ಸೋಮವಾರ, ಮೇ 17, 2021
25 °C

ಪರಿಸರ ಪಾಠ ಮಕ್ಕಳೇಕೆ ಕಲಿಯುತ್ತಿಲ್ಲ?

ವಿನಯಾ ಕುಮಾರಿ Updated:

ಅಕ್ಷರ ಗಾತ್ರ : | |

ಪರಿಸರ ಪಾಠ ಮಕ್ಕಳೇಕೆ ಕಲಿಯುತ್ತಿಲ್ಲ?

ಕೆಲ ದಿನಗಳ ಹಿಂದೆ, ಮನೆಯ ಹತ್ತಿರವಿದ್ದ ಉದ್ಯಾನದಲ್ಲಿ ಸಂಜೆಯ ವಾಕಿಂಗ್ ಮಾಡುತ್ತಿದ್ದೆ. ಸುಮಾರು ಹನ್ನೆರಡರಿಂದ ಹದಿನಾಲ್ಕು ವರ್ಷ ವಯಸ್ಸಿನ ಅನೇಕ ಮಕ್ಕಳು ಅಲ್ಲಿ ಕಳ್ಳ ಪೋಲೀಸ್ ಆಟವಾಡುವುದರಲ್ಲಿ ಮೈಮರೆತಿದ್ದರು. ಅವರಲ್ಲಿ ಒಬ್ಬ ತನಗೆ ಮೂತ್ರ ವಿಸರ್ಜನೆಗೆ ಅವಸರ ಆಗಿದ್ದು, ಹತ್ತಿರದಲ್ಲೇ ಇರುವ ಮನೆಗೆ ಹೋಗಿ ಬರುವುದಾಗಿ ಹೇಳುತ್ತಿದ್ದ. ಅದಕ್ಕೆ ಅವನ ಗೆಳೆಯರಿಬ್ಬರು `ಏ ಮನೆಗೆ ಯಾಕೆ ಹೋಗ್ತೀಯೋ, ಇಲ್ಲೇ ಮೂಲೇಲಿ ಮಾಡು. ಯಾರಿಗೂ ಗೊತ್ತಾಗಲ್ಲ' ಎನ್ನುತ್ತಾ ಅವನನ್ನು ಉದ್ಯಾನದಲ್ಲೇ ಮೂತ್ರವಿಸರ್ಜನೆಗೆ ಪ್ರೋತ್ಸಾಹಿಸುತ್ತಿದ್ದರು.  ಪರಿಸರದ ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ ಎಂಬುದು ನಮ್ಮ ಮಕ್ಕಳಿಗೇಕೆ ಇನ್ನೂ ತಿಳಿದಿಲ್ಲ?ರಸ್ತೆಗಳಲ್ಲಿ ಯುವಕರು ಕರ್ಕಶ ಸದ್ದು ಮಾಡುತ್ತಾ ಅತಿಯಾದ ವೇಗದಲ್ಲಿ ದ್ವಿಚಕ್ರ ವಾಹನಗಳನ್ನು ಓಡಿಸಿಕೊಂಡು ಹೋಗುವುದನ್ನು ನೋಡಿ `ಹೀಗೇಕೆ?' ಎಂದು ಗೆಳತಿಯನ್ನು ವಿಚಾರಿಸಿದೆ. ಆಕೆ, ಮೋಟಾರ್ ಬೈಕ್‌ನ ಸೈಲೆನ್ಸರ್ ಎಂಬ ಭಾಗವನ್ನು ಬೇಕೆಂದೇ ತೆಗೆದು ಮೋಜಿಗಾಗಿ ಆ ರೀತಿ ಓಡಿಸುತ್ತಾರೆ ಎಂದಿದ್ದಳು. ಹಾಗಿದ್ದರೆ ನಮ್ಮ ಯುವಕರಿಗೆ ಶಬ್ದಮಾಲಿನ್ಯದ ಬಗ್ಗೆ ತಿಳಿದೇ ಇಲ್ಲವೇ? ಅದರಿಂದ ಹಿರಿಯರಿಗೆ ಹಾಗೂ ಅನಾರೋಗ್ಯಪೀಡಿತರಿಗೆ ತೊಂದರೆ ಆಗಬಹುದೆಂಬ ಅರಿವೇ ಇಲ್ಲವೇ?ರಜೆ ಕಳೆಯಲು ಬಂದಿದ್ದ ತಮ್ಮನ ಮಗಳನ್ನು ನಮ್ಮೂರಿನ ಗಾಂಧಿ ಪಾರ್ಕ್‌ಗೆ ಕರೆದೊಯ್ದಿದ್ದೆ. ಬಹಳಷ್ಟು ಒಳ್ಳೆಯ ಬದಲಾವಣೆಗಳೊಂದಿಗೆ ನವೀಕರಣಗೊಂಡ ಪಾರ್ಕ್ ಮಕ್ಕಳ ಆಕರ್ಷಣೆಯ ಕೇಂದ್ರವಾಗಿತ್ತು. ಖುಷಿಯಾಗಿ ಒಳಗೆ ಹೋದರೆ ಮತ್ತದೇ ಬೇಸರದ ಸಂಗತಿ! ಅಲ್ಲಲ್ಲೇ ಗುಂಪು ಗುಂಪಾಗಿ ಕುಳಿತ ಜನ ಮನೆಯಿಂದ ತಂದ ತಿಂಡಿಯನ್ನು ತಿಂದು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದಿದ್ದರು. ಮಕ್ಕಳು ಖಾಲಿಯಾದ ತಿಂಡಿ ಪೊಟ್ಟಣಗಳನ್ನು ಎಲ್ಲೆಡೆ ಬಿಸಾಡುತ್ತಿದ್ದರು. ಯಾಕೆ ಹೀಗೆ? ಕಸವನ್ನು ಕಸದ ಡಬ್ಬದಲ್ಲಿ ಹಾಕಬೇಕೆಂಬ ಪರಿಜ್ಞಾನವೂ ನಮ್ಮ ಮಕ್ಕಳಿಗೆ ಇಲ್ಲವಾಯಿತೇ?