ಪದಗಳ ನಡುವಿನ ಮೌನ ಹಿಡಿದ ತೋಳ್ಪಾಡಿ

7

ಪದಗಳ ನಡುವಿನ ಮೌನ ಹಿಡಿದ ತೋಳ್ಪಾಡಿ

Published:
Updated:
ಪದಗಳ ನಡುವಿನ ಮೌನ ಹಿಡಿದ ತೋಳ್ಪಾಡಿ

ಇಂದು ಕೃತಿ ಲೋಕಾರ್ಪಣೆ

ಅಭಿನವ: ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ. ಯು.ಆರ್. ಅನಂತಮೂರ್ತಿ ಗೌರವ ಮಾಲಿಕೆ 2, ಲಕ್ಷ್ಮೀಶ ತೋಳ್ಪಾಡಿ ಅವರ `ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ' ಕೃತಿ ಬಿಡುಗಡೆ ಸಮಾರಂಭ. ಅಧ್ಯಕ್ಷತೆ- ಷ. ಶೆಟ್ಟರ್. ಕೃತಿ ಬಿಡುಗಡೆ- ಬಸವರಾಜ ಕಲ್ಗುಡಿ, ಪ್ರಸ್ತಾವನೆ- `ಯು.ಆರ್. ಅನಂತಮೂರ್ತಿ ಗೌರವ ಮಾಲಿಕೆ' ಸಂಪಾದಕ ಎನ್.ಎ.ಎಂ. ಇಸ್ಮಾಯಿಲ್. ಉಪಸ್ಥಿತಿ-  ಯು.ಆರ್. ಅನಂತಮೂರ್ತಿ. ಬುಧವಾರ ಸಂಜೆ 6.30.

ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಗೋಡು ಗ್ರಾಮದ ಲಕ್ಷ್ಮೀಶ ತೋಳ್ಪಾಡಿ ಜನಿಸಿದ್ದು ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷ. ತೋಳ್ಪಾಡಿತ್ತಾಯ ವೈದಿಕ ಮನೆತನದ ಅವರದ್ದು ಉತ್ತುಬಿತ್ತುವ ಕಾಯಕ. ಆಧುನಿಕ ಮನಸ್ಸಿನಲ್ಲಿ ವೇದೋಪನಿಷತ್ತುಗಳನ್ನು ಮೂಲಭಾಷೆಯಲ್ಲಿ ಓದುತ್ತಲೇ ಅವರು ವೈದಿಕ ಮತ್ತು ವೈಚಾರಿಕ ನಿಲುವುಗಳನ್ನು ಪರಸ್ಪರ ಮುಖಾಮುಖಿಯಾಗಿಸಿದರು.ತಾರುಣ್ಯದಲ್ಲೊಮ್ಮೆ ಕೊಂಚ ಕಾಲ ಬೆಂಗಳೂರಿನಲ್ಲಿದ್ದ ಅವರಿಗೆ ವೈಎನ್‌ಕೆ ಅವರ ಒಡನಾಟವಿತ್ತು. ಜೊತೆಗೆ, ಗೋಪಾಲಕೃಷ್ಣ ಅಡಿಗರ ಸನಿಹದಲ್ಲಿ ನವ್ಯಕಾವ್ಯದ ಕುರಿತ ಚರ್ಚೆಗೆ ತೆರೆದುಕೊಳ್ಳುವ ಅವಕಾಶ ಸಿಕ್ಕಿತು. ಲಂಕೇಶ್, ಕಿ.ರಂ.ನಾಗರಾಜ ಮೊದಲಾದವರ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಾಗಲೇ ಭಕ್ತಿ ವಿಭಕ್ತಿಗಳ ನಡುವಿನ ಆಧ್ಯಾತ್ಮಿಕ ವ್ಯಾಕರಣವನ್ನು ಹುಡುಕಿ ಹೊರಡಬೇಕಿನ್ನಿಸಿತ್ತು ತೋಳ್ಪಾಡಿಯವರಿಗೆ. ಶಿವಮೊಗ್ಗದಲ್ಲಿ ಸತ್ಯಕಾಮ ಸಿಕ್ಕಿದರು. ಅವರು ತೋಳ್ಪಾಡಿಗೆ, ಇವರು ಕಲ್ಲಳ್ಳಿಗೆ ಹೋಗಿಬಂದಿದ್ದಿದೆ. ಪುತ್ತೂರಿನ ಅಜ್ಜನ ಸಾಧನೆಯ ಗವಿಯೊಳಗೆ ಕಂಡ ಬೆಳಕು ಕೆಲಕಾಲ ಕೈಹಿಡಿದು ನಡೆಸಿತು.ಕೆಲವೊಮ್ಮೆ ಬುದ್ಧ, ಗಾಂಧಿಯವರ ಮಧ್ಯಮ ಮಾರ್ಗದ ಬೆರಗು. ಈ ಮಧ್ಯೆ ಸಿಕ್ಕಿದವರು ಕೃಷಿಯನ್ನು ಋಷಿಯ ಆಸ್ಥೆಯಲ್ಲಿ ಬದುಕಿದ ಪುಣ್ಯಾತ್ಮ ಸೂಫಿ ಬ್ಯಾರಿ. `ಒಂದು ಗಿಡ ತನಗೆ ಬೇಕಾದ್ದನ್ನು ಮಣ್ಣಿನಿಂದ ಪಡೆದುಕೊಂಡು ಅದು ಏನು ಕೊಡಬೇಕೆಂದಿದೆಯೊ ಅದನ್ನು ಕೊಟ್ಟೇ ಕೊಡುತ್ತದೆ' ಎಂಬ ಸೂಫಿ ಬ್ಯಾರಿ ಮಾತುಗಳು ಲಕ್ಷ್ಮೀಶ ತೋಳ್ಪಾಡಿಯವರಿಗೆ ಇವತ್ತಿಗೂ ಕೇಳಿಸುತ್ತಿವೆ. ಕುಮಾರಧಾರೆಗೆ ಅಣೆಕಟ್ಟು ಕಟ್ಟುವುದು ಸ್ಥಳೀಯ ರೈತರಿಗೆ ಹಾನಿಕಾರಕವೆನ್ನಿಸಿದಾಗ ಕಿಸಾನ್ ಸಂಘದ ಮೂಲಕ ಪ್ರತಿಭಟಿಸಿ ಯೋಜನೆಯನ್ನು ಹಿಮ್ಮೆಟ್ಟಿಸಲು ಕಾರಣರಾದವರು ಅವರು. ಆಧ್ಯಾತ್ಮಿಕ ನಿಗೂಢತೆಯನ್ನು ಜೀವನಪ್ರೀತಿಯ ಸರಳತೆಯನ್ನಾಗಿ ಕಾಣುವ ತುಡಿತದಲ್ಲಿಯೇ ಅವರ ಮೌನ ಮಾತು, ಓದು ಬರಹಗಳು ಸಾಗಿವೆ. ಇದೇ ಕಾರಣಕ್ಕಾಗಿ ವೇದ, ಉಪನಿಷತ್, ಪೌರಾಣಿಕ ಮಹಾಕಾವ್ಯಗಳ ಪದಗಳ ನಡುವಿನ ಮೌನವನ್ನು ಅವರಿಗೆ ಓದುವುದಕ್ಕೆ ಸಾಧ್ಯವಾಗಿದೆ. ಭಗವದ್ಗೀತೆಯ ಬಗೆಗಿನ `ಮಹಾಯುದ್ಧಕ್ಕೆ ಮುನ್ನ' ಅವರ ಮೊದಲ ಪ್ರಕಟಿತ ಕೃತಿ.ಈ ಕೃತಿಯ ಬಗ್ಗೆ ಬಂದಿರುವ ಪತ್ರಿಕಾ ವಿಮರ್ಶೆಯಲ್ಲಿ `ಆಧುನಿಕ ಹೃದಯಸ್ಪರ್ಶಿ' ಎಂಬ ಮೆಚ್ಚುಗೆ ವ್ಯಕ್ತವಾಗಿತ್ತು. ಅಂತರ್ಜಾಲ ಪತ್ರಿಕೆಯಲ್ಲಿ ಭಾಗವತದ ಬಗ್ಗೆ ಬರೆದ ಸರಣಿ ಬರಹಗಳ ಸಂಕಲನ `ಸಂಪಿಗೆ ಭಾಗವತ' ಅವರ ಎರಡನೆಯ ಕೃತಿ. ಈಗ `ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ' ಕೃತಿ ಪ್ರಕಟವಾಗುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry