ಭಾನುವಾರ, ಏಪ್ರಿಲ್ 11, 2021
32 °C

ಪಶ್ಚಿಮಘಟ್ಟ ವಿನಾಶದತ್ತ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ‘ಪ್ರಕೃತಿಯ ಮೇಲೆ ನಿರಂತರವಾಗಿ ನಡೆಯುತ್ತಿರುವ ಶೋಷಣೆ ಪಶ್ಚಿಮ ಘಟ್ಟದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಿದ್ದು ಇದರಿಂದಾಗಿ ಪಶ್ಚಿಮ ಘಟ್ಟ ವಿನಾಶದತ್ತ ಸಾಗಿದೆ’ ಎಂದು ಬಾಗಲಕೋಟೆಯ ಕರ್ನಾಟಕ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಬಿ. ದಂಡಿನ ಆತಂಕ ವ್ಯಕ್ತಪಡಿಸಿದರು.ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸುವರ್ಣ ಮಹೋತ್ಸವದ ಅಂಗವಾಗಿ ಸೋಮವಾರ ನಡೆದ ‘ಸುಸ್ಥಿರ ಬೆಳವಣಿಗೆಗಾಗಿ ಜೀವ ವೈವಿಧ್ಯತೆ ಹಾಗೂ ಜೈವಿಕ ತಂತ್ರಜ್ಞಾನ’ ಎಂಬ ವಿಷಯದ ಕುರಿತ ರಾಷ್ಟ್ರೀಯ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.‘ಪಶ್ಚಿಮ ಘಟ್ಟ ಸಮೃದ್ಧ ಜೀವವೈವಿಧ್ಯತೆಯ ತಾಣವಾಗಿದ್ದು ಅನೇಕ ಅಪರೂಪದ ಕೀಟಗಳು ಹಾಗೂ ಸಸ್ಯಗಳ ತಳಿಗಳು ಇಲ್ಲಿ ಪತ್ತೆಯಾಗಿವೆ. ಆದರೆ ಅರಣ್ಯಭೂಮಿ ಅತಿಕ್ರಮಣ ಹಾಗೂ ಜೀವ ವೈವಿಧ್ಯತೆಯ ಮೇಲಿನ ದಾಳಿ ಈ ಪ್ರದೇಶದ ವೈಶಿಷ್ಟ್ಯಕ್ಕೆ ಧಕ್ಕೆ ತಂದಿದೆ’ ಎಂದು ಹೇಳಿದರು. ಜಪಾನ್‌ನಲ್ಲಿ ಸಂಭವಿಸಿದ ಸುನಾಮಿ ಹಾಗೂ ಭೂಕಂಪದ ಬಗ್ಗೆ ಪ್ರಸ್ತಾಪಿಸಿದ ಅವರು, ಮನುಷ್ಯ ಪ್ರಕೃತಿಯ ಮೇಲೆ ಅವಿರತ ದಾಳಿ ನಡೆಸಿದರೆ ಇಂಥ ಘಟನಾವಳಿಗಳು ದೈನಂದಿನ ಪ್ರಕ್ರಿಯೆಯಾಗುವ ದಿನ ದೂರವಿಲ್ಲ ಎಂದರು.ಜೀವವೈವಿಧ್ಯ ಎಂಬ ಪದ ಇಂದು ಅರ್ಥ ಕಳೆದುಕೊಂಡಿದೆ. ಯಾಕೆಂದರೆ ಪ್ರಕೃತಿಯ ಮೇಲಿನ ಶೋಷಣೆ ದಿನಗಳೆದಂತೆ ಹೆಚ್ಚುತ್ತಿದೆ. ವಿನಾಶದತ್ತ ಸಾಗುತ್ತಿರುವ ಅಪರೂಪದ ಕೀಟ ಹಾಗೂ ಸಸ್ಯ ತಳಿಗಳ ಸಂಖ್ಯೆ ಹೆಚ್ಚುತ್ತಾ ಇದೆ ಎಂದ ಅವರು ಮಣ್ಣು, ನೀರು ಹಾಗೂ ಗಾಳಿಯನ್ನು ಉಳಿಸುವ ಕಾರ್ಯ ಇಂದು ತುರ್ತಾಗಿ ನಡೆಯಬೇಕಾಗಿದೆ ಎಂದರು.‘ಜೈವಿಕ ತಂತ್ರಜ್ಞಾನ, ಜೀವ ವೈವಿಧ್ಯತೆಯನ್ನು ಉಳಿಸುವುದಕ್ಕಿರುವ ಉತ್ತಮ ಮಾರ್ಗ. ಆದರೆ ಪ್ರಕೃತಿಗಾಗಿ ಜೈವಿಕ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕಾದುದು ಕೂಡ ಅಗತ್ಯ. ಜೈವಿಕ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ ಅಪರೂಪದ ಸಸ್ಯಗಳ ತಳಿಗಳನ್ನು ಸಂರಕ್ಷಿಸಬಹುದಾಗಿದೆ’ ಎಂದು ಅವರು ಹೇಳಿದರು.‘ಸಂಶೋಧಕರು ಹಾಗೂ ವಿಜ್ಞಾನಿಗಳು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕೆಲಸ ಮಾಡಿದರೆ ಸಾಲದು. ಅವರು ಜೀವ ವೈವಿಧ್ಯತೆ ಇರುವ ಜಾಗಗಳಿಗೆ ತೆರಳಿ ಅಪರೂಪದ ತಳಿಗಳನ್ನು ಪತ್ತೆಹಚ್ಚುವ ಕಾರ್ಯ ಮಾಡಬೇಕು. ಸಸ್ಯಗಳ ತಳಿಗಳನ್ನು ಸಂರಕ್ಷಿಸುವ ಹಾಗೂ ಅವುಗಳ ಸಂಖ್ಯೆಯನ್ನು ಹೆಚ್ಚಿಸುವ ಕೆಲಸ ನಿರಂತರವಾಗಿ ನಡೆಯಬೇಕು’ ಎಂದು ಅವರು ಹೇಳಿದರು.ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಇ.ಟಿ. ಪುಟ್ಟಯ್ಯ ಮಾತನಾಡಿ, ಅತ್ಯಂತ ಸೂಕ್ಷ್ಮ ಜೀವ ವೈವಿಧ್ಯತೆಯ ತಾಣವಾದ ಪಶ್ಚಿಮ ಘಟ್ಟ ಈಗ ಭಾರಿ ಅಪಾಯವನ್ನು ಎದುರಿಸುತ್ತಿದೆ ಎಂದರು. ವಿವಿಧ ಯೋಜನೆಗಳ ಹೆಸರಿನಲ್ಲಿ ಕಾಡನ್ನು ನಾಶ ಮಾಡುತ್ತಿರುವುದರಿಂದ ಈ ಭಾಗದ ಅಪರೂಪದ ಔಷಧೀಯ ಸಸ್ಯಗಳು ಕಣ್ಮರೆಯಾಗುತ್ತಿವೆ ಎಂದು ಅವರು ಹೇಳಿದರು.ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಎಚ್.ಬಿ. ವಾಲಿಕಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಭಾರತವು ಜೀವವೈವಿಧ್ಯತೆಯ ವಿಷಯದಲ್ಲಿ ಶ್ರೀಮಂತ ದೇಶವಾಗಿದ್ದು ಸಸ್ಯಗಳು, ಹಕ್ಕಿಗಳು, ಮೀನು, ಸಸ್ತನಿಗಳ ವಿವಿಧ ತಳಿಗಳು ಇಲ್ಲಿವೆ. ಇವುಗಳನ್ನು ಉಳಿಸಿ ಸುಸ್ಥಿರ ಬೆಳವಣಿಗೆಗೆ ಪೂರಕ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು. ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ. ಕಾಮೇಶ್ವರ ರಾವ್, ಸಸ್ಯಶಾಸ್ತ್ರ ವಿಭಾಗದ ಚೇರಮನ್ ಎಚ್.ಸಿ. ಲಕ್ಷ್ಮಣ, ಪ್ರೊ.ಜಿ.ಆರ್.ಹೆಗಡೆ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.