ಮಂಗಳವಾರ, ಏಪ್ರಿಲ್ 13, 2021
30 °C

ಪಶುವೈದ್ಯರ ಕೊರತೆ ನೀಗಿಸಲು ಡಿಪ್ಲೊಮಾ ಕೋರ್ಸ್ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಪಶುವೈದ್ಯರ ಕೊರತೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಹೊಸದಾಗಿ ಪಶುವೈದ್ಯ ಡಿಪ್ಲೊಮಾ ಕೋರ್ಸ್‌ಗಳನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದ್ದು, ಜೂನ್‌ನಿಂದ ರಾಜ್ಯದ ಎರಡು ಪಶುವೈದ್ಯ ಕಾಲೇಜುಗಳಲ್ಲಿ ಈ ತರಗತಿಗಳು ಆರಂಭವಾಗಲಿವೆ ಎಂದು ಪಶುಸಂಗೋಪನಾ ಸಚಿವ ರೇವುನಾಯಕ ಬೆಳಮಗಿ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ 972 ಪಶುವೈದ್ಯರ ಕೊರತೆ ಇದೆ. ಕಾರಣ, ಪಶುವೈದ್ಯ ವಿಜ್ಞಾನ ಪದವೀಧರರ ಕೊರತೆ ಇದೆ. ಹೀಗಾಗಿ ಪಶುವೈದ್ಯ ಡಿಪ್ಲೊಮಾ ಪದವೀಧರರನ್ನು ಗ್ರಾಮೀಣ ಪ್ರದೇಶಗಳಲ್ಲಿ ಸೇವೆಗೆ ನಿಯೋಜಿಸುವ ಯೋಚನೆ ಹೊಂದಿರುವುದಾಗಿ ಅವರು ತಿಳಿಸಿದರು.

ರಾಜ್ಯದ ನಾಲ್ಕು ಪಶುವೈದ್ಯ ಕಾಲೇಜುಗಳಲ್ಲಿ 800 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಪ್ರಸಕ್ತ ವರ್ಷ 113 ಮಂದಿ ಪದವಿ ಪೂರೈಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಪಶುವೈದ್ಯ ವಿಜ್ಞಾನ ಪದವಿ ಪ್ರವೇಶ ಪಡೆಯುವವರ ಸಂಖ್ಯೆಯಲ್ಲೂ ಇಳಿಮುಖವಾಗಿದೆ.

ಇದರಿಂದಾಗಿ ಪಶುವೈದ್ಯರ ಕೊರತೆ ದಿನೇದಿನೇ ಹೆಚ್ಚುತ್ತಲೇ ಇದೆ. 100 ಮಂದಿ ನಿವೃತ್ತ ಪಶುವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿತ್ತು. ಈ ಪ್ರಸ್ತಾವಕ್ಕೂ ಪಶುವೈದ್ಯರಿಂದ ಉತ್ತಮ ಪ್ರತಿಕ್ರಿಯೆ ದೊರೆತಿಲ್ಲ ಎಂದರು.

ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಎರಡು ಮತ್ತು ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಆರಂಭಿಸಲಾಗುವುದು. ಮೊದಲ ಹಂತದಲ್ಲಿ ರಾಜ್ಯದ ಎರಡು ಕಾಲೇಜುಗಳಲ್ಲಿ ಒಟ್ಟು 50 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು. ನಂತರದ ದಿನಗಳಲ್ಲಿ ಪ್ರವೇಶ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದರು.

ರಾಜ್ಯದ ವಿವಿಧೆಡೆ ಪಶು ಆಸ್ಪತ್ರೆಗಳ ನಿರ್ಮಾಣ ಪ್ರಗತಿಯಲ್ಲಿದೆ. ನಬಾರ್ಡ್‌ನ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ ಸೇರಿದಂತೆ ವಿವಿಧ ಮೂಲಗಳ ಹಣಕಾಸು ನೆರವು ಪಡೆದು 494 ಕೋಟಿ ರೂಪಾಯಿ ವೆಚ್ಚದಲ್ಲಿ 466 ಆಸ್ಪತ್ರೆ ಕಟ್ಟಡಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆಸ್ಪತ್ರೆ ಕಟ್ಟಡಗಳ ವಿಷಯದಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸಚಿವರು ವಿವರಿಸಿದರು.

ರೂ 569.18 ಕೋಟಿ ಸಹಾಯಧನ: ಕಳೆದ ಆರ್ಥಿಕ ವರ್ಷದಲ್ಲಿ ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರದ ವತಿಯಿಂದ 569.18 ಕೋಟಿ ರೂಪಾಯಿ ಸಹಾಯಧನ ವಿತರಿಸಲಾಗಿದೆ. ಹೈನುಗಾರಿಕೆಯಲ್ಲಿ ತೊಡಗಿರುವ 6.41 ಲಕ್ಷ ಕುಟುಂಬಗಳು ಈ ಯೋಜನೆಯ ಲಾಭ ಪಡೆದಿವೆ ಎಂದು ಅವರು ಮಾಹಿತಿ ನೀಡಿದರು.

ಪ್ರತಿ ಎರಡು ತಿಂಗಳಿಗೊಮ್ಮೆ ನಿರಂತರವಾಗಿ ಸಹಾಯಧನ ಬಿಡುಗಡೆ ಮಾಡಲಾಗಿದೆ. ಅಮೃತ ಯೋಜನೆಯಡಿ ಹಸು ಮತ್ತು ಎಮ್ಮೆ ಖರೀದಿಗಾಗಿ 39,050 ಫಲಾನುಭವಿಗಳಿಗೆ ರೂ 33.69 ಕೋಟಿ ವಿತರಿಸಲಾಗಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.