ಮಂಗಳವಾರ, ಮೇ 18, 2021
24 °C

ಪದವಿ ಕಾಲೇಜು ಎತ್ತಂಗಡಿ ಯತ್ನ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ಕಾಣಿಯೂರಿನಲ್ಲಿ ಆರಂಭಿಸಲಾಗಿದ್ದ ನ್ಯೂ ಮಾಡೆಲ್ ಪದವಿ ಕಾಲೇಜು ಇದೀಗ ಸ್ಥಳದ ಕೊರತೆಯಿಂದ ಎತ್ತಂಗಡಿಯಾಗುವ ಪರಿಸ್ಥಿತಿಯಲ್ಲಿದ್ದು, ಇದಕ್ಕೆ ಇಚ್ಚಾಶಕ್ತಿಯ ಕೊರತೆ ಕಾರಣವಾಗಿದೆ. ಈ ಕಾಲೇಜನ್ನು ಕಾಣಿಯೂರಿನಲ್ಲೇ ಉಳಿಸಿಕೊಳ್ಳಬೇಕು.

ಇದಕ್ಕಾಗಿ 10 ಎಕ್ರೆಯಷ್ಟು ಸ್ಥಳದ ಅವಶ್ಯಕತೆ ಇದ್ದು,  ಸ್ಥಳೀಯರು ಜಾಗ ನೀಡಲು ಮುಂದಾಗಬೇಕಾಗಿದೆ ಎಂದು  ಹಿರಿಯ ಸಹಕಾರಿ ಧುರೀಣ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಪಿ. ಜಯರಾಮ ಗೌಡ ವಿನಂತಿಸಿದ್ದಾರೆ. ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಪುತ್ತೂರು ತಾಲ್ಲೂಕಿನ ಕಾಣಿಯೂರಲ್ಲಿ ಮೂರು ವರ್ಷಗಳ ಹಿಂದೆ ಪದವಿ ಕಾಲೇಜು ಆರಂಭವಾಗಿದೆ. 

ಈವರೆಗೂ ಸರಿಯಾದ ವ್ಯವಸ್ಥೆ ಕಲ್ಪಿಸಲು ಸರ್ಕಾರಿ ಜಾಗವಿಲ್ಲದ ಕಾರಣ ವಿಫಲತೆಯನ್ನು ಕಂಡಿದ್ದೇವೆ.  ಶಾಸಕರೇ ಇದರ ಅಧ್ಯಕ್ಷರಾಗಿದ್ದರೂ ಈ ಕಾಲೇಜಿಗೆ ಸ್ಥಳದ ಕೊರತೆ ನೀಗಿಸುವಲ್ಲಿ ಹಿಂದಿನ  ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲರ ಖಾತೆಯಲ್ಲಿ ರೂ 1.50 ಕೋಟಿ ಈಗಾಗಲೇ ಜಮಾಗೊಂಡಿದೆ. ಪ್ರಾಂಶುಪಾಲರ ಸಹಿತ 5 ಮಂದಿ ಶಿಕ್ಷಕರು ಇಲ್ಲಿದ್ದು, 100 ವಿದ್ಯಾರ್ಥಿಗಳಿದ್ದಾರೆ.

ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ನಡೆಯುತ್ತಿರುವ ಈ ಕಾಲೇಜಿಗೆ ಹೊಸ ಕಟ್ಟಡ ನಿರ್ಮಾಣವಾಗಬೇಕಾದರೆ ಜಾಗದ ಅವಶ್ಯಕತೆ ಇದೆ. ಆದರೆ ಇದರ ಬಗ್ಗೆ ಗಮನ ಹರಿಸದ ಕಾರಣ ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಸೌಲಭ್ಯವೊಂದು ಕಾಣೆಯಾಗುವ ಸಾಧ್ಯತೆ ಕಂಡು ಬರುತ್ತಿದೆ. ಹಿಂದಿನ ರಾಜ್ಯ ಸರ್ಕಾರದ ಸ್ಪಂದನೆ ರಹಿತ ವ್ಯವಸ್ಥೆಯಿಂದ ಪದವಿ ಕಾಲೇಜಿನ ಸೌಲಭ್ಯದಿಂದ ಕಾಣಿಯೂರು ವಂಚಿತಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.ಕಾಣಿಯೂರು ಮತ್ತು ಸುತ್ತಮುತ್ತಲಿನ ಪರಿಸರದ ಯುವಕ-ಯುವತಿಯರ ವಿದ್ಯಾಭ್ಯಾಸದ ಅನುಕೂಲಕ್ಕಾಗಿ 2010ರಲ್ಲಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಿಂದ ಇಲ್ಲಿ ನ್ಯೂ ಮಾಡೆಲ್ ಡಿಗ್ರಿ ಕಾಲೇಜು ಮಂಜೂರಾಗಿದೆ. ಆದರೆ ಹಿಂದಿನ ರಾಜ್ಯ ಸರ್ಕಾರ ಒಪ್ಪಿಕೊಂಡಂತೆ ಅಗತ್ಯವಿರುವ ಕನಿಷ್ಠ 10 ಎಕ್ರೆ ಸ್ಥಳವನ್ನು ಒದಗಿಸಿ ಕೊಡಲು ವಿಫಲವಾಗಿರುವುದರಿಂದ ಈ ಕಾಲೇಜು ಕಾಣಿಯೂರಲ್ಲಿ ಮುಂದುವರಿಯುವ ವಿಚಾರವು ಡೋಲಾಯಮಾನ ಸ್ಥಿತಿಯಲ್ಲಿದೆ ಎಂದು ಅವರು ಹೇಳಿದರು.

ಕಟ್ಟಡದ ಸೌಲಭ್ಯದಿಂದ ವಂಚಿತವಾಗಿರುವ ಈ ಕಾಲೇಜಿನಲ್ಲಿ ಪ್ರಸ್ತುತ ಪಠ್ಯ ಚಟುವಟಿಕೆಗಳು ನಡೆಯುತ್ತಿದ್ದರೂ ವ್ಯವಸ್ಥಿತವಾದ ಸೌಲಭ್ಯಗಳಿಲ್ಲ. ಇಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಪರ ತರಗತಿಗಳನ್ನೂ ನಡೆಸಲಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರದ ಈ ಯೋಜನೆಯನ್ನು ಉಳಿಸಿಕೊಳ್ಳಲು ಕಾಣಿಯೂರು ರಾಜ್ಯ ರಸ್ತೆ ಬದಿಯಲ್ಲಿ 10 ಎಕ್ರೆ ಸರ್ಕಾರಿ ಸ್ಥಳ ಅಥವಾ ಖಾಸಗಿ ಸ್ಥಳದ ಅನುಕೂಲತೆಯಿದ್ದರೆ ಇನ್ನು 15 ದಿನಗಳ ಒಳಗೆ ಗಮನಕ್ಕೆ ತಂದಲ್ಲಿ ತಕ್ಷಣವೇ ರಾಜ್ಯ ಸರ್ಕಾರದಿಂದ ಬೇಕಾದ ಆದೇಶಗಳನ್ನು ಪಡೆದುಕೊಂಡು ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ಅನುಕೂಲ ಒದಗಿಸಲು ಪ್ರಯತ್ನಿಸುತ್ತೇವೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶೀನಪ್ಪ ಗೌಡ ಬೈತಡ್ಕ, ನಿರ್ಮಲ್ ಕುಮಾರ್ ಜೈನ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.