರಿಹರಿಸುವುದು

*ಬುದ್ಧಿವಂತಿಕೆಯ ನಿರ್ಣಯ ಕೈಗೊಳ್ಳುವುದು

*ವಿವೇಕದಿಂದ ಒತ್ತಡ ನಿರ್ವಹಿಸುವುದು

*ವಿವೇಚನೆಯಿಂದ ಭಾವನೆಗಳನ್ನು ನಿರ್ವಹಿಸುವುದು

*ಸ್ವಪ್ರಜ್ಞೆಯಿಂದ ವರ್ತಿಸುವುದು

*ನಿರ್ಣಾಯಕ ಚಿಂತನೆ, ವಿಮರ್ಶಾತ್ಮಕ ಯೋಚನೆಯನ್ನು ಕೈಗೊಳ್ಳುವುದು

*ಸೃಜನಶೀಲ ಚಿಂತನೆ ಮಾಡುವುದು

*ಪರಸ್ಪರ ಹಾಗೂ ವೈಯಕ್ತಿಕ ಸಂಬಂಧಗಳ ನಿರ್ವಹಣೆ

*ಪರಿಣಾಮಕಾರಿ ಸಂವಹನ

*ಇತರರ ಬಗ್ಗೆ ಕರುಣೆ, ಅನುಕಂಪ ಸಹಾನುಭೂತಿಇವುಗಳೊಂದಿಗೆ ಜೀವನದಲ್ಲಿ ಬರುವ ಸೋಲು–ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವುದು, ತಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯ ಎರಡನ್ನೂ ಸ್ಪರ್ಧಾತ್ಮಕ ಮನೋಭಾವದಿಂದ ಕಾಣುವುದು ಸೇರಿದಂತೆ ಮಕ್ಕಳಲ್ಲಿ ಆತ್ಮವಿಶ್ವಾಸ, ಧೈರ್ಯ ಹಾಗೂ  ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎನ್ನುತ್ತಾರೆ ಅವರು.ಮಕ್ಕಳ ಮಾನಸಿಕ ಆರೋಗ್ಯ ಹಾಗೂ ಕಲಿಕಾ ದೋಷಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸುವುದು ಸಹ ಶಿಕ್ಷಕರ ಕರ್ತವ್ಯ. ಕೇವಲ ಅಂಕಗಳನ್ನು ಗುರಿಯಾಗಿಟ್ಟುಕೊಂಡು ಬೋಧಿಸುವುದಷ್ಟೇ ಅಲ್ಲ, ಜೀವನ ಪಾಠದಲ್ಲೂ ಮಕ್ಕಳು ಯಶಸ್ವಿಯಾಗುವಂತೆ ಮಾಡುವುದು ಶಿಕ್ಷಕರ ವ್ಯಾಪ್ತಿಗೆ ಸೇರುತ್ತದೆ ಎನ್ನುತ್ತಾರೆ  ಡಾ. ಜನಾರ್ಧನ್.ಮಕ್ಕಳ ಮನಕ್ಕೆ ಅರಿವಿನ ಚಿಕಿತ್ಸೆ

ಸಮಸ್ಯಾತ್ಮಕ ಮಕ್ಕಳ ಕೌನ್ಸೆಲಿಂಗ್ ಹಾಗೂ ಚಿಕಿತ್ಸೆಗೆ ನಿಮ್ಹಾನ್ಸ್‌ -ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿ ‘ಸೆಂಟರ್ ಫಾರ್ ವೆಲ್ ಬೀಯಿಂಗ್’ ಎಂಬ ಸಮಾಲೋಚನಾ ಕೇಂದ್ರವನ್ನು ಸ್ಥಾಪಿಸಿದೆ. ನಿಮ್ಹಾನ್ಸ್‌ ಎಂದರೆ ಮನೋರೋಗಿಗಳ ಆಸ್ಪತ್ರೆ ಎನ್ನುವ ಕಲ್ಪನೆ ಇರುವುದರಿಂದ ಅದು ಮಕ್ಕಳ ಮನಸ್ಸಿನ ಮೇಲೆ ಬೇರೆ ರೀತಿಯ ಪರಿಣಾಮ ಬೀರಬಹುದು. ಆದ್ದರಿಂದ ನಿಮ್ಹಾನ್ಸ್‌ ಆವರಣದಿಂದ ಆಚೆ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಪ್ರತಿ ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4.30ರವರೆಗೆ ಈ ಕೇಂದ್ರದಲ್ಲಿ ಮಕ್ಕಳಿಗೆ ಸಲಹೆ–ಸಮಾಲೋಚನೆ ನೀಡಲಾಗುವುದು.

