ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಪರಿಹಾರ ವಿತರಣೆಯಲ್ಲಿ ಸರ್ಕಾರ ವಿಫಲ

Published:
Updated:

ಗೋಕಾಕ: ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದಾಗಿ ಕೋಟ್ಯಂತರ ರೂಪಾಯಿ ಆಸ್ತಿ-ಪಾಸ್ತಿಗೆ ಹಾನಿ ಉಂಟಾಗಿದ್ದರೂ ರಾಜ್ಯ ಸರ್ಕಾರ ನಿರಾಶ್ರಿತರಿಗೆ ಅಗತ್ಯ ನೆರವು ಕಲ್ಪಿಸಿ ಕೊಡುವಲ್ಲಿ ವಿಫಲವಾಗಿದೆ ಎಂದು  ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ಆರೋಪಿಸಿದರು.ಭಾನುವಾರ ಘಟಪ್ರಭೆ ಪ್ರವಾಹ ಪೀಡಿತ ಗೋಕಾಕ ನಗರದ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕೃತಿ ವಿಕೋಪದಿಂದ ಬೀದಿ ಪಾಲಾದ ಕುಟುಂಬಗಳಿಗೆ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.ಜಲಾವೃತಗೊಳ್ಳುವ ಗ್ರಾಮಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳ ಸ್ಥಿತಿ-ಗತಿ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮೋಟಮ್ಮ  ಈ ಸಂದರ್ಭದಲ್ಲಿ ಸೂಚನೆ ನೀಡಿದರು.ಬಳ್ಳಾರಿ ನಗರ ಶಾಸಕ ಶ್ರೀರಾಮುಲು ಅವರ ರಾಜೀನಾಮೆ ಪಕ್ಷದ ವರಿಷ್ಠರನ್ನು ಬ್ಲ್ಯಾಕ್‌ಮೇಲ್ ಮಾಡುವ ತಂತ್ರ ಎಂದು  ವ್ಯಂಗ್ಯವಾಡಿದರು.ಕೊಪ್ಪಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು,  ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನದಲ್ಲಿ ಕಾಂಗ್ರೆಸ್ ಪಕ್ಷದ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದರು.ಈ ಸಂದರ್ಭದಲ್ಲಿ ನಗರಾಧ್ಯಕ್ಷೆ ಸಾವಿತ್ರಿ ಕಂಬಳಿ, ಸದಸ್ಯರಾದ  ಶಂಕರ ಧರೆನ್ನವರ, ರಾಮಸಿದ್ಧ ಖಾನಪ್ಪನವರ ಹಾಗೂ ಎ.ಡಿ. ಶಾಬಾಷಖಾನ್,  ನಗರಸಭೆ ಮಾಜಿ ಅಧ್ಯಕ್ಷ ನಜೀರ್ ಶೇಖ್, ಜಾವೇದ್ ಮುಲ್ಲಾ, ತಹಸೀಲ್ದಾರ ಔದ್ರಾಮ, ಪೌರಾಯುಕ್ತ ವಿ.ಸಿ. ಚಿನ್ನಪ್ಪಗೌಡರ, ಗ್ರಾಮ ಲೆಕ್ಕಾಧಿಕಾರಿ ನಿರಂಜನ ಬನ್ನಿಶೆಟ್ಟಿ ಮೊದಲಾದವರು ಹಾಜರಿದ್ದರು.

 

Post Comments (+)