ಶನಿವಾರ, ಮೇ 8, 2021
23 °C

`ಪಹಣಿ ಪತ್ರಿಕೆ'ಗಾಗಿ ರೈತರ ಪರದಾಟ...

ಪ್ರಜಾವಾಣಿ ವಾರ್ತೆ/ ವಿಜಯ್ ಹೂಗಾರ Updated:

ಅಕ್ಷರ ಗಾತ್ರ : | |

ಹಾವೇರಿ: ರೈತರು ಬೀಜ, ಗೊಬ್ಬರ ಖರೀದಿಸಲು, ಬ್ಯಾಂಕ್‌ನಲ್ಲಿ ಸಾಲ ಸೇರಿದಂತೆ   ಪ್ರತಿಯೊಂದು ಚಟುವಟಿಕೆಗೆ `ಪಹಣಿ ಪತ್ರಿಕೆ'ಯೇ ಆಧಾರ. ಆದರೆ, ಅದನ್ನು ಪಡೆಯಲು ರೈತರು ದಿನವಿಡಿ ಕಷ್ಟಪಟ್ಟರೂ ಯಾವುದೇ ಪ್ರಯೋಜನವಾಗುತ್ತಿಲ್ಲ.ಕಳೆದ ಕೆಲವು ತಿಂಗಳ ಹಿಂದೆ ಸರ್ಕಾರ ನೆಮ್ಮದಿ ಕೇಂದ್ರವನ್ನು ಸ್ಥಗಿತಗೊಳಿಸಿ ತಾಲ್ಲೂಕು ತಹಶೀಲ್ದಾರ್ ಕಚೇರಿಯ ಕೇಂದ್ರಗಳೆರಡಲ್ಲಿಯೇ ಪಹಣಿ ಪತ್ರಿಕೆ ನೀಡುವ ವ್ಯವಸ್ಥೆ ಮುಂದುವರಿಸಿರುವುದೇ ಇದಕ್ಕೆ ಕಾರಣ.ತಾಲ್ಲೂಕಿನಾದ್ಯಂತ ವಾಡಿಕೆಗೆ ತಕ್ಕಂತೆ ಉತ್ತಮ ಮಳೆಯಾಗಿದೆ. ಪ್ರತಿಯೊಬ್ಬ ರೈತರಿಗೂ ಬೀಜ, ಗೊಬ್ಬರದ ಅವಶ್ಯಕತೆಯಿದೆ. ಆದರೆ, ಕಳೆದ ಎರಡ್ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಕಂಡು ಬರುವ ಬೀಜ, ಗೊಬ್ಬರ ಸಮಸ್ಯೆ ಎದುರಾಗಿದ್ದರಿಂದ ಪ್ರತಿಯೊಬ್ಬ ರೈತರು ಸರ್ಕಾರದಿಂದ ಸಿಗುವ ರಿಯಾಯಿತಿ ದರದ ಬೀಜ, ಗೊಬ್ಬರ ಪಡೆಯಲು ಪಹಣಿ ಪತ್ರಿಕೆ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ತಾಲ್ಲೂಕು ಕೇಂದ್ರದಲ್ಲಿ ಇರುವ ಒಂದೇ ಕೇಂದ್ರದಲ್ಲಿ ನಿತ್ಯ ನೂರಾರು ಜನರು ಪಹಣಿ ಪತ್ರಿಕೆ ಪಡೆಯಲು ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.ತಪ್ಪದ ಗೋಳು: ಪ್ರತಿ ವರ್ಷ ಮಳೆ ಇದ್ದರೆ, ಬೀಜ ಗೊಬ್ಬರ ಸಿಗುತ್ತಿರಲಿಲ್ಲ. ಬೀಜ, ಗೊಬ್ಬರ ಸಿಕ್ಕರೆ ಮಳೆ ಬರುತ್ತಿರಲಿಲ್ಲ. ಆದರೆ, ಈ ವರ್ಷ ಮಳೆಯೂ ಚನ್ನಾಗಿ ಆಗಿದೆ. ಬೀಜ, ಗೊಬ್ಬರದ ಸಮಸ್ಯೆಯೂ ಇಲ್ಲ. ಆದಷ್ಟು ಬೇಗ ಬೀಜ, ಗೊಬ್ಬರ ಪಡೆದು ಬಿತ್ತನೆ ಮಾಡಬೇಕೆಂದರೆ, ಈ ಬಾರಿ ಪಹಣಿ ಪತ್ರಿಕೆ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ನಮಗೆ ಪ್ರತಿವರ್ಷ ಒಂದಿಲ್ಲ ಒಂದು ಗೋಳು ಎದುರಿಸುವುದು ಮಾತ್ರ ತಪ್ಪುವಂತೆ ಕಾಣುತ್ತಿಲ್ಲ ಎಂಬುದು ಇಲ್ಲಿನ ರೈತರ ಅಳಲಾಗಿದೆ.ಈಗಾಗಲೇ ಮುಂಗಾರು ಬಿತ್ತನೆ ಹಂಗಾಮು ಮುಗಿಯುತ್ತಾ ಬರುತ್ತಿದೆ. ಮಳೆ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಸಕಾಲಕ್ಕೆ ಬಿತ್ತನೆ ಮಾಡದಿದ್ದರೇ, ನಂತರ ಬಿತ್ತನೆ ಮಾಡಿದರೂ ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ. ನಮ್ಮ ಸಮಸ್ಯೆಗಳು ಸರ್ಕಾರಕ್ಕಾಗಲಿ ಇಲ್ಲಿನ ತಹಶೀಲ್ದಾರ್‌ಗಾಗಲಿ ಅರ್ಥವಾಗುವುದಿಲ್ಲಎರಡು ಕೇಂದ್ರ: ಪಹಣಿ ಪತ್ರಿಕೆ ವಿತರಿಸಲು ಕರ್ಜಗಿ ಹಾಗೂ ಗುತ್ತಲ ಹೊಬಳಿ ಹೊರತುಪಡಿಸಿದರೆ, ತಾಲ್ಲೂಕು ತಹಶೀಲ್ದಾರ್ ಕಚೇರಿಯಲ್ಲಿ ಎರಡು ಕೇಂದ್ರಗಳಿವೆ. ಕರ್ಜಗಿ ಹಾಗೂ ಗುತ್ತಲದಲ್ಲಿನ ಕೇಂದ್ರಗಳು ಒಂದು ದಿನ ಸರಿ ಇದ್ದರೆ, ಮೂರು ದಿನ ಸಮಸ್ಯೆಯಲ್ಲಿರುತ್ತವೆ. ಹೀಗಾಗಿ ತಾಲ್ಲೂಕಿನ ರೈತರು ಪಹಣಿ ಪತ್ರಿಕೆಗಾಗಿ ತಾಲ್ಲೂಕು ಕೇಂದ್ರದಲ್ಲಿರುವ ಎರಡೇ ಕೇಂದ್ರವನ್ನು ಅವಲಂಬಿಸಬೇಕಿದೆ.ಅದೇ ಕಾರಣಕ್ಕಾಗಿ ಮುಂಗಾರು ಹಂಗಾಮು ಆರಂಭವಾದಾಗಿನಿಂದ ತಹಶೀಲ್ದಾರ್ ಕಚೇರಿ ಎದುರು ಬೆಳಿಗ್ಗೆಯಿಂದ ಸಂಜೆವರೆಗೆ ದೊಡ್ಡ ಸರದಿ ಇದ್ದೆ ಇರುತ್ತದೆ.ದಿನವೂ ಹೊಡೆದಾಟ: ಸರದಿ ಸಾಲಿನಲ್ಲಿ ಅನ್ನ ನೀರು ಇಲ್ಲದೇ ಬೆಳಿಗ್ಗೆಯಿಂದ ನಿಂತಿರುತ್ತಾರೆ. ಯಾರಾದರೂ ಒಬ್ಬರು ಸರದಿ ಬಿಟ್ಟು ಉಪಹಾರ ಮಾಡಲಿಕ್ಕೆ ಹೋಗಿ ವಾಪಸ್ಸು ಬಂದರೇ ಉಳಿದವರು ಅವರು ನಿಂತ ಜಾಗಕ್ಕೆ ಮರಳಲು ಅವಕಾಶವನ್ನು ನೀಡುವುದಿಲ್ಲ. ಹೀಗಾಗಿ ರೈತರ ನಡುವೆಯೇ ಪರಸ್ಪರ ಹೊಡೆದಾಟಗಳು ಸರ್ವೆ ಸಾಮಾನ್ಯವಾಗಿವೆ. ಎಷ್ಟೋ ಬಾರಿ ಪೊಲೀಸರು ಮಧ್ಯಸ್ಥಿಕೆ ವಹಿಸಿ ಹೊಡೆದಾಟ ತಪ್ಪಿಸಿದ ಉದಾಹರಣೆಗಳಿವೆ.ಕಚೇರಿ ಸಿಬ್ಬಂದಿ ಲಾಬಿ: ಪಹಣಿಗಾಗಿ ದಿನವಿಡಿ ಸರದಿಯಲ್ಲಿ ನಿಂತರೂ ಕೆಲವರಿಗೆ ಪಹಣಿ ಸಿಗದೇ ವಾಪಸ್ಸು ಹೋಗುತ್ತಾರೆ. ಆದರೆ, ಕಚೇರಿ ಕೆಲ ಸಿಬ್ಬಂದಿ ತಮಗೆ ಪರಿಚಯ ಇದ್ದ ವ್ಯಕ್ತಿಗಳು ಬಂದರೆ ಅವರ ಪರವಾಗಿ ತಾವಾಗಿಯೇ ಕೇಂದ್ರದ ಒಳಗೆ ಹೋಗಿ ನೇರವಾಗಿ ಪಹಣಿ ಮತ್ತು `ಡ' ಉತಾರ ಪಡೆಯುವ ಕಾರ್ಯವೂ ಅಲ್ಲಿ ನಡೆಯುತ್ತಿದೆ. ಇದಕ್ಕೆ ಕೆಲ ರೈತರು ವಿರೋಧ ವ್ಯಕ್ತಪಡಿಸಿದರೆ, ತಹಶೀಲ್ದಾರ್‌ರಿಗೆ ಬೇಕಾಗಿದೆ ಎಂದು ಸಬೂಬು ಹೇಳಿಕೊಂಡು ತಮ್ಮ ಕಾರ್ಯವನ್ನು ಸಾಧಿಸುವುದು ಉಂಟು. ಐದು ಕೇಂದ್ರಕ್ಕೆ ಪ್ರಸ್ತಾವ: ತಾಲ್ಲೂಕಿನಲ್ಲಿ ಪಹಣಿ ವಿತರಣಾ ಕೇಂದ್ರಗಳು ಅಗತ್ಯಕ್ಕನುಗುಣವಾಗಿ ಇಲ್ಲ. ಕರ್ಜಗಿ, ಗುತ್ತಲ ಸೇರಿ ನಾಲ್ಕು ಕೇಂದ್ರಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಜನದಟ್ಟಣೆ ಹೆಚ್ಚಾಗುವುದು ಸಾಮಾನ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಶಾಸಕರಿಗೆ ಹೆಚ್ಚಿನ ಕೇಂದ್ರದ ಅವಶ್ಯಕತೆಯನ್ನು ಮನದಟ್ಟು ಮಾಡಿಕೊಡಲಾಗಿದೆ. ಗುತ್ತಲಕ್ಕೆ ಇನ್ನೆರಡು, ಹೊಸರಿತ್ತಿಗೆ ಒಂದು ಹಾಗೂ ಹಾವೇರಿಗೆ ಇನ್ನೇರಡು ಕೇಂದ್ರಗಳನ್ನು ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಶೀಘ್ರದಲ್ಲಿಯೇ ಮಂಜೂರಾಗಿ ಬರುವ ನಿರೀಕ್ಷೆಯಿದೆ ಎಂದು ಹೇಳುತ್ತಾರೆ ತಹಶೀಲ್ದಾರ್ ಶಿವಲಿಂಗ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.