ಸೋಮವಾರ, ಜುಲೈ 26, 2021
21 °C

ಪಾಕ್ ಸೇನಾ ಮುಖ್ಯಸ್ಥರಿಗೆ ಮುಖಭಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್/ನ್ಯೂಯಾರ್ಕ್ (ಪಿಟಿಐ): ‘ಭಯೋತ್ಪಾದಕರ ಬೆನ್ನು ಮೂಳೆ ಮುರಿಯುವಲ್ಲಿ ತಮ್ಮ ಪಡೆಗಳು ಯಶಸ್ವಿಯಾಗಿವೆ’ ಎಂದು ಬೀಗುತ್ತಿದ್ದ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಅಶ್ಫಕ್ ಪರ್ವೇಜ್ ಕಯಾನಿ ಅವರಿಗೆ ಈಗ ಮುಖಭಂಗವಾಗಿದೆ.ಅಬೋಟಾಬಾದ್‌ನ ಮಿಲಿಟರಿ ಅಕಾಡೆಮಿಗೆ ಅತಿ ಸನಿಹದಲ್ಲಿಯೇ ಲಾಡೆನ್ ಅಡಗಿದ್ದರೂ ಸಹ, ಆತನ ಚಲನವಲನದ ಬಗ್ಗೆ ಸೇನೆಯ ಮುಖ್ಯಸ್ಥರಿಗೆ ಮಾಹಿತಿ ಇರಲಿಲ್ಲ. ಜತೆಗೆ ಕಳೆದ ತಿಂಗಳಷ್ಟೇ ಅಕಾಡೆಮಿಗೆ ಭೇಟಿಯನ್ನೂ ನೀಡಿದ್ದ ಕಯಾನಿ ಅವರಿಗೆ ಈಗ ತೀವ್ರ ಇರಿಸುಮುರಿಸು.ಅಮೆರಿಕ ಪಡೆಗಳು ಪಾಕ್ ಸರ್ಕಾರ ಮತ್ತು ಸೇನೆಗೆ ಯಾವುದೇ ಮಾಹಿತಿ ನೀಡದೇ ಲಾಡೆನ್ ವಿರುದ್ಧ ದಾಳಿ ನಡೆಸಿ ಹತ್ಯೆ ಮಾಡಿರುವುದು ಕಯಾನಿ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.ಕಾಕುಲ್‌ನ ಪಾಕ್ ಮಿಲಿಟರಿ ಅಕಾಡೆಮಿಗೆ ಏಪ್ರಿಲ್ 23ರಂದು ಭೇಟಿ ನೀಡಿದ್ದ ಕಯಾನಿ, ‘ದೇವರ ದಯೆಯಿಂದ ಭಯೋತ್ಪಾದಕರ ಬೆನ್ನು ಮೂಳೆ ಮುರಿದಿದ್ದೇವೆ. ಕೆಲವೇ ಸಮಯದಲ್ಲಿ ನೆಮ್ಮದಿಯಿಂದಲೂ ಇರಬಹುದು’ ಎಂದು ಅಂದು ನಡೆದ ನಿರ್ಗಮನ ಪಥಸಂಚಲನದ ವೇಳೆ ನುಡಿದಿದ್ದರು. ಆದರೆ ಈಗ ಅವರ ಗರ್ವಭಂಗವಾಗಿದೆ.ಅಕಾಡೆಮಿಯಿಂದ ಕೇವಲ 800 ಗಜ ದೂರದಲ್ಲಿನ ದೊಡ್ಡ ಆವರಣಗೋಡೆಯೊಳಗಿನ ಕಟ್ಟಡದಲ್ಲಿ ಅಡಗಿದ್ದ ಲಾಡೆನ್ ಮೇಲೆ ಅಮೆರಿಕ ಪಡೆಗಳು ದಾಳಿ ನಡೆಸಿ ಹತ್ಯೆ ಮಾಡಿರುವುದು ಪಾಕ್ ಸೇನೆಯ ವರ್ಚಸ್ಸಿಗೆ ಧಕ್ಕೆ ತಂದಿದೆ.ಲಾಡೆನ್ ಅಡಗುತಾಣ ಸೇನಾ ಅಕಾಡೆಮಿಗೆ ಅತ್ಯಂತ ಸಮೀಪದಲ್ಲಿದ್ದರೂ, ಪಾಕ್ ಸೇನೆಗೆ ಸೂಕ್ತ ಮಾಹಿತಿಯೇ ಇರಲಿಲ್ಲ. ಆದರೆ ಲಾಡೆನ್ ಇದ್ದ ಕಟ್ಟಡದ ಮೇಲೆ ಅಮೆರಿಕ ಪಡೆಗಳು ಕಳೆದ ಆಗಸ್ಟ್‌ನಿಂದಲೇ ಕಣ್ಣಿಟ್ಟಿದ್ದವು.ಒಸಾಮ ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದ ಪಾಕ್‌ನ ಐಎಸ್‌ಐಗೂ ಅಮೆರಿಕ ದಾಳಿಯ ಬಗ್ಗೆ ಮಾಹಿತಿ ಇರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.