ಬುಧವಾರ, ಏಪ್ರಿಲ್ 14, 2021
30 °C

ಪರಿಹಾರ ವಿಳಂಬಕ್ಕೆ ಶಾಸಕ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಪಟ್ಟಣದ ಎಂ.ಜಿ.ರಸ್ತೆ ವಿಸ್ತರಣೆಗೊಂಡು ಎರಡು ವರ್ಷ ಕಳೆದರೂ ಪರಿಹಾರದ ಹಣ ಮಾತ್ರ ಇನ್ನೂ ಸಂತ್ರಸ್ತರಿಗೆ ದೊರಕಿಲ್ಲ ಎಂದು ಜನತಾ ದಳ ದಲಿತ ಮುಖಂಡ ತಾ.ಮ.ಮಲ್ಲೇಶ್ ಆರೋಪಿಸಿದ್ದಾರೆ.ಪತ್ರಿಕೆಯೊಂದಿಗೆ ಮಾತನಾಡಿದ ಅವರು, ದಶಕಗಳಿಂದ ವಿಸ್ತಾರಗೊಳ್ಳದೆ ನೆನೆಗುದಿಗೆ ಬಿದ್ದಿದ್ದ ಎಂ.ಜಿ.ರಸ್ತೆ ವಿಸ್ತರಣೆಗೆ ರಸ್ತೆ ಬದಿಯ ನಿವಾಸಿಗಳು, ವರ್ತಕರು ಸ್ವಪ್ರೇರಣೆಯಿಂದ ರಸ್ತೆಗೆ ಜಾಗನೀಡಿ ಅವರ ಮನೆ ಹಾಗೂ ಅಂಗಡಿಗಳನ್ನು ತೆರವು ಮಾಡಿಕೊಟ್ಟಿದ್ದಾರೆ. ಈ ರಸ್ತೆಯಲ್ಲಿನ ಕಟ್ಟಡಗಳನ್ನು ತೆರವುಗೊಳಿಸಲು ಆಗಿನ ಜಿಲ್ಲಾಡಳಿತ 3 ಕೋಟಿ ಹಣ ಬಿಡುಗಡೆ ಮಾಡಿತ್ತು. ಆದರೆ ಆ ಹಣದಲ್ಲಿ ಒಂದು ರೂಪಾಯಿಯನ್ನು ಬಳಕೆ ಮಾಡಿಲ್ಲ. ಅಲ್ಲದೇ ಮನೆ ಕಳೆದುಕೊಂಡ ನಿರಾಶ್ರಿತರಿಗೂ ಆ ಹಣದಲ್ಲಿ ಬಿಡಿಗಾಸು ಸಹ ನೀಡಿಲ್ಲ. ಹಾಗಾದರೆ ಆ ಹಣ ಏನಾಯಿತು ಎಂದು ಅವರು ಪ್ರಶ್ನಿಸಿದರು.ಜಾಗ ಕಳೆದುಕೊಂಡಿರುವ ನಿರಾಶ್ರಿತರಿಗೆ ಪರಿಹಾರ ಹಣದ ಜೊತೆಗೆ ಸೂಕ್ತ ನಿವೇಶನ ಕೊಡುವುದಾಗಿ ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು. ಇದೇ ವಿಷಯ ಮುಂದಿಟ್ಟುಕೊಂಡು ಪೇಟೆಕೆರೆಯಲ್ಲಿರುವ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗೆ ಸೇರಿದ ಜಾಗವನ್ನು ಅಕ್ರಮವಾಗಿ ಪ್ರವೇಶಮಾಡಿ ಆ ಜಾಗದಲ್ಲಿ ನಿವೇಶನ ಮಾಡಲು ಹೊರಟಿದ್ದಾರೆ. ಶಾಸಕರ ಈ ವರ್ತನೆ ವಿರುದ್ಧ ತೋಟಗಾರಿಕಾ ಇಲಾಖೆ, ತಾಲ್ಲೂಕಿನ ಪ್ರಗತಿಪರ ಸಂಘಟನೆಗಳು ಹಾಗೂ ರೈತರು ಈ ಜಾಗ ಉಳಿಸಿಕೊಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಇದರಿಂದ ವಿಚಲಿತರಾದ ಶಾಸಕರು ‘ನಾವು ನಿಮಗೆ ಸಹಾಯ ಮಾಡಲು ಸಿದ್ಧ, ಆದರೆ ರೈತ ಮುಖಂಡರು, ಸಂಘಟನೆಗಳು, ವರ್ತಕರು ಅದಕ್ಕೆ ಅವಕಾಶ ನೀಡುತ್ತಿಲ್ಲ’ ಎಂದು ಹೇಳಿ ಪೇಟೆ ಬೀದಿ ಸಂತ್ರಸ್ತರನ್ನು ಎತ್ತಿಕಟ್ಟಿದ್ದಾರೆ. ಶಾಸಕರು ನಿರಾಶ್ರಿತ ಕುಟುಂಬಗಳಿಗೆ ಶೀಘ್ರ ಪರಿಹಾರ ಕೊಡಿಸಿಕೊಡುವ ಬದಲು ರಾಜಕೀಯ ಲಾಭಕ್ಕಾಗಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಅವರು ದೂರಿದರು.ರೈತರ ವಿರುದ್ಧ ವರ್ತಕರನ್ನು, ವರ್ತಕರ ವಿರುದ್ಧ ಸಂತ್ರಸ್ತರನ್ನು, ಸಂತ್ರಸ್ತರೊಳಗೆ ಪಕ್ಷದ ವಿಷಬೀಜ ಬಿತ್ತುತ್ತಿದ್ದಾರೆ.  ಸಂತ್ರಸ್ತರೆಲ್ಲರೂ ಪಕ್ಷದ ಪರವಾಗಿ ಬಂದರೆ ನಿಯೋಗವನ್ನು ರಚನೆ ಮಾಡಿ ಮುಖ್ಯಮಂತ್ರಿಗಳ ಬಳಿಹೋಗಿ ಶೀಘ್ರವೇ ಪರಿಹಾರ ಮತ್ತು ನಿವೇಶನ ಕೊಡಿಸುವುದಾಗಿ ನಂಬಿಸಿ ನಿರಾಶ್ರಿತರ ಸಂಘ ಮಾಡಲು ಹೊರಟಿದ್ದಾರೆ. ಈ ಸಂಘ ನಿರಾಶ್ರಿತರಲ್ಲದ ಕೆಲವು ಕಾಂಗ್ರೆಸ್ ಮುಖಂಡರನ್ನು ಸೇರಿಸಿಕೊಂಡು ಮಾಡಿರುವಂತಹ ಕಾಂಗ್ರೆಸ್ಸಿಗರ ಹೋರಾಟ ಸಮಿತಿಯಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.ಹಣ ದುರುಪಯೋಗ:  ಎಂ.ಜಿ.ರಸ್ತೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಕಳಪೆಯಿಂದ ಕೂಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಹನ್ನೊಂದು ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಿದೆ. ಆದರೂ ರಾಷ್ಟ್ರೀಯ ಹೆದ್ದಾರಿಯವರು ರಸ್ತೆ ಕಾಮಗಾರಿಯನ್ನು ಗುಣಮಟ್ಟದ ಗುತ್ತಿಗೆದಾರರಿಗೆ ನೀಡದೆ ತುಂಡು ಗುತ್ತಿಗೆದಾರರಿಗೆ ಗುತ್ತಿಗೆ ನೀಡಿ ಕಾಮಗಾರಿ ಹಣವನ್ನು  ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಜೆಡಿಎಸ್ ಮುಖಂಡ ಡಿಕ್ಕಿ ಕುಮಾರ್ ಹಾಗೂ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೂದಿಗುಪ್ಪೆ ಸಂಪತ್ ಆರೋಪಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.