ಮನೆ ಮುಂದಿನ ಗಿಡಗಳಿಗೆ ನೀರುಣಿಸು ಎಂದರೆ ಮಕ್ಕಳಿಗೆ ಒಂದು ಬಗೆಯ ಉದಾಸೀನ, ಅದು ನನ್ನ ಕೆಲಸವಲ್ಲ ಎಂಬ ಭಾವನೆ. ಇದನ್ನು ನೋಡಿದರೆ, ಹಸಿರು ಪ್ರಪಂಚದಿಂದ ನಮಗಾಗುವ ಉಪಯೋಗಗಳ ಮನವರಿಕೆ ನಮ್ಮ ಮಕ್ಕಳಿಗೆ ಇನ್ನೂ ಆಗಿಲ್ಲ ಎನಿಸುತ್ತದೆ. ಮನೆಯಿಂದ ಅಂಗಡಿಗೆ ಹೊರಡುವ ಮಗನಿಗೆ `ಕೈ ಚೀಲ ತೆಗೆದುಕೊಂಡು ಹೋಗು' ಎಂದರೆ, `ಅಂಗಡಿಯವರು ಕವರ್ ಕೊಡ್ತಾರೆ ಬಿಡಮ್ಮ' ಎನ್ನುವ ಧೋರಣೆ. ಪ್ಲಾಸ್ಟಿಕ್ ಬಳಕೆಯ ಅಪಾಯದ ಬಗ್ಗೆ ನಮ್ಮ ಮಕ್ಕಳೇಕೆ ಇನ್ನೂ ತಿಳಿದಿಲ್ಲ?ಉಪಯೋಗಿಸಿದ ನಂತರ ಕೋಣೆಯ ಲೈಟು, ಫ್ಯಾನು ಆರಿಸುವುದರ ಬಗ್ಗೆ ಪದೇ ಪದೇ ಹೇಳಿದರೂ ಬಹುತೇಕ ಮಕ್ಕಳು ನಿರ್ಲಕ್ಷ್ಯ ವಹಿಸುತ್ತಾರೆ. ವಿದ್ಯುತ್ ಅಭಾವದ ಅರಿವು ಅವರಿಗೆ ತಿಳಿಯುವುದು ಎಂದು? ನೀರು ಪೋಲಾಗುತ್ತಿರುವ ನಲ್ಲಿಯನ್ನು ಬಂದ್ ಮಾಡಲು ನಮ್ಮ ಮಕ್ಕಳು ಆತುರದಿಂದ ಓಡಲಾರರು. ಹಾಗಿದ್ದರೆ ಅತ್ಯಮೂಲ್ಯವಾದ ಜಲ ಸಂಪತ್ತನ್ನು ಉಳಿಸಲು ಅವರು ಮುಂದಾಗುವುದು ಎಂದು?ಪ್ರತಿ ವರ್ಷವೂ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸುತ್ತೇವೆ. ಪರಿಸರದ ಬಗ್ಗೆ ಜನಜಾಗೃತಿ ಮೂಡಿಸುವುದು ಈ ಆಚರಣೆಯ ಮುಖ್ಯ ಉದ್ದೇಶ. ಆ ದಿನ ಎಲ್ಲೆಲ್ಲೂ ಪರಿಸರದ ಬಗ್ಗೆಯೇ ಮಾತು! ಆ ಬಗ್ಗೆಯೇ ಮಕ್ಕಳಿಗೆ ಭಾಷಣ, ಚಿತ್ರಕಲೆ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುತ್ತೇವೆ. ಅಷ್ಟು ಮಾಡಿದರೆ  ಪರಿಸರ ದಿನದ ಆಚರಣೆ ಸಾರ್ಥಕವಾದೀತೇ?ದೇಶದ ಭಾವಿ ಪ್ರಜೆಗಳಾದ ಮಕ್ಕಳಿಗೆ ದಿನನಿತ್ಯವೂ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ನಿತ್ಯದ ಬದುಕಿನಲ್ಲಿ ನಾವು ಅನುಸರಿಸಬಹುದಾದ ಸಣ್ಣಪುಟ್ಟ ಪರಿಸರ ಪರ ಕೆಲಸಗಳ ಬಗ್ಗೆ ತಿಳಿ ಹೇಳಬೇಕು. ಇದು ನಮ್ಮೆಲ್ಲರ ದೃಢ ನಿರ್ಧಾರದಿಂದ ಮಾತ್ರ ಸಾಧ್ಯ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.