ಮಂಗಳವಾರ, ಆಗಸ್ಟ್ 11, 2020
27 °C

ಪದಕದತ್ತ ಗುರಿ...

ಪ್ರಮೋದ್ ಜಿ.ಕೆ. Updated:

ಅಕ್ಷರ ಗಾತ್ರ : | |

ಪದಕದತ್ತ ಗುರಿ...

`ಬದುಕಿನಲ್ಲಿ ಗುರಿ ಇಟ್ಟುಕೊಳ್ಳಿ. ಗುರಿ ಮುಟ್ಟುವ ಹಾದಿಯಲ್ಲಿ ಸೋಲು, ನಿರಾಸೆ, ಸಂಕಟ ಸಹಜ. ಆದರೆ, ಇಟ್ಟ ಹೆಜ್ಜೆ ಮಾತ್ರ ಹಿಂದೆ ತೆಗೆಯಬೇಡಿ...~

- ಖಾಸಗಿ ವಾಹಿನಿಯೊಂದರಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ಫೂರ್ತಿಯ ಮಾತುಗಳನ್ನಾಡುತ್ತಿದ್ದವರು ಶೂಟರ್ ಅಭಿನವ್ ಬಿಂದ್ರಾ.ಕಿಕ್ಕಿರಿದು ತುಂಬಿದ್ದ ಪ್ರಾಂಗಣದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ  ಪಂಜಾಬ್‌ನ ಶೂಟರ್ ಉತ್ತರ ನೀಡುತ್ತಿದ್ದರು. `ನಿಮ್ಮ ಸಾಧನೆಯ ಹಿಂದಿರುವ ಗುಟ್ಟೇನು?~ ಎನ್ನುವ ಪ್ರಶ್ನೆ ಎದುರಾದಾಗ ಅವರು ನೀಡಿದ ಉತ್ತರ ಎಲ್ಲರಲ್ಲೂ ಅಚ್ಚರಿ ಉಂಟು ಮಾಡಿತ್ತು.`ನನಗೆ ಸಾಕಷ್ಟು ಸವಾಲುಗಳು, ಸಂಕಷ್ಟಗಳು ಎದುರಾದವು. ಇನ್ನೂ ಹೆಚ್ಚು ಕಷ್ಟಗಳು ಬಂದಿದ್ದರೆ, ನಾನು ಇನ್ನಷ್ಟು ಎತ್ತರದ ಸ್ಥಾನದಲ್ಲಿರುತ್ತಿದ್ದೆ~ ಎನ್ನುವ ಉತ್ತರ `ಬಂಗಾರ~ದ ಹುಡುಗ ಬಿಂದ್ರಾ ಅವರದ್ದಾಗಿತ್ತು.2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ `ಚಿನ್ನ~ದಂತಹ ಸಾಧನೆ ತೋರಿದ್ದ ಬಿಂದ್ರಾ ಅವರ ಮೇಲೆ ಈಗ ಎಲ್ಲರ ನಿರೀಕ್ಷೆಯಿದೆ. ಏಕೆಂದರೆ ಕೇವಲ 11 ದಿನ ಕಳೆದರೆ ಲಂಡನ್ ಒಲಿಂಪಿಕ್ಸ್ ಆರಂಭ. ಭಾರತದ ಕ್ರೀಡಾಪ್ರೇಮಿಗಳು ಹೆಚ್ಚು ಭರವಸೆ ಇಟ್ಟಿರುವುದು ಶೂಟರ್‌ಗಳ ಮೇಲೆ. ಹಿಂದೆ ಅವರು ತೋರಿದ ಸಾಧನೆಯೇ ಇದಕ್ಕೆ ಕಾರಣ.ಬೀಜಿಂಗ್‌ನಲ್ಲಿ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಬಿಂದ್ರಾ ಚಿನ್ನ ಗೆದ್ದಿದ್ದರು. ಅಷ್ಟೇ ಅಲ್ಲ, ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಶೂಟರ್ ಕೂಡಾ ಇವರಾಗಿದ್ದಾರೆ.

