ಪಡಿತರ ಚೀಟಿ ವಿತರಣೆ: ಜಿಲ್ಲೆಗೆ ಕೊನೆ ಸ್ಥಾನ
ತುಮಕೂರು: ಪಡಿತರ ಚೀಟಿ ವಿತರಣೆಯಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲೇ ಕೊನೆ ಸ್ಥಾನದಲ್ಲಿದ್ದು, ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜೀವರಾಜ್ ತರಾಟೆಗೆ ತೆಗೆದುಕೊಂಡರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಸಭೆಗೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. ಅಲ್ಲದೆ ನ. 21ರ ಒಳಗಾಗಿ ಈಗಾಗಲೇ ಬಯೋಮಟ್ರಿಕ್ ಸಲ್ಲಿಸಿರುವ ಕುಟುಂಬಗಳಿಗೆ ಪೂರ್ಣ ಪ್ರಮಾಣದಲ್ಲಿ ಪಡಿತರ ಚೀಟಿ ವಿತರಣೆ ಮಾಡದಿದ್ದರೆ ಶಿಸ್ತು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸಭೆಗೆ ತಪ್ಪು ಮಾಹಿತಿ ನೀಡದಂತೆ ಎಚ್ಚರಿಕೆ ನೀಡಿದ್ದರೂ, ಮತ್ತೆಮತ್ತೆ ತಪ್ಪು ಮಾಹಿತಿ ನೀಡಲು ಮುಂದಾದ ಇಲಾಖೆ ಸಹಾಯಕ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಸಚಿವರು, `ತಲೆಹರಟೆ ಮಾಡಬೇಡ, ದನ ಕಾಯೋನೆ ಸರಿಯಾಗಿ ಮಾಹಿತಿ ನೀಡು~ ಎಂದು ನಿಂದಿಸಿದರು. ಈ ಸಂದರ್ಭದಲ್ಲಿ ಆಗಿರುವ ಸಮಸ್ಯೆಯನ್ನು 15 ದಿನದಲ್ಲಿ ಬಗೆಹರಿಸುವುದಾಗಿ ಉಪನಿರ್ದೇಶಕ ಸಾಂಬಯ್ಯ ಕ್ಷಮೆ ಕೋರಿದರು.
ಪಡಿತರ ಚೀಟಿಯನ್ನು ಒಮ್ಮೆಗೆ ಪ್ರಿಂಟ್ ಮಾಡಲು ಸಾಧ್ಯವಿಲ್ಲ. ಸರ್ವರ್ ಸಿಗುವುದಿಲ್ಲ, ಇಂಟರ್ನೆಟ್ ಇಲ್ಲ ಮುಂತಾದ ಸಮಸ್ಯೆಗಳನ್ನು ಹೇಳಲು ಅಧಿಕಾರಿಗಳು ಮುಂದಾದರು. ಇದರಿಂದ ಸಿಟ್ಟಾದ ಸಚಿವರು, ಕುಂಟು ನೆಪಗಳನ್ನು ಹೇಳಿ ತಪ್ಪಿಸಿಕೊಳ್ಳುವುದು ಬೇಡ. ಜಿಲ್ಲೆಗೆ 12 ಪ್ರಿಂಟರ್ಗಳನ್ನು ವಿತರಣೆ ಮಾಡಲಾಗಿದೆ.
ಪ್ರತಿ ಪ್ರಿಂಟರ್ನಲ್ಲಿ ದಿನಕ್ಕೆ 800ಕ್ಕೂ ಹೆಚ್ಚು ಪಡಿತರ ಚೀಟಿ ತೆಗೆಯಬಹುದು. ಪ್ರತಿದಿನಕ್ಕೆ 10 ಸಾವಿರ ಪಡಿತರ ಚೀಟಿ ನೀಡಲು ಅವಕಾಶವಿದೆ. ಆದರೆ ಜನರಿಂದ ಸಾವಿರಾರು ರೂಪಾಯಿ ಲಂಚ ಪಡೆಯುವ ಸಲುವಾಗಿ ವಿಳಂಬಗತಿಯನ್ನು ಅನುಸರಿಸುತ್ತಿರುವುದಾಗಿ ಆರೋಪ ಮಾಡಿದರು.
ಪಡಿತರ ಚೀಟಿ ವಿತರಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಇತರೆ ಜಿಲ್ಲೆಗೆ ನೀಡಿರುವುದಕ್ಕಿಂತ ಹೆಚ್ಚ ಸವಲತ್ತನ್ನು ಜಿಲ್ಲೆಗೆ ನೀಡಲಾಗಿದೆ. ಆದರೆ ಜಿಲ್ಲೆಯಲ್ಲಿ ಬಯೋಮೆಟ್ರಿಕ್ ಆಧಾರಿತ ಪಡಿತರ ವಿತರಣೆ ಯಂತ್ರಗಳನ್ನು ಜಾರಿಗೆ ತಂದಿರುವುದರಿಂದ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳ ಜೊತೆ ಶಾಮೀಲಾಗಿ ಜನರಿಗೆ ಬಯೋಮೆಟ್ರಿಕ್ ಆಧಾರಿತ ಕಾರ್ಡ್ ವಿತರಣೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಹೀಗಾಗಿ `ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕಳೆದುಕೊಳ್ಳಲು ಅಧಿಕಾರಿಗಳಿಗೆ ಇಷ್ಟವಿಲ್ಲ~ ಎಂದು ಅಧಿಕಾರಿಗಳನ್ನು ಮಾರ್ಮಿಕವಾಗಿ ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯಲ್ಲಿ 1.53 ಲಕ್ಷ ಮಂದಿ ಪಡಿತರ ಚೀಟಿಗಾಗಿ ಆನ್ಲೈನ್ನಲ್ಲಿ ಬಯೋಮೆಟ್ರಿಕ್ ನೀಡಿದ್ದಾರೆ. ಆದರೆ ಕಳೆದ 8 ತಿಂಗಳಿಂದ ಕೇವಲ 29405 ಮಂದಿಗೆ ಪಡಿತರ ಚೀಟಿ ನೀಡಲಾಗಿದೆ. ಉಳಿದವರಿಗೆ ಪಡಿತರ ಚೀಟಿ ನೀಡಲು ಏಕೆ ಸಾಧ್ಯವಿಲ್ಲ. ಅಲ್ಲದೆ ತಾತ್ಕಾಲಿಕ ಕಾರ್ಡ್ ಪಡೆದ 1.64 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಇದರಲ್ಲಿ ಕೇವಲ 19 ಸಾವಿರ ಮಂದಿಗೆ ಪಡಿತರ ಚೀಟಿ ನೀಡಲಾಗಿದೆ. ಈ ಪ್ರಮಾಣದಲ್ಲಿ ಜನರ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಏಕೆ ಎಂದು ಅವರು ಪ್ರಶ್ನಿಸಿದರು.
ಜಿಲ್ಲೆಯ ಪ್ರತಿ ತಾಲ್ಲೂಕನ್ನು ಪ್ರತ್ಯೇಕವಾಗಿ ಪರಿಶೀಲನೆ ಮಾಡಿದ ಸಚಿವರು, ಶಿರಾ ಮತ್ತು ಕುಣಿಗಲ್ ಹೊರತುಪಡಿಸಿದರೆ ಉಳಿದ ಯಾರೂ ಸಮರ್ಪಕವಾಗಿ ಕೆಲಸ ಮಾಡಿಲ್ಲ. ಅಲ್ಲದೆ ಕಳೆದ 7-8 ವರ್ಷಗಳಿಂದ ಇಲಾಖೆಯ ಎಲ್ಲ ಅಧಿಕಾರಿಗಳು ಒಂದೇ ಜಿಲ್ಲೆಯಲ್ಲಿ ಇರುವುದರಿಂದ ಅಸಡ್ಡೆ ಬೆಳೆದಿದೆ. ಮೊದಲು ನಿಮ್ಮನ್ನು ಬದಲಿಸಲು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಶಿವಣ್ಣ, ಶಾಸಕರಾದ ಟಿ.ಬಿ.ಜಯಚಂದ್ರ, ಎಂ.ಟಿ.ಕೃಷ್ಣಪ್ಪ, ಬಿ.ಸಿ.ನಾಗೇಶ್, ಜಿಲ್ಲಾಧಿಕಾರಿ ಆರ್.ಕೆ.ರಾಜು, ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದರಾಜು ಮುಂತಾದವರು ಭಾಗವಹಿಸಿದ್ದರು.
ಬಿಪಿಎಲ್ ಕಾರ್ಡ್ ನೀಡಲು ಸೂಚನೆ
ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ತಾತ್ಕಾಲಿಕ ಬಿಪಿಎಲ್ ಕಾರ್ಡ್ ಪಡೆದಿರುವ ಎಲ್ಲರಿಗೂ ಕಾಯಂ ಬಿಪಿಎಲ್ ಕಾರ್ಡ್ ನೀಡಬೇಕು. ಎಪಿಎಲ್ ಇರುವವರಿಗೆ ಬಿಪಿಎಲ್ ಕಾರ್ಡ್ ನೀಡಿದರೂ ಸರಿ. ಆದರೆ ಇರುವವರ ಬಿಪಿಎಲ್ ಕಾರ್ಡ್ ಹಿಂಪಡೆಯಬಾರದು. ಬಡವರನ್ನು ಅಧಿಕಾರಿಗಳು ಗೋಳಾಡಿಸಬೇಡಿ.
ಅಧಿಕಾರ ಇದ್ದಾಗ ಉತ್ತಮ ಕೆಲಸ ಮಾಡಿ. ಇಲ್ಲದಿದ್ದರೆ ನಿಮಗೆ ಒಳ್ಳೆಯದಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಒಟ್ಟು 18 ಲಕ್ಷ ಹೆಚ್ಚುವರಿ ಕಾರ್ಡ್ ಇದೆ ಎನ್ನಲಾಗಿದೆ. ಬಯೋಮೆಟ್ರಿಕ್ ನೀಡದಿದ್ದರೆ ಅವು ತಂತಾನೆ ರದ್ದಾಗುತ್ತವೆ. ಅಂತಹವರಿಗೆ ತಾತ್ಕಾಲಿಕ ಪಡಿತರ ನಿಲ್ಲಿಸಬಹುದು. ಅದುವರೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಡ್ ವಿತರಿಸಬೇಕು ಎಂದು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.