ವಿಳಾಸ: ಸೆಂಟರ್ ಫಾರ್ ವೆಲ್ ಬೀಯಿಂಗ್, ನಂ. 1/ಬಿ, 9ನೇ ಮುಖ್ಯರಸ್ತೆ, 1ನೇ ಹಂತ, ಬಿಟಿಎಂ ಬಡಾವಣೆ, ಬೆಂಗಳೂರು. ಮಾಹಿತಿಗೆ– 94808 09670/ 080 26685948

ಮಕ್ಕಳೇಕೆ ತೀವ್ರವಾಗಿ ಸ್ಪಂದಿಸುತ್ತಾರೆ...

ಪ್ರತಿಯೊಂದು ಸಣ್ಣ–ಪುಟ್ಟ ವಿಚಾರಕ್ಕೂ ಮಕ್ಕಳು ತೀವ್ರವಾಗಿ ಸ್ಪಂದಿಸುತ್ತಾರೆ. ಅವರ ಭಾವನಾತ್ಮಕ ವೈಪರೀತ್ಯಗಳನ್ನು ಗುರುತಿಸುವುದು ಕಷ್ಟ. ಪ್ರತಿ ಮಗುವಿನ ಪ್ರತಿಭೆ, ಕೌಶಲ, ಸಾಮರ್ಥ್ಯ ಮನೋಭಾವ, ಆಲೋಚನಾ ಕ್ರಮ, ವ್ಯಕ್ತಿತ್ವ ಎಲ್ಲವೂ ಭಿನ್ನವಾರುತ್ತವೆ. ಆದರೆ ನಾವು ಎಲ್ಲಾ ಮಕ್ಕಳನ್ನೂ ಒಂದೇ ರೀತಿಯಲ್ಲಿ ಕಾಣುತ್ತೇವೆ. ಹೋಲಿಕೆ ಮಾಡುತ್ತೇವೆ. ಇಂತಹ ವಿಚಾರಗಳನ್ನು ವಿಶ್ಲೇಷಿಸುವುದು ಕಷ್ಟ.ಇಂದು ಕುಟುಂಬ, ಸಮಾಜ ಹಾಗೂ ಶಿಕ್ಷಣ ವ್ಯವಸ್ಥೆ ತೀವ್ರ ಗತಿಯಲ್ಲಿ ಬದಲಾವಣೆಗೆ ಒಳಗಾಗಿದೆ. ಆದರೆ ಮಕ್ಕಳಿಗೆ ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹಾಗೂ ಸಂದರ್ಭಗಳನ್ನು ಧೈರ್ಯವಾಗಿ ಎದುರಿಸುವ ಮನಸ್ಥಿತಿ ಅವರಿಗಿಲ್ಲ. ಪಾಲಕರು ಹಾಗೂ ಶಿಕ್ಷಕರ ಮೇಲೂ ಒತ್ತಡ ಹೆಚ್ಚಿದ್ದು, ಮಕ್ಕಳನ್ನು ನಿರ್ವಹಿಸುವುದು ಅವರಿಗೂ ಸವಾಲಾಗಿ ಪರಿಣಮಿಸುತ್ತಿದೆ.

-ಡಾ. ಬಿ.ಆರ್.ಮಧುಕರ್, ಮನೋವೈದ್ಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.