 

ಕಳೆದ ಸಲದ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೇಲೆ ಬಿಂದ್ರಾ ನಿಂತ ನೀರಾಗಿಲ್ಲ. ಒಂದಲ್ಲಾ ಒಂದು ಕ್ರೀಡಾಕೂಟಗಳಲ್ಲಿ ಪದಕಗಳಿಗೆ `ಶೂಟ್~ ಮಾಡುತ್ತಲೇ ಇದ್ದಾರೆ. 2010ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಒಂದು ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದ್ದೇ ಇದಕ್ಕೆ ಸಾಕ್ಷಿ. ಲಂಡನ್‌ನಲ್ಲಿ ಪದಕಗಳ `ಬೇಟೆ~ ಆರಂಭಿಸುವ ಮುನ್ನ ಭಾರತ ಶೂಟಿಂಗ್ ತಂಡ ಜರ್ಮನಿಗೆ ತೆರಳಿ ಅಂತಿಮ ಸಿದ್ಧತೆಯಲ್ಲಿ ತೊಡಗಿದೆ.ಬಿಂದ್ರಾ ಮೇಲಿರುವ ಭರವಸೆ ಎಷ್ಟು ದೊಡ್ಡದೋ, ಗಗನ್ ನಾರಂಗ್ ಮೇಲೂ ಕೋಟ್ಯಂತರ ಕ್ರೀಡಾ ಪ್ರೇಮಿಗಳ ನಂಬಿಕೆಯಿದೆ. ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಶೂಟರ್ ನಾರಂಗ್ 10ಮೀ. ಏರ್ ರೈಫಲ್ (ಜುಲೈ 30 ರಂದು ಸ್ಪರ್ಧೆ ನಡೆಯಲಿದೆ), 50ಮೀ. ರೈಫಲ್ ಪ್ರೊನೊ (ಆಗಸ್ಟ್ 3) ಮತ್ತು 50 ಮೀ. ತ್ರಿ ಪಿಸ್ತೂಲ್ (ಆಗಸ್ಟ್ 6) ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಜಯಿಸಿರುವ ಪಂಜಾಬ್‌ನ ಈ ಶೂಟರ್‌ಗೆ ಇದು ಅಗ್ನಿ ಪರೀಕ್ಷೆಯ ಕಾಲ. 2004ರ ಅಥೆನ್ಸ್ ಹಾಗೂ ಬೀಜಿಂಗ್‌ನಿಂದ ಬರಿಗೈಯಲ್ಲಿ ವಾಪಸ್ಸಾಗಿದ್ದ ನಾರಂಗ್, ಈ ಸಲ ಪದಕ ಗೆಲ್ಲುವ ಉತ್ಸಾದಲ್ಲಿದ್ದಾರೆ. `ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶವೇ ದೊಡ್ಡದು. ಅದರಲ್ಲೂ ಮೂರು ಸಲ ಅವಕಾಶ ಸಿಕ್ಕಿದೆ. ಹಿಂದಿನ ಅನುಭವಗಳು ಲಂಡನ್‌ನಲ್ಲಿ ನೆರವಿಗೆ ಬರುತ್ತವೆ~ ಎನ್ನುವ ಭರವಸೆ ಅವರದ್ದು.ಬಿಂದ್ರಾ ಹಾಗೂ ನಾರಂಗ್ ಅವರಂತೆ, ರೊಂಜನ್ ಸೋಧಿ ಮೇಲೆ ಪದಕದ ಭರವಸೆಯಿದೆ. ಇತ್ತೀಚಿನ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಅವರು ನೀಡಿದ ಪ್ರದರ್ಶನವೇ ಈ ಭರವಸೆಗೆ ಕಾರಣ. ಡಬಲ್ ಟ್ರ್ಯಾಪ್ ವಿಭಾಗದಲ್ಲಿ ಸ್ಪರ್ಧಿಸುವ ಸೋಧಿ ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್ (ಐಎಸ್‌ಎಸ್‌ಎಫ್) ವಿಶ್ವಕಪ್‌ನಲ್ಲಿ ಚಿನ್ನ ಜಯಿಸಿದ್ದರು. ಈ ಟೂರ್ನಿಯಲ್ಲಿ ಬಂಗಾರ ಗೆದ್ದ ಭಾರತದ ಮೊದಲ ಶೂಟರ್ ಎನ್ನುವ ಗೌರವ ಕೂಡಾ ಸೋಧಿ ಅವರಿಗಿದೆ.ಇನ್ನುಳಿದಂತೆ ಮಾನವಜಿತ್ ಸಿಂಗ್ ಸಂಧು    (ಟ್ರ್ಯಾಪ್), ವಿಜಯ್ ಕುಮಾರ್ (25ಮೀ. ರ‌್ಯಾಪಿಡ್ ಫೈರ್ ಪಿಸ್ತೂಲ್), ಜೋಯ್‌ದೀಪ್ ಕರ್ಮಾಕರ್ (50ಮೀ. ರೈಫಲ್ ಪ್ರೋನೊ), ಸಂಜೀವ್ ರಜಪೂತ್ (50ಮೀ. ರೈಫಲ್ ತ್ರಿ ಪಿಸ್ತೂಲ್) ಅವರು ಭಾರತದ ಕನಸುಗಳಿಗೆ ಕಾವಲಾದ ಪ್ರಮುಖ ಶೂಟರ್‌ಗಳು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.