ಶನಿವಾರ, ಮೇ 8, 2021
23 °C

ಪದವೀಧರ, ಶಿಕ್ಷಕರ ಕ್ಷೇತ್ರ ; ಮತದಾರರ ಪಟ್ಟಿಗೆ ವೇಳಾಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನ ಪರಿಷತ್ತಿನ ಮೂರು ಪದವೀಧರ ಮತ್ತು ಮೂರು ಶಿಕ್ಷಕರ ಕ್ಷೇತ್ರಗಳಿಗೆ ಜೂನ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಸಿದ್ಧತೆಗೆ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.ಈಶಾನ್ಯ, ನೈರುತ್ಯ ಮತ್ತು ಬೆಂಗಳೂರು ಪದವೀಧರ ಕ್ಷೇತ್ರ ಹಾಗೂ ಆಗ್ನೇಯ, ನೈರುತ್ಯ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರಗಳ ಅವಧಿ 2012ರ ಜೂನ್ 21ರಂದು ಅಂತ್ಯವಾಗಲಿದೆ.ಇದಕ್ಕೂ ಮುನ್ನವೇ ಚುನಾವಣೆ ನಡೆಸಬೇಕಾಗಿದ್ದು, ಈ ಸಲುವಾಗಿ ಮತದಾರರ ಪಟ್ಟಿ ಸಿದ್ಧತೆಗೆ ಚಾಲನೆ ನೀಡಲಾಗಿದೆ.2005ರ ಪದವೀಧರ ಮತದಾರರ ಕರಡು ಪಟ್ಟಿಯನ್ನು ಅಕ್ಟೋಬರ್ 1ರಂದು ಪ್ರಕಟಿಸುತ್ತಿದ್ದು, ಅಂದಿನಿಂದಲೇ ಹೊಸ ಪದವೀಧರರು ಕೂಡ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.ನವೆಂಬರ್ 5ರವರೆಗೂ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ಇದೆ. ಡಿ.12ರಂದು ಮತದಾರರ ಅಂತಿಮಪಟ್ಟಿ ಪ್ರಕಟಿಸಲಾಗುವುದು ಎಂದು ಜಂಟಿ ಮುಖ್ಯ ಚುನಾವಣಾಧಿಕಾರಿ ಶಾಮಯ್ಯ `ಪ್ರಜಾವಾಣಿ~ಗೆ ತಿಳಿಸಿದರು.ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಅ.1ರಿಂದಲೇ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿಗಳನ್ನು ಸಲ್ಲಿಸಬಹುದು. ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ ಶಿಕ್ಷಕರೆಲ್ಲರೂ ಮತದಾನದ ಅವಕಾಶ ಪಡೆದಿದ್ದಾರೆ. ಮತದಾರರ ಅಂತಿಮ ಪಟ್ಟಿಯನ್ನು ಡಿ.12ರಂದು ಪ್ರಕಟಿಸಲಾಗುವುದು ಎಂದರು.ಈಶಾನ್ಯ ಪದವೀಧರ ಕ್ಷೇತ್ರ ವ್ಯಾಪ್ತಿಗೆ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಸೇರಿಸಲಾಗಿದೆ. ನೈರುತ್ಯ ಪದವೀಧರ ಕ್ಷೇತ್ರಕ್ಕೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕುಗಳು ಸೇರುತ್ತವೆ.ಬೆಂಗಳೂರು ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳು ಸೇರುತ್ತವೆ.ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಚಿತ್ರದುರ್ಗ, ದಾವಣಗೆರೆ (ಚನ್ನಗಿರಿ, ಹೊನ್ನಾಳಿ, ಹರಪನಹಳ್ಳಿ ಹೊರತುಪಡಿಸಿ), ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಸೇರುತ್ತವೆ.ನೈರುತ್ಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕುಗಳು ಸೇರುತ್ತವೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳು ಸೇರುತ್ತವೆ.ಆಯಾ ಭಾಗದ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಗಳಾಗಿ ಹಾಗೂ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿ ಕೆಲಸ ನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.ಜೂನ್ ವೇಳೆಗೆ 19 ಮಂದಿ ನಿವೃತ್ತಿ

ಬೆಂಗಳೂರು: ಮೋಟಮ್ಮ, ಜನಾರ್ದನ ರೆಡ್ಡಿ, ವೈ.ಎಸ್.ವಿ. ದತ್ತ ಸೇರಿದಂತೆ ವಿಧಾನ ಪರಿಷತ್ತಿನ 19 ಮಂದಿ ಸದಸ್ಯರು 2012ರ ಜೂನ್ ವೇಳೆಗೆ ನಿವೃತ್ತಿಯಾಗಲಿದ್ದಾರೆ.ವಿಧಾನ ಸಭೆಯಿಂದ ಪರಿಷತ್ತಿಗೆ ಆಯ್ಕೆಯಾಗಿರುವ 11 ಮಂದಿ ಶಾಸಕರು ಜೂನ್ 17ಕ್ಕೆ ನಿವೃತ್ತಿಯಾಗಲಿದ್ದಾರೆ. ಈ ಪಟ್ಟಿಯಲ್ಲಿ ಅಬ್ದುಲ್ ಅಜೀಮ್, ಕೆ.ಸಿ.ಕೊಂಡಯ್ಯ, ಕಾಜಿ ಅರ್ಷದ್ ಅಲಿ, ಎಸ್.ಚಿಕ್ಕಮಾದು, ಜಿ.ಜನಾರ್ದನ ರೆಡ್ಡಿ, ತೋಂಟದಾರ್ಯ, ಎಚ್.ಸಿ.ನೀರಾವರಿ, ಮೋಟಮ್ಮ, ವಿಮಲಾಗೌಡ, ಡಿ.ಎಸ್.ವೀರಯ್ಯ ಮತ್ತು ವಿ.ಎಸ್. ಸುದರ್ಶನ್ ಅವರಿದ್ದಾರೆ.ನಾಮಕರಣ ಸದಸ್ಯರಾದ ಎನ್.ತಿಪ್ಪಣ್ಣ, ವೈ.ಎಸ್. ವಿ.ದತ್ತ ಮತ್ತು ಶ್ರೀನಾಥ್ ಅವರ ಅವಧಿ 2012ರ ಮೇ 20ಕ್ಕೆ ಮುಗಿಯಲಿದೆ.ಇವರಲ್ಲದೆ, ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ವೈ.ಎ.ನಾರಾಯಣಸ್ವಾಮಿ (ಆಗ್ನೇಯ ಕ್ಷೇತ್ರ), ಗಣೇಶ್ ಕಾರ್ಣಿಕ್ (ನೈರುತ್ಯ), ಮರಿತಿಬ್ಬೇಗೌಡ (ದಕ್ಷಿಣ) ಹಾಗೂ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಮನೋಹರ ಮಸ್ಕಿ (ಈಶಾನ್ಯ), ಡಿ.ಎಚ್.ಶಂಕರಮೂರ್ತಿ (ನೈರುತ್ಯ) ಮತ್ತು ರಾಮಚಂದ್ರೇಗೌಡ (ಬೆಂಗಳೂರು) ಅವರ ಅವಧಿ ಜೂನ್ 21ಕ್ಕೆ ಮುಗಿಯಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.