ಗುರುವಾರ , ಮಾರ್ಚ್ 4, 2021
30 °C
ನಾದದ ಬೆನ್ನೇರಿ...

ಪರೀಕ್ಷೆ ಬಿಸಿಯಲ್ಲೂ ಕ್ಲಾಸ್‌ ತಪ್ಪಿಸದ ಮಕ್ಕಳು

ಉಮಾ ಅನಂತ್ Updated:

ಅಕ್ಷರ ಗಾತ್ರ : | |

ಪರೀಕ್ಷೆ ಬಿಸಿಯಲ್ಲೂ ಕ್ಲಾಸ್‌ ತಪ್ಪಿಸದ ಮಕ್ಕಳು

ಮಕ್ಕಳಿಗೆ ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದೆ. ನಗರದ ಶಾಲೆಗಳಲ್ಲಿ ಶಿಕ್ಷಕರು ಪಾಠ ಬೋಧನೆ ಮುಗಿಸಿ ರಿವಿಷನ್‌ ಮಾಡುವ ತರಾತುರಿ, ದಿನನಿತ್ಯ ಟೆಸ್ಟ್‌ಗಳು. ಇನ್ನೇನು ಒಂದು ತಿಂಗಳೊಳಗೆ ಮಕ್ಕಳು ಮುಂದಿನ ತರಗತಿಗೆ ಹೋಗುತ್ತಾರೆ. ಈ ಮಧ್ಯೆಯೂ ಕೆಲವು ಸಂಗೀತಾಸಕ್ತ ಮಕ್ಕಳು ಸಂಗೀತ ಕ್ಲಾಸ್‌ ತಪ್ಪಿಸುವುದಿಲ್ಲ.ಓದಿನ ಏಕತಾನತೆ ಮರೆಸಲು, ಓದಿನಲ್ಲಿ ಏಕಾಗ್ರತೆ ಹೆಚ್ಚಿಸಲು, ಒತ್ತಡ ಕಡಿಮೆ ಮಾಡಲು, ಶಿಸ್ತನ್ನು ರೂಢಿಸಿಕೊಳ್ಳಲು ಸಂಗೀತ ಸಹಕಾರಿ ಎಂಬುದನ್ನು ಮನಗಂಡು ಪೋಷಕರು ಕೂಡ ಸಂಗೀತ ಕ್ಲಾಸ್‌ಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಇದು ನಗರದ ಬಹುತೇಕ ಸಂಗೀತ ಶಾಲೆಗಳಲ್ಲಿನ ಚಿತ್ರಣ.ವಿದ್ಯಾರಣ್ಯಪುರದಲ್ಲಿರುವ ಶ್ರೀರಾಮ ಸಂಗೀತ ವಿದ್ಯಾಲಯವೂ ಇದಕ್ಕೆ ಹೊರತಲ್ಲ. ಸಂಜೆಯೋ ಬೆಳಿಗ್ಗೆಯೋ ಬಿಡುವು ಮಾಡಿಕೊಂಡು ವಾರದಲ್ಲಿ ಎರಡು ಕ್ಲಾಸ್‌ ಸಂಗೀತವನ್ನು ಮಕ್ಕಳು ತಪ್ಪದೆ ಕಲಿಯುತ್ತಿದ್ದಾರೆ. ಇಲ್ಲಿ ಸುಮಾರು 100ಕ್ಕೂ ಹೆಚ್ಚು ಮಕ್ಕಳು ಸಂಗೀತ ಕಲಿಯುತ್ತಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನವನ್ನು ಮಾತ್ರ ಇಲ್ಲಿ ಹೇಳಿಕೊಡಲಾಗುತ್ತಿದೆ.ಶ್ರೀರಾಮ ಸಂಗೀತ ವಿದ್ಯಾಲಯ ವಿದ್ಯಾರಣ್ಯಪುರದಲ್ಲಿದೆ. ಕಳೆದ 35 ವರ್ಷಗಳಿಂದ ಇಲ್ಲಿ ಸಂಗೀತ ಹೇಳಿಕೊಡಲಾಗುತ್ತಿದೆ. ವಿದ್ವಾನ್‌ ಚಿಂತಲಪಲ್ಲಿ ಕೆ.ರಮೇಶ್‌ ಈ ಸಂಗೀತ ಶಾಲೆಯ ರೂವಾರಿ. ಶಾಲಾ ಮಕ್ಕಳಲ್ಲದೆ ಇಲ್ಲಿ ಗೃಹಿಣಿಯರು, ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಬ್ಯಾಂಕ್‌ ಉದ್ಯೋಗಿಗಳು, ವೈದ್ಯರು ಮತ್ತು ಇತರ ವೃತ್ತಿನಿರತರು ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದು ಪ್ರತ್ಯೇಕ ಮತ್ತು ಗುಂಪಿನಲ್ಲಿ ಪಾಠ ಹೇಳಿಕೊಡಲಾಗುತ್ತಿದೆ. ಇಲ್ಲಿ ಕಲಿತ ಅನೇಕ ಮಕ್ಕಳು ಸ್ವತಂತ್ರವಾಗಿ ಕಛೇರಿ ಕೊಡುವಷ್ಟರ ಮಟ್ಟಿಗೆ ತಯಾರಾಗಿದ್ದಾರೆ. ಇವರಲ್ಲಿ ಕೆ. ಸುಬ್ಬಗಂಗಾ, ಸಿ.ವಿ. ಶ್ರೀನಿವಾಸ್‌, ಸುರೇಶ್‌, ಪದ್ಮಜಾ, ಎಂ.ಎಸ್‌. ಶಿಲ್ಪಾ, ಸವಿತಾ, ಸುರೇಶ್‌, ಸುಚೇತನ್‌, ನರಸಿಂಹ ಮೂರ್ತಿ, ಕೋದಂಡರಾಮ ಮೊದಲಾದವರು ಅನೇಕ ಸಂಗೀತ ಕಛೇರಿ ನೀಡಿದ್ದಾರೆ. ಶ್ರೀರಾಮನವಮಿ, ಗಣೇಶೋತ್ಸವ, ನವರಾತ್ರಿ ಹಬ್ಬಗಳಂದು ವಿವಿಧ ದೇವಸ್ಥಾನಗಳಲ್ಲೂ ಮಕ್ಕಳು ಹಾಡಿದ್ದಾರೆ.ಸಂಗೀತ ಜ್ಞಾನ ವಿಸ್ತಾರ

‘ಇಲ್ಲಿ ಸಂಗೀತ ಕಲಿಯುವ ಮಕ್ಕಳಿಗೆ ಸಭಾಗಾನದ ಪರಿಚಯ, ವೇದಿಕೆಯಲ್ಲಿ ಹಾಡುವ ಅಭ್ಯಾಸ ಆಗಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ವಿಶೇಷ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಇದರೊಂದಿಗೆ ವಿಚಾರ ಸಂಕಿರಣಗಳು, ಸಂಗೀತ ಉಪನ್ಯಾಸಗಳು, ಪುರಂದರ ದಾಸರ, ತ್ಯಾಗರಾಜರ ಆರಾಧನೋತ್ಸವಗಳನ್ನೂ ಆಚರಿಸುತ್ತೇವೆ. ಇದರಿಂದ ಇಲ್ಲಿನ ಶಿಷ್ಯಂದಿರಿಗೆ ಸಂಗೀತದ ಜ್ಞಾನ ವಿಸ್ತಾರಕ್ಕೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ವಿದ್ವಾನ್‌ ರಮೇಶ್‌.ಇವರು ಶ್ರೀರಾಮ ಸಂಗೀತ ವಿದ್ಯಾಲಯದಲ್ಲಿ ಮಾತ್ರವಲ್ಲದೆ ಜಕ್ಕೂರು, ಹೆಬ್ಬಾಳ, ಅಮೃತಹಳ್ಳಿಯಲ್ಲಿ ‘ಸುಬ್ರಹ್ಮಣ್ಯ ಸಂಗೀತ ವಿದ್ಯಾಲಯ’ ಎಂಬ ಹೆಸರಿನ ಶಾಲೆ ಸ್ಥಾಪಿಸಿ ಅಲ್ಲೂ ಹಲವಾರು ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದಾರೆ. ಹೀಗಾಗಿ ಇವರ ಸಂಗೀತ ಶಿಷ್ಯಂದಿರ ಸಂಖ್ಯೆ ಹೆಚ್ಚಿದೆ.ಸಂಗೀತ ಮನೆತನ

ವಿದ್ವಾನ್‌ ಕೆ. ರಮೇಶ್‌ ಅವರು ಮೂಲತಃ ಕೋಲಾರದ ಚಿಂತಲಪಲ್ಲಿಯವರು. ಇವರದು ಸಂಗೀತದ ಮನೆತನ. ತಾಯಿ ರಾಜಮ್ಮ ಮತ್ತು ತಂದೆ ಚಿಂತಲಪಲ್ಲಿ ಕೃಷ್ಣಮೂರ್ತಿ ಅವರ ಬಳಿಯೇ  ಕರ್ನಾಟಕ ಸಂಗೀತ ಕಲಿತರು. 1974ರಲ್ಲಿ ರಾಜಾಜಿನಗರದ ಶ್ರೀ ತ್ಯಾಗರಾಜ ಗಾನಸಭಾದಲ್ಲಿ ಮೊದಲ ಬಾರಿಗೆ ಸಂಗೀತ ಕಛೇರಿ ನೀಡಿದರು.ಅಂದಿನಿಂದ ಕಳೆದ ಸುಮಾರು 40 ವರ್ಷಗಳಿಂದ ದೇಶದ ನಾನಾ ಪ್ರತಿಷ್ಠಿತ ಸಂಗೀತ ಸಭಾಗಳಲ್ಲಿ ಕಛೇರಿ ನೀಡುತ್ತಾ ಬಂದಿದ್ದಾರೆ. ಅಲ್ಲದೆ ಲಂಡನ್, ಅಮೆರಿಕ, ಮಲೇಷ್ಯಾ, ಸಿಂಗಪುರ ಮುಂತಾದ ದೇಶಗಳಲ್ಲಿಯೂ ಇವರ ಕಛೇರಿ ರಂಜಿಸಿದೆ. ಪುರಂದರದಾಸರು, ಕನಕದಾಸರು ಮತ್ತು ಪ್ರಸನ್ನ ತೀರ್ಥರ ಕೃತಿಗಳಿರುವ ಇವರು ಹಾಡಿರುವ ‘ದಾಸರ ದಾಸರು’ ಎಂಬ ಧ್ವನಿ ಸುರುಳಿ ಸಂಗೀತ ವಲಯದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಕಂಚಿ ಕಾಮಕೋಟಿ ಮಠದಿಂದ ಆಸ್ಥಾನ ವಿದ್ವಾನ್ ಬಿರುದು, ಜಗಜ್ಯೋತಿ ಬಸವೇಶ್ವರ ಕಾಯಕ ಪ್ರಶಸ್ತಿ, ಕಲಾಭೂಷಣ, ಸಂಗೀತ ಕಲಾನಿಧಿ, ಗಾನಕಲಾ ತಿಲಕ, ಗಾಯನ ರತ್ನ, ಗಾನಕಲಾ ಚಕ್ರವರ್ತಿ ಮುಂತಾದ ಬಿರುದುಗಳು ಇವರ ಮುಡಿಗೇರಿವೆ. ವಿಳಾಸ: ಚಿಂತಲಪಲ್ಲಿ ಡಾ. ಕೆ. ರಮೇಶ್, ಶ್ರೀರಾಮ ಸಂಗೀತ ವಿದ್ಯಾಲಯ, ನಂ. 14, ಒಂದನೇ ಅಡ್ಡರಸ್ತೆ, ದುರ್ಗಾ ಲೇಔಟ್‌, ವಿದ್ಯಾರಣ್ಯಪುರ, ಬೆಂಗಳೂರು. ಫೋನ್‌- 9448948867